ಮಂಗಳವಾರ, ಮಾರ್ಚ್ 2, 2021
23 °C

ಸೇವೆಯ ಸುಖದಲ್ಲಿ ವಿವೇಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೇವೆಯ ಸುಖದಲ್ಲಿ ವಿವೇಕ್‌

ಚಿತ್ರರಂಗದಲ್ಲಿ ಒಂದು ದಶಕಕ್ಕೂ  ಹೆಚ್ಚು ಕಾಲ ಪೂರೈಸಿದ ನಟ ವಿವೇಕ್‌ ಒಬೆರಾಯ್‌ ತಮ್ಮ ವೃತ್ತಿ ಬದುಕಿನಲ್ಲಿ ಸೋಲು, ಗೆಲುವು ಎರಡನ್ನೂ ಕಂಡಿದ್ದಾರೆ. ಅಗತ್ಯವಿರುವವರಿಗೆ ನೆರವು ನೀಡಿದಾಗ ಸಿಗುವ ತೃಪ್ತಿ ಯಾವ ಪ್ರಶಸ್ತಿ ಪಡೆದಾಗಲೂ ಸಿಗುವುದಿಲ್ಲ ಎಂದು ಅವರು ಹೇಳಿದ್ದಾರೆ.‘ಸಿನಿಮಾದಲ್ಲಿ ನಟಿಸುವುದು ನನ್ನ ಮೆಚ್ಚಿನ ಕೆಲಸಗಳಲ್ಲೊಂದು. ಆದರೆ ಬದುಕಿಗೊಂದು ಅರ್ಥ ಸಿಕ್ಕಿದ್ದೇ ನೊಂದವರ ಮೊಗದಲ್ಲಿ ನಗು ಅರಳಿಸಲು ಶ್ರಮಪಟ್ಟಾಗ. ಜತೆಗೆ ಅವರ ಕಣ್ಣೊರೆಸಿದಾಗ’ ಎಂದು ವಿವೇಕ್‌ ಆತ್ಮಾಭಿಮಾನದ ಮಾತಾಡಿದ್ದಾರೆ.ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ವಿವೇಕ್‌ ಅವರು, 2004ರಲ್ಲಿ ಸುನಾಮಿಗೆ ತತ್ತರಿಸಿದ ತಮಿಳುನಾಡಿನ ಗ್ರಾಮವೊಂದರ ಮರು ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.ಆ ಸಂದರ್ಭದಲ್ಲಿ ಇವರಿಗೆ ಅಮಿತಾಭ್ ಬಚ್ಚನ್‌, ಐಶ್ವರ್ಯ ರೈ, ಸಲ್ಮಾನ್‌ ಖಾನ್‌ ಹಾಗೂ ಅಮೀರ್‌ ಖಾನ್‌ ಕೂಡ ಜತೆಯಾಗಿದ್ದರು.

ಉತ್ತರ ಪ್ರದೇಶದಲ್ಲಿ ‘ಪ್ರಾಜೆಕ್ಟ್‌ ದೇವಿ’ ಎಂಬ ಹೆಸರಿನಡಿಯಲ್ಲಿ ‘ವೃಂದಾವನ’ ಎಂಬ ಶಾಲೆ ಆರಂಭಿಸಿದ್ದಾರೆ. ಇದರ ಮೂಲಕ ಅವಕಾಶವಂಚಿತ ಹಾಗೂ ಕುಟುಂಬದಿಂದ ದೂರ ಉಳಿದ ಹೆಣ್ಣುಮಕ್ಕಳ ಶೈಕ್ಷಣಿಕ ನೆರವಿಗೆ ನಿಂತಿರುವ ವಿವೇಕ್‌, ಆಗಾಗ ಇಲ್ಲಿಗೆ ಭೇಟಿ ನೀಡಿ ಇಲ್ಲಿನ ಕಾರ್ಯಕ್ರಮಗಳನ್ನು ಖುದ್ದು ಪರಿಶೀಲಿಸುತ್ತಾರೆ.

ವಿವೇಕ್‌ ಅವರ ಈ ಸಮಾಜ ಸೇವೆಯನ್ನು ಅವರ ಕುಟುಂಬವರ್ಗ ಬಹುವಾಗಿ ಮೆಚ್ಚಿದೆ. ‘ನನ್ನ ಕುಟುಂಬವರ್ಗ ಸದಾ ನನ್ನೊಂದಿಗಿದೆ. ನನ್ನ ತಾಯಿ ಕಳೆದ ಮೂರು ದಶಕಗಳಿಂದ ಕ್ಯಾನ್ಸರ್‌ ಪೀಡಿತರಿಗಾಗಿ ದುಡಿಯುತ್ತಿದ್ದಾರೆ. ನನ್ನ ತಂದೆ ಸುರೇಶ್‌ ಒಬೆರಾಯ್‌ ಕೊಳಚೆ ಪ್ರದೇಶದ ಮಕ್ಕಳ ಶಿಕ್ಷಣಕ್ಕಾಗಿ ಹೋರಾಡುತ್ತಿದ್ದಾರೆ. ಇಂಥದ್ದೊಂದು ಪರಿಸರದಲ್ಲಿ ಬೆಳೆದ ನಾನು ಅದನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದೇನಷ್ಟೇ’ ಎಂದಿದ್ದಾರೆ ವಿವೇಕ್‌.‘ದಿ ಬಾಡಿ ಶಾಪ್‌’ ಎಂಬ ಸೌಂದರ್ಯವರ್ಧಕ ಪ್ರಸಾಧನ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ವಿವೇಕ್‌, ಅದರ ಮೂಲಕ ಬರುವ ಹಣವನ್ನು ಸಮಾಜ ಸೇವೆಗೆ ಬಳಸುವುದಾಗಿ ತಿಳಿಸಿದ್ದಾರೆ. ಇದರ ಜತೆಯಲ್ಲೇ ಫುಡ್‌ ಫಾರ್‌ ಲೈಫ್‌ ವೃಂದಾವನ್‌ (ಎಫ್‌ಎಫ್‌ಎಲ್‌ವಿ) ಎಂಬ ಅಭಿಯಾನ ಆರಂಭಿಸಿದ್ದು, ಇದರಲ್ಲಿ 100 ಬಾಲಕಿಯರಿಗೆ ವ್ಯಾಪಾರ, ಮಾರುಕಟ್ಟೆ ಕುರಿತು ತರಬೇತಿ ನೀಡುವ ಗುರಿ ಹೊಂದಿದ್ದಾರೆ.‘ಮಹಿಳಾ ಸಬಲೀಕರಣದ ದಿಸೆಯಲ್ಲಿ ಸಾಕಷ್ಟು ಅವಕಾಶಗಳು ಮಹಿಳೆಯರಿಗೆ ಇವೆ. ಆದರೆ ಅವರಲ್ಲಿ ಬಹುತೇಕರಿಗೆ ಸರಿಯಾದ ಮಾರ್ಗದರ್ಶನವೇ ಸಿಗುವುದಿಲ್ಲ. ಈ ನಿಟ್ಟಿನಲ್ಲಿ ಸೇತುವಾಗಿ ಕೆಲಸ ಮಾಡುವ ಉದ್ದೇಶ ನನ್ನದು’ ಎನ್ನುವುದು ವಿವೇಕ್‌ ಅವರ ಯೋಜನೆ.

ಇನ್ನು ವಿವೇಕ್‌ ಅವರ ಸಿನಿಮಾ ಯಾನದತ್ತ ಹೊರಳಿದರೆ, ಈವರೆಗೂ ಅವರು ನಾಯಕ, ಖಳನಾಯಕ ಎರಡೂ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕೆಲವೊಮ್ಮೆ ಲವರ್‌ ಬಾಯ್ ಆಗಿಯೂ ಹೆಂಗಳೆಯರ ಮನಸ್ಸು ಗೆದ್ದಿದ್ದಾರೆ.‘ಸಕಾರಾತ್ಮಕ ಹಾಗೂ ನಕಾರಾತ್ಮಕ ಪಾತ್ರಗಳು ಎಂಬ ಬೇಧ ನನಗಿಲ್ಲ. ಪಾತ್ರ ಉತ್ತಮವಾಗಿದ್ದರೆ ಅಷ್ಟೇ ಸಾಕು’ ಎಂದೆನ್ನುವ ವಿವೇಕ್‌, ಸದ್ಯ ಸಿಕ್ಕಿರುವ ಸಮಯವನ್ನು ಮಗ ವಿವಾನ್‌ ಹಾಗೂ ಪತ್ನಿ ಪ್ರಿಯಾಂಕಾ ಆಳ್ವಾ ಅವರೊಂದಿಗೆ ಕಳೆಯುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.