ಶುಕ್ರವಾರ, ಮೇ 7, 2021
23 °C
ವಿದ್ಯುತ್ ಪರಿವರ್ತಕ ನೀಡಿಕೆ ವಿಳಂಬ ಆರೋಪ

`ಸೆಸ್ಕ್' ಅಧಿಕಾರಿಗಳ ವಿರುದ್ಧ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಳಂದೂರು: ತಾಲ್ಲೂಕಿನ ರೈತರಿಗೆ ವಿದ್ಯುತ್ ಪರಿವರ್ತಕಗಳನ್ನು ನೀಡುವಲ್ಲಿ ಸೆಸ್ಕ್ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸೆಸ್ಕ್ ಕಚೇರಿ ಬಳಿ ರೈತ ಸಂಘದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.ಈ ಬಾರಿ ತಾಲ್ಲೂಕಿನಲ್ಲಿ ಮಳೆ ಕೈಕೊಟ್ಟಿದೆ. ವಿದ್ಯುತ್ ಕಣ್ಣಾಮುಚ್ಚಾಲೆ ನಡುವೆ ವಿದ್ಯುತ್ ಪರಿವರ್ತಕಗಳು ಕೆಟ್ಟು ಹೋಗಿದ್ದು, ಹೊಲಗದ್ದೆಗಳಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಪರಿವರ್ತಕಗಳು ಕೆಟ್ಟು ಮೂರು ನಾಲ್ಕು ತಿಂಗಳಾದರೂ ದುರಸ್ತಿ ಮಾಡಿಸುವಲ್ಲಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದರು.ವಿದ್ಯುತ್ ಪರಿವರ್ತಕ ಕೆಟ್ಟ 72 ಗಂಟೆಗಳಲ್ಲಿ ರಿಪೇರಿ ಮಾಡಿಸುವಂತೆ ಸರ್ಕಾರಿ ಆದೇಶವಿದ್ದರೂ, ಅದು ಪಾಲನೆಯಾಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಸೂಕ್ತ ಉತ್ತರ ಸಿಗುತ್ತಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಶಾಸಕರ ಅಭಯ

ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ದರಾಜು, ರೈತರ ಸಮಸ್ಯೆ ಆಲಿಸಿ ಶಾಸಕರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು.

`ಟಿ.ಸಿ. ಬ್ಯಾಂಕ್ ಸ್ಥಾಪಿಸಲು ಸರ್ಕಾರ ಕ್ರಮ ವಹಿಸಿದೆ. ಕೊಳ್ಳೇಗಾಲದಲ್ಲಿ ಸ್ಥಾಪನೆಯಾಗಲಿದ್ದು ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಾಗದಂತೆ ಕ್ರಮ ವಹಿಸಲಾಗುವುದು. ಈಗಾಗಲೇ ದುರಸ್ತಿಯಲ್ಲಿರುವ ಪರಿವರ್ತಕಗಳನ್ನು ಶೀಘ್ರದಲ್ಲೇ ರೈತರಿಗೆ ನೀಡಲು ಅಧಿಕಾರಿಗಳಿಗೆ ಮನವರಿಕೆ ಮಾಡಲಾಗುವುದು.ಈ ಬಗ್ಗೆ ಶುಕ್ರವಾರ ಸಭೆಯನ್ನೂ ನಡೆಸಲಾಗುವುದು' ಎಂಬ ಭರವಸೆಯನ್ನೂ ಶಾಸಕರು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರು ನೀಡಿದ್ದಾರೆ ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನೂರು ಪ್ರಕಾಶ್ ತಿಳಿಸಿದರು.ಸ್ಥಳಕ್ಕೆ ಬಂದ ಪರಿವರ್ತಕ

ಈ ನಡುವೆ ಸೆಸ್ಕ್‌ನ ಕಾರ್ಯಪಾಲಕ ಎಂಜಿನಿಯರ್ ವಿನುತ್ ಸ್ಥಳಕ್ಕೆ ಭೇಟಿ ನೀಡಿ, ರೈತರ ಸಮಸ್ಯೆ ಆಲಿಸಿದರು. ನಂತರ ಸ್ಥಳದಲ್ಲೇ ವಿದ್ಯುತ್ ಪರಿವರ್ತಕ ನೀಡಲಾಯಿತು. ಮುಂದಿನ ದಿನಗಳಲ್ಲಿ ಇಂತಹ ತೊಂದರೆ ತಲೆದೊರದಂತೆ ಕ್ರಮವ ಹಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.ರೈತ ಸಂಘದ ತಾಲ್ಲೂಕು ಅಧ್ಯಕ್ಷ ಸಿದ್ದಲಿಂಗಸ್ವಾಮಿ, ಕಾರ್ಯದರ್ಶಿ ಪುಟ್ಟಮಾದಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟೇಶ್,

ನಂಜುಂಡಸ್ವಾಮಿ, ದೊರೆಸ್ವಾಮಿ, ಸಿದ್ದಪ್ಪಸ್ವಾಮಿ, ನಂಜಪ್ಪ, ಗುರುಮಲ್ಲಪ್ಪ, ಚಾಮಲಾಪುರ ಹಾಗೂ ಗಣಿಗನೂರು ಗ್ರಾಮದ ರೈತರು, ಎಇಇ ಶಂಕರ್ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.