ಸೇನಾ ಪಡೆಗಳ ಶಸ್ತ್ರಾಸ್ತ್ರ ಬೇಡಿಕೆ- ವಿಸ್ತೃತ ಮಾಹಿತಿ ಶೀಘ್ರ ವೆಬ್‌ಸೈಟ್‌ಗೆ

7

ಸೇನಾ ಪಡೆಗಳ ಶಸ್ತ್ರಾಸ್ತ್ರ ಬೇಡಿಕೆ- ವಿಸ್ತೃತ ಮಾಹಿತಿ ಶೀಘ್ರ ವೆಬ್‌ಸೈಟ್‌ಗೆ

Published:
Updated:

ಬೆಂಗಳೂರು: ದೇಶದ ಸಶಸ್ತ್ರ ಪಡೆಗಳಿಗೆ ಅಗತ್ಯವಿರುವ ಶಸ್ತ್ರಾಸ್ತ್ರಗಳು ಮತ್ತು ಇತರ ಉಪಕರಣಗಳ ಕುರಿತು ವಿಸ್ತೃತ ಮಾಹಿತಿ ನೀಡುವ ಏಕೀಕೃತ ಯೋಜನೆ ಶೀಘ್ರದಲ್ಲೇ ಚಾಲನೆ ಪಡೆದುಕೊಳ್ಳಲಿದೆ ಎಂದು ವೈಸ್ ಅಡ್ಮಿರಲ್ ಶೇಖರ್ ಸಿನ್ಹಾ ಪ್ರಕಟಿಸಿದರು.ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್‌ಸಿ) ಎಲೆಕ್ಟ್ರಾನಿಕ್ ಯುದ್ಧ ಕುರಿತು ಬುಧವಾರ ಆಯೋಜಿಸಿದ್ದ ಸಮ್ಮೇಳನದ ಉದ್ಘಾಟನೆ ನಂತರ ಅವರು ಸುದ್ದಿಗಾರರ ಜೊತೆ ಮಾತನಾಡಿದರು.`ಯೋಜನೆ ಸಿದ್ಧವಾದ ನಂತರ ಅದನ್ನು ರಕ್ಷಣಾ ಇಲಾಖೆಯ ವೆಬ್‌ಸೈಟ್‌ನಲ್ಲೂ ಪ್ರಕಟಿಸಲಾಗುವುದು. ಭೂಸೇನೆ, ವಾಯುಪಡೆ ಮತ್ತು ನೌಕಾದಳಕ್ಕೆ ಅಗತ್ಯವಿರುವ ಶಸ್ತ್ರಾಸ್ತ್ರಗಳು ಹಾಗೂ ಇತರ ಯುದ್ಧ ಪರಿಕರಗಳ ಕುರಿತು ಪ್ರತ್ಯೇಕವಾಗಿ ಮಾಹಿತಿ ನೀಡಲಾಗುವುದು. ಮುಂದಿನ 15 ವರ್ಷಗಳ ಅಗತ್ಯವನ್ನು ಗಮನದಲ್ಲಿ ಇಟ್ಟುಕೊಂಡು ಈ ಯೋಜನೆ ಸಿದ್ಧಪಡಿಸಲಾಗುತ್ತಿದೆ~ ಎಂದು ತಿಳಿಸಿದರು.ಈ ಯೋಜನೆಯಿಂದ ರಕ್ಷಣಾ ಉತ್ಪನ್ನಗಳ ತಯಾರಿಕೆಯಲ್ಲಿ ಖಾಸಗಿ ಕಂಪೆನಿಗಳ ಪಾಲುದಾರಿಕೆ ಹೆಚ್ಚಲಿದೆ. ಆದರೆ ಸೂಕ್ಷ್ಮ ವಿಚಾರಗಳ ಮಾಹಿತಿಯನ್ನು ಯಾವುದೇ ಕಾರಣಕ್ಕೂ ಖಾಸಗಿ ಕಂಪೆನಿಗಳಿಗೆ ಹಸ್ತಾಂತರಿಸುವುದಿಲ್ಲ ಎಂದರು.ಕೇಂದ್ರ ಸರ್ಕಾರದ ರಕ್ಷಣಾ ಉತ್ಪಾದನೆ ಮತ್ತು ಖರೀದಿ ನೀತಿ ಅನ್ವಯವೇ ಖಾಸಗಿ ಕಂಪೆನಿಗಳಿಂದಲೂ ಶಸ್ತ್ರಾಸ್ತ್ರ ಖರೀದಿ ನಡೆಯಲಿದೆ. ಬಂಡವಾಳ ಹೂಡಿಕೆ ಆಗಬೇಕಾದ ಕ್ಷೇತ್ರಗಳ ಕುರಿತು ಖಾಸಗಿ ಕಂಪೆನಿಗಳಿಗೆ ಯೋಜನೆಯ ಮೂಲಕ ಸ್ಪಷ್ಟ ಮಾಹಿತಿ ದೊರೆಯಲಿದೆ ಎಂದು ಹೇಳಿದರು.ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನ (ಬಿಇಎಲ್) ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಐ.ವಿ. ಶರ್ಮ, `ಎಲೆಕ್ಟ್ರಾನಿಕ್ ಅಸ್ತ್ರಗಳ ಅಭಿವೃದ್ಧಿಯಲ್ಲಿ ಕಳೆದ ದಶಕದಲ್ಲಿ ಸಾಧಿಸಿದ್ದಕ್ಕಿಂತ ಐದು ಪಟ್ಟು ಹೆಚ್ಚಿನದನ್ನು ಸಾಧಿಸಬೇಕಾದ ಒತ್ತಡದಲ್ಲಿ ನಾವಿದ್ದೇವೆ~ ಎಂದು ಅಭಿಪ್ರಾಯಪಟ್ಟರು.ಕಳೆದ ಕೆಲವು ವರ್ಷಗಳಲ್ಲಿ ರಕ್ಷಣಾ ತಂತ್ರಜ್ಞಾನದಲ್ಲಿ ದೇಶ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. ಆದರೆ ಇಸ್ರೇಲ್ ಮತ್ತು ಅಮೆರಿಕದ ಸಾಧನೆಗೆ ಹೋಲಿಸಿದರೆ ಇದು ಸಾಲದು ಎಂದು ಡಿಆರ್‌ಡಿಒ ಮುಖ್ಯ ನಿಯಂತ್ರಕ (ಏವಿಯಾನಿಕ್ಸ್) ಜಿ. ಇಳಂಗೋವನ್ ಹೇಳಿದರು.ಅಸೋಸಿಯೇಷನ್ ಆಫ್ ಓಲ್ಡ್ ಕ್ರೌಸ್ (ಎಒಸಿ) ಭಾರತ ಘಟಕದ ಅಧ್ಯಕ್ಷ ಡಾ.ಯು.ಕೆ. ರೇವಣಕರ್ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.ಎರಡು ದಿನ ಸಮ್ಮೇಳನ: ಡಿಆರ್‌ಡಿಒ ಅಂಗಸಂಸ್ಥೆಯಾದ ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ (ಎಡಿಇ) ಮಾನವರಹಿತ ಯುದ್ಧವಿಮಾನಗಳ ಕುರಿತು ಬೆಂಗಳೂರಿನ ಈಗಲ್‌ಟನ್ ಗಾಲ್ಫ್ ರೆಸಾರ್ಟ್‌ನಲ್ಲಿ ಶುಕ್ರವಾರ ಮತ್ತು ಶನಿವಾರ ಅಂತರರಾಷ್ಟ್ರೀಯ ಮಟ್ಟದ ಸಮ್ಮೇಳನ ಆಯೋಜಿಸಿದೆ.15 ದೇಶಗಳ 400ಕ್ಕೂ ಹೆಚ್ಚಿನ ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಡಿಆರ್‌ಡಿಒ ಮುಖ್ಯ ನಿಯಂತ್ರಕ ಡಾ.ಎ. ಸುಭಾನಂದ ರಾವ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಡಿಆರ್‌ಡಿಒದಲ್ಲಿ ವಿಜ್ಞಾನಿಗಳ ಕೊರತೆ!ಬೆಂಗಳೂರು: ಆರನೇ ವೇತನ ಆಯೋಗದ ಶಿಫಾರಸುಗಳು ಅನುಷ್ಠಾನಕ್ಕೆ ಬಂದ ನಂತರ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ವಿಜ್ಞಾನಿಗಳಿಗೆ ಆಕರ್ಷಕ ವೇತನ ಮತ್ತು ಇತರೆ ಭತ್ಯೆ ನೀಡಲಾಗುತ್ತಿದೆ. ಆದರೂ ಸಂಸ್ಥೆಯಲ್ಲಿ ಯುವ ವಿಜ್ಞಾನಿಗಳ ಕೊರತೆ ಇದೆ ಎಂದು ಡಿಆರ್‌ಡಿಒ ಮುಖ್ಯ ನಿಯಂತ್ರಕ (ಏವಿಯಾನಿಕ್ಸ್) ಜಿ. ಇಳಂಗೋವನ್ ತಿಳಿಸಿದರು.ಇಲ್ಲಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಬುಧವಾರ ನಡೆದ ಎಲೆಕ್ಟ್ರಾನಿಕ್ ಯುದ್ಧ ಕುರಿತ ಸಮ್ಮೇಳನದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, `ಏರೋನಾಟಿಕ್ಸ್ ವಿಭಾಗದಲ್ಲೂ ವಿಜ್ಞಾನಿಗಳ ಕೊರತೆ ಇದೆ. ಹಳಬರನ್ನೇ ಹೆಚ್ಚು ದಿನ ಮುಂದುವರಿಸಲು ಸಾಧ್ಯವಿಲ್ಲ~ ಎಂದರು.ರಕ್ಷಣಾ ಸಂಶೋಧನೆ ಕುರಿತು ಯುವಕರಲ್ಲಿ ಆಸಕ್ತಿ ಮೂಡುತ್ತಿಲ್ಲ. ಡಿಆರ್‌ಡಿಒಗೆ ಇದೂ ಒಂದು ಸಮಸ್ಯೆಯಾಗಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಶೋಧನಾ ಕ್ಷೇತ್ರಕ್ಕೆ ಬರಬೇಕು ಎಂದು ಹೇಳಿದರು.ದೇಶದ ಆಂತರಿಕ ಭದ್ರತೆಯ ಜವಾಬ್ದಾರಿ ಹೊತ್ತಿರುವ ಪೊಲೀಸ್ ಮತ್ತು ಅರೆಸೈನಿಕ ಪಡೆಗಳಿಗೆ ಅಗತ್ಯವಿರುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಡಿಆರ್‌ಡಿಒದಲ್ಲಿ ಪ್ರತ್ಯೇಕ ವಿಭಾಗವನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry