ಸೇವಾ ಮನೋಭಾವ ಮೈಗೂಡಿಸಿಕೊಳ್ಳಿ: ಸಿದ್ದರಾಜ

7

ಸೇವಾ ಮನೋಭಾವ ಮೈಗೂಡಿಸಿಕೊಳ್ಳಿ: ಸಿದ್ದರಾಜ

Published:
Updated:

ಯಾದಗಿರಿ: ಸಮಾಜ ಸೇವೆ ಎಂಬುದು ವಿದ್ಯಾರ್ಥಿ ದೆಸೆಯಿಂದಲೆ ಯುವಕರ ಮನದಲ್ಲಿ ಮೂಡಿದಾಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ತನಾರತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಡಾ.ಸಿದ್ದರಾಜ ರಡ್ಡಿ ಹೇಳಿದರು.ತಾಲ್ಲೂಕಿನ ಯಡ್ಡಳ್ಳಿ ಗ್ರಾಮದಲ್ಲಿ ಈಚೆಗೆ ಲಿಂಗೇರಿ ಕೋನಪ್ಪ ಸ್ಮಾರಕ ಸಂಸ್ಥೆಯ ಸಮಾಜ ಸೇವಾ ಕಾರ್ಯ ಅಧ್ಯಯನ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಒಂದು ವಾರದ ತರಬೇತಿ ಶಿಬಿರದಲ್ಲಿ ಮಾತನಾಡಿದರು.ಇಂದಿನ ಜಂಜಾಟದ ಜೀವನದಲ್ಲಿ ನಾವು ಸ್ವಾರ್ಥಿಗಳಾಗುತ್ತಿದ್ದೇವೆ. ನಾವು, ನಮ್ಮದು ಎಂಬುದನ್ನು ಬಿಟ್ಟರೆ ಮತ್ತಾವುದನ್ನು ಯೋಚಿಸುತ್ತಿಲ್ಲ.ಹೀಗಾಗಿ ಹೊರಜಗತ್ತಿನ ವಿವಿಧ ರಂಗಗಳುನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಮಾಜದ ಎಲ್ಲ ವರ್ಗದ ಸಮಸ್ಯೆಗಳಿಗೆ ಸ್ಪಂದಿಸುವುದರೊಂದಿಗೆ ಅವರ ನೋವು ನಲಿವುಗಳಲ್ಲಿ ಭಾಗಿಯಾದಾಗ ಮಾತ್ರ ನಾಗರಿಕರು ಎನ್ನಿಸಿಕೊಳ್ಳಬಹುದು ಎಂದರು.ಸಮಾಜ ಸೇವಾ ಅಧ್ಯಯನದ ವಿದ್ಯಾರ್ಥಿಗಳಿಗೆ ಯಡ್ಡಳ್ಳಿ ಗ್ರಾಮದಲ್ಲಿ ಏರ್ಪಡಿಸಲಾದ ಶಿಬಿರವು ಮುಂದಿನ ಜೀವನಕ್ಕೆ ಸಹಕಾರಿಯಾಗಲಿದೆ. ಶಾಂತಿ ಮತ್ತು ಪರಸ್ಪರ ಸೌಹಾರ್ದ ಭಾವನೆಯಿಂದ ಯುವ ಜನಾಂಗ ಒಂದಾಗಿ ಬಾಳಿದಾಗ ವಿವಿಧತೆಯಲ್ಲಿ ಏಕತೆಯನ್ನು ಕಾಣಬಹುದು ಎಂದು ಹೇಳಿದರು.ಉಪನ್ಯಾಸಕ ಡಾ.ಭೀಮರಾಯ ಲಿಂಗೇರಿ ಮಾತನಾಡಿ, ಇಂದಿನ ಯುವ ಜನಾಂಗ ದುಶ್ಚಟಗಳಿಗೆ ಅಂಟಿಕೊಳ್ಳುತ್ತಿರುವುದು ಕಳವಳಕಾರಿ ಸಂಗತಿ. ಅದನ್ನು ತಡೆಗಟ್ಟಲು ಇಂತಹ ಶಿಬಿರಗಳು ಸಹಕಾರಿಯಾಗಲಿವೆ. ಮಕ್ಕಳು ಬೆಳೆದು ಉನ್ನತ ವ್ಯಾಸಂಗ ಮಾಡಬೇಕು. ಪೋಷಕರ ಆಸೆಯನ್ನು ಪೂರೈಸುವುದು ಮಕ್ಕಳ ಕರ್ತವ್ಯ. ಈ ನಿಟ್ಟಿನಲ್ಲಿ ಯುವ ಪೀಳಿಗೆ ಯೋಚಿಸಬೇಕು ಎಂದರು.ವಿದ್ಯಾರ್ಥಿಗಳಾದ ದೇವರಾಜ ವರ್ಕನಳ್ಳಿ ಹಾಗೂ ತಂಡದಿಂದ ಸಾಮಾಜಿಕ ಪಿಡುಗುಗಳ ಬಗೆಗಿನ ನಾಟಕ ಪ್ರದರ್ಶಿಸಲಾಯಿತು.ಉಪನ್ಯಾಸಕರಾದ ಎಸ್.ಎಸ್ ನಾಯಕ್, ಲಿಂಗರಾಜ, ವಿದ್ಯಾರ್ಥಿಗಳಾದ ಬಸರಡ್ಡಿ, ಪ್ರದೀಪ, ಶಕುಂತಲಾ, ಸವಿತಾ, ಭಾಗ್ಯಶ್ರೀ, ಬಸ್ಸಮ್ಮ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry