ಶುಕ್ರವಾರ, ನವೆಂಬರ್ 15, 2019
22 °C

ಸೇಡಿನ ಆಟ ಬೇಡ

Published:
Updated:

ಪಶ್ಚಿಮ ಬಂಗಾಳದ ರಾಜಕೀಯ ಪರಿಸ್ಥಿತಿ ಉಸಿರುಗಟ್ಟಿಸುವಂತಿದೆ. ನವದೆಹಲಿಯಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷರನ್ನು ಭೇಟಿ ಮಾಡಲು ಆಗಮಿಸಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಸಚಿವ ಅಮಿತ್‌ಮಿತ್ರಾ ಅವರ ಮೇಲೆ ಎಡಪಕ್ಷಗಳ ಕಾರ್ಯಕರ್ತರು ನಡೆಸಿದ ಹಲ್ಲೆ ಘಟನೆ ತೀರಾ ಅನಿರೀಕ್ಷಿತ.ಈ ಹಲ್ಲೆಯಲ್ಲಿ ಉದ್ರಿಕ್ತಗುಂಪು ಹಣಕಾಸು ಸಚಿವ ಅಮಿತ್‌ಮಿತ್ರಾ ಅವರನ್ನು ಎಳೆದಾಡಿ ಅವರ ಅಂಗಿ ಹರಿದುಹಾಕಿದೆ. ಎದುರುನೋಡದ ದಿಢೀರ್ ಬೆಳವಣಿಗೆಯಿಂದ ವಿಚಲಿತರಾದ ಮಮತಾ ಬ್ಯಾನರ್ಜಿ ಹಾಗೂ ಸಚಿವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವಂತಾಯಿತು.ಈ ಘಟನೆಯನ್ನು ಅನಾಗರಿಕ ವರ್ತನೆ ಎಂದು ಟೀಕಿಸಿರುವ ಮಮತಾ, ದೆಹಲಿ ಸುರಕ್ಷಿತ ತಾಣವಲ್ಲ ಎಂದೂ ದೂರಿದ್ದಾರೆ.ಆಕ್ರೋಶದಿಂದ ಪ್ರಧಾನಿಯವರ ಪೂರ್ವನಿಗದಿತ ಭೇಟಿಯನ್ನೂ ರದ್ದುಪಡಿಸಿ ಅವರು ಕೋಲ್ಕತ್ತಾಗೆ ಮರಳಿದ್ದಾರೆ.ಕೆಲದಿನಗಳ ಹಿಂದೆ ಕೋಲ್ಕತ್ತಾದಲ್ಲಿ ಎಸ್.ಎಫ್.ಐ.ಸದಸ್ಯ ಸದೀಪ್ತೋ ಗುಪ್ತಾ ಅವರು ಪೊಲೀಸ್ ವಶದಲ್ಲಿ ಅನುಮಾನಾಸ್ಪದವಾಗಿ ಸತ್ತಿದ್ದರು. ಈ ಘಟನೆಯನ್ನು ಖಂಡಿಸಿ ಎಡಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ.34 ವರ್ಷಗಳ ಕಮ್ಯುನಿಸ್ಟ್ ಆಳ್ವಿಕೆಯನ್ನು ಕೊನೆಗಾಣಿಸಿ, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್, ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಗ್ದ್ದದುಗೆ ಏರಿದ ನಂತರದ ದಿನಗಳಲ್ಲಿ ಅಲ್ಲಿ ಈ ರೀತಿಯ ರಾಜಕೀಯ ಪ್ರತೀಕಾರದ ಆಟ ಒಂದೇ ಸಮನೆ ನಡೆಯುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೇ ಮಾರಕವಾಗಿದೆ.ದೆಹಲಿಯಲ್ಲಿ ತೃಣಮೂಲ ಕಾಂಗ್ರೆಸ್ಸಿನ ನಾಯಕರುಗಳ ಮೇಲೆ ನಡೆದ ದಾಳಿಗೆ ಉತ್ತರವಾಗಿ ಪಶ್ಚಿಮಬಂಗಾಳದ್ಲ್ಲಲಿ ಸಿಪಿಎಂ ಕಚೇರಿಗಳ ಮೇಳೆ ದಾಳಿ ನಡೆದಿರುವುದು ಕೂಡ ಒಂದು ರೀತಿಯಲ್ಲಿ ಸೇಡಿನ ಆಟ. ರಾಜಕೀಯದಲ್ಲಿ ಪ್ರತಿಪಕ್ಷಗಳನ್ನು ತುಳಿಯುವುದು, ಕಾರ್ಯಕರ್ತರನ್ನು ದಮನ ಮಾಡುವುದು ತಂತ್ರವಾಗಿರಬಹುದು.ಆದರೆ ಮಮತಾ ಬ್ಯಾನರ್ಜಿ, ಅಂತಹ ತಂತ್ರಗಳನ್ನೇ ಸದಾ ಪ್ರಯೋಗಿಸುವ  ಬದಲು ಜನಹಿತ ಕಾರ್ಯಕ್ರಮಗಳ ಮೂಲಕ ಗಟ್ಟಿಯಾಗಿ ನೆಲೆಯೂರಲು ಯತ್ನಿಸುವುದು ಉಚಿತವೆನ್ನಿಸುತ್ತದೆ. ಆಗ ಮಾತ್ರ ರಾಜಕೀಯದಲ್ಲಿ ಮೌಲ್ಯಗಳ ಉಳಿವು ಸಾಧ್ಯ.ಮಮತಾ ಬ್ಯಾನರ್ಜಿ ಕೇಂದ್ರ ಸಚಿವರಾಗಿದ್ದ ಸಮಯದಿಂದಲೂ ತಮ್ಮ ದಿಟ್ಟ ನಿಲುವುಗಳಿಗೆ ಹೆಸರಾದವರು. ವಿಚಾರ, ವಿವೇಕಗಳನ್ನು ಉಪಯೋಗಿಸದೆ ಕೆಲಸ ಮಾಡುವ ಆತುರ ಸ್ವಭಾವದವರೂ ಕೂಡ. ರಾಜಕೀಯ ನಾಯಕಿಯಾಗಿ ಅವರು ಸಂಘಟನಾ ಚತುರೆ ಎಂಬುದು ನಿಜ. ಆದರೆ ಅಷ್ಟೇ ಭಾವುಕಿ ಕೂಡ.ಮಾಧ್ಯಮದವರೆಲ್ಲಾ ನನ್ನ ವಿರೋಧಿಗಳು ಎಂದು ಅವರು ಕೂಗಾಡಿದ್ದರು. ಯಾವುದೇ ಪ್ರತಿಭಟನೆ, ಸಭೆ ನಡೆದರೆ ಅದರ ಹಿಂದೆ ಕಮ್ಯನಿಸ್ಟ್ ಪಕ್ಷದ ಕೈವಾಡವಿದೆ ಎಂದೇ ಗುಮಾನಿಯಿಂದ  ನೋಡುವ ಕೀಳರಿಮೆ ಅವರಿಗಿರುವುದು ಅವರ ವರ್ತನೆಯಿಂದ ಗೊತ್ತಾಗುತ್ತದೆ.ಹೀಗಾಗಿ ತಮಗಾಗದವರ ಮೇಲೆ ಪೊಲೀಸರಿಂದ ಕ್ರಮ ಕೈಗೊಳ್ಳುವ ವಿಚಾರಹೀನ ನಡವಳಿಕೆಗಳೂ ಮಮತಾ ಬ್ಯಾನರ್ಜಿ ಸರ್ಕಾರದಿಂದ ನಡೆದಿವೆ.ಇದು ಅವರು ರಾಜಕೀಯವಾಗಿ ಎದುರಿಸುತ್ತಿರುವ ಕಸಿವಿಸಿ. ಹೀಗಾಗಿ ಕೋಲ್ಕತ್ತಾದ ಸಮಸ್ಯೆ ದೆಹಲಿಯವರೆಗೂ ಬೆಳೆಯಲು ಅವರು ಅವಕಾಶ ಕೊಡಬಾರದಿತ್ತು. ಇಲ್ಲಿ ರಾಜಕೀಯ ಮುತ್ಸದ್ಧಿತನ ವೆುರೆಯಬೇಕೇ ಹೊರತು, ಹಟಮಾರಿತನವಲ್ಲ ಎನ್ನುವುದೂ ನೆನಪಿನಲ್ಲಿದ್ದರೆ ಒಳಿತು.

ಪ್ರತಿಕ್ರಿಯಿಸಿ (+)