ಬುಧವಾರ, ಜುಲೈ 28, 2021
21 °C
ಕಲಬುರ್ಗಿ: ವಿಮಾನ ನಿಲ್ದಾಣ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ಕ್ರಮ

ಸೇಡಂ ರಸ್ತೆ ವಿಸ್ತರಣೆ ಸನ್ನಿಹಿತ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಹೆಚ್ಚುತ್ತಿರುವ ವಾಹನಗಳ ದಟ್ಟಣೆಯಿಂದಾಗಿ ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ಅನ್ನಪೂರ್ಣ ವೃತ್ತ– ಖರ್ಗೆ ಪೆಟ್ರೊಲ್‌ ಬಂಕ್‌ವರೆಗಿನ ಸೇಡಂ ಮಾರ್ಗದ ರಸ್ತೆ ವಿಸ್ತರಣೆಗೆ ಇದೀಗ ಟೆಂಡರ್‌ ಕರೆಯಲಾಗಿದ್ದು, ಕೊನೆಗೂ ರಸ್ತೆ ವಿಸ್ತರಣೆಯಾಗುವ ಕಾಲ ಸನ್ನಿಹಿತವಾಗಿದೆ.ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ (ಎಚ್‌ಕೆಆರ್‌ಡಿಬಿ) ಅನುದಾನದ ನೆರವಿನಲ್ಲಿ ಮಹಾನಗರ ಪಾಲಿಕೆಯು ಈ ಕಾಮಗಾರಿ ಅನುಷ್ಠಾನಗೊಳಿಸುತ್ತಿದೆ. 2.4 ಕಿಲೋ ಮೀಟರ್‌ ಉದ್ದವಿರುವ ಈ ರಸ್ತೆಯ ವಿಸ್ತರಣೆಗಾಗಿ ಒಟ್ಟು ₹9.62 ಕೋಟಿ ಅನುದಾನ ಮೀಸಲಿಡಲಾಗಿದೆ. ರಸ್ತೆಯುದ್ದಕ್ಕೂ ತೆರವುಗೊಳಿಸುವ ಕಟ್ಟಡಗಳಿಗೆ ಪರಿಹಾರ ಹಂಚುವ ಕೆಲಸ ಪೂರ್ಣಗೊಳ್ಳುವ ಹಂತದಲ್ಲಿದೆ.ಟೆಂಡರ್ ಪ್ರಕ್ರಿಯೆ ಮುಗಿದ ನಂತರ, ಶೀಘ್ರದಲ್ಲೆ ಕಾಮಗಾರಿ ಆರಂಭಿಸುವ ಇಂಗಿತ ಹೊಂದಿರುವುದಾಗಿ ಮಹಾನಗರ ಪಾಲಿಕೆಯ ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.ಶ್ರೀನಿವಾಸ ಸರಡಗಿ ಬಳಿ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನಗರದ ರಸ್ತೆಗಳನ್ನು ವಿಸ್ತರಿಸುವುದಕ್ಕೆ ₹34 ಕೋಟಿ ಅನುದಾನವನ್ನು ಎಚ್‌ಕೆಆರ್‌ಡಿಬಿ ಮೀಸಲಿಟ್ಟಿದೆ. ಈ ಮೀಸಲು ಅನುದಾನದಲ್ಲಿ ಸೇಡಂ ಮಾರ್ಗದ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.ಸದ್ಯದ ರಸ್ತೆಯು 7 ಮೀಟರ್‌ ಅಗಲವಿದೆ. ಹಾಲಿ ರಸ್ತೆಯ ಎಡಬಲಕ್ಕೆ 5.5 ಮೀಟರ್‌ ಅಗಲದ ನೂತನ ರಸ್ತೆಗಳನ್ನು ನಿರ್ಮಿಸಲಾಗುತ್ತದೆ. ಇದರಿಂದ ಒಟ್ಟು 18 ಮೀಟರ್‌ ಅಗಲದ ದ್ವಿಪಥ ರಸ್ತೆಯು ಸುಗಮ ವಾಹನ ಸಂಚಾರಕ್ಕೆ ತೆರೆದುಕೊಳ್ಳಲಿದೆ.ಕಿರಿದಾದ ರಸ್ತೆ: ಸೇಡಂ ಮಾರ್ಗವಾಗಿ ತೆಲಂಗಾಣದ ರಿಬ್ಬನಪಲ್ಲಿಯಿಂದ ಆಳಂದ ಮಾರ್ಗವಾಗಿ ಮಹಾರಾಷ್ಟ್ರದ ವಾಗ್ದರಿವರೆಗೆ ಗಡಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯು (ಸಂಖ್ಯೆ 50) ಕಲಬುರ್ಗಿ ನಗರ ಮಧ್ಯೆ ಹಾಯ್ದು ಹೋಗಿದೆ. ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಿದ ಈ ನೂತನ ರಸ್ತೆಯಲ್ಲಿ ಸಂಚರಿಸುವ ವಾಹನಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ.ಈ ಹೆದ್ದಾರಿ ಮೂಲಕ ಕಲಬುರ್ಗಿಗೆ ಬರುವ ಲಾರಿ ಹಾಗೂ ಇನ್ನಿತರೆ ಭಾರದ ವಾಹನಗಳ ಸಂಚಾರಕ್ಕಾಗಿ ವರ್ತುಲ ರಸ್ತೆ ಬಳಕೆಯಾಗುತ್ತಿದೆ. ಆದರೆ, ಪ್ರಯಾಣಿಕ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ಹಗಲಿರುಳು ನಗರದೊಳಗಿನಿಂದಲೇ ಸಂಚರಿಸುತ್ತಿವೆ. ವಾಹನ ದಟ್ಟಣೆ ಹೆಚ್ಚಳಕ್ಕೆ ಇದು ಒಂದು ಕಾರಣವಾಗಿದೆ.ಸೇಡಂ ರಸ್ತೆ ಮಾರ್ಗದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯ, ಇಎಸ್‌ಐಸಿ, ಬಸವೇಶ್ವರ ಆಸ್ಪತ್ರೆ, ಆರ್‌ಟಿಒ  ಕಚೇರಿಗಳು ಹಾಗೂ ವಿವಿಧ ಶಾಲಾ–ಕಾಲೇಜುಗಳಿವೆ. ಪ್ರಮುಖ ಸರ್ಕಾರಿ ಕಚೇರಿಗಳು, ಖಾಸಗಿ ಸಂಸ್ಥೆಗಳು ಇರುವ ಕಾರಣದಿಂದ ಈ ರಸ್ತೆಯ ಬಳಸುವ ನೌಕರರು ಹಾಗೂ ವಿದ್ಯಾರ್ಥಿಗಳು ಅನೇಕ ವರ್ಷಗಳಿಂದ ಕಿರಿದಾದ ರಸ್ತೆಯಿಂದ ಕಿರಿಕಿರಿ ಅನುಭವಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.