ಶುಕ್ರವಾರ, ಡಿಸೆಂಬರ್ 6, 2019
17 °C

ಸೇನಾ ಅಕಾಡೆಮಿ ಮೇಲೆ ರಾಕೆಟ್ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೇನಾ ಅಕಾಡೆಮಿ ಮೇಲೆ ರಾಕೆಟ್ ದಾಳಿ

ಇಸ್ಲಾಮಾಬಾದ್ (ಪಿಟಿಐ):  ಅಲ್-ಖೈದಾ ಮುಖ್ಯಸ್ಥ ಒಸಾಮ ಬಿನ್ ಲಾಡೆನ್ ಹತ್ಯೆಗೊಳಗಾದ ಅಬೋಟಾಬಾದ್ ನಿವಾಸಕ್ಕೆ ಸಮೀಪದಲ್ಲೇ ಇರುವ ಪ್ರತಿಷ್ಠಿತ ಪಾಕಿಸ್ತಾನ ಸೇನಾ ಅಕಾಡೆಮಿ ಮೇಲೆ ಉಗ್ರರು ಶುಕ್ರವಾರ ರಾಕೆಟ್ ದಾಳಿ ನಡೆಸಿದ್ದಾರೆ.ರಾಷ್ಟ್ರದ ಸೇನಾ ಮುಖ್ಯಸ್ಥ ಜನರಲ್ ಅಷ್ಫಾಕ್ ಪರ್ವೇಜ್ ಕಯಾನಿ  ಅಕಾಡೆಮಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ ಕೆಲವೇ ಗಂಟೆಗಳ ಬಳಿಕ ಈ ದಾಳಿ ನಡೆದಿದೆ.`ಶುಕ್ರವಾರ ನಸುಕಿನ 3.30ರ ಸುಮಾರಿಗೆ ಅಕಾಡೆಮಿಯನ್ನು ಗುರಿಯಾಗಿಸಿಕೊಂಡು ಉಗ್ರರು ಒಟ್ಟು ಒಂಬತ್ತು ರಾಕೆಟ್‌ಗಳನ್ನು ಎಸೆದಿದ್ದಾರೆ. ಇವುಗಳಲ್ಲಿ ಎರಡು ರಾಕೆಟ್‌ಗಳು ಅಕಾಡೆಮಿಯ ಹೊರ ಗೋಡೆಗೆ ಬಡಿದಿವೆ. ದಾಳಿಯಲ್ಲಿ ಯಾವುದೇ ಆಸ್ತಿ ಹಾನಿ, ಸಾವು ನೋವು ಸಂಭವಿಸಿಲ್ಲ~ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಯು ಭದ್ರತಾ ಲೋಪವನ್ನು ತೋರಿಸುತ್ತದೆ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.ಈ ಘಟನೆ ಸಂಬಂಧ ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಆದರೆ ಉಗ್ರರ ಪತ್ತೆಗಾಗಿ ಭದ್ರತಾ ಪಡೆ ಶೋಧ ಕಾರ್ಯಾಚರಣೆ ಆರಂಭಿಸಿದೆ ಎಂದು ಅವರು ಹೇಳಿದ್ದಾರೆ.ಅಮೆರಿಕವು ಅಬೋಟಾಬಾದ್‌ನಲ್ಲಿ ಕಾರ್ಯಾಚರಣೆ ನಡೆಸಿ ಒಸಾಮ ಬಿನ್ ಲಾಡೆನ್‌ನನ್ನು ಹತ್ಯೆ ಮಾಡಿದ ಬಳಿಕ ಉಗ್ರರು ಆ ಪ್ರದೇಶದಲ್ಲಿ ನಡೆಸಿದ ಮೊದಲ ದಾಳಿ ಇದಾಗಿದೆ.ಅಬೋಟಾಬಾದ್‌ಗೆ ಸಮೀಪವಿರುವ ನವಾನ್ ಶೇರ್ ಎಂಬ ಪಟ್ಟಣದಲ್ಲಿರುವ  ಮಸೀದಿಯೊಂದರ ಹಿಂಭಾಗದಲ್ಲಿರುವ ಗುಡ್ಡಗಾಡು ಪ್ರದೇಶದಿಂದ ಈ ದಾಳಿ ನಡೆಸಲಾಗಿದೆ ಎಂದು ಜಿಲ್ಲಾಡಳಿತದ ಮುಖ್ಯಸ್ಥ ಇಮ್ತಿಯಾಜ್ ಹುಸೇನ್ ಷಾ ಹೇಳಿದ್ದಾರೆ.ಮಸೀದಿಯ ಹಿಂಭಾಗದಲ್ಲಿ ಒಟ್ಟು ರಾಕೆಟ್ ಉಡಾವಣಾ ವಾಹಕಗಳು ಇರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

`ಉಗ್ರರು ಒಂಬತ್ತು ರಾಕೆಟ್‌ಗಳನ್ನು  ಎಸೆದಿದ್ದಾರೆ. ಅವುಗಳಲ್ಲಿ ಮೂರು ಅಕಾಡೆಮಿಯತ್ತ ನುಗ್ಗಿವೆ. ಇವುಗಳಲ್ಲಿ ಎರಡು  ಸೇನಾ ಅಕಾಡೆಮಿಯ ಆವರಣ ಗೋಡೆಗೆ ಬಡಿದಿವೆ~ ಎಂದು ಷಾ ಹೇಳಿದ್ದಾರೆ.`ನಾಲ್ಕೈದು ರಾಕೆಟ್‌ಗಳು ಅಬೋಟಾಬಾದ್‌ನ ವಸತಿ ಪ್ರದೇಶಗಳಿಗೆ ಬಡಿದಿವೆ. ಅದೃಷ್ಟವಶಾತ್ ಅಲ್ಲೂ ಯಾವುದೇ ಸಾವು ನೋವು ಸಂಭವಿಸಿಲ್ಲ. ರಾಕೆಟ್ ದಾಳಿ ನಡೆಸಿದ ವ್ಯಕ್ತಿಗಳನ್ನು ಯಾರೊಬ್ಬರೂ ನೋಡಿಲ್ಲ~ ಎಂದೂ ಷಾ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)