ಸೆಸ್ಕ್ ಸಿಬ್ಬಂದಿ ವಿರುದ್ಧ ಸಚಿವ ಯೋಗೇಶ್ವರ್ ಕಿಡಿ

ಶನಿವಾರ, ಮೇ 25, 2019
32 °C

ಸೆಸ್ಕ್ ಸಿಬ್ಬಂದಿ ವಿರುದ್ಧ ಸಚಿವ ಯೋಗೇಶ್ವರ್ ಕಿಡಿ

Published:
Updated:

ಮಂಡ್ಯ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಗಳ ಕಾರ್ಯ ವೈಖರಿಯನ್ನು ಗುರುವಾರ ನಗರದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಹುತೇಕ ಶಾಸಕರು ತೀವ್ರ ತರಾಟೆಗೆ ತೆಗೆದುಕೊಂಡರು.ಶಾಸಕ ಸಿ.ಎಸ್. ಪುಟ್ಟರಾಜು ಮಾತನಾಡಿ, ಕುಡಿಯುವ ನೀರು ಪೂರೈಸುವ ಯೋಜನೆಗಳಿಗೆ ವಿದ್ಯುತ್ ಸಂಪರ್ಕ ಪಡೆದುಕೊಂಡಿರುವ ಗ್ರಾಮ ಪಂಚಾಯಿತಿಗಳಿಗೆ ದಂಡ ವಿಧಿಸಲಾಗಿದೆ. ಕುಡಿಯುವ ನೀರಿನ ಸಂಪರ್ಕಕ್ಕೆ ದಂಡ ವಿಧಿಸಿದರೆ ಅಧಿಕಾರಿಗಳು ಕೆಲಸ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.ಕುಡಿಯವ ನೀರಿನ ಯೋಜನೆಗಳಿಗೆ ಪಡೆಯುವ ವಿದ್ಯುತ್ ಸಂಪರ್ಕಗಳಿಗೆ ದಂಡ ವಿಧಿಸಬಾರದು ಎಂದು ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ್ದರು. ಅವರ ಮಾತಿಗೆ ಬೆಲೆ ಇಲ್ಲವೇ? ಇದಕ್ಕೊಂದು ಅಂತ್ಯ ಹಾಡಬೇಕು ಎಂದು ಆಗ್ರಹಿಸಿದರು.ಶಾಸಕ ಎ.ಬಿ. ರಮೇಶ್‌ಬಾಬು ಮಾತನಾಡಿ, ನನ್ನ ಕ್ಷೇತ್ರದಲ್ಲಿ ಸುಟ್ಟು ಹೋಗಿರುವ ಟಿಸಿಗಳ ಬದಲಾವಣೆ ಮಾಡಿಕೊಡುತ್ತಿಲ್ಲ. ಪಾಂಡವಪುರಕ್ಕೆ ಬಳಸಲಾಗುತ್ತದೆ. ಆದ್ದರಿಂದ ಕೈಮುಗಿದು ಕೇಳಿಕೊಳ್ಳುತ್ತೇನೆ. ಶ್ರೀರಂಗ ಪಟ್ಟಣವನ್ನು ಪ್ರತ್ಯೇಕ ವಿಭಾಗ ಮಾಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.ಶಾಸಕ ಸುರೇಶ್‌ಗೌಡ ಮಾತನಾಡಿ, ನಿರಂತರ ಜ್ಯೋತಿ ಪೂರ್ಣಗೊಳಿಸಿಲ್ಲ. ಅಕ್ರಮಗಳನ್ನು ಸಕಮವೂ ಮಾಡಿಲ್ಲ.  ಲಂಚ ಕೊಟ್ಟವರ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಸಮಸ್ಯೆ ಹೆಚ್ಚುತ್ತಿದೆ ಎಂದು ಆರೋಪಿಸಿದರು.

ನಗರಸಭೆ ಅಧ್ಯಕ್ಷ ಎಂ.ಪಿ. ಅರುಣ್‌ಕುಮಾರ್ ಮಾತನಾಡಿ, ಮುಖ್ಯ ರಸ್ತೆ ಯಲ್ಲಿನ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಿ ಕೊಡುವಂತೆ ವರ್ಷದ ಹಿಂದೆಯೇ 6 ಲಕ್ಷ ರೂಪಾಯಿ ಕಟ್ಟಲಾಗಿದೆ. ಇಂದಿಗೂ ಮಾಡಿಲ್ಲ ಎಂದು ದೂರಿದರು.ಶಾಸಕ ನರೇಂದ್ರಸ್ವಾಮಿ ಮಾತನಾಡಿ, ತಾಲ್ಲೂಕಿನಲ್ಲಿ ಕೈಗೊಂಡಿರುವ ನಿರಂತರ ವಿದ್ಯುತ್ ಯೋಜನೆಯಡಿ ಕಾಮಗಾರಿಯಲ್ಲಿ ಕಳಪೆ ವಸ್ತುಗಳನ್ನುಬಳಕೆ ಮಾಡಿದ್ದೀರಿ. ಯೋಜನೆ ಇನ್ನು ಪೂರ್ಣಗೊಂಡಿಲ್ಲ. ಆದರೂ ಪೂರ್ಣಗೊಳಿಸ ಲಾಗಿದೆ ಎಂದು ವರದಿ ನೀಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.ಜಿಲ್ಲಾ ಉಸ್ತುವಾರಿ ಸಚಿವ ಸಿ.ಪಿ. ಯೋಗೇಶ್ವರ್ ಮಾತನಾಡಿ, ವಿದ್ಯುತ್ ಸಮಸ್ಯೆ ಬಗ್ಗೆ ಸಂಜೆಯವರೆಗೆ ಚರ್ಚಿಸಿದರೂ ಪೂರ್ಣಗೊಳ್ಳುವುದಿಲ್ಲ. ಮುಂದಿನ ವಾರ ಈ ಕುರಿತು ಚರ್ಚಿಸಲು ಪ್ರತ್ಯೇಕ ಸಭೆ ಕರೆಯಲಾಗುವುದು. ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರೂ ಅದರಲ್ಲಿ ಭಾಗವಹಿಸಲಿದ್ದಾರೆ ಎಂದರು.ಶಾಸಕರಾದ ಎಂ.ಶ್ರೀನಿವಾಸ್, ಬಿ. ರಾಮಕೃಷ್ಣ, ಮುಡಾ ಅಧ್ಯಕ್ಷ ಬಸವೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಟಿ. ಸುರೇಶ್, ಉಪಾಧ್ಯಕ್ಷೆ ಲಲಿತಾ ಪ್ರಕಾಶ್, ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಸಿ. ಜಯಣ್ಣ, ಜಿಲ್ಲಾ ಪೊಲೀಸ್ ವರಿಷ್ಠ ಕೌಶಲೇಂದ್ರಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.ವಿಳಂಬ ಆಗಮನ

ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಿಗದಿಯಾಗಿದ್ದು ಬೆಳಿಗ್ಗೆ 11 ಗಂಟೆಗೆ. ಆದರೆ ಸಂಜೆ 4.45 ಆರಂಭವಾಯಿತು. ಪ್ರತಿ ಸಭೆಗಳಂತೆ ಇಂದೂ ಸಚಿವರು ದಾಖಲೆ ಸಮಯ ವಿಳಂಬವಾಗಿ ಆಗಮಿಸಿದರು.

ಬೆಳಿಗ್ಗೆ 11 ರ ಸಭೆಯನ್ನು ಮಧ್ಯಾಹ್ನ 2.30ಕ್ಕೆ ನಿಗದಿಪಡಿಸಲಾಗಿತ್ತು. ಆ ಸಮಯಕ್ಕೂ ಸಚಿವರು ಬಂದಿರಲಿಲ್ಲ.  ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಚಿವರನ್ನು ಕಾಯ್ದದ್ದೇ ಕೆಲಸವಾಗಿತ್ತು.ಸಂಜೆ 6 ಗಂಟೆಯವರೆಗೂ ಹಿಂದಿನ ಸಭೆಯ ಅನುಸರಣಾ ವರದಿ ಮೇಲೆಯೇ ಚರ್ಚೆ ನಡೆಯಿತು.ಆ ಮೇಲೆ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಮರಣೆ ಹಾಗೂ ಜಿಲ್ಲಾ ಸಂಸ್ಥಾಪನಾ ದಿನ ಆಚರಣೆ ಸೇರಿ ಒಂದೆರಡು ವಿಷಯ ಚರ್ಚಿಸಿ ಸಭೆ ಸಮಾಪ್ತಿಗೊಳಿಸಲಾಯಿತು. ಬಹುತೇಕ ಇಲಾಖೆಗಳ ಪ್ರಗತಿ ಪರಿಶೀಲನೆಯೇ ನಡೆಯಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry