ಸೇವೆಯೇ ಸಮಾಜ ಸೇವಕರ ಧ್ಯೇಯವಾಗಲಿ

7

ಸೇವೆಯೇ ಸಮಾಜ ಸೇವಕರ ಧ್ಯೇಯವಾಗಲಿ

Published:
Updated:

ರಾಯಚೂರು: ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಆತ ಹೊಂದಿರುವ ಹಕ್ಕು ಹಾಗೂ ಅದರ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಸ್ವಯಂ ಪ್ರೇರಿತ ಸೇವಕರ ಉದ್ದೇಶವಾಗಬೇಕು. ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನತೆಗೆ ಹೆಚ್ಚಿನ ಅರಿವು ಮೂಡಿಸುವ ದಿಶೆಯಲ್ಲಿ ಗಮನಹರಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನಾಗರಾಜ ಬಿ.ಕುಲಕರ್ಣಿ ಹೇಳಿದರು.ಶುಕ್ರವಾರ ಇಲ್ಲಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಆಯೋಜಿಸಿದ್ದ ಕಾನೂನು ಸ್ವಯಂ ಪ್ರೇರಿತ ಸೇವಕರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾನೂನಿನ ನೆರವು ಕಡುಬಡವನ ನೆರವಿಗೆ ಸದಾಕಾಲ ಇರುತ್ತದೆ ಎಂಬುವಂಥ ಅಂಶವನ್ನು ಮನವರಿಕೆ ಮಾಡಿಕೊಡಬೇಕು. ಸಮಾಜದ ಸಮಸ್ತ ವರ್ಗಕ್ಕೆ ಕಾನೂನು ಅರಿವು-ನೆರವು ಕಾರ್ಯಕ್ರಮದ ಮೂಲಕ ಕಾನೂನಿನ ಮಹತ್ವದ ಬಗ್ಗೆ ತಿಳಿಸಿಕೊಡಲು ಪ್ರಾಧಿಕಾರದ ಸಮಿತಿಗಳು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಹೇಳಿದರು.ಬಾಲಕಾರ್ಮಿಕ, ಬಾಲ್ಯವಿವಾಹ, ಭ್ರೂಣಹತ್ಯೆ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ಹಿಂಸೆ ಹಾಗೂ ಅನಕ್ಷರತೆಯಂಥ ಸಮಸ್ಯೆಗಳನ್ನು ಹೋಗಲಾಡಿಸುವ ದಿಶೆಯಲ್ಲಿ ಪ್ರಯತ್ನಿಸಬೇಕು ಎಂದು ತಿಳಿಸಿದರು. ಕಾನೂನು ರಿತ್ಯ ಅನುಸೂಚಿತ ಜಾತಿ ಹಾಗೂ ಬುಡಕಟ್ಟು ಜನಾಂಗಕ್ಕೆ ದೊರಕುವ ಸೌಲಭ್ಯಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.ನ್ಯಾಯಾಧೀಶರಾದ ಜಿ.ಎಂ.ಮೂಲಿಮನಿ, ಗ್ರಾಹಕರ ನ್ಯಾಯಾಲಯದ ಅಧ್ಯಕ್ಷ ಪಂಪಾಪತಿ, ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಜೀವನರಾವ್ ಕುಲಕರ್ಣಿ, ತ್ವರಿತ ನ್ಯಾಯಾಲಯದ ನ್ಯಾಯಾಧೀಶರಾದ ವಿ.ಎಸ್ ಧಾರವಾಡಕರ್, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಭಾನುರಾಜ ವಕೀಲ, ಸರ್ಕಾರಿ ವಕೀಲ ಹಾಗೂ ಮತ್ತಿತರರಿದ್ದರು. ಎನ್.ಶಿವಶಂಕರ ವಕೀಲ ನಿರೂಪಿಸಿದರು.       

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry