ಶನಿವಾರ, ಮೇ 21, 2022
22 °C

ಸೆಪ್ಟೆಂಬರ್‌ನಲ್ಲಿ ಬಿಟಿಪಿಎಸ್ 2ನೇ ಘಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸೆಪ್ಟೆಂಬರ್ ವೇಳೆಗೆ 500 ಮೆಗಾ ವಾಟ್ ವಿದ್ಯುತ್ ಸಾಮರ್ಥ್ಯದ ಬಳ್ಳಾರಿ ಶಾಖೋತ್ಪನ್ನ ಕೇಂದ್ರದ ಎರಡನೇ ಘಟಕ ಕಾರ್ಯಾರಂಭ ಮಾಡಲಿದೆ. ಇದೇ ವೇಳೆ ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ ಉಂಟಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು. 

ಕರ್ನಾಟಕ ವಿದ್ಯುತ್ ನಿಗಮ ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ 3ನೇ ಘಟಕದ ಕಾಮಗಾರಿಗಳ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಕಾಮಗಾರಿಗಳ ಮೊದಲನೇ ಹಂತದ 185 ಕೋಟಿ ರೂಪಾಯಿ ಚೆಕ್ ಅನ್ನು ಬಿಎಚ್‌ಇಎಲ್ ನಿರ್ದೇಶಕ ಅತುಲ್ ಸರಾಯ ಅವರಿಗೆ ಹಸ್ತಾಂತರಿಸಿ ಮಾತನಾಡಿದರು. ‘ಸೆಪ್ಟೆಂಬರ್ ವೇಳೆಗೆ ಬಳ್ಳಾರಿ ಶಾಖೋತ್ಪನ್ನ ಕೇಂದ್ರದ ಎರಡನೇ ಘಟಕ ಕಾರ್ಯಾರಂಭ ಮಾಡುವುದರಿಂದ 500 ಮೆ.ವಾ.  ವಿದ್ಯುತ್ ಉತ್ಪಾದನೆಯಾಗಲಿದೆ. ಬೇಡಿಕೆಗೆ ಅಗತ್ಯವಾದ ವಿದ್ಯುತ್ ಪೂರೈಕೆ ಮಾಡಲು ಇದರಿಂದ ಸಾಧ್ಯವಾಗಲಿದೆ’ ಎಂದರು.

‘ಮೇ 31ರವರೆಗೆ ವಿದ್ಯುತ್ ಉತ್ಪಾದಿಸುವಷ್ಟು ನೀರಿನ ಸಂಗ್ರಹ ರಾಜ್ಯದಲ್ಲಿದೆ. ಶಾಖೋತ್ಪನ್ನ ಘಟಕಗಳಿಂದ 48 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಉಂಟಾಗುವ ಸ್ಥಿತಿ ಇಲ್ಲ. ಅಲ್ಲದೇ ವಿವಿಧ ಮೂಲಗಳಿಂದ ವಿದ್ಯುತ್ ಖರೀದಿ ಕಾರ್ಯ ನಡೆಯುತ್ತಿದೆ. ಬೆಂಗಳೂರಿನಲ್ಲಿ ತಾಂತ್ರಿಕ ತೊಂದರೆಯ ಸಂದರ್ಭಗಳನ್ನು ಹೊರತುಪಡಿಸಿದರೆ ಉಳಿದಂತೆ ನಿರಂತರ ವಿದ್ಯುತ್ ಪೂರೈಕೆಯಾಗುತ್ತಿದೆ’ ಎಂದು ಹೇಳಿದರು.

‘700 ಮೆಗಾವಾಟ್ ವಿದ್ಯುತ್ ಉತ್ಪಾದನೆಯ ಪ್ರತಿಷ್ಠಿತ ಬಿಟಿಪಿಎಸ್ 3ನೇ ಘಟಕ 2014ರ  ಮಧ್ಯಭಾಗದಲ್ಲಿ ವಿದ್ಯುತ್ ಉತ್ಪಾದನೆ ಆರಂಭಿಸಲಿದೆ. ಬಿಎಚ್‌ಇಎಲ್ ಹಾಗೂ ಕೆಪಿಸಿಎಲ್ ಜಂಟಿಯಾಗಿ ಕಾಮಗಾರಿ ಕೈಗೆತ್ತಿಕೊಂಡಿವೆ. ಇದು ಬೇಡಿಕೆಯ ಶೇ 10ರಷ್ಟು ವಿದ್ಯುತ್ತನ್ನು ಪೂರೈಸಲಿದೆ. ಆದ್ದರಿಂದ ರಾಜ್ಯದ ಪಾಲಿಗೆ ಇದೊಂದು ಪ್ರತಿಷ್ಠಿತ ಯೋಜನೆಯಾಗಿದೆ’ ಎಂದು ಅವರು ತಿಳಿಸಿದರು.

‘ರಾಜ್ಯದ ಇತಿಹಾಸದಲ್ಲಿ ನಿತ್ಯ ಗರಿಷ್ಠ 150 ಮೆಗಾವಾಟ್ ವಿದ್ಯುತ್ ಮಾತ್ರ ಉತ್ಪಾದನೆಯಾದ ಉದಾಹರಣೆ ಇತ್ತು. ಕಳೆದ 20 ದಿನಗಳಿಂದೀಚೆಗೆ ವಿದ್ಯುತ್ ಉತ್ಪಾದನೆ 160 ಮೆಗಾವಾಟ್ ದಾಟಿದ್ದು ಇದೊಂದು ಉತ್ತಮ ಬೆಳವಣಿಗೆಯಾಗಿದೆ. 10 ಸಾವಿರ ಮೆಗಾವಾಟ್ ವಿದ್ಯುತ್ತನ್ನು ರಾಜ್ಯ ವಿದ್ಯುತ್ ಜಾಲಕ್ಕೆ ಪೂರೈಸಲಾಗುವುದು’ ಎಂದರು.

‘ರಾಜ್ಯದಲ್ಲಿ ನಿತ್ಯ 7500 ಮೆಗಾವಾಟ್ ವಿದ್ಯುತ್ ಬೇಡಿಕೆ ಇದೆ.  ಇದನ್ನು ಪೂರೈಸಲು 1200 ಮೆಗಾವಾಟ್ ವಿದ್ಯುತ್ ಖರೀದಿಸಲಾಗುತ್ತಿದೆ. 3ನೇ ಘಟಕ ಹಾಗೂ ಯರಮರಸ್ ಘಟಕಗಳು ಶೀಘ್ರ ಕಾರ್ಯಾರಂಭ ಮಾಡುವ ಅಗತ್ಯವಿದೆ. ಎಡ್ಲಾಪುರ ಮತ್ತು ಗೋದ್ನಾ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಗೆ ಕೇಂದ್ರ ಸರ್ಕಾರ ಕಲ್ಲಿದ್ದಲು ಪೂರೈಕೆ ಮಾಡಬೇಕಿದೆ. ಇಲ್ಲಿಯೂ ಸಹ ಯೋಜನೆಗೆ ಭೂಮಿ ಇದ್ದು ಕಲ್ಲಿದ್ದಲು ಬ್ಲಾಕ್‌ಗಳ ಹಂಚಿಕೆ ಮತ್ತು ಕಲ್ಲಿದ್ದಲಿನ ಸಾಗಣಿಕೆಗೆ ಕೇಂದ್ರದ ಅನುಮತಿ ದೊರೆತರೆ  ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿ ಪಡೆದು ಕಾಮಗಾರಿಆರಂಭಿಸಲಾಗುವುದು’ ಎಂದರು.

‘ನಿರೀಕ್ಷಿತ ಮಟ್ಟದಲ್ಲಿ ಕೇಂದ್ರ ಸರ್ಕಾರದಿಂದ ಕಲ್ಲಿದ್ದಲು ಪೂರೈಕೆಯಾಗದೇ ಇರುವುದರಿಂದ ಹೊರ ದೇಶಗಳಿಂದ ಕಲ್ಲಿದ್ದಲು ಖರೀದಿ ಬಗ್ಗೆಯೂ ರಾಜ್ಯದಲ್ಲಿ ಚಿಂತನೆ ನಡೆಯಬೇಕಿದೆ’ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

‘ವಿದ್ಯುತ್ ಉಳಿತಾಯದ ಬಗ್ಗೆ ಜನತೆ ಗಮನ ಹರಿಸಬೇಕಿದೆ. ಸಿಎಫ್‌ಎಲ್ ಹಾಗೂ ಎಲ್‌ಇಡಿ ಬಳಸುವುದರಿಂದ ಸುಮಾರು 500 ಮೆಗಾವಾಟ್‌ನಷ್ಟು ವಿದ್ಯುತ್ ಉಳಿಸಬಹುದಾಗಿದೆ. ಸಿಎಫ್‌ಎಲ್ ಬಲ್ಬುಗಳ ಗುಣಮಟ್ಟದ ಬಗ್ಗೆ ಕೆಲವು ಅಪವಾದಗಳು ಕೇಳಿ ಬರುತ್ತಿದ್ದರೂ ಅದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ’ ಎಂದು ಅವರು  ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಯೋಗೇಂದ್ರ ತ್ರಿಪಾಠಿ ಮಾತನಾಡಿ ‘2ನೇ ಘಟಕ ನಿಗದಿತ ಕಾಲಕ್ಕೆ ಪೂರ್ಣಗೊಳ್ಳಬೇಕು. ಇದರಿಂದಾಗಿ ವಿದ್ಯುತ್ ಪೂರೈಕೆಗೆ ಕೊಂಚ ಬಲ ಬಂದಾಗುತ್ತದೆ. 3ನೇ ಘಟಕದ ಕಾರ್ಯಾರಂಭ ಮಾಡುವವರೆಗೂ ಯಾವುದೇ ತೊಂದರೆ ಎದುರಾಗುವುದಿಲ್ಲ. ಬಿಎಚ್‌ಇಎಲ್ ನಿಗದಿತ ಸಮಯದೊಳಗೆ ಈ ಕಾಮಗಾರಿ ಪೂರೈಸಿಕೊಡುವ ವಿಶ್ವಾಸ ಇದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.