ಸೆರೆಸಿಕ್ಕ ಹುಲಿ: ನಿಟ್ಟುಸಿರುಬಿಟ್ಟ ಜನ

7

ಸೆರೆಸಿಕ್ಕ ಹುಲಿ: ನಿಟ್ಟುಸಿರುಬಿಟ್ಟ ಜನ

Published:
Updated:
ಸೆರೆಸಿಕ್ಕ ಹುಲಿ: ನಿಟ್ಟುಸಿರುಬಿಟ್ಟ ಜನ

ಗುಂಡ್ಲುಪೇಟೆ: ಅರಣ್ಯ ಇಲಾಖೆ ಕೊನೆಗೂ ನರಭಕ್ಷಕ ಹುಲಿಯನ್ನು ಸೆರೆಹಿಡಿದಿದ್ದು, ಇದರೊಂದಿಗೆ ಕಾಡಂಚಿನ ಜನರು ನಿರಾಳರಾಗಿದ್ದಾರೆ.

ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದ ಮದ್ದೂರು ವಲಯದ ನಿಂಗನಳ್ಳಿ ಕಾರೇಮಾಳದ ಬಳಿ ಗುರುವಾರ ಬೆಳಿಗ್ಗೆ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿಯಿತು.ಮದ್ದೂರು ಅರಣ್ಯ ವಲಯದ ಗಿರಿಜನ ವ್ಯಕ್ತಿ ಜವರಯ್ಯ ಎಂಬುವರನ್ನು ಹುಲಿ ಬಲಿ ತೆಗೆದುಕೊಂಡ ನಂತರ ಕಾಡಂಚಿನ ಜನ ಆತಂಕಗೊಂಡಿದ್ದರು.

6– 7 ದಿನಗಳಿಂದ ಆತಂಕದಿಂದ ಬದುಕು ಸವೆಸುತ್ತಿದ್ದ ಅರಣ್ಯದಂಚಿನ ಜನರು ಮದ್ದೂರು ವಲಯ ಅರಣ್ಯಾಧಿಕಾರಿ ಕಚೇರಿ ಮುಂದೆ ಜಮಾಯಿಸಿ ನರಭಕ್ಷಕ ಹುಲಿಯನ್ನು ಗುಂಡಿಕ್ಕಿ ಕೊಲ್ಲುವಂತೆ ಆಗ್ರಹಿಸಿದರು.ಕೇವಲ ಒಂದು ತಿಂಗಳ ಅವಧಿಯಲ್ಲಿ ಬಂಡೀಪುರ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ನಾಲ್ಕು ಬಲಿ ಪಡೆದ ವ್ಯಾಘ್ರ ಇದೇ ಎನ್ನುವುದಕ್ಕೆ ಯಾವುದೇ ಪುರಾವೆಯೂ ದೊರೆತಿಲ್ಲ. ಆದರೆ, ಜವರಯ್ಯ ಅವರನ್ನು ಕೊಂದ ಹುಲಿ ಮಾತ್ರ ಇದೇ ಎಂಬುದನ್ನು ಅರಣ್ಯಾಧಿಕಾರಿಗಳು ಕ್ಯಾಮೆರಾ ಟ್ರ್ಯಾಪಿಂಗ್ ಮೂಲಕ ನಿಖರವಾಗಿ ಅಂದಾಜಿಸಿದ್ದಾರೆ.3– 4 ದಿನಗಳಿಂದ ಬೋನಿನ ಬಳಿ ಸುಳಿದಾಡುತ್ತಿದ್ದ ಹುಲಿ ಇದೇ ಎಂಬುದನ್ನು ವನ್ಯಜೀವಿ ಸಂರಕ್ಷಣಾ ಪ್ರಾಧಿಕಾರದ ಸಹ ಕಾರ್ಯದರ್ಶಿ ರಾಜೇಶ್ ಗೋಪಾಲನ್ ಸಮರ್ಥಿಸಿಕೊಂಡಿದ್ದು, ಪಟ್ಟೆ ಗುರುತಿನ ಮೂಲಕ ಇದೇ ಹುಲಿ ಜವರಯ್ಯನ ಮೇಲೆ ದಾಳಿ ಮಾಡಿತ್ತು ಎಂಬುದನ್ನು ನಿರೂಪಿಸಿದ್ದಾರೆ.

ಅರಣ್ಯ ಇಲಾಖೆ ಕಾರ್ಯಾಚರಣೆ ಬಗ್ಗೆ ಇಲ್ಲಿನ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

‘ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ’

ಗುಂಡ್ಲುಪೇಟೆ: ‘ಶನಿವಾರದಿಂದ ನರಭಕ್ಷಕ ಹುಲಿ ಸೆರೆಗೆ ಶ್ರಮಪಟ್ಟಿದ್ದು ಇವತ್ತು ಸಾರ್ಥಕವಾಗಿದೆ’ ಎಂದು ಮಾವುತ ನಾಡೇಗೌಡ ಸಂತಸ ವ್ಯಕ್ತಪಡಿಸಿದರು. ಶನಿವಾರದಿಂದ ಮೂಲೆಹೊಳೆ ಆನೆ ಶಿಬಿರದ ನಾಲ್ಕು ಸಾಕಾನೆಗಳಾದ ತೆರೆಸಾ, ಕಾಂತಿ, ಕೃಷ್ಣ, ರೋಹಿತ್ ಶ್ರಮಪಟ್ಟಿದ್ದವು. ಮಾವುತರಾದ ವಸಂತ, ವಾಸು, ಪರ್ವೀಜ್‌, ಮಾಸ್ತಿ, ಚಂದ್ರಶೇಖರ್‌, ನಾಡೇಗೌಡ, ಶಫಿ, ತಿಮ್ಮ, ರಾಜು, ರಾಮು, ಸುರೇಶ್‌ ಅವರಿದ್ದ ತಂಡ ಹಾಗೂ ನಾಗರಹೊಳೆಯಿಂದ ಬಂದಿದ್ದ ಆನೆ ಅಭಿಮನ್ಯು ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.

ಹುಲಿಗೆ ಅರಿವಳಿಕೆ ಮದ್ದು ನೀಡಲು ಮೂರು ವೈದ್ಯರ ತಂಡ ಬೀಡುಬಿಟ್ಟಿತ್ತು. ಘಟನೆ ನಡೆದ ನಿಂಗನಳ್ಳಿ ಕಾರೇಮಾಳದ ಬಳಿ 15 ಕ್ಯಾಮೆರಾಗಳನ್ನು ಅಳವಡಿಸಿ ಕ್ಯಾಮೆರಾ ಟ್ರ್ಯಾಪಿಂಗ್ ಕೂಡಾ ಮಾಡಲಾಗಿತ್ತು. ಆದರೆ, ಬೋನಿಗೆ ಕಟ್ಟಿದ್ದ ಕರುಗಳನ್ನು ಚಾಣಾಕ್ಷತನದಿಂದ ತಿಂದ ಹುಲಿ ಅರಣ್ಯ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸಿ ಪಾರಾರಿಯಾಗಿತ್ತು. ಇದನ್ನೆ ಸವಾಲಾಗಿ ಸ್ವೀಕರಿಸಿ, ಕೊನೆಗೂ ಅರಣ್ಯ ಇಲಾಖೆ ಯಶಸ್ವಿಯಾಯಿತು.

‘ಇನ್ನೂ 2 ಹುಲಿಗಳಿವೆ’

ಈ ಹುಲಿಯೇ ಜವರಯ್ಯನ ಮೇಲೆ ದಾಳಿ ನಡೆಸಿದೆ. ಇನ್ನೂ ಇಲ್ಲಿ ಎರಡು ಹುಲಿಗಳಿರುವುದರಿಂದ ಅರಣ್ಯದಂಚಿನ ಗ್ರಾಮಸ್ಥರು ಈ ಕಡೆ ಓಡಾಡಬಾರದು ಹಾಗೂ ಅರಣ್ಯ ಪ್ರವೇಶಿಸಬಾರದು.

– ನವೀನ್ ಕುಮಾರ್, ಅರಣ್ಯ ಪರಿಪಾಲಕ.

‘ಆತಂಕ ದೂರ’

ಕಳೆದ 5– 6 ದಿನಗಳಿಂದ ಮೂಡಿದ್ದ ಆತಂಕ ದೂರವಾಗಿದೆ. ನಮ್ಮ ಗ್ರಾಮಕ್ಕೆ ಕಾಡಾನೆಗಳ ಹಾವಳಿಯಿದೆ. ಕಾಡಾನೆ ಹಾವಳಿ ಬಗ್ಗೆಯೂ ಅರಣ್ಯ ಇಲಾಖೆ ಗಮನ ಹರಿಸಲಿ.

– ಕಜ್ಜಾಯ ಬಸವಣ್ಣ, ಚನ್ನಮಲ್ಲಿಪುರದ ಗ್ರಾಮಸ್ಥ.‘ಪ್ರಶಂಸನೀಯ’


ಅರಣ್ಯದಂಚಿನ ಜನರು ಕಳೆದ ಶನಿವಾರದಿಂದ ಊಟ, ನಿದ್ದೆಯನ್ನೂ ಸರಿಯಾಗಿ ಮಾಡಿಲ್ಲ. ನಮ್ಮ ಆತಂಕ ದೂರ ಮಾಡಿದ ಅರಣ್ಯ ಇಲಾಖೆಯು ಹುಲಿ ಸೆರೆ ಹಿಡಿದಿರುವುದು ಪ್ರಶಂಸನೀಯ.

– ಪ್ರಸಾದ್, ಹೊಂಗಳ್ಳಿ ನಿವಾಸಿ

‘ಸದ್ಯಕ್ಕೆ ನಿರಾಳ’

ನಮ್ಮೂರಿನ ಜವರಯ್ಯನನ್ನು ಕೊಂದ ಹುಲಿಯನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು. ಇದನ್ನು ಮತ್ತೆ ಕಾಡಿಗೆ ಬಿಟ್ಟರೆ ಆತಂಕ ತಪ್ಪಿದ್ದಲ್ಲ. ಆದರೂ, ಸದ್ಯಕ್ಕೆ ನಿರಾಳರಾಗಿದ್ದೇವೆ.

– ಎಂ.ಪಿ. ಶಿವಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry