ಸೋಮವಾರ, ಮೇ 10, 2021
25 °C
ಕಾನ್ಫೆಡರೇಷನ್ ಕಪ್ ಫುಟ್‌ಬಾಲ್: ಜಪಾನ್, ಮೆಕ್ಸಿಕೊಗೆ ನಿರಾಸೆ

ಸೆಮಿಫೈನಲ್‌ಗೆ ಬ್ರೆಜಿಲ್, ಇಟಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೆಮಿಫೈನಲ್‌ಗೆ ಬ್ರೆಜಿಲ್, ಇಟಲಿ

ಫೋರ್ಟಲೆಜಾ, ಬ್ರೆಜಿಲ್ (ಐಎಎನ್‌ಎಸ್): ಜಪಾನ್ ಒಡ್ಡಿದ ಪ್ರಬಲ ಸವಾಲನ್ನು ಮೆಟ್ಟಿನಿಂತ ಇಟಲಿ ತಂಡ ಕಾನ್ಫೆಡರೇಷನ್ ಕಪ್ ಫುಟ್‌ಬಾಲ್ ಟೂರ್ನಿಯ ಸೆಮಿಫೈನಲ್‌ಗೆ ಮುನ್ನಡೆಯಿತು. ಮೆಕ್ಸಿಕೊ ತಂಡವನ್ನು ಮಣಿಸಿದ ಬ್ರೆಜಿಲ್ ಕೂಡಾ ನಾಲ್ಕರ ಘಟ್ಟಕ್ಕೆ ರಹದಾರಿ ಪಡೆದುಕೊಂಡಿತು.ಫೋರ್ಟಲೆಜಾದ ಕ್ಯಾಸೆಲಾವೊ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಬ್ರೆಜಿಲ್ 2-0 ಗೋಲುಗಳಿಂದ ಮೆಕ್ಸಿಕೊ ತಂಡವನ್ನು ಸೋಲಿಸಿತು. ಈ ಮೂಲಕ ಒಟ್ಟು ಆರು ಪಾಯಿಂಟ್‌ಗಳೊಂದಿಗೆ ಸೆಮಿಗೆ ಮುನ್ನಡೆಯಿತು. ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸಿದ ಮೆಕ್ಸಿಕೊ ಹೊರಬಿತ್ತು.ಒಂದು ಗೋಲು ಗಳಿಸಿದ್ದಲ್ಲದೆ, ಇನ್ನೊಂದು ಗೋಲಿಗೆ ಹಾದಿಯೊದಗಿಸಿಕೊಟ್ಟ ನೈಮರ್ ಬ್ರೆಜಿಲ್ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು. ಪಂದ್ಯದ ಮೊದಲ ನಿಮಿಷದಿಂದಲೇ ಪ್ರಭುತ್ವ ಮೆರೆದ ಬ್ರೆಜಿಲ್ 9ನೇ ನಿಮಿಷದಲ್ಲಿ ಮುನ್ನಡೆ ಪಡೆಯಿತು. ಎದುರಾಳಿ ರಕ್ಷಣಾ ಆಟಗಾರರನ್ನು ತಪ್ಪಿಸಿಕೊಂಡು ಮುನ್ನುಗ್ಗಿದ ನೈಮರ್ ನಿಖರವಾಗಿ ಚೆಂಡನ್ನು ಗುರಿ ಸೇರಿಸಿದರು.ಆ ಬಳಿಕ ವಿರಾಮದವರೆಗೆ ಹೆಚ್ಚಿನ ಗೋಲುಗಳ ಬರಲಿಲ್ಲ. ನೈಮರ್ ಮತ್ತು ಹಲ್ಕ್ ಗೋಲು ಗಳಿಸುವ ಕೆಲವು ಅವಕಾಶಗಳನ್ನು ಕಳೆದು ಕೊಂಡರು. ಎರಡನೇ ಅವಧಿಯಲ್ಲಿ ಮೆಕ್ಸಿಕೊ ಮರುಹೋರಾಟ ನಡೆಸಲು ಪ್ರಯತ್ನಿಸಿತು. ಪಂದ್ಯ ಕೊನೆಗೊಳ್ಳಲು ಕೆಲವು ನಿಮಿಷಗಳಿರುವಾಗ ಮೆಕ್ಸಿಕೊಗೆ ಗೋಲು ಗಳಿಸುವ ಉತ್ತಮ ಅವಕಾಶ ಲಭಿಸಿತ್ತು.

ಆದರೆ ಆಂಡ್ರೆಸ್ ಗ್ವಾರ್ಡಾಡೊ ಗುರಿಯತ್ತ ಒದ್ದ ಚೆಂಡನ್ನು ಡೇವಿಡ್ ಲೂಯಿಜ್ ಹೊರಕ್ಕಟ್ಟುವಲ್ಲಿ ಯಶ ಕಂಡರು. ಕೊನೆು ಕ್ಷಣಗಳಲ್ಲಿ (90+3) ಬ್ರೆಜಿಲ್ 2ನೇ ಗೋಲು ಗಳಿಸಿತು. ಮೆಕ್ಸಿಕೊದ ಇಬ್ಬರು ರಕ್ಷಣಾ ಆಟಗಾರರನ್ನು ಚಾಣಾಕ್ಷವಾಗಿ ತಪ್ಪಿಸಿದ ನೈಮರ್ ಚೆಂಡನ್ನು ಜೊ ಅವರಿಗೆ ಪಾಸ್ ನೀಡಿದರು. ಮ್ಯಾಂಚೆಸ್ಟರ್ ಸ್ಟ್ರೈಕರ್ ಜೊ ಗುರಿ ಸೇರಿಸಿದರು.ಇಟಲಿಗೆ ಗೆಲುವು: ರಿಸೈಫ್‌ನ ಅರೆನಾ ಪೆರ್ನಾಂಬುಕಾ ಕ್ರೀಡಾಂಗಣದಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ಇಟಲಿ ತಂಡ ಜಪಾನ್ ವಿರುದ್ಧ 4-3 ಗೋಲುಗಳ ಪ್ರಯಾಸದ ಗೆಲುವು ಪಡೆಯಿತು.ತುರುಸಿನ ಪೈಪೋಟಿ ಕಂಡುಬಂದ ಪಂದ್ಯದಲ್ಲಿ ಏಷ್ಯಾದ ಫುಟ್‌ಬಾಲ್ ಶಕ್ತಿ ಎನಿಸಿರುವ ಜಪಾನ್ ಆರಂಭದಲ್ಲಿ 2-0 ರಲ್ಲಿ ಮುನ್ನಡೆ ಪಡೆದಿತ್ತು. ಆದರೆ ಮರುಹೋರಾಟ ನಡೆಸಿದ ಇಟಲಿ ಗೆಲುವು ತನ್ನದಾಗಿಸಿಕೊಂಡಿತು.ಕೆಸುಕೆ ಹೋಂಡಾ (21ನೇ ನಿಮಿಷ, ಪೆನಾಲ್ಟಿ ಕಿಕ್), ಶಿಂಜಿ ಕಗಾವ (33) ಮತ್ತು ಶಿಂಜಿ ಒಕಾಜಕಿ (69) ಜಪಾನ್ ಪರ ಗೋಲು ಗಳಿಸಿದರು. ಡೇನಿಯಲ್ ಡಿ ರೊಸಿ (41), ಮಾರಿಯೊ ಬಲೊಟೆಲ್ಲಿ (52, ಪೆನಾಲ್ಟಿ ಕಿಕ್) ಹಾಗೂ ಸೆಬಾಸ್ಟಿಯನ್ ಗಿಯೊವಿಂಕೊ (86) ಇಟಲಿ ಪರ ಚೆಂಡನ್ನು ಗುರಿ ಸೇರಿಸಿದರು.

ಇಟಲಿಯ ಮತ್ತೊಂದು ಗೋಲು 50ನೇ ನಿಮಿಷದಲ್ಲಿ `ಉಡುಗೊರೆ' ರೂಪದಲ್ಲಿ ಲಭಿಸಿತು. ಚೆಂಡನ್ನು ತಡೆಯುವ ಪ್ರಯತ್ನದಲ್ಲಿ ಎಡವಿದ ಜಪಾನ್ ತಂಡದ ಅತ್ಸುತೊ ಉಚಿದಾ ಎದುರಾಳಿಗೆ ಉಡುಗೊರೆ ಗೋಲು ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.