ಸೇನಾ ಸಾಹಸಕ್ಕೆ ಮೈಮನ ಪುಳಕ!

7

ಸೇನಾ ಸಾಹಸಕ್ಕೆ ಮೈಮನ ಪುಳಕ!

Published:
Updated:

ಮೈಸೂರು: ಅಲ್ಲಿ ರೋಚಕತೆ ಇತ್ತು. ಯುದ್ಧ ಕೌಶಲ, ಶತ್ರು ಸೇನೆಯನ್ನು ಸೆದೆಬಡಿಯುವ ತಂತ್ರಗಾರಿಕೆ ಎಲ್ಲರಿಗೂ ಕರಗತವಾಗಿತ್ತು. ಸೈನಿಕರ ಸಾಹಸಕ್ಕೆ ಪ್ರೇಕ್ಷಕರ ಮೈಮನ ಪುಳಕಗೊಳ್ಳುತ್ತಿತ್ತು. ಎದೆ ನಡುಗಿಸುವ ಭಯಾನಕ ಯುದ್ಧ ಭೂಮಿಯಲ್ಲೂ ಸಂಗೀತದ ಸುಧೆ ತೊರೆಯಾಗಿ ಹರಿಯಿತು!ನಗರದ ಬನ್ನಿಮಂಟಪದಲ್ಲಿ ಹಮ್ಮಿಕೊಂಡಿರುವ `ನಿಮ್ಮ ಸೇನೆ ತಿಳಿಯಿರಿ' ಭಾರತೀಯ ಸೇನಾ ಮೇಳದ ಮೊದಲ ದಿನವಾದ ಶನಿವಾರ ಕಂಡು ಬಂದ ದೃಶ್ಯವಿದು. ಯುವ ಸಮೂಹವನ್ನು ಸೇನೆಗೆ ಸೆಳೆಯುವ ಉದ್ದೇಶದಿಂದ ಏರ್ಪಡಿಸಿರುವ ಮೇಳಕ್ಕೆ ಲೆಫ್ಟಿನೆಂಟ್ ಜನರಲ್ ವಿ.ಕೆ. ಪಿಳ್ಳೈ ಶನಿವಾರ ವಿಧ್ಯುಕ್ತ ಚಾಲನೆ ನೀಡಿದರು. ಹತ್ತಾರು ಸಾಹಸ ಕ್ರೀಡೆಗಳು, ವಿಭಿನ್ನ ಸಮರ ಕಲೆಗಳು ಮೈಸೂರಿಗರನ್ನು ಮಂತ್ರಮುಗ್ಧಗೊಳಿಸಿದವು.252 ವರ್ಷದ ಹಿಂದಿನ ಯುದ್ಧಭೂಮಿಯ ತಂತ್ರಗಳಿಂದ ಆರಂಭವಾದ ಪ್ರದರ್ಶನ ನೋಡುಗರಿಗೆ ವಿವಿಧ ಕಾಲ, ದೇಶದ ಸಮರಕಲೆಯ ಚಿತ್ರಣವನ್ನು ಕಟ್ಟಿಕೊಟ್ಟಿತು. ಕತ್ತಿ, ಗುರಾಣಿಯಿಂದ ಹೆಲಿಕಾಪ್ಟರ್‌ವರೆಗೆ ಬದಲಾದ ಯುದ್ಧದ ಮಾದರಿ ಅನಾವರಣಗೊಂಡವು. ಕುದುರೆ ಏರಿದ ಭಾರತೀಯ ಸೇನೆಯ ಸೇವಾದಳದ ಯೋಧರು ಪ್ರೇಕ್ಷಕರನ್ನು ರೋಮಾಂಚನಗೊಳಿಸಿದರು. ಜಿಪ್ಸಿ, ಬೈಕ್‌ಗಳ ಮೇಲೆ ಕುದುರೆ ಹಾರಿಸಿ ಚಾಕಚಕ್ಯತೆ ಮೆರೆದರು.ಮದ್ರಾಸ್ ರೆಜಿಮೆಂಟ್‌ನ ಸೈನಿಕರು ಭಾರತೀಯ ಪಾರಂಪರಿಕ ಸಮರ ಕಲೆಗಳನ್ನು ಅನಾವರಣಗೊಳಿಸಿದರು. ಕತ್ತಿ, ಗುರಾಣಿಯಿಂದ ಯುದ್ಧ ಮಾಡುವ ಕೇರಳದ `ಕಳರಿ ಪಯಟ್'ಗೆ ಎಲ್ಲರೂ ಮನಸೋತರು. ಈಟಿ, ದೊಣ್ಣೆ ವರಸೆ, ಬಳಕುವ ಕತ್ತಿ ಬೀಸುವ ರೀತಿ ಮೆಚ್ಚುಗೆಗೆ ಪಾತ್ರವಾಯಿತು.ಸಮರ ಸಾಹಸದ ಮಧ್ಯೆ `ವಂದೇ ಮಾತರಂ...' ಗೀತೆ ಝೇಂಕರಿಸಿತು. ಎ.ಆರ್. ರೆಹಮಾನ್ ಸಂಗೀತ ನಿರ್ದೇಶನದ `ಮಾ ತುಜೆ ಸಲಾಂ....' ಗೀತೆಯನ್ನು ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ಪ್ರಸ್ತುತಪಡಿಸಿತು.ಬಳಿಕ ಬನ್ನಿಮಂಟಪದ ಅಂಗಳಕ್ಕೆ ಅಡಿ ಇಟ್ಟ `ಆರ್ಮಿ ಬ್ಯಾಂಡ್'ನ 67 ಸೈನಿಕರು ಸಂಗೀತದ ಸುಧೆ ಹರಿಸಿದರು.`ಸಾರೆ ಝಹಾಂಸೆ ಅಚ್ಛಾ...' ಹಾಡಿಗೆ ಸೇನಾನಿಗಳು ಕುಣಿದು ಕುಪ್ಪಳಿಸಿದರು. ಮಾನಸಿಕ, ದೈಹಿಕ ದಣಿವು ನೀಗಿಸಿಕೊಳ್ಳಲು ಯೋಧರು ಕಲೆಯ ಮೊರೆ ಹೋಗುತ್ತಾರೆ ಎಂಬುದನ್ನು ಸಾಂಕೇತಿಕವಾಗಿ ಪ್ರಸ್ತುತಪಡಿಸಿದರು.ಸಾಂಸ್ಕೃತಿಕ ಕಾರ್ಯಕ್ರಮ ಮುಕ್ತಾಯವಾದ ಬೆನ್ನಲ್ಲೇ ಎಲ್ಲರ ಚಿತ್ತ ಬಾನೆತ್ತರಕ್ಕೆ ಹರಿಯಿತು. ವಾಯುಪಡೆಯ 301 ಯುದ್ಧ ಹೆಲಿಕಾಫ್ಟರ್ ಕ್ರೀಡಾಂಗಣದ ಮೇಲೆ ನಿಂತಾಗ ಸಭಿಕರ ಕರತಾಡನ ಮುಗಿಲು ಮುಟ್ಟಿತು.`ರೆಡ್ ಡೆವಿಲ್ಸ್'ನ ಹತ್ತು ಪ್ಯಾರಾ ಕಮಾಂಡರ್‌ಗಳು ಹಗ್ಗದ ಸಹಾಯದಿಂದ ಸರಸರನೆ ಕೆಳಗಿಳಿದರು. ಶಸ್ತ್ರ ಸನ್ನದ್ಧರಾಗಿ ಬಂದು ಯುದ್ಧಕ್ಕೆ ಸಜ್ಜಾದಾಗ ಯುದ್ಧಭೂಮಿಯ ಸನ್ನಿವೇಶ ಕಣ್ಮುಂದೆ ಬಂದಿತು.ಮೇಜರ್ ಎಸ್.ಎಸ್. ರಾಠೋಡ ನೇತೃತ್ವದ `ಟಾರ್ನೆಡೋಸ್' ತಂಡದ 54 ಸದಸ್ಯರು ಬೈಕ್‌ನಲ್ಲಿ ಸಾಹಸ ಮೆರೆದರು. ಬೈಕ್ ಮೇಲೆ ನಿಂತು, ಒಂದೇ ಬದಿ ಕುಳಿತು, ಮಲಗಿ ದ್ವಿಚಕ್ರ ವಾಹನ ಚಲಾಯಿಸಿದರು. ಹವಾಲ್ದಾರ್ ಪುರುಷೋತ್ತಮ್ ಬೈಕ್ ಮೇಲೆ ಏಣಿ ಹಾಕಿಕೊಂಡು ಮೇಲೇರಿದ ರೀತಿಗೆ ಎಲ್ಲರೂ ನಿಬ್ಬೆರಗಾದರು.60 ಕಿ.ಮೀ. ವೇಗದಲ್ಲಿ ಒಂದೇ ಕೇಂದ್ರ ಬಿಂದುವಿನ ಕಡೆಗೆ ಚಲಿಸಿದ 20 ಬೈಕ್‌ಗಳು ಸಮಾನ ಅಂತರದಲ್ಲಿ ಕತ್ತರಿ ಆಕಾರ ಸೃಷ್ಟಿಸಿದವು. ಇಟ್ಟಿಗೆ ಗೋಡೆ ಮುರಿದು, ಬೆಂಕಿಯ ರಿಂಗಿನಿಂದ ಬೈಕ್ ಸರಾಗವಾಗಿ ತೂರಿ ಬಂದಿತು.ತಂಡದಲ್ಲಿದ್ದ ಇಬ್ಬರು ವಿದೂಷಕರ ಚೇಷ್ಟೆ ಮಿಶ್ರಿತ ಸಾಹಸಕ್ಕೆ ಪ್ರೇಕ್ಷಕರು ಮನಸೋತರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry