ಶುಕ್ರವಾರ, ಏಪ್ರಿಲ್ 23, 2021
31 °C

ಸೇಡಂ: ಉತ್ತಮ ಇಳುವರಿ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೇಡಂ: ಉತ್ತಮ ಇಳುವರಿ ನಿರೀಕ್ಷೆ

ಸೇಡಂ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ, ತಾಲ್ಲೂಕಿನ 4 ರೈತ ಸಂಪರ್ಕ ಕೇಂದ್ರಗಳ ವ್ಯಾಪ್ತಿಯ ಬಿತ್ತನೆ ಕ್ಷೇತ್ರದಲ್ಲಿ ಗುರಿ ಮೀರಿ ಸಾಧನೆಯಾಗಿದೆ. ಬೆಳೆಗಳು ಸಮೃದ್ಧವಾಗಿ ಬೆಳೆದು ನಳನಳಿಸುತ್ತಿವೆ. ಬೇಳೆ ಕಾಳು ಅಭಿವೃದ್ಧಿ ಯೋಜನೆಯಲ್ಲಿ 6000 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತು. ಆದರೆ ತಾಲ್ಲೂಕಿನಾದ್ಯಂತ ಬಿತ್ತನೆ ಕಾಲದಲ್ಲಿ ಸರಿಯಾಗಿ ಮಳೆಯಾದ ಕಾರಣ 6500  ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಮೊಳಕಾಲಷ್ಟು ಎತ್ತರಕ್ಕೆ ಬೆಳೆ ಬೆಳೆದಿದ್ದು, ಕೃಷಿ ಕಾರ್ಮಿಕರು ಕಳೆ ತೆಗೆಯುವಲ್ಲಿ ನಿರತರಾಗಿದ್ದಾರೆ.ಹೀಗೆ ಕಾಲ ಕಾಲಕ್ಕೆ ತುಂತುರು ಮಳೆ ಬಂದರೂ ಸಾಕು ಉತ್ತಮ ಇಳುವರಿ ಬರಲು ಸಾಧ್ಯ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಮಹ್ಮದ್ ನವೀನ್ ಅಫಜಲ್. ಖುಷ್ಕಿ ಪ್ರದೇಶದಲ್ಲಿ 39300 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆ ಬಿತ್ತನೆಯ ಗುರಿ ಹೊಂದಲಾಗಿತ್ತು. ಈಗ 35000 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.

 

ಬೆಳೆಗಳು ಉತ್ತಮವಾಗಿವೆ. ಉದ್ದು ಬೆಳೆ 4150 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ~ ಎಂದು ಅವರು ತಿಳಿಸಿದ್ದಾರೆ.ತಾಲ್ಲೂಕಿನ ಒಟ್ಟು ಮುಂಗಾರು ಹಂಗಾಮಿನಲ್ಲಿ ತೃಣ ಧಾನ್ಯಗಳಾದ ಭತ್ತ, ಜೋಳ, ಮೆಕ್ಕೆ ಜೋಳ, ಸಜ್ಜೆ ಮತ್ತು ಇತರೆ ಧಾನ್ಯಗಳು ಸೇರಿದಂತೆ ಖುಷ್ಕಿ ಪ್ರದೇಶದ 1990 ಹೆಕ್ಟೇರ್ ಮತ್ತು ನೀರಾವರಿ ಪ್ರದೇಶದ 450 ಹೆಕ್ಟೇರ್ ಸೇರಿ ಒಟ್ಟು 2440 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತಿದ ಬೆಳೆಗಳು ಉತ್ತಮವಾಗಿದೆ. ಆದರೆ ಕಾಲ ಕಾಲಕ್ಕೆ ಮಳೆ ಬರಬೇಕು~ ಎಂದು ಸಹಾಯಕ ಕೃಷಿ ಅಧಿಕಾರಿ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಭಜರಂಗಸಿಂಗ್ ಠಾಕೂರ ತಿಳಿಸಿದ್ದಾರೆ. ಬೇಳೆ ಕಾಳು ತೊಗರಿ, ಹುರುಳಿ, ಉದ್ದು, ಹೆಸರು, ಅಲಸಂದಿ, ಅವರಿ ಮತ್ತು ಮೆಟಕಿ ಒಳಗೊಂಡಂತೆ ಖುಷ್ಕಿ ಮತ್ತು ನೀರಾವರಿ ಪ್ರದೇಶದಲ್ಲಿ 51420 ಹೆಕ್ಟೇರ್ ಪ್ರದೇಶದ ಗುರಿಯಲ್ಲಿ 45725 ಹೆಕ್ಟೇರ್ ಬಿತ್ತನೆಯಾಗಿದೆ. ಎಣ್ಣೆಕಾಳು ಬೆಳೆಗಳಾದ ಶೇಂಗಾ, ಎಳ್ಳು, ಸೂರ್ಯಕಾಂತಿ, ಔಡಲ, ನುರೆಳ್ಳು ಸೇರಿದಂತೆ 1755 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.ಒಟ್ಟು ಮುಂಗಾರು ಹಂಗಾಮಿನ 55615 ಹೆಕ್ಟೇರ್ ಪ್ರದೇಶದಲ್ಲಿ, 46476 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿ ಶೇಕಡಾ 83.56 ಪ್ರತಿಶತ ಬಿತ್ತನೆಯಾದಂತಾಗಿದೆ. ಆಗಾಗ್ಗೆ ಮಳೆ ಬರುತ್ತಿರುವುದರಿಂದ ರೈತರು ದಿನ ಬಿಟ್ಟು ದಿನ ತೊಗರಿ ಬಿತ್ತನೆ ಕಾರ್ಯ ಮುಂದುವರಿಸಿದ್ದಾರೆ. ಈಗಾಗಲೇ ಬಿತ್ತಿದ ಉದ್ದು ಮತ್ತು ಹೆಸರು ಬೆಳೆಗಳು ಉತ್ತಮವಾಗಿ ಬೆಳೆದಿದ್ದು ಸದಿ ತೆಗೆಯುವಲ್ಲಿ ಕೃಷಿ ಕಾರ್ಮಿಕರು ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು  ತೊಡಗಿಸಿಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.