ಸೆಮಿಫೈನಲ್‌ಗೆ ಸೈನಾ ನೆಹ್ವಾಲ್

7

ಸೆಮಿಫೈನಲ್‌ಗೆ ಸೈನಾ ನೆಹ್ವಾಲ್

Published:
Updated:

ಶೆನ್‌ಜೆನ್, ಚೀನಾ (ಐಎಎನ್‌ಎಸ್): ಸೈನಾ ನೆಹ್ವಾಲ್ ಇಲ್ಲಿ ನಡೆಯುತ್ತಿರುವ `ಬಿಡಬ್ಲ್ಯುಎಫ್ ವಿಶ್ವ ಸೂಪರ್ ಸರಣಿ ಫೈನಲ್ಸ್' ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದರು.ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ `ಬಿ' ಗುಂಪಿನ ಪಂದ್ಯದಲ್ಲಿ ಭಾರತದ ಆಟಗಾರ್ತಿ 21-7, 21-18 ರಲ್ಲಿ ಜರ್ಮನಿಯ ಜೂಲಿಯನ್ ಶೆಂಕ್ ವಿರುದ್ಧ ಗೆಲುವು ಪಡೆದರು.ಸೈನಾ `ಬಿ' ಗುಂಪಿನ ತಮ್ಮ ಮೊದಲ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದರು. ಕೇವಲ ಒಂದು ಗೆಲುವು ಪಡೆದರೂ ಅವರು ನಾಲ್ಕರಘಟ್ಟಕ್ಕೆ ಅರ್ಹತೆ ಪಡೆದರು. ಶೆಂಕ್ ಮತ್ತು ಸ್ವಿಟ್ಜರ್‌ಲೆಂಡ್‌ನ ಟಿನ್ ಬಾನ್ ಅವರೂ ಒಂದು ಪಂದ್ಯದಲ್ಲಿ ಗೆಲುವು ಪಡೆದಿದ್ದರು. ಆದರೆ ಸೈನಾ ಇವರಿಬ್ಬರಿಗಿಂತ ಕಡಿಮೆ ಗೇಮ್‌ಗಳಲ್ಲಿ ಸೋಲು ಅನುಭವಿಸಿದ್ದಾರೆ. ಈ ಕಾರಣ ಸೆಮಿಫೈನಲ್‌ಗೆ ಮುನ್ನಡೆದರು.ಥಾಯ್ಲೆಂಡ್‌ನ ರತ್ಚೊನಕ್ ಇತಾನೊನ್ `ಬಿ' ಗುಂಪಿನ ಎಲ್ಲ ಮೂರು ಪಂದ್ಯಗಳಲ್ಲಿ ಗೆಲುವು ಪಡೆದು ಅಗ್ರಸ್ಥಾನದೊಂದಿಗೆ ಸೆಮಿಫೈನಲ್‌ಗೆ ಮುನ್ನಡೆದರೆ, ಸೈನಾ ಎರಡನೇ ಸ್ಥಾನದೊಂದಿಗೆ ಅರ್ಹತೆ ಗಿಟ್ಟಿಸಿದರು.ಸೈನಾ 2008 ರಲ್ಲಿ ಈ ಟೂರ್ನಿಯಲ್ಲಿ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿದ್ದರೆ, ಹೋದ ವರ್ಷ ಫೈನಲ್‌ನಲ್ಲಿ ವಿಶ್ವದ ಅಗ್ರ ರ‌್ಯಾಂಕಿಂಗ್‌ನ ಆಟಗಾರ್ತಿ ಚೀನಾದ ಯುಹಾನ್ ವಾಂಗ್ ಕೈಯಲ್ಲಿ ಪರಾಭವಗೊಂಡಿದ್ದರು.ಶೆನ್‌ಜೆನ್ ಬೇ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಗೆಲುವು ಪಡೆಯಲು ಹೈದರಾಬಾದ್‌ನ ಆಟಗಾರ್ತಿ 37 ನಿಮಿಷಗಳನ್ನು ತೆಗೆದುಕೊಂಡರು. ಮೊದಲ ಸೆಟ್‌ನಲ್ಲಿ 15-7ರ ಮುನ್ನಡೆ ಪಡೆದ ಸೈನಾ ಬಳಿಕ ಸತತ ಆರು ಪಾಯಿಂಟ್‌ಗಳನ್ನು ಗೆದ್ದುಕೊಂಡರು.ಆದರೆ ಎರಡನೇ ಸೆಟ್‌ನಲ್ಲಿ ತುರುಸಿನ ಪೈಪೋಟಿ ಕಂಡುಬಂತು. ಒಂದು ಹಂತದಲ್ಲಿ ಇಬ್ಬರೂ 18-18 ರಲ್ಲಿ ಸಮಬಲ ಸಾಧಿಸಿದ್ದರು. ಈ ವೇಳೆ ಎಚ್ಚರಿಕೆಯ ಆಟವಾಡಿದ ಸೈನಾ ಸತತ ಮೂರು ಪಾಯಿಂಟ್ ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry