ಸೆಮಿಫೈನಲ್‌ಗೆ ಬಾಲಾಜಿ, ಗಾಸ್ಪರ್

7

ಸೆಮಿಫೈನಲ್‌ಗೆ ಬಾಲಾಜಿ, ಗಾಸ್ಪರ್

Published:
Updated:
ಸೆಮಿಫೈನಲ್‌ಗೆ ಬಾಲಾಜಿ, ಗಾಸ್ಪರ್

 


ಬೆಳಗಾವಿ: ಅಗ್ರ ಶ್ರೇಯಾಂಕದ ಶ್ರೀರಾಮ್ ಬಾಲಾಜಿ ಹಾಗೂ ಪೋರ್ಚುಗಲ್‌ನ ಆ್ಯಂಡ್ರೆ ಗಾಸ್ಪರ್ ಮೂರ್ತ ಇಲ್ಲಿನ ವಿಟಿಯು ಟೆನಿಸ್ ಅಂಕಣದಲ್ಲಿ ನಡೆಯುತ್ತಿರುವ `ಬೆಳಗಾವಿ ಓಪನ್' ಪುರುಷರ ಐಟಿಎಫ್ ಟೆನಿಸ್ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

 

ಗುರುವಾರ ನಡೆದ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಬಾಲಾಜಿ 6-4, 5-7, 6-3ರಲ್ಲಿ ನೆದರ್‌ಲ್ಯಾಂಡ್‌ನ ಕೊಲಿನ್ ವ್ಯಾನ್‌ಬೀಮ್ ಅವರನ್ನು ಪರಾಭವಗೊಳಿಸಿದರು. ಸುಮಾರು 2 ಗಂಟೆ 34 ನಿಮಿಷಗಳ ಕಾಲ ನಡೆದ ಪಂದ್ಯದ ಮೊದಲ ಸೆಟ್‌ನ ನಾಲ್ಕನೇ ಗೇಮ್‌ನಲ್ಲಿ ಕೊಲಿನ್‌ರ ಸರ್ವ್ ಮುರಿಯುವ ಮೂಲಕ 4-1ರಲ್ಲಿ ಬಾಲಾಜಿ ಮುನ್ನಡೆ ಸಾಧಿಸಿದರು. 7ನೇ ಗೇಮ್‌ನಲ್ಲಿ ಕೊಲಿನ್ ತಿರುಗಿಬಿದ್ದರು. ಆದರೆ 10ನೇ ಗೇಮ್‌ನಲ್ಲಿ ಮತ್ತೆ ಬಾಲಾಜಿ ಮೇಲುಗೈ ಸಾಧಿಸುವ ಮೂಲಕ ಸೆಟ್ ಗೆದ್ದರು. 55 ನಿಮಿಷಗಳ ಕಾಲ ನಡೆದ ಎರಡನೇ ಸೆಟ್‌ನ ಏಳನೇ ಗೇಮ್‌ನಲ್ಲಿ ಶ್ರೀರಾಮ್‌ರ ಸರ್ವ್ ಮುರಿಯುವ ಮೂಲಕ ಕೊಲಿನ್ ಸೆಟ್ ಗೆದ್ದು ಅಂತರ ಸಮನಾಗಿಸಿದರು. ಆದರೆ ನಿರ್ಣಾಯಕ ಸೆಟ್‌ನಲ್ಲಿ ಕೊಲಿನ್ ಹೆಚ್ಚು ಪ್ರತಿರೋಧ ತೋರದೆ ಶರಣಾದರು.

 

ಶುಕ್ರವಾರ ಬೆಳಿಗ್ಗೆ ನಡೆಯಲಿರುವ ಸೆಮಿಫೈನಲ್‌ನಲ್ಲಿ ಬಾಲಾಜಿ ಅಮೆರಿಕಾದ ಮೈಕೆಲ್ ಶಬಾಜ್ ಅವರನ್ನು ಎದುರಿಸಲಿದ್ದಾರೆ. ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಶಬಾಜ್ 6-4, 6-4ರಿಂದ 3ನೇ ಶ್ರೇಯಾಂಕದ ಥಿಯೊಡರಸ್ ಏಂಜಲೀನೊಸ್‌ಗೆ ಆಘಾತ ನೀಡಿದರು.

 

ಪೋರ್ಚುಗಲ್‌ನ ತರುಣ ಆ್ಯಂಡ್ರೆ ಗಾಸ್ಪರ್ 7-5, 6-3 ಅಂತರದಲ್ಲಿ 8ನೇ ಶ್ರೇಯಾಂಕದ ನೆದರ್‌ಲ್ಯಾಂಡ್ ಆಟಗಾರ ಜೊರಿಯಿನ್ ಬೆನಾರ್ಡ್‌ರನ್ನು ಪರಾಭವಗೊಳಿಸಿದರು. ಜರ್ಮನಿಯ ಟಾರ್ಸ್ಟನ್ ವಿಟೊಸ್ಕಾ 6-4, 3-6, 7-5ರಲ್ಲಿ ಏಳನೇ ಶ್ರೇಯಾಂಕದ ಅಶ್ವಿನ್ ವಿಜಯರಾಘವನ್‌ರನ್ನು ಘಾಸಿಗೊಳಿಸಿದರು. ಈ ಮೂಲಕ ವಿಟೊಸ್ಕಾ ಕಳೆದ ಮೂರು ಟೂರ್ನಿಗಳಲ್ಲೂ ಸೆಮಿಫೈನಲ್‌ಗೆ ಮುನ್ನಡೆದ ಖ್ಯಾತಿ ಪಡೆದರು. ಅವರು ಸೆಮಿಫೈನಲ್‌ನಲ್ಲಿ ಆ್ಯಂಡ್ರೆ ಗಾಸ್ಪರ್ ಅವರನ್ನು ಎದುರಿಸಲಿದ್ದಾರೆ.

 

ಫೈನಲ್‌ಗೆ ಭಾರತ-ಅಮೆರಿಕಾ ಜೋಡಿ: ಡಬಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಭಾರತದ ಜೋಡಿ ವಿಜಯಸುಂದರ್ ಪ್ರಶಾಂತ್- ಅರುಣ್‌ಪ್ರಕಾಶ್ ರಾಜಗೋಪಾಲನ್ 6-4, 3-6(10-6)ರಲ್ಲಿ ರೂಪೇಶ್ ರಾಯ್-ವಿವೇಕ್ ಶೋಕಿನ್‌ರನ್ನು ಪರಾಭವಗೊಳಿಸುವ ಮೂಲಕ ಫೈನಲ್‌ಗೆ ಮುನ್ನಡೆಯಿತು.

 

ಮತ್ತೊಂದು ಸೆಮಿಫೈನಲ್‌ನಲ್ಲಿ ಅಮೆರಿಕಾದ ಅಮೃತ್ ನರಸಿಂಹನ್-ಮೈಕಲ್ ಶಬಾಜ್ ಜೋಡಿ 6-3, 7-6(4)ರಲ್ಲಿ ರಷ್ಯಾದ ಸೆರ್ಗೈ         ಕ್ರೊಟಿಯೊ ಹಾಗೂ ಸ್ವಿಟ್ಜರ್‌ಲ್ಯಾಂಡ್‌ನ ಲುಕಾ ಮಾರ್ಗರೋಲಿಗೆ ಆಘಾತ ನೀಡುವ ಮೂಲಕ ಪ್ರಶಸ್ತಿ ಸುತ್ತು ತಲುಪಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry