ಶನಿವಾರ, ಜೂನ್ 19, 2021
28 °C

ಸೇವಾ ಖಾತರಿ: ಸಮರ್ಪಕ ಅನುಷ್ಠಾನಕ್ಕೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಗ್ರಾಮೀಣ ಮತ್ತು ನಗರ ಪ್ರದೇಶದ ಎಲ್ಲಾ ಬಡ ಜನರಿಗೆ ಸರ್ಕಾರದ ಸೌಲಭ್ಯಗಳು ನಿಗದಿತ ಅವಧಿಯೊಳಗೆ ತಲುಪಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ರಾಜ್‌ಕುಮಾರ್ ಖತ್ರಿ ಹೇಳಿದರು.ಸೋಮವಾರಪೇಟೆ ತಾಲ್ಲೂಕಿನ ಕೆದಕಲ್ ಗ್ರಾ.ಪಂ. ಕಚೇರಿಯಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ  ಅವರು ಮಾತನಾಡಿದರು.ಸರ್ಕಾರದ ಮಹತ್ವಾಕಾಂಕ್ಷೆಯ ಕರ್ನಾಟಕ ನಾಗರಿಕ ಸೇವಾ ಖಾತರಿ ಕಾಯಿದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಸಾರ್ವಜನಿಕರಿಗೆ ಸಕಾಲದಲ್ಲಿ ಸೌಲಭ್ಯಗಳನ್ನು ಒದಗಿಸುವಂತಾಗಬೇಕು ಎಂದರು.ಗ್ರಾಮೀಣ ಬಡಕೂಲಿ ಕಾರ್ಮಿಕರು ತಮ್ಮ ಮಕ್ಕಳ ವಿದ್ಯಾಭ್ಯಾಸ ಅಥವಾ ಸಾಲ-ಸೌಲಭ್ಯಕ್ಕಾಗಿ ಜಾತಿ, ಆದಾಯ, ಆರ್‌ಟಿಸಿ ಮತ್ತಿತರ ಪ್ರಮಾಣ ಪತ್ರಗಳನ್ನು ಪಡೆಯಲು ತಾಲ್ಲೂಕು ಕೇಂದ್ರಗಳಿಗೆ 30-40 ಕಿ.ಮೀಗಳಿಂದ ಆಗಮಿಸುತ್ತಾರೆ. ಇಂತಹ ಗಡಿ ಮತ್ತು ಕುಗ್ರಾಮಗಳ ನಾಗರಿಕರಿಗೆ ಕಾಲಮಿತಿಯಲ್ಲಿ ಪ್ರಮಾಣ ಪತ್ರ ಹಾಗೂ ಸೌಲಭ್ಯಗಳು ತಲುಪಬೇಕು ಎಂದು ಅವರು ಹೇಳಿದರು.ರಾಜ್ಯ ಹಾಗೂ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಯೋಜನೆಯಡಿ ಲೋಕೋಪಯೋಗಿ (30 ಕೋಟಿ ರೂಪಾಯಿ) ಮತ್ತು ಜಿ.ಪಂ.ಎಂಜಿನಿಯರಿಂಗ್ ವಿಭಾಗಕ್ಕೆ (20ಕೋಟಿ ರೂಪಾಯಿ) ಒಟ್ಟು 50 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ಮಾರ್ಚ್ ಅಂತ್ಯದೊಳಗೆ ಅನುದಾನವನ್ನು ಸದ್ಬಳಕೆ ಮಾಡಬೇಕು ಎಂದರು.ಜಿಲ್ಲೆಯ ಹಾಡಿಗಳಲ್ಲಿ ವಾಸಿಸುವ ಗಿರಿಜನರಿಗೆ ವಸತಿಯನ್ನು ಶೀಘ್ರದಲ್ಲಿ ಕಲ್ಪಿಸಬೇಕು. ಆ ದಿಸೆಯಲ್ಲಿ ಸಂಬಂಧಪಟ್ಟವರೊಡನೆ ಚರ್ಚಿಸಿ ಗಿರಿಜನರ ಇಚ್ಛೆಯಂತೆ ವಸತಿ ನಿರ್ಮಿಸಲು ಪೂರಕ ಸಹಕಾರ ಒದಗಿಸುವುದಾಗಿ ಅವರು ಹೇಳಿದರು.ಹಾಡಿಗಳಲ್ಲಿ ವಾಸಿಸುವ ಗಿರಿಜನರಿಗೆ ವಸತಿ ಸೌಲಭ್ಯ ಕಲ್ಪಿಸುವುದರ ಜೊತೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ ಮತ್ತಿತರ ಮೂಲಭೂತ ಸೌಲಭ್ಯಗಳನ್ನು ಅರಣ್ಯ ಹಕ್ಕು ಕಾಯ್ದೆಯಡಿ ಕಲ್ಪಿಸಬೇಕು ಎಂದರು.ಲೋಕೋಪಯೋಗಿ, ಜಿ.ಪಂ.ಎಂಜಿನಿಯರಿಂಗ್ ವಿಭಾಗ, ಸಾರ್ವಜನಿಕ ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಅರಣ್ಯ, ಯುವಜನ ಸೇವಾ ಮತ್ತು ಕ್ರೀಡಾ, ಜಲಾನಯನ ಮತ್ತಿತರ ಇಲಾಖೆ ಅಧಿಕಾರಿಗಳಿಂದ ಪ್ರಸಕ್ತ ಸಾಲಿನ ಪ್ರಗತಿ ಬಗ್ಗೆ ಮಾಹಿತಿ ಪಡೆದು ಪ್ರಗತಿಯ ಬಗ್ಗೆ ಪರಿಶೀಲನೆ ಮಾಡಬೇಕು ಎಂದರು. ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್.ಕೃಷ್ಣಪ್ಪ ಮಾತನಾಡಿ ಜಿಲ್ಲೆಯಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಬಿಡುಗಡೆಯಾದ ಅನುದಾನದ ಸಮರ್ಪಕವಾಗಿ ಬಳಕೆ ಮಾಡಲಾಗಿದೆ ಎಂದರು.ಗ್ರಾಮೀಣ ಪ್ರದೇಶದವರಿಗೆ ಕುಡಿಯುವ ನೀರು, ಶೌಚಾಲಯ, ಚರಂಡಿ ಸೌಲಭ್ಯಗಳು, ವಿದ್ಯುತ್ ಸಂಪರ್ಕ ಮತ್ತಿತರ ಮೂಲ ಸೌಲಭ್ಯಗಳನ್ನು ಹಂತಹಂತವಾಗಿ ಕಲ್ಪಿಸಲಾಗುತ್ತಿದೆ. ಕೃಷಿ, ತೋಟಗಾರಿಕೆ, ಹೈನುಗಾರಿಕೆ ಇಲಾಖೆಗಳ ಮೂಲಕ ಬಡಜನರಿಗೆ ವೈಯಕ್ತಿಕ ಸೌಲಭ್ಯ ಮತ್ತು ಸಹಾಯಧನ ನೀಡಲಾಗುತ್ತಿದೆ ಎಂದರು.ಉಪ ಅರಣ್ಯ ಸಂರಕ್ಷಣಾಧಿಕಾರಿ ಆನಂದ್ ಅವರು ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನ ಹಾಗೂ ಆನೆ ಮಾನವ ಸಂಘರ್ಷ ತಡೆ ಕಾರ್ಯಕ್ರಮಗಳ ಬಗ್ಗೆ ಉಸ್ತುವಾರಿ ಕಾರ್ಯದರ್ಶಿಯವರಿಗೆ ಮಾಹಿತಿ ನೀಡಿದರು.ಗ್ರಾ.ಪಂ.ಅಧ್ಯಕ್ಷರಾದ ಯು.ಎಂ.ಸೋಮಯ್ಯ. ಜಿಲ್ಲಾಧಿಕಾರಿ ಎನ್.ವಿ.ಪ್ರಸಾದ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಚಂದ್ರೇಗೌಡ ಹಾಗೂ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.