ಸೋಮವಾರ, ಮೇ 23, 2022
25 °C

ಸೇತುವೆಗೆ ಶೀಘ್ರ ಕಾಯಕಲ್ಪ: ಸಿಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೇವರ್ಗಿ:  ತಾಲ್ಲೂಕಿನ ಜನರ ಬಹುದಿನಗಳ ಕನಸಾದ ಕೋನಾಹಿಪ್ಪರಗಾ-ಸರಡಗಿ (ಬಿ) ಭೀಮಾ ನದಿಗೆ ಸೇತುವೆ ನಿರ್ಮಿಸಲು ಪ್ರಸಕ್ತ ಬಜೆಟ್‌ನಲ್ಲಿ ಅಗತ್ಯ ಅನುದಾನ ಮೀಸಲಿಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ತಿಳಿಸಿದ್ದಾರೆ. ಈಗಾಗಲೇ ಸರಡಗಿ ಬಳಿಯಿರುವ ಭೀಮಾ ನದಿಗೆ ಬ್ಯಾರೇಜ್‌ನಿರ್ಮಿಸಿ ಗುಲ್ಬರ್ಗ ನಗರಕ್ಕೆ ಕುಡಿಯುವ ನೀರು ಪೂರೈಸಲಾಗುತ್ತಿದೆ.ಜೇವರ್ಗಿ ತಾಲ್ಲೂಕಿನ ಕೋನಾಹಿಪ್ಪರಗಾ- ಗುಲ್ಬರ್ಗ ತಾಲ್ಲೂಕಿನ ಸರಡಗಿ (ಬಿ) ಮಧ್ಯೆಯಿರುವ ಭೀಮಾನದಿಗೆ ಸೇತುವೆ ನಿರ್ಮಿಸಿದರೆ ಈ ಭಾಗದ ಗ್ರಾಮಸ್ಥರು ಹಾಗೂ ರೈತರಿಗೆ ಜಿಲ್ಲಾ ಕೇಂದ್ರಕ್ಕೆ ತೆರಳಲು ಕೇವಲ 25ಕಿಮೀ. ಅಂತರವಾಗುತ್ತದೆ. ಈ ವಿಷಯವಾಗಿ ಬುಧವಾರ  ಶಾಸಕರ ನೇತೃತ್ವದಲ್ಲಿ ಕೋನಾ ಹಿಪ್ಪರಗಾ, ಮಂದ್ರವಾಡ, ಬಣಮಿ, ಕೂಡಿ, ಕೋಬಾಳ, ಹಂದನೂರ ಮುಂತಾದ ಗ್ರಾಮಗಳ ನಾಗರಿಕರ ನಿಯೋಗ ಬೆಂಗಳೂರಿಗೆ ತೆರಳಿತ್ತು.ಗುರುವಾರ ಮುಖ್ಯಮಂತಿಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ ನಿಯೋಗ ಸೇತುವೆ ನಿರ್ಮಿಸಲು ಅಗತ್ಯವಾದ ಕಾರಣಗಳನ್ನು ವಿವರಿಸಿದರು. ಸುಮಾರು ರೂ.25ಕೋಟಿ ಅಂದಾಜು ವೆಚ್ಚ ತಗಲುವ ಸಾಧ್ಯತೆಯಿದ್ದು, ಈಗಾಗಲೇ ಮುಖ್ಯಮಂತ್ರಿ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಈ ಕಾಮಗಾರಿ ಶೀಘ್ರ ಚಾಲನೆಗೆ ಅಗತ್ಯ ಕ್ರಮಕೈಗೊಳ್ಳಲಾಗುವುದೆಂದು ಸಿ.ಎಂ.  ಭರವಸೆ ನೀಡಿದ್ದಾರೆ.ಪ್ರಸಕ್ತ ಬಜೆಟ್‌ನಲ್ಲಿ ಕಾಮಗಾರಿಗೆ ಅನುದಾನ ಬಿಡುಗಡೆಗೊಳಿಸಲಾಗುವುದು ಹಾಗೂ ಶೀಘ್ರ ಕಾಮಗಾರಿ ಚಾಲನೆಗೆ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ. ನಿಯೋಗದಲ್ಲಿ ಮಹಿಬೂಬ ಪಟೇಲ್, ಶರಣಪ್ಪಗೌಡ ಪಾಟೀಲ, ಯಶವಂತರಾಯ ಬಣಮಿ, ಜಗನ್ನಾಥ ವಿಶ್ವಕರ್ಮ, ಈರಣ್ಣಗೌಡ ಪಾಟೀಲ, ವೆಂಕಪ್ಪ ಹಂದನೂರ, ಮಲ್ಲಿನಾಥ ಶೆಟ್ಟಿ, ನಿಂಗಣ್ಣ ಬಿರಾದಾರ ಮತ್ತಿತರರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.