ಸೇಡು ತೀರಿಸಿಕೊಳ್ಳುವ ಉತ್ಸಾಹದಲ್ಲಿ ಕರ್ನಾಟಕ

7
ರಣಜಿ: ಇಂದಿನಿಂದ ಕ್ವಾರ್ಟರ್ ಫೈನಲ್, ವಿಶ್ವವಿದ್ಯಾಲಯದ ಪಿಚ್‌ನಲ್ಲಿ ಅಡಗಿದೆ ಬಿನ್ನಿ ಪಡೆಯ ಭವಿಷ್ಯ

ಸೇಡು ತೀರಿಸಿಕೊಳ್ಳುವ ಉತ್ಸಾಹದಲ್ಲಿ ಕರ್ನಾಟಕ

Published:
Updated:
ಸೇಡು ತೀರಿಸಿಕೊಳ್ಳುವ ಉತ್ಸಾಹದಲ್ಲಿ ಕರ್ನಾಟಕ

ರಾಜ್‌ಕೋಟ್: ಸೇಡಿನ ಮನಸ್ಸೇ ಹಾಗೆ. ಎದುರಾದ ಅವಮಾನ, ಸೋಲಿನ ನಿರಾಸೆಗೆ `ಮುಯ್ಯಿ' ತೀರಿಸುವ ತನಕ ಸಮಾಧಾನವೇ ಇರುವುದಿಲ್ಲ. ಪ್ರತಿಸೇಡು ತೀರುವ ತನಕವೂ ಹಸಿದ ಹುಲಿಯಂತೆ ಗರ್ಜಿಸುತ್ತಿರುತ್ತದೆ. ಇದೇ ರೀತಿಯ ಆಸೆ ಈಗ ಕರ್ನಾಟಕದ ಆಟಗಾರರ ಮನದಲ್ಲಿ ಪುಟಿದೇಳುತ್ತಿದೆ.

ಲೀಗ್ ಹಂತದಲ್ಲಿ ಸಾಕಷ್ಟು ಕಷ್ಟಪಟ್ಟಿದ್ದ ಕರ್ನಾಟಕ ತಂಡ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಮೂರು ವರ್ಷಗಳ ಹಿಂದೆ ಸೋಲು ಕಂಡಿತ್ತು. ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಪಡೆದರೂ, ಕೊನೆಗೆ ಸೆಮಿಫೈನಲ್‌ಗೆ ಸಾಗಿದ್ದು ಎದುರಾಳಿ ಸೌರಾಷ್ಟ್ರ. ಆದ್ದರಿಂದ ಈ ಸೋಲಿನ ಲೆಕ್ಕ ಚುಕ್ತಾ ಮಾಡಬೇಕು ಎಂದು ಕರ್ನಾಟಕ ಕಾದು ಕುಳಿತಿತ್ತು. ಅದಕ್ಕೆ ಈಗ ಅವಕಾಶ ಲಭಿಸಿದೆ.ರಾಜ್‌ಕೋಟ್‌ನಲ್ಲಿರುವ ಸೌರಾಷ್ಟ್ರ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಈ ಪಂದ್ಯ ಭಾನುವಾರ ಆರಂಭವಾಗಲಿದೆ. ಈ ಅಂಗಣಕ್ಕೆ ಚೊಚ್ಚಲ ರಣಜಿ ಪಂದ್ಯದ ಆತಿಥ್ಯ ವಹಿಸಿಕೊಂಡ ಸಂಭ್ರಮ. ಈ ನೆನಪನ್ನು ಸ್ಮರಣೀಯವಾಗಿಟ್ಟುಕೊಳ್ಳಬೇಕು ಎನ್ನುವ ಆಸೆ ಉಭಯ ತಂಡಗಳ ಆಟಗಾರರಲ್ಲಿ ಹರಿದಾಡುತ್ತಿದೆ. ಲೀಗ್ ಹಂತದಲ್ಲಿ `ಬಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದ ಕರ್ನಾಟಕ ಐದು ಪಂದ್ಯಗಳಲ್ಲಿ ಡ್ರಾ ಹಾಗೂ ಎರಡು ಗೆಲುವು ಸಾಧಿಸಿ ಮತ್ತೊಂದು ಪಂದ್ಯದಲ್ಲಿ ನಿರಾಸೆ ಅನುಭವಿಸಿದೆ. `ಎ' ಗುಂಪಿನಲ್ಲಿದ್ದ ಸೌರಾಷ್ಟ್ರ ಸಾಧನೆ ಕೂಡಾ ಇಷ್ಟೇ ಇದೆ. ಆದರೆ, ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ. ಸ್ಟುವರ್ಟ್ ಬಿನ್ನಿ ನೇತೃತ್ವದ ಕರ್ನಾಟಕ ತಂಡಕ್ಕೆ ಮೂರನೇ ಸ್ಥಾನ. ಈ ಎಲ್ಲಾ ಅಂಶಗಳ ಬಲ ಹಾಗೂ ಅದೃಷ್ಟದ ನೆರವಿನೊಂದಿಗೆ ಕರ್ನಾಟಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.ಹುಮ್ಮಸ್ಸಿನಲ್ಲಿ ಬಿನ್ನಿ ಪಡೆ: ಹಿಂದಿನ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ ಪಡೆದ ರೋಚಕ ಗೆಲುವು ಬಿನ್ನಿ ಬಳಗವನ್ನು ಹುಮ್ಮಸ್ಸಿನಲ್ಲಿರಿಸಿದೆ. ಈ ಋತುವಿನಲ್ಲಿ ಮೂರು ಶತಕ ಗಳಿಸಿರುವ ಸಿ.ಎಂ. ಗೌತಮ್, ಜ್ವರದಿಂದ ಚೇತರಿಸಿಕೊಂಡಿರುವ ರಾಬಿನ್ ಉತ್ತಪ್ಪ, ಯುವ ಆಟಗಾರ ಕುನಾಲ್ ಕಪೂರ್, ನಾಯಕ ಬಿನ್ನಿ ಹೀಗೆ ಪ್ರತಿಭಾವಂತ ಬ್ಯಾಟ್ಸ್‌ಮನ್‌ಗಳ ಪಟ್ಟಿ ಬೆಳೆಯುತ್ತದೆ. ಮೊಣಕೈ ನೋವಿನಿಂದ ಬಳಲಿದ್ದ ಮನೀಷ್ ಪಾಂಡೆ ಚೇತರಿಸಿಕೊಂಡಿರುವುದು ಈ ವಿಭಾಗದ ಬಲ ಹೆಚ್ಚಿಸಿದೆ.ಬಲಿಷ್ಠ ಬ್ಯಾಟ್ಸ್‌ಮನ್‌ಗಳು ತಂಡದಲ್ಲಿದ್ದರೂ ಈ ಮಹತ್ವದ ಎಂಟರ ಘಟ್ಟದ ಹೋರಾಟದಲ್ಲಿ ಪ್ರತಿಯೊಬ್ಬರು ಜವಾಬ್ದಾರಿಯಿಂದ ಆಡಬೇಕಿದೆ. ಸೌರಾಷ್ಟ್ರದ ಬೌಲರ್ ಕಮಲೇಶ್ ಮಕ್ವಾನ್ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಲೀಗ್ ಪಂದ್ಯಗಳಲ್ಲಿ ಈ ಬಲಗೈ ಸ್ಪಿನ್ನರ್ ಏಳು ಪಂದ್ಯಗಳಿಂದ 18 ವಿಕೆಟ್ ಪಡೆದಿದ್ದಾರೆ. ಆದ್ದರಿಂದ ಕಮಲೇಶ್ ಸ್ಪಿನ್ ಮೋಡಿಯಲ್ಲಿ ಸಿಲುಕದಂತೆ ಕರ್ನಾಟಕದ ಬ್ಯಾಟ್ಸ್‌ಮನ್‌ಗಳು ಎಚ್ಚರಿಕೆ ವಹಿಸಬೇಕಿದೆ.ವೇಗಿಗಳಾದ ಅಭಿಮನ್ಯು ಮಿಥುನ್ ಹಾಗೂ ಎಚ್.ಎಸ್. ಶರತ್ ಮೇಲೆ ಬೌಲಿಂಗ್ ವಿಭಾಗ ಅವಲಂಬಿತವಾಗಿದೆ. ಹಿಂದಿನ ಪಂದ್ಯದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದ ಎಡಗೈ ಸ್ಪಿನ್ನರ್ ಕೆ.ಪಿ. ಅಪ್ಪಣ್ಣ ತಂಡಕ್ಕೆ ಮರಳಿರುವುದು ಸ್ಪಿನ್ ವಿಭಾಗಕ್ಕೆ ಬಲ ತಂದಿದೆ. ಆದರೆ, ಹೊಸ ಕ್ರೀಡಾಂಗಣವಾದ ಕಾರಣ ಪಿಚ್ `ಮರ್ಮ' ಏನು ಎಂಬುದು ಮಾತ್ರ ಕುತೂಹಲದ ಗಣಿಯಾಗಿದೆ.ಎರಡು ವರ್ಷದ ಬಳಿಕ: ಎರಡು ವರ್ಷದ ನಂತರ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ. 2009-10ರ ಋತುವಿನಲ್ಲಿ ಇಲ್ಲಿ ನಡೆದ ಲೀಗ್ ಪಂದ್ಯದಲ್ಲಿ ಕರ್ನಾಟಕ ಆರು ವಿಕೆಟ್‌ಗಳ ಗೆಲುವು ಸಾಧಿಸಿತ್ತು. ರಣಜಿ ಇತಿಹಾಸದಲ್ಲಿ ಎರಡೂ ತಂಡದವರಿಗೆ ಸಮಪಾಲು ಲಭಿಸಿದೆ. ಒಟ್ಟು ಆರು ಪಂದ್ಯಗಳಲ್ಲಿ ಎರಡೂ ತಂಡಕ್ಕೂ ತಲಾ ಎರಡು ಗೆಲುವು ಲಭಿಸಿವೆ. ಇನ್ನೆರೆಡು ಪಂದ್ಯಗಳು ಡ್ರಾದಲ್ಲಿ ಅಂತ್ಯ ಕಂಡಿವೆ.ತವರಿನ `ಹುಲಿ'ಗಳು: ಸೌರಾಷ್ಟ್ರ ತಂಡದ ಪರಾಕ್ರಮ ಏನಿದ್ದರೂ ತವರಿನ ಅಂಗಣದಲ್ಲಿ ಮಾತ್ರ. ಲೀಗ್ ಹಂತದಲ್ಲಿ ಸಾಧಿಸಿದ ಎರಡೂ ಗೆಲುವುಗಳು ತವರಿನ ಕ್ರೀಡಾಂಗಣದಲ್ಲಿ ಲಭಿಸಿದ್ದು ಇದಕ್ಕೆ ಸಾಕ್ಷಿ. ಬಂಗಾಳ ಹಾಗೂ ಮಧ್ಯಪ್ರದೇಶ ತಂಡಗಳ ವಿರುದ್ಧ ಸೌರಾಷ್ಟ್ರ ಜಯ ಸಾಧಿಸಿತ್ತು.ಪಾಕಿಸ್ತಾನ ವಿರುದ್ಧದ ಸರಣಿಗೆ ಭಾರತ ತಂಡದಲ್ಲಿರುವ ಸೌರಾಷ್ಟ್ರದ ರವೀಂದ್ರ ಜಡೇಜ ಕ್ವಾರ್ಟರ್ ಫೈನಲ್‌ನಲ್ಲಿ ಆಡುತ್ತಿಲ್ಲ. ಜಡೇಜ ಈ ರಣಜಿ ಋತುವಿನಲ್ಲಿ ಐದು ಪಂದ್ಯಗಳಿಂದ ಒಟ್ಟು 794 ರನ್ ಗಳಿಸಿದ್ದರು. ಜಡೇಜ ತಂಡದಲ್ಲಿ ಆಡದೇ ಇರುವುದು ಕರ್ನಾಟಕಕ್ಕೆ ಲಾಭವಾಗಲಿದೆ.

ಆದರೆ, ರಾಷ್ಟ್ರೀಯ ತಂಡದಲ್ಲಿ ಆಡಿದ ಅನುಭವ ಹೊಂದಿರುವ ಚೇತೇಶ್ವರ ಪೂಜಾರ ಹಾಗೂ ಜಯದೇವ್ ಉನದ್ಕತ್ ಆತಿಥೇಯ ತಂಡದ ಪ್ರಮುಖ ಬಲ ಎನಿಸಿದ್ದಾರೆ. ಬಲಗೈ ಬ್ಯಾಟ್ಸ್‌ಮನ್ ಪೂಜಾರ ಮಧ್ಯಪ್ರದೇಶದ ವಿರುದ್ಧದ ಪಂದ್ಯದಲ್ಲಿ ಅಜೇಯ ದ್ವಿಶತಕ ಗಳಿಸಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇವರನ್ನು ಕಟ್ಟಿ ಹಾಕುವ ಸವಾಲು ಕರ್ನಾಟಕದ ಬೌಲರ್‌ಗಳ ಮುಂದಿದೆ.ಎರಡೂ ತಂಡಗಳ ಬಲಾಬಲವನ್ನು ಅಳೆದು ತೂಗಿ ನೋಡಿದರೆ, ಕರ್ನಾಟಕವೇ ಬಲಿಷ್ಠ. ಆದರೆ, ವಿನಯ್ ಕುಮಾರ್ ಅನುಪಸ್ಥಿತಿ ತಂಡವನ್ನು ಕಾಡುತ್ತಿದೆ. 2011-12ರ ಋತುವಿನಲ್ಲಿ ಬೆಂಗಳೂರಿನಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಹರಿಯಾಣದ ಎದುರು ಸೋಲು ಕಂಡಿತ್ತು. ಆದರೆ, ಈ ಋತುವಿನಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಊರಿದರೆ ಮಾತ್ರ ನಾಲ್ಕರ ಘಟ್ಟದ ಕನಸು ಕಾಣಬಹುದು.ತಂಡಗಳು: ಕರ್ನಾಟಕ: ಸ್ಟುವರ್ಟ್ ಬಿನ್ನಿ (ನಾಯಕ), ರಾಬಿನ್ ಉತ್ತಪ್ಪ, ಕೆ.ಎಲ್. ರಾಹುಲ್, ಕುನಾಲ್ ಕಪೂರ್, ಗಣೇಶ್ ಸತೀಶ್, ಮನೀಷ್ ಪಾಂಡೆ, ಸಿ.ಎಂ. ಗೌತಮ್, ಅಮಿತ್ ವರ್ಮಾ, ಕೆ. ಗೌತಮ್, ಅಭಿಮನ್ಯು ಮಿಥುನ್, ಕೆ.ಪಿ. ಅಪ್ಪಣ್ಣ, ಎಚ್.ಎಸ್. ಶರತ್, ಎಸ್.ಎಲ್. ಅಕ್ಷಯ್, ಎಸ್.ಕೆ. ಮೊಯಿನುದ್ದೀನ್ ಹಾಗೂ ಕರುಣ್ ನಾಯರ್ಸೌರಾಷ್ಟ್ರ: ಜಯದೇವ್ ಷಾ (ನಾಯಕ), ಶಿತಾನ್ಶು ಕೊಟಕ್, ಶೆಲ್ಡನ್ ಜಾಕ್ಸನ್, ಚೇತೇಶ್ವರ ಪೂಜಾರಾ, ರಾಹುಲ್ ದೇವಿ, ಅರ್ಪಿತ್ ವಾಸವದ, ಚಿರಾಗ್ ಜೈನ್, ಕಮಲೇಶ್ ಮಕ್ವಾನಿ, ವಿಶಾಲ್ ಜೋಷಿ, ಧರ್ಮೇಂದ್ರ ಜಡೇಜ, ಜಯದೇವ್ ಉನದ್ಕತ್, ಸಾಗರ್ ಜೋಗಿಯಾನಿ, ಸಂದೀಪ್ ಮಣಿಯಾರ್, ಸಿದ್ಧಾರ್ಥ ತ್ರಿವೇದಿ ಹಾಗೂ ಸೂರ್ಯ ಸನಾದಿಯ.ಅಂಪೈರ್‌ಗಳು: ಕೆ. ಹರಿಹರನ್ (ದೆಹಲಿ), ಸುಬ್ರತೊ ದಾಸ್ (ಬಿಹಾರ್) ಪಂದ್ಯದ ರೆಫರಿ: ಮನು ನಯ್ಯರ್ (ದೆಹಲಿ)

ಪಂದ್ಯ ಆರಂಭ: ಬೆಳಿಗ್ಗೆ 9.30 ರಿಂದಇತಿಹಾಸದ ಪುಟಗಳಿಂದ...

* ಇನಿಂಗ್ಸ್‌ವೊಂದರಲ್ಲಿ ಕರ್ನಾಟಕ ಗಳಿಸಿದ ಗರಿಷ್ಠ ಮೊತ್ತ 570 (2006-07, ರಾಜ್‌ಕೋಟ್), ಕನಿಷ್ಠ ಸ್ಕೋರು: 208 (2008-09, ಮುಂಬೈ)

* ಇನಿಂಗ್ಸ್‌ನಲ್ಲಿ ಸೌರಾಷ್ಟ್ರದ ಹೆಚ್ಚು ರನ್ 407 (2009-10, ರಾಜ್‌ಕೋಟ್), ಕಡಿಮೆ ರನ್  182 (1998-1999, ಬೆಂಗಳೂರು)

* ಸೌರಾಷ್ಟ್ರ ವಿರುದ್ಧ ಕರ್ನಾಟಕದ ಪರ ವೈಯಕ್ತಿಕ ಗರಿಷ್ಠ ಸ್ಕೋರು ಕೆ.ಟಿ. ಯರೇಗೌಡ (171, ರಾಜ್‌ಕೋಟ್, 2006-07)

* ಕರ್ನಾಟಕದ ವಿರುದ್ಧ ಸೌರಾಷ್ಟ್ರ ಪರ ವೈಯಕ್ತಿಕ ಹೆಚ್ಚು ರನ್ ಚೇತೇಶ್ವರ ಪೂಜಾರ (112*, ಮುಂಬೈ 2008-09)ಈ ಪಂದ್ಯದ ವಿಶೇಷತೆಗಳು

* ಸೌರಾಷ್ಟ್ರ ವಿಶ್ವವಿದ್ಯಾಲಯ ಕ್ರೀಡಾಂಗಣದಲ್ಲಿ ಚೊಚ್ಚಲ ರಣಜಿ ಪಂದ್ಯ

* ಸ್ಟುವರ್ಟ್ ಬಿನ್ನಿ ನಾಯಕರಾದ ಮೇಲೆ ಕರ್ನಾಟಕಕ್ಕೆ ಮೊದಲ ಕ್ವಾರ್ಟರ್ ಫೈನಲ್

* ಕುನಾಲ್ ಕಪೂರ್, ಎಸ್.ಕೆ. ಮೊಯಿನುದ್ದೀನ್ ಅವರಿಗೆ ಮೊದಲ ಎಂಟರ ಘಟ್ಟದ ಪಂದ್ಯ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry