ಸೇನಾ ಮುಖ್ಯಸ್ಥ ಜನ್ಮ ದಿನಾಂಕ ವಿವಾದ;ಆರಂಭದಲ್ಲೇ ಸಾಧ್ಯವಿತ್ತು ಪರಿಹಾರ

7

ಸೇನಾ ಮುಖ್ಯಸ್ಥ ಜನ್ಮ ದಿನಾಂಕ ವಿವಾದ;ಆರಂಭದಲ್ಲೇ ಸಾಧ್ಯವಿತ್ತು ಪರಿಹಾರ

Published:
Updated:

ಬೆಂಗಳೂರು: `ಸೇನಾ ಮುಖ್ಯಸ್ಥ ಜನರಲ್ ವಿ.ಕೆ.ಸಿಂಗ್ ಅವರ ಹುಟ್ಟಿದ ವರ್ಷದ ವಿವಾದವು ಸೇನೆಯ ಒಳಗಿನಿಂದಲೇ ಸೃಷ್ಟಿಯಾದದ್ದು. ಅದರಿಂದ ಸೇನೆಯ ವರ್ಚಸ್ಸಿಗೆ ಮಾತ್ರವಲ್ಲ; ದೇಶಕ್ಕೂ ನಷ್ಟವಾಗಿದೆ~-

ಹೀಗೆ ವಿಷಾದ ವ್ಯಕ್ತಪಡಿಸಿದವರು ನಿವೃತ್ತ ಮೇಜರ್ ಜನರಲ್ ಮೂವೆರ ಸಿ.ನಂಜಪ್ಪ.25 ವರ್ಷಗಳ ಹಿಂದೆ ಸಿಂಗ್ ಅವರು ನಂಜಪ್ಪ ಅವರ ಅಧೀನ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಸದ್ಯದ ವಿವಾದದ ಹಿನ್ನೆಲೆಯಲ್ಲಿ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ನಂಜಪ್ಪ ಅವರು, ಜನನ ವರ್ಷದ ಗೊಂದಲಕ್ಕೆ ಕಾರಣವಾದ ಅಂಶಗಳು ಹಾಗೂ ಸಿಂಗ್ ಅವರೊಂದಿಗಿನ ಒಡನಾಟದ ನೆನಪುಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.`ಈ ವಿವಾದ ಅನಗತ್ಯವಾಗಿತ್ತು. ಇದನ್ನುಪ್ರಾರಂಭದಲ್ಲೇ ಸೇನೆಯ ಒಳಗೇ ಪರಿಹರಿಸಬಹುದಿತ್ತು. ನಂತರದಲ್ಲಾದರೂ ರಕ್ಷಣಾ ಸಚಿವಾಲಯವು ಮಧ್ಯೆ ಪ್ರವೇಶಿಸಿ ವಿವಾದ ಆಗದಂತೆ ಕ್ರಮ ತೆಗೆದುಕೊಳ್ಳಬಹುದಾಗಿತ್ತು~ ಎಂದು ಅಭಿಪ್ರಾಯಪಟ್ಟ ಅವರು, `ಸಿಂಗ್ ಅವರು ತಮ್ಮ ಹಕ್ಕು ಮತ್ತು ಘನತೆಗಾಗಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಅವರ ಜನ್ಮ ದಿನಾಂಕದ ವರ್ಷದ ಬಗ್ಗೆ ವಿವಾದ ಆಗುವಂತಹುದು ಏನೂ ಇಲ್ಲ. ಎಲ್ಲವನ್ನು ಕೋರ್ಟ್ ಇತ್ಯರ್ಥ ಪಡಿಸಲಿದೆ~ ಎಂದು ವಿಶ್ವಾಸ ವ್ಯಕ್ತಪಡಿಸಿದರು.ನಂಜಪ್ಪ ಅವರು ಹೇಳಿದ್ದು ಇಷ್ಟು : `ಸಿಂಗ್ ಅವರ ತಂದೆ ಸಹ ಸೇನಾಧಿಕಾರಿಯಾಗಿದ್ದವರು. ಪುಣೆಯ ಖಡ್ಕಿ ಸೇನಾ ಆಸ್ಪತ್ರೆಯಲ್ಲಿ 1951ರಲ್ಲಿ ಸಿಂಗ್ ಜನಿಸಿದರು. ಅದು ಸ್ಪಷ್ಟವಾಗಿ ದಾಖಲಾಗಿದೆ. ಜನ್ಮ ದಿನಾಂಕದ ಖಾತರಿಗೆ ಇದಕ್ಕಿಂತ ಬೇರಾವ ದಾಖಲೆಗಳು ಬೇಕು?.`ಸೇನೆಯಲ್ಲಿ ಅಧಿಕಾರಿಗಳ ಮದುವೆ ಆದಾಗ, ಅವರಿಗೆ ಮಕ್ಕಳಾದಾಗ ಎಲ್ಲ ವಿವರಗಳನ್ನು ಆಯಾ ಸಮಯದಲ್ಲೇ ದಾಖಲಾತಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ನಮೂದಿಸುವ ಪದ್ಧತಿ ಇದೆ. ಅದರ ಪ್ರಕಾರವೂ ಸಿಂಗ್ ಅವರ ಹುಟ್ಟಿದ ವರ್ಷ ಸರಿಯಾಗಿಯೇ ನಮೂದಾಗಿದೆ.ತಪ್ಪಾಗಿದ್ದು ಎಲ್ಲಿ?: `ಸಿಂಗ್ ಅವರು ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಪ್ರವೇಶ ಪರೀಕ್ಷೆಗಾಗಿ ಅರ್ಜಿ ಸಲ್ಲಿಸುತ್ತಾರೆ. ಆಗ ಅವರಿಗೆ ಹದಿನಾಲ್ಕೂವರೆ ವರ್ಷ. ಆ ಅರ್ಜಿಯಲ್ಲಿ ಸಿಂಗ್ ಅವರ ಹುಟ್ಟಿದ ವರ್ಷ 1950 ಎಂದು ತಪ್ಪಾಗಿ ಬರೆಯಲಾಗಿತ್ತು. ಈ ತಪ್ಪನ್ನು ಸಿಂಗ್ ಅವರೇ ಮಾಡಿದರೋ ಅಥವಾ ಅವರಿಗೆ ಅರ್ಜಿ ತುಂಬಲು ಸಹಾಯ ಮಾಡಿದ ಶಾಲಾ ಪ್ರಾಂಶುಪಾಲರು ಮಾಡಿದರೋ ಗೊತ್ತಿಲ್ಲ.`ಹತ್ತನೇ ತರಗತಿ ತೇರ್ಗಡೆಯಾದ ಮೇಲೆ ಅದರ ಪ್ರಮಾಣ ಪತ್ರವನ್ನು ಕೇಂದ್ರ ಲೋಕಸೇವಾ ಆಯೋಗಕ್ಕೆ ಸಲ್ಲಿಸಲಾಗಿದೆ. ಆ ಪ್ರಮಾಣ ಪತ್ರದಲ್ಲಿ ಸಿಂಗ್ ಅವರು ಹುಟ್ಟಿದ ವರ್ಷ 1951 ಎಂದು ಸರಿಯಾಗಿಯೇ ಇದೆ. ಜನ್ಮದಿನಾಂಕದ ದೃಢೀಕರಣಕ್ಕೆ ಹತ್ತನೇ ತರಗತಿ ಪ್ರಮಾಣ ಪತ್ರವೇ ಪ್ರಮುಖ ದಾಖಲೆ.`ಸೇನೆಯಲ್ಲಿ ಸೇನಾ ಕಾರ್ಯದರ್ಶಿ ಶಾಖೆ ಹಾಗೂ ಅಡ್ಜುಜೆಂಟ್ ಜನರಲ್ ಶಾಖೆ- ಎಂಬ ಎರಡು ವಿಭಾಗಗಳಿವೆ. ಮೊದಲನೇ ಶಾಖೆಯಲ್ಲಿ ಸೇನಾಧಿಕಾರಿಗಳು ಮತ್ತು ಸಿಬ್ಬಂದಿಯ ಸ್ಥಳ ನಿಯುಕ್ತಿ, ಬಡ್ತಿ ಮೊದಲಾದ ಮಾಹಿತಿ ಹಾಗೂ ಎರಡನೇ ಶಾಖೆಯಲ್ಲಿ ಕುಟುಂಬ ಸದಸ್ಯರ ವಿವರ, ಪಿಂಚಣಿ ಮತ್ತಿತರ ವಿವರಗಳಿಗೆ ಸಂಬಂಧಿಸಿದ ದಾಖಲಾತಿಗಳನ್ನು ನಿರ್ವಹಿಸಲಾಗುತ್ತದೆ. ಮೊದಲನೇ ಶಾಖೆಯಲ್ಲಿ ಎನ್‌ಡಿಎ ಪರೀಕ್ಷೆಗೆ ತುಂಬಿದ ಅರ್ಜಿಯ ಆಧಾರದಲ್ಲೇ ಸಿಂಗ್ ಅವರ ಜನ್ಮ ದಿನಾಂಕವನ್ನು ಇಟ್ಟುಕೊಳ್ಳಲಾಗಿದೆ. ಎರಡನೇ ಶಾಖೆಯಲ್ಲಿ ಜನನ ಮತ್ತು ಮೆಟ್ರಿಕ್ ಪರೀಕ್ಷೆಯ ಪ್ರಮಾಣ ಪತ್ರಗಳಲ್ಲಿರುವ ಜನ್ಮ ದಿನಾಂಕವನ್ನು ಇಟ್ಟುಕೊಳ್ಳಲಾಗಿದೆ.`ಪ್ರಮಾಣ ಪತ್ರಗಳ ಆಧಾರದಲ್ಲಿ ಸಿಂಗ್ ಅವರ ಜನ್ಮ ದಿನಾಂಕವನ್ನು ಒಪ್ಪುವ ಮೂಲಕ ವಿವಾದಕ್ಕೆ ಅವಕಾಶವೇ ಇಲ್ಲದಂತೆ ಸೇನೆಯು ಕ್ರಮ ಕೈಗೊಳ್ಳಬೇಕಾಗಿತ್ತು. ಹಾಗೇ ಮಾಡದೇ ಇದ್ದುದರಿಂದ ವಿವಾದ ರಾಷ್ಟ್ರೀಯ ಸಮಸ್ಯೆಯಾಗಿ ಬೆಳೆದಿದೆ.ಸೇನಾಧಿಕಾರಿಯಾಗಿ ಹೇಗೆ?: `ಸಿಂಗ್ ಅವರು ಸಮರ್ಥ ಮತ್ತು ಕಳಂಕ ರಹಿತ ಸೇನಾಧಿಕಾರಿ ಎಂಬುದು ಈಗಾಗಲೇ ಸಾಬೀತಾಗಿದೆ. ಅದರ ಬಗ್ಗೆ ನಾನು ಹೊಸದಾಗಿ ಹೇಳುವುದೇನಿಲ್ಲ. 25 ವರ್ಷಗಳ ಹಿಂದೆ ಎರಡು ವರ್ಷಗಳ ಕಾಲ ನಾವು ಒಟ್ಟಿಗೆ ಕೆಲಸ ಮಾಡಿದ್ದೆವು. 1987 ಮತ್ತು 88ರಲ್ಲಿ ಶ್ರೀಲಂಕಾದಲ್ಲಿದ್ದ ಭಾರತೀಯ ಶಾಂತಿ ಪಾಲನಾ ಪಡೆಯಲ್ಲಿ (ಐಪಿಕೆಎಫ್) ನಾನು ಕಮಾಂಡರ್ ಆಗಿದ್ದೆ. ಸಿಂಗ್ ಉಪ ಕಮಾಂಡರ್ ಆಗಿದ್ದರು. ಅವರು ಉತ್ತಮವಾಗಿ  ಕಾರ್ಯನಿರ್ವಹಿಸಿದ್ದರು. ಅವರಿಗೆ ಯುದ್ಧ ಸೇವಾ ಪದಕ ನೀಡುವಂತೆ ನಾನು ಶಿಫಾರಸು ಮಾಡಿದ್ದೆ.`ದೇಶದ ಮೊದಲ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರಂತೆ ನಾನು ಕೂಡ ರಜಪೂತ ರೆಜಿಮೆಂಟ್‌ನ ಸೇನಾಧಿಕಾರಿ. ನನ್ನ ಮಗನೂ ರಜಪೂತ ರೆಜಿಮೆಂಟ್ ಅಧಿಕಾರಿಯಾಗಿ ಸದ್ಯ ಲೆಬನಾನ್‌ನಲ್ಲಿರುವ  ವಿಶ್ವಸಂಸ್ಥೆಯ ಕಾರ್ಯಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ. ಸಿಂಗ್ ಮತ್ತು ಅವರ ತಂದೆ ಕೂಡ ರಜಪೂತ ರೆಜಿಮೆಂಟ್‌ಗೆ ಸೇರಿದವರಾಗಿದ್ದಾರೆ. ಇದು ಒಂದು ರೀತಿ ನನ್ನ ಮತ್ತು ಸಿಂಗ್ ಅವರ ಸ್ನೇಹಕ್ಕೆ ಭಾವನಾತ್ಮಕ ಬೆಸುಗೆ ಉಂಟು ಮಾಡಿದೆ.`ಉತ್ತರಪ್ರದೇಶದ ಫತೇಗಡದಲ್ಲಿರುವ ರಜಪೂತ ರೆಜಿಮೆಂಟ್ ಸೆಂಟರ್‌ನಲ್ಲಿ ನಡೆಯುವ ವಾರ್ಷಿಕ ಪುನರ್‌ಮಿಲನ ಕಾರ್ಯಕ್ರಮಕ್ಕೆ ನಾನು ಹೋಗುತ್ತಿರುತ್ತೇನೆ. ಸಿಂಗ್ ಅವರೂ ಅಲ್ಲಿಗೆ ಬರುತ್ತಾರೆ. ಅದಲ್ಲದೇ ದೆಹಲಿ ಮತ್ತಿತರ ಕಡೆಗಳಲ್ಲಿ ನಡೆದ ಸಮಾರಂಭಗಳಲ್ಲಿಯೂ ನಾವಿಬ್ಬರು ಭೇಟಿ ಮಾಡಿದ್ದೇವೆ~.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry