ಶನಿವಾರ, ಫೆಬ್ರವರಿ 27, 2021
31 °C
ಜೂನಿಯರ್‌ ವಿಶ್ವಕಪ್‌: ಇಂಗ್ಲೆಂಡ್‌ ವಿರುದ್ಧದ ಕ್ವಾರ್ಟರ್‌ ಫೈನಲ್‌ ಇಂದು

ಸೆಮಿಯತ್ತ ಭಾರತದ ಚಿತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೆಮಿಯತ್ತ ಭಾರತದ ಚಿತ್ತ

ದುಬೈ (ಪಿಟಿಐ): ಲೀಗ್‌ ಹಂತದಲ್ಲಿ ಆಡಿದ ಎಲ್ಲ ಪಂದ್ಯಗಳಲ್ಲಿ ಗೆಲುವು ಪಡೆದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತ 19 ವರ್ಷ ವಯಸ್ಸಿನೊಳಗಿನ ತಂಡದವರು ಜೂನಿಯರ್‌ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಮೇಲೆ ಕಣ್ಣಿಟ್ಟಿದ್ದಾರೆ.ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್‌ನ ಸವಾಲನ್ನು ಎದುರಿಸಲಿದೆ. ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಇಂಗ್ಲೆಂಡ್‌ ತಂಡ ಭಾರತಕ್ಕೆ ಪ್ರಬಲ ಪೈಪೋಟಿ ನೀಡುವುದು ಖಚಿತ.ವಿಜಯ್‌ ಜೋಲ್‌ ನೇತೃತ್ವದ ಭಾರತ ತಂಡದವರು ಲೀಗ್‌ ಹಂತದಲ್ಲಿ ಕ್ರಮವಾಗಿ ಪಾಕಿಸ್ತಾನ, ಸ್ಕಾಟ್ಲೆಂಡ್‌ ಮತ್ತು ಪಪುವಾ ನ್ಯೂಗಿನಿ ತಂಡಗಳನ್ನು ಮಣಿಸಿದ್ದರು. ಅದರಲ್ಲೂ ಕೊನೆಯ ಲೀಗ್‌ ಪಂದ್ಯದಲ್ಲಿ ಪಪುವಾ ನ್ಯೂಗಿನಿ ವಿರುದ್ಧ 245 ರನ್‌ಗಳ ಭರ್ಜರಿಗೆ ಜಯ ಸಾಧಿಸಿದ್ದರು.ಸಂಜು ಸ್ಯಾಮ್ಸನ್‌ ಮತ್ತು ಆಲ್‌ರೌಂಡರ್‌ ಸರ್ಫ್‌ರಾಜ್‌ ಖಾನ್‌ ಮೇಲೆ ಭಾರತ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ. ಇವರಿಬ್ಬರು ಲೀಗ್‌ ಹಂತದಲ್ಲಿ ಉತ್ತಮ ಬ್ಯಾಟಿಂಗ್‌ ತೋರಿದ್ದಾರೆ. ನಾಯಕ ಜೋಲ್‌ ಕೂಡಾ ಬ್ಯಾಟಿಂಗ್‌ ವಿಭಾಗದ ಶಕ್ತಿ ಎನಿಸಿಕೊಂಡಿದ್ದಾರೆ. ಭಾರತ ತಂಡ ಬೌಲಿಂಗ್‌ನಲ್ಲಿ ಎಡಗೈ  ಸ್ಪಿನ್ನರ್‌ ಕುಲದೀಪ್‌ ಯಾದವ್‌ ಅವರನ್ನು ನೆಚ್ಚಿಕೊಂಡಿದೆ.ಐಸಿಸಿ ಜೂನಿಯರ್‌ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ ಇಂಗ್ಲೆಂಡ್‌ ವಿರುದ್ಧ 6-1 ಅಂತರದ ಗೆಲುವಿನ ದಾಖಲೆ ಹೊಂದಿದೆ. ಆದರೆ 2010 ರಲ್ಲಿ ಕೊನೆಯ ಬಾರಿ ಇವೆರಡು ತಂಡಗಳು ಎದುರಾಗಿದ್ದಾಗ ಇಂಗ್ಲೆಂಡ್‌ 31 ರನ್‌ಗಳ ಜಯ ಸಾಧಿಸಿತ್ತು.ಇಂಗ್ಲೆಂಡ್‌ ತಂಡ ಲೀಗ್‌ ಹಂತದಲ್ಲಿ ನ್ಯೂಜಿಲೆಂಡ್‌ ವಿರುದ್ಧ 115 ರನ್‌ಗಳ ಗೆಲುವು ಪಡೆದಿದ್ದರೆ, ಯುಎಇ ತಂಡವನ್ನು 213 ರನ್‌ಗಳಿಂದ ಸೋಲಿಸಿತ್ತು. ಈ ತಂಡದ ಜೊನಾಥನ್‌ ಟಾಟೆರ್ಸಲ್‌, ರ್‍ಯಾನ್‌ ಹಿಗಿನ್ಸ್‌ ಮತ್ತು ಹ್ಯಾರಿ ಫಿಂಚ್‌ ಟೂರ್ನಿಯಲ್ಲಿ ಈಗಾಗಲೇ ಶತಕ ಗಳಿಸಿದ್ದು, ಭಾರತದ ಬೌಲರ್‌ಗಳಿಗೆ ಸವಾಲಾಗುವುದು ಖಚಿತ.‘ಕ್ವಾರ್ಟರ್‌ ಫೈನಲ್‌ನಲ್ಲಿ ಇಂಗ್ಲೆಂಡ್‌ ತಂಡವನ್ನು ಎದುರಿಸುತ್ತಿದ್ದೇವೆ ಎಂಬುದು ಇಲ್ಲಿ ಮುಖ್ಯವಲ್ಲ. ಬ್ಯಾಟಿಂಗ್‌, ಬೌಲಿಂಗ್‌ ಮತ್ತು ಫೀಲ್ಡಿಂಗ್‌ನಲ್ಲಿ ನಾವು ಶ್ರೇಷ್ಠ ಪ್ರದರ್ಶನ ತೋರುತ್ತಿದ್ದು, ಸೆಮಿಫೈನಲ್‌ ಪ್ರವೇಶಿಸುವ ವಿಶ್ವಾಸ ಹೊಂದಿದ್ದೇವೆ’ ಎಂದು ಭಾರತ ತಂಡದ ನಾಯಕ ಜೋಲ್‌ ಹೇಳಿದ್ದಾರೆ.ಪಾಕ್‌- ಲಂಕಾ ಪೈಪೋಟಿ: ಶಾರ್ಜಾದಲ್ಲಿ ಶನಿವಾರ ನಡೆಯಲಿರುವ ಮತ್ತೊಂದು ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಪೈಪೋಟಿ ನಡೆಸಲಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.