ಮಂಗಳವಾರ, ಜೂನ್ 15, 2021
27 °C
ಜೂನಿಯರ್ ಮಹಿಳಾ ಹಾಕಿ ಟೂರ್ನಿ

ಸೆಮಿಗೆ ಜಾರ್ಖಂಡ್, ಹರಿಯಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು:   ಜಿಗುಟಿನ ಹೋರಾಟ ಪ್ರದರ್ಶಿಸಿದ ಜಾರ್ಖಂಡ್ ತಂಡವು ಸೋಮವಾರ 4ನೇ ರಾಷ್ಟ್ರೀಯ ಜೂನಿಯರ್ ಮಹಿಳೆಯರ ’ಎ’ ಡಿವಿಷನ್ ಹಾಕಿ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿತು.ಹಾಕಿ ಕರ್ನಾಟಕವು  ಆಯೋಜಿಸಿರುವ ಈ ಟೂರ್ನಿಯಲ್ಲಿ ಲೀಗ್‌ ಹಂತದಲ್ಲಿ ಮೊದಲ ಪಂದ್ಯ ಗೆದ್ದು, ಎರಡನೇ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದ ಜಾರ್ಖಂಡ್ ತಂಡಕ್ಕೆ ಮಹಾರಾಷ್ಟ್ರ ವಿರುದ್ಧದ ಪಂದ್ಯವು ನಿರ್ಣಾಯಕವಾಗಿತ್ತು. ಲೀಗ್‌ ಹಂತದ ಮೊದಲ ಎರಡೂ ಪಂದ್ಯಗಳನ್ನು ಜಯಿಸಿದ್ದ ಮಹಾರಾಷ್ಟ್ರವೇ ಮೇಲ್ನೋಟಕ್ಕೆ ಬಲಶಾಲಿಯಾಗಿತ್ತು. ಆದರೆ ಜಾರ್ಖಂಡ್ ತಂಡವು 6–2 (5–1) ರಿಂದ ಮಹಾರಾಷ್ಟ್ರವನ್ನು ಸೋಲಿಸಿತು.ಪಾಸ್‌ ಮತ್ತು ಚೆಂಡಿನ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಮಹಾರಾಷ್ಟ್ರ ತಂಡದ ಆಟಗಾರ್ತಿಯರ ನಡುವಿನ ಸಮನ್ವಯದ ಕೊರತೆಯನ್ನು ಜಾರ್ಖಂಡ್ ಹುಡುಗಿಯರು ಬಳಸಿಕೊಂಡರು. ರಕ್ಷಣಾ ಕೋಟೆಯನ್ನು  ಮುರಿದು  ಒಳನುಗ್ಗಿದ ರಜನಿ ಸೋರಂಜ್ (4, 12, 18ನಿ) ಗೋಲುಗಳ ಹ್ಯಾಟ್ರಿಕ್ ಸಾಧಿಸಿದರು. ನಂತರ 21ನೇ ನಿಮಿಷದಲ್ಲಿ ರಂಜಿತಾ ಮಿಂಜ್ ಗೋಲು ಗಳಿಸಿದರು. ಪ್ರತ್ಯುತ್ತರ ನೀಡಿದ ಮಹಾರಾಷ್ಟ್ರದ ಪೂಜಾ ಶಿಂಧೆ (28ನಿ) ಗೋಲು ಗಳಿಸಿದರು. ಆದರೆ 29ನೇ ನಿಮಿಷದಲ್ಲಿ ಕಾಂತಿ ಪ್ರಧಾನ್ ಚೆಂಡನ್ನು ಗೋಲುಪೆಟ್ಟಿಗೆಗೆ ಕಳಿಸುವ ಮೂಲಕ ಮೊದಲಾರ್ಧದಲ್ಲಿಯೇ ಜಾರ್ಖಂಡ್ ತಂಡವು 5–1ರ ಮುನ್ನಡೆ ಸಾಧಿಸಿತು.ನಂತರದ ಅವಧಿಯಲ್ಲಿ ರಕ್ಷಣಾ ಆಟಕ್ಕೆ ಹೆಚ್ಚು ಒತ್ತು ನೀಡಿದ ಜಾರ್ಖಂಡ್ ವಿರುದ್ಧ ಮತ್ತೊಂದು ಗೋಲು ಗಳಿಸುವಲ್ಲಿ ಐಶ್ವರ್ಯಾ ಚವ್ಹಾಣ್ (49ನಿ) ಯಶಸ್ವಿಯಾದರು. ಅವರ ಹಿಂದೆಯೇ ನೋಮಿತಾ ಅಲೆಕ್ಸೊ (50ನಿ) ಜಾರ್ಖಂಡ್ ತಂಡಕ್ಕೆ ಇನ್ನೊಂದು ಗೋಲಿನ ಕಾಣಿಕೆ ನೀಡಿದರು.ನಾಲ್ಕರ ಘಟ್ಟಕ್ಕೆ ಹರಿಯಾಣ: ಕಳೆದ ಬಾರಿಯ ಚಾಂಪಿಯನ್ ಹರಿಯಾಣ ತಂಡವು ನಿರಾಯಾಸವಾಗಿ  ನಾಲ್ಕರ ಘಟ್ಟಕ್ಕೆ ಲಗ್ಗೆ ಹಾಕಿತು. ಲೀಗ್ ಹಂತದ ಮೊದಲ ಎರಡೂ ಪಂದ್ಯಗಳನ್ನು ಗೆದ್ದಿದ್ದ ನೇಹಾ ಗೋಯಲ್ ನೇತೃತ್ವದ ಹರಿಯಾಣ ತಂಡವು 14–0 (8–0)ಯಿಂದ ರಾಜಸ್ತಾನ ತಂಡಕ್ಕೆ ಸೋಲುಣಿಸಿತು. ಇನ್ನೊಂದು ಪಂದ್ಯದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ ತಂಡವು 7–0 (2–0)ಯಿಂದ  ತಮಿಳುನಾಡು ವಿರುದ್ಧ ಜಯಿಸಿತು. ಮನೀಶಾ (45, 50, 64, 69ನಿ), ಅಂಜಲಿ ಗೌತಮ್ (6,8), ಸಂಗೀತಾ ರೋಸ್ ಕುಲ್ಲು (37ನಿ) ಗೆಲುವಿಗೆ ಕಾರಣರಾದರು.ಕೊನೆಯ ಪಂದ್ಯದಲ್ಲಿ ಉತ್ತರ ಪ್ರದೇಶ ತಂಡವು 9–0 (1–0)ಯಿಂದ ಬಂಗಾಳ ಹಾಕಿ ಸಂಸ್ಥೆ ವಿರುದ್ಧ ಗೆಲುವು ಸಾಧಿಸಿತು.ಕರ್ನಾಟಕದ ‘ಪರೀಕ್ಷೆ’ ಇಂದು

ಮೈಸೂರು: ಪದವಿಪೂರ್ವ ದ್ವಿತೀಯ ವರ್ಷದ ಪರೀಕ್ಷೆಯ ಕಾರಣದಿಂದ ಐವರು ಪ್ರಮುಖ ಆಟಗಾರ್ತಿಯರು ಹೊರಗುಳಿದಿರುವ ಕರ್ನಾಟಕ ಜೂನಿಯರ್ ಮಹಿಳೆಯರ ಹಾಕಿ ತಂಡವು 4ನೇ ರಾಷ್ಟ್ರೀಯ ಜೂನಿಯರ್ ಮಹಿಳಾ ಟೂರ್ನಿಯಲ್ಲಿ ಮಂಗಳವಾರ ತನ್ನ ಮೊದಲ ಪಂದ್ಯವಾಡಲಿದೆ.

ಲೀಗ್ ಹಂತದ ಮೊದಲ ಪಂದ್ಯದಲ್ಲಿಯೇ ಕಳೆದ ಬಾರಿಯ ರನ್ನರ್‌ ಅಪ್ ಮಧ್ಯಪ್ರದೇಶ ತಂಡವನ್ನು ಎದುರಿಸಲಿದೆ. ಇದರಿಂದಾಗಿ ಗೆಲ್ಲಲೇಬೇಕಾದ ಒತ್ತಡದಲ್ಲಿ ಸಂಧ್ಯಾ ನೇತೃತ್ವದ ಕರ್ನಾಟಕ ತಂಡವಿದೆ.ಬೆಳಿಗ್ಗೆ 7 ಗಂಟೆಗೆ ನಡೆಯಬೇಕಿದ್ದ ಪಂದ್ಯವನ್ನು ನೋಡಲು ಬರುವ ಜನರ ಅನುಕೂಲಕ್ಕಾಗಿ ಸಂಜೆ 4 ಗಂಟೆಗೆ ಆಯೋಜಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.