ಸೋಮವಾರ, ಮೇ 10, 2021
21 °C

ಸೇತುಬಂಧದ ನಿರೀಕ್ಷೆಯಲ್ಲಿ ಯತ್ನಟ್ಟಿ ಗ್ರಾಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಇಲ್ಲಿನ ಭಾಗ್ಯನಗರಕ್ಕೆ ಒತ್ತಿಕೊಂಡೇ ಇರುವ ಯತ್ನಟ್ಟಿ (ಎತ್ತಿನಹಟ್ಟಿ) ಗ್ರಾಮಕ್ಕೆ ಸಾಗುವ ದಾರಿ ಮಧ್ಯೆಯ ಹಿರೇಹಳ್ಳಕ್ಕೆ ಸೇತುವೆ ನಿರ್ಮಾಣ ಆಗಬೇಕಿದೆ. ಹಣ ಮಂಜೂರಾಗಿ ಶಂಕುಸ್ಥಾಪನೆ ನಡೆದಿದ್ದರೂ ಕಾಮಗಾರಿ ನಡೆಯದಿರುವುದು ಗ್ರಾಮಸ್ಥರ ಹತಾಶೆಗೆ ಕಾರಣವಾಗಿದೆ.ಸೇತುಬಂಧದ ನಿರೀಕ್ಷೆ: ಭಾಗ್ಯನಗರ -ಯತ್ನಟ್ಟಿ ಸಂಪರ್ಕಿಸಲು ಈ ಸೇತುವೆ ನಿರ್ಮಾಣ ಆದಲ್ಲಿ ಸುಮಾರು 2 ಸಾವಿರ ಗ್ರಾಮಸ್ಥರಿಗೆ ಅನುಕೂಲವಾಗಲಿದೆ. ಮಳೆಗಾಲದಲ್ಲಿ ಹಿರೇಹಳ್ಳ ತುಂಬಿ ಹರಿದರೆ ಗ್ರಾಮ ದ್ವೀಪ ಸದೃಶವಾಗುತ್ತದೆ. ಗ್ರಾಮಸ್ಥರು ಸುಮಾರು 8 ಕಿ.ಮೀ. ದೂರ ಸುತ್ತಿ ಬಳಸಿ ಭಾಗ್ಯನಗರ ತಲುಪುವ ಅನಿವಾರ್ಯತೆಯಿದೆ. ನೀರಿನ ಹರಿವು ಇಳಿಯುವವರೆಗೆ ಮಕ್ಕಳು ಶಾಲೆಗೆ ಹೋಗುವುದಿಲ್ಲ. ಇದೇ ದಾರಿಯಲ್ಲಿ ಓಡಾಡುವ ಟ್ರ್ಯಾಕ್ಟರ್, ಗ್ರಾಮೀಣ ಸಾರಿಗೆ ವಾಹನಗಳು ಎಷ್ಟೋ ವೇಳೆ ಹಳ್ಳದ ನಡುವೆ ಸಿಲುಕಿದ, ಅಪಘಾತಕ್ಕೆ ಒಳಗಾದ ಉದಾಹರಣೆಗಳಿವೆ ಎಂದು ಎತ್ತಿನಹಟ್ಟಿ ಗ್ರಾಮಸ್ಥ ಮಂಜುನಾಥ ಪೂಜಾರಿ ಹೇಳಿದರು.ಇತ್ತೀಚೆಗೆ ಯತ್ನಟ್ಟಿ ಬಸವೇಶ್ವರ ಜಾತ್ರೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸೇರಿ ಸೇತುವೆಯ ಜಾಗಕ್ಕೆ ಮಣ್ಣು ಹಾಕಿದ್ದಾರೆ. ತಾತ್ಕಾಲಿಕ ಸೇತುವೆಗೆ ತೂಬುಗಳಿಗಾಗಿ ತಂದ ಸಿಮೆಂಟ್ ಪೈಪ್‌ಗಳು ಹಳ್ಳದ ನಡುವೆ ಅಡ್ಡಾದಿಡ್ಡಿಯಾಗಿ ಬಿದ್ದಿವೆ. ಒಂದು ಮಳೆ ಬಂದರೆ ಇದ್ಯಾವುದೂ ಇರುವುದಿಲ್ಲ. ಇದೇ ಕಾರಣವನ್ನು ಮುಂದಿಟ್ಟುಕೊಂಡು ಯತ್ನಟ್ಟಿ ಗ್ರಾಮದಲ್ಲಿ ಮತದಾನ ಬಹಿಷ್ಕಾರ ಹಾಕಲಾಗಿತ್ತು ಎಂದು ನೆನಪಿಸಿದರು ರಾಮಣ್ಣ ಪೂಜಾರ್.ಲೋಕೋಪಯೋಗಿ ಇಲಾಖೆ ಸ್ಪಷ್ಟನೆ: ರೂ 4 ಕೋಟಿ ವೆಚ್ಚದ ಸೇತುವೆ ನಿರ್ಮಾಣಕ್ಕೆ ಸರ್ಕಾರದಿಂದ ಆಡಳಿತಾತ್ಮಕ ಮಂಜೂರಾತಿ ದೊರೆತಿದೆ. ಎರಡು ಬಾರಿ ಟೆಂಡರು ನಡೆದಿದ್ದು, ಬಿಡ್‌ದಾರರು ಅನರ್ಹರಾದ ಕಾರಣ ಅವರಿಗೆ ಕಾಮಗಾರಿ ಮಂಜೂರಾತಿ ಸಿಕ್ಕಿಲ್ಲ. ಮುಂದೆ ಮತ್ತೆ ಟೆಂಡರು ಕರೆದು ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳುವುದಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.