ಭಾನುವಾರ, ಆಗಸ್ಟ್ 25, 2019
28 °C
ಚೀನಾದಿಂದ ಗಡಿಯಲ್ಲಿ ಮತ್ತೆ ಹೊಸ ಕ್ಯಾತೆ

ಸೇನಾಪಡೆ ಗಸ್ತಿಗೆ ಅಡ್ಡಿ

Published:
Updated:

ಲೇಹ್/ನವದೆಹಲಿ (ಪಿಟಿಐ): ಲಡಾಖ್‌ನಲ್ಲಿ ಈಚೆಗೆ ಭಾರತದ ಗಡಿ ಭಾಗದಲ್ಲಿ ಅತಿಕ್ರಮಣ ನಡೆಸಿದ್ದ ಚೀನಾ, ಈಗ ಮತ್ತೆ ಹೊಸ ಕ್ಯಾತೆ ತೆಗೆದಿದ್ದು ಗಡಿಯಲ್ಲಿಯ ಭಾರತದ ನೆಲದ ವ್ಯಾಪ್ತಿಯಲ್ಲಿ ಸೇನೆಯ ಗಸ್ತು ಕಾರ್ಯಕ್ಕೆ ತಡೆಯುಂಟುಮಾಡುವ ಮೂಲಕ ಅತಿಕ್ರಮಣದ ಹೊಸ ತಂತ್ರ ಅನುಸರಿಸುತ್ತಿದೆ.ವಾಸ್ತವ ಗಡಿ ನಿಯಂತ್ರಣ ರೇಖೆಗುಂಟ ಇರುವ ಉತ್ತರ ಲಡಾಖ್ ಭಾಗದಲ್ಲಿ ಕಳೆದ ವಾರ ಭಾರತೀಯ ಪಡೆಗಳು `ತಿರಂಗಾ' ಗಸ್ತುಕಾರ್ಯ ಚುರುಕುಗೊಳಿಸಿರುವುದಕ್ಕೆ ಪ್ರತಿಯಾಗಿ  ಚೀನಾ ಈ ಆಕ್ರಮಣಕಾರಿ ತಂತ್ರ ಅನುಸರಿಸುತ್ತಿದೆ ಎಂದು ವಿಶ್ಲೇಷಿಸಲಾಗಿದೆ.`ಭಾರಿ ಹಾಗೂ ಲಘು ವಾಹನಗಳೊಂದಿಗೆ ಎದುರಾದ ಚೀನಾ ಸೇನಾಪಡೆಗಳು ಭಾರತದ ಗಡಿ ಪ್ರದೇಶದಲ್ಲಿ ಸಾಗುತ್ತಿದ್ದ ನಮ್ಮ ಸೇನಾ ಸಿಬ್ಬಂದಿಯನ್ನು ತಡೆದವು. ಇದು ತಮಗೆ ಸೇರಿದ ಪ್ರದೇಶ ಎಂಬ ಬರಹವಿದ್ದ ಭಿತ್ತಿಪತ್ರವನ್ನು ಚೀನಾ ಪಡೆಗಳು ಈ ಸಂದರ್ಭದಲ್ಲಿ ಪ್ರದರ್ಶಿಸಿದವು. ಭಾರತದ ಸೇನಾ ಪಡೆಗಳು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಗಸ್ತು ಕಾರ್ಯದಲ್ಲಿ ತೊಡಗಿದ್ದರೂ ಚೀನಾ ಪಡೆ ಆಕ್ರಮಣಕಾರಿಯಾಗಿ ನಡೆದುಕೊಂಡಿತು' ಎಂದು ಅಧಿಕೃತ ಮೂಲಗಳು ತಿಳಿಸಿವೆ.ಆಕ್ಷೇಪ ಸಲ್ಲಿಸಲಿರುವ ಭಾರತ: ಗಡಿಯ ವಿವಿಧ ಭಾಗದಲ್ಲಿ ಭಾರತದ ಪಡೆಗಳು ನಡೆಸುತ್ತಿರುವ ಗಸ್ತು ಕಾರ್ಯದ ಮೇಲೆ ತೀವ್ರ ನಿಗಾ ಇಟ್ಟಿರುವ ಚೀನಾ ಪಡೆಗಳು, ಭಾರತದ ಪಡೆಗಳು ಅಲ್ಲಿಂದ ನಿರ್ಗಮಿಸುತ್ತಲೇ ದಾರಿ ಮಧ್ಯೆ ಅವರನ್ನು ಅಡ್ಡಗಟ್ಟಿ ಪ್ರತಿರೋಧ ವ್ಯಕ್ತಪಡಿಸುತ್ತಿವೆ. ಚೀನಾ ಪಡೆಗಳ ಈ ಪ್ರವೃತ್ತಿಯ ಕುರಿತು ಲಡಾಖ್‌ನ ಚುಶುಲ್‌ನಲ್ಲಿ ನಡೆಯಲಿರುವ ಮುಂದಿನ ಗಡಿ ಸಿಬ್ಬಂದಿ ಸಭೆಯಲ್ಲಿ (ಬಿಪಿಎಂ) ಭಾರತ ತನ್ನ ಆಕ್ಷೇಪ ವ್ಯಕ್ತಪಡಿಸಲಿದೆ.ಭಾರತ- ಟಿಬೆಟ್ ಗಡಿ ಪೊಲೀಸ್ (ಐಟಿಬಿಪಿ) ಸಿಬ್ಬಂದಿಯನ್ನೇ ಹೆಚ್ಚಾಗಿ ಹೊಂದಿರುವ ಭಾರತೀಯ ಪಡೆಗಳು, ಚೀನಾದ ವಾಹನಗಳು ತಮ್ಮ ವ್ಯಾಪ್ತಿಗೆ ನುಗ್ಗದಂತೆ ಕ್ಷಿಪ್ರಗತಿಯಲ್ಲಿ ಕಾರ್ಯಾಚರಣೆಗೆ ಇಳಿಯುತ್ತಿವೆ.ಗಡಿ ನಿಯಂತ್ರಣ ರೇಖೆಗುಂಟ ಡೆಮ್‌ಚಾಕ್-ಫಕ್ಚೆ ಎಂಬಲ್ಲಿಯ ಚೀನಾ ಗಡಿಯ ಕಡೆಗೆ ನಿರ್ಮಿಸಲು ಉದ್ದೇಶಿಸಲಾದ ಗೋಪುರದ ಕುರಿತು ಜುಲೈ 27ರಂದು ನಡೆದ ಬಿಪಿಎಂ ಸಭೆಯಲ್ಲಿ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.ಇಂತಹ ಗೋಪುರದ ನಿರ್ಮಾಣವು ಉಭಯ ದೇಶಗಳ ನಡುವೆ ನಡೆದ 1993ರ ಒಪ್ಪಂದಕ್ಕೆ ವ್ಯತಿರಿಕ್ತವಾಗಿದೆ ಎಂದು ಮಾತುಕತೆಯ ವೇಳೆ ಭಾರತ ಬಲವಾಗಿ ಪ್ರತಿಪಾದಿಸಿತ್ತು. ಈ ಒಪ್ಪಂದದ ಅನ್ವಯ ಭಾರತ ಇಲ್ಲವೇ ಚೀನಾ ಗಡಿ ನಿಯಂತ್ರಣ ರೇಖೆಗುಂಟ ಯಾವುದೇ ನಿರ್ಮಾಣ ಕಾರ್ಯ ಕೈಗೊಳ್ಳುವಂತಿಲ್ಲ.ಹವಾಮಾನ ಗೋಪುರ ಇದಾಗಿದ್ದು ಈ ಭಾಗದಲ್ಲಿಯ ಜನರ ಅನುಕೂಲಕ್ಕಾಗಿ ಇದನ್ನು ನಿರ್ಮಿಸಲಾಗುತ್ತಿದೆ ವಿನಾ ಇಲ್ಲಿ ಸೇನಾ ಚಟುವಟಿಕೆ ಕೈಗೊಳ್ಳುವುದಿಲ್ಲ ಎಂದು ಚೀನಾ ಈ ಸಭೆಯಲ್ಲಿ ಪ್ರತಿಪಾದಿಸಿತ್ತು. ಆದರೆ ಚೀನಾದ ಈ ವಾದವನ್ನು ತಳ್ಳಿಹಾಕಿದ್ದ ಭಾರತ ತಂಡದ ಮುಖ್ಯಸ್ಥ ಬ್ರಿಗೇಡಿಯರ್ ಸಂಜೀವ್ ರಾಯ್, ಚೀನಾ ಪಡೆಗಳು ಆಗಾಗ ಭಾರತದ ನೆಲದೊಳಗೆ ನುಗ್ಗುವುದನ್ನು ರೂಢಿಮಾಡಿಕೊಂಡಿವೆ ಎಂದು ಟೀಕಿಸಿದ್ದರು.ಚೀನಾ ಅತಿಕ್ರಮಣ ನಡೆಸುತ್ತಿರುವುದು ಸಾಮಾನ್ಯವಾಗಿ ಲೇಹ್‌ನಿಂದ 300 ಕಿಮೀ ದೂರದಲ್ಲಿರುವ ಚುಮಾರ್ ಹಾಗೂ ಡೆಮ್ಚಾಕ್ ಎಂಬ ಪ್ರದೇಶಗಳಲ್ಲಿ. ಹಿಮಾಚಲ ಪ್ರದೇಶದ ಕೊನೆಯ ಪಟ್ಟಣ ಚುಮಾರ್ ಆಗಿದೆ. ಇದೇ ಪ್ರದೇಶವನ್ನು ಚೀನಾದೊಂದಿಗಿನ ಅಂತರರಾಷ್ಟ್ರೀಯ ಗಡಿ ಎಂದು ವ್ಯಾಖ್ಯಾನಿಸಲಾಗಿದೆ. ಈ ಭಾಗಕ್ಕೆ ಭಾರತದ ಕಡೆಯಿಂದ ರಸ್ತೆ ಸೌಲಭ್ಯ ಇದ್ದರೆ, ಚೀನಾ ಕಡೆಯಿಂದ ಸಂಪರ್ಕ ರಸ್ತೆಗಳಿಲ್ಲ. ಸದ್ಯ ಈ ಭಾಗದಲ್ಲಿ ಗಸ್ತು ಕಾರ್ಯ ಚುರುಕುಗೊಳಿಸಲಾಗಿದೆ.

Post Comments (+)