ಸೆರೆನಾ, ನೊವಾಕ್ ಜಯದ ಆರಂಭ

ಮೆಲ್ಬರ್ನ್ (ಎಪಿ/ಎಎಫ್ಪಿ/ಪಿಟಿಐ): ಹಾಲಿ ಚಾಂಪಿಯನ್ನರಾದ ಸರ್ಬಿಯಾದ ನೊವಾಕ್ ಜೊಕೊವಿಚ್ ಹಾಗೂ ಅಮೆರಿಕಾದ ಸೆರೆನಾ ವಿಲಿಯಮ್ಸ್ ಅವರು ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಗೆಲುವಿನ ಆರಂಭ ಪಡೆದಿದ್ದಾರೆ.
ಸೋಮವಾರ ರಾಡ್ ಲಾವೆರ್ ಅರೆನಾದಲ್ಲಿ ನಡೆದ ಪ್ರಧಾನ ಹಂತದ ಮೊದಲ ಸುತ್ತಿನ ಪಂದ್ಯದಲ್ಲಿ ಅಗ್ರಶ್ರೇಯಾಂಕದ ಜೊಕೊವಿಚ್ 6–3, 6–2, 6–4ರ ನೇರ ಸೆಟ್ಗಳಿಂದ ದಕ್ಷಿಣ ಕೊರಿಯಾದ ಚುಂಗ್ ಹಯೊನ್ ಎದುರು ಗೆಲುವು ಪಡೆದರು.
ಪುರುಷರ ಸಿಂಗಲ್ಸ್ ವಿಭಾಗದ ಇನ್ನೊಂದು ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್ನ ರಫೆಲ್ ನಡಾಲ್ 6–2, 6–1, 6–2ರಲ್ಲಿ ಜಾರ್ಜಿಯಾದ ನಿಕೊಲಜ್ ಬ್ಯಾಸಿಲಾಶಿವ್ಲಿ ಅವರನ್ನು ಮಣಿಸಿದರು.
ಇದೇ ವಿಭಾಗದ ಇನ್ನಷ್ಟು ಪ್ರಮುಖ ಪಂದ್ಯಗಳಲ್ಲಿ ಒಂಬತ್ತನೇ ಶ್ರೇಯಾಂಕದ ವಿಲ್ಫ್ರಡ್ ಸೊಂಗಾ 6–4, 4–6, 6–4, 6–2ರಲ್ಲಿ ಮಾರ್ಕೊಸ್ ಬಗದಾಟಿಸ್ ಮೇಲೂ, ಜಪಾನ್ನ ಕೀ ನಿಷಿಕೋರಿ 6–4, 6–3, 6–3ರಲ್ಲಿ ಜರ್ಮನಿಯ ಫಿಲಿಪ್ ಕೊಯ್ಸೆರೈಬರ್ ವಿರುದ್ಧವೂ, ಕ್ರೊವೇಷ್ಯಾದ ಮರಿನ್ ಸಿಲಿಕ್ 6–7, 7–5, 6–2, 6–4ರಲ್ಲಿ ನೆದರ್ಲೆಂಡ್ಸ್ನ ಥೆಮಿಯೊ ಡೆ ಬಾಕರ್ ಮೇಲೂ ಜಯ ಪಡೆದು ಎರಡನೇ ಸುತ್ತಿಗೆ ಲಗ್ಗೆ ಇಟ್ಟರು.
ಸೆರೆನಾಗೆ ಪ್ರಯಾಸದ ಜಯ: ವಿಶ್ವ ರ್ಯಾಂಕ್ನಲ್ಲಿ ಅಗ್ರಸ್ಥಾನ ಹೊಂದಿರುವ ಸೆರೆನಾ ಮಹಿಳೆಯರ ಮೊದಲ ಸುತ್ತಿನ ಹೋರಾಟದಲ್ಲಿ 6–4, 7–5ರಲ್ಲಿ ಇಟಲಿಯ ಕಾಮಿಲಾ ಜಿರ್ಜಿ ಅವರನ್ನು ಪ್ರಯಾಸ ಪಟ್ಟು ಮಣಿಸಿದರು.
21 ಬಾರಿ ಗ್ರ್ಯಾಂಡ್ ಸ್ಲಾಮ್ ಟೂರ್ನಿಗಳಲ್ಲಿ ಚಾಂಪಿಯನ್ ಆಗಿರುವ ಸೆರೆನಾ ಈಗ ಉತ್ತಮ ಲಯದಲ್ಲಿದ್ದಾರೆ.
ಮುಗ್ಗರಿಸಿದ ಸ್ಟಾಸರ್: 2011ರಲ್ಲಿ ಅಮೆರಿಕ ಓಪನ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದ ಆತಿಥೇಯ ದೇಶದ ಸಮಂತಾ ಸ್ಟಾಸರ್ ಮೆಲ್ಬರ್ನ್ ಪಾರ್ಕ್ನಲ್ಲಿ ಮೊದಲ ಸುತ್ತಿನಲ್ಲಿಯೇ ಮುಗ್ಗರಿಸಿದರು. ಇಲ್ಲಿ 25ನೇ ಶ್ರೇಯಾಂಕ ಹೊಂದಿದ್ದ ಸಮಂತಾ 4–6, 6–7ರಲ್ಲಿ ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪ್ಲಿಸ್ಕೊವಾ ಎದುರು ಪರಾಭವಗೊಂಡರು.
ಸಮಂತಾ 2006 ಮತ್ತು 2010ರ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ನಾಲ್ಕನೇ ಸುತ್ತು ಪ್ರವೇಶಿಸಿದ್ದು ಶ್ರೇಷ್ಠ ಸಾಧನೆ ಎನಿಸಿದೆ. ಮಹಿಳಾ ವಿಭಾಗದ ಇನ್ನೊಂದು ಪಂದ್ಯದಲ್ಲಿ ಐದನೇ ಶ್ರೇಯಾಂಕದ ಮರಿಯಾ ಶರಪೋವಾ 6–1, 6–3ರ ನೇರ ಸೆಟ್ಗಳಿಂದ ಜಪಾನ್ನ ನವೊ ಹಿಡಿನೊ ವಿರುದ್ಧ ಸುಲಭ ಗೆಲುವು ಸಾಧಿಸಿದರು.
ರಷ್ಯಾದ ಶರಪೋವಾ ಒಟ್ಟು ಐದು ಗ್ರ್ಯಾಂಡ್ ಸ್ಲಾಮ್ ಟ್ರೋಫಿಗಳನ್ನು ಜಯಿಸಿದ್ದಾರೆ. 2014ರಲ್ಲಿ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದರು. ಇಲ್ಲಿ 2008ರಲ್ಲಿ ಮೊದಲ ಬಾರಿಗೆ ಟ್ರೋಫಿ ಗೆದ್ದಿದ್ದರು.
ಇದೇ ವಿಭಾಗದ ಇನ್ನಷ್ಟು ಪಂದ್ಯಗಳಲ್ಲಿ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ 6–3, 6–1ರಲ್ಲಿ ಥಾಯ್ಲೆಂಡ್ನ ಲಕ್ಸಿಕಾ ಕುಮ್ಕುಕ್ ಮೇಲೂ, ರಷ್ಯಾದ ಸ್ವೆಟ್ಲಿನಾ ಕುಜ್ನೆತ್ಸೋವಾ 6–0, 6–2ರಲ್ಲಿ ಸ್ಲೋವಾಕಿಯಾದ ಡೇನಿಯಲಾ ಹಟುಂಚೊವಾ ವಿರುದ್ಧವೂ, ಶ್ರೇಯಾಂಕ ರಹಿತ ಆಟಗಾರ್ತಿ ರಷ್ಯಾದ ಮಾರ್ಗರಿಟಾ ಗ್ಯಾಸ್ಪಿಯರನ್ 1–6, 7–5, 6–1ರಲ್ಲಿ ಇಟಲಿಯ ಸಾರಾ ಇರಾನಿ ಮೇಲೂ, ರಷ್ಯಾದ ಎಲಿಜವಟೆ ಕುಲಿಚ್ಕೋವಾ 7–6, 6–4ರಲ್ಲಿ ಜರ್ಮನಿಯ ಆ್ಯಂಡ್ರೊ ಪೆಟ್ಕೊವಿಕ್ ವಿರುದ್ಧವೂ, ಇಟಲಿಯ ರಾಬೆರ್ಟಾ ವಾನ್ಸಿ 6–4, 6–2ರಲ್ಲಿ ಅಸ್ಟ್ರೀಯಾದ ತಾಮಿರಾ ಪಾಜೆಕ್ ಮೇಲೂ ಗೆಲುವು ಪಡೆದರು. ಆದರೆ 16ನೇ ಶ್ರೇಯಾಂಕದ ಡೆನ್ಮಾರ್ಕ್ನ ಕ್ಯಾರೊಲಿನ್ ವೊಜ್ನಿಯಾಕಿ 6–1, 6–7, 4–6ರಲ್ಲಿ ಕಜಕಸ್ತಾನದ ಪುಟಿಂತ್ಸೆವಾ ಎದುರು ನಿರಾಸೆ ಕಂಡರು. ವೊಜ್ನಿಯಾಕಿ 2009 ಹಾಗೂ 2014ರ ಅಮೆರಿಕ ಓಪನ್ ಟೂರ್ನಿಯಲ್ಲಿ ಫೈನಲ್ ತಲುಪಿದ್ದರು.
ಭಾಂಬ್ರಿಗೆ ನಿರಾಸೆ
ಭಾರತದ ಯೂಕಿ ಭಾಂಬ್ರಿ ಪ್ರಧಾನ ಹಂತದ ಮೊದಲ ಸುತ್ತಿನಲ್ಲಿ 5–7, 1–6, 2–6ರಲ್ಲಿ ಜೆಕ್ ಗಣರಾಜ್ಯದ ಥಾಮಸ್ ಬೆರ್ಡಿಕ್ ಎದುರು ಸೋತರು. ಬೆರ್ಡಿಕ್ ಹೋದ ವರ್ಷ ಸೆಮಿಫೈನಲ್ ತಲುಪಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.