ಸೇವೆ ಕಾಯಂಗೆ ನೆಮ್ಮದಿ ಕೇಂದ್ರ ನೌಕರರ ಆಗ್ರಹ

7

ಸೇವೆ ಕಾಯಂಗೆ ನೆಮ್ಮದಿ ಕೇಂದ್ರ ನೌಕರರ ಆಗ್ರಹ

Published:
Updated:

ಮೈಸೂರು: ಸೇವೆಯನ್ನು ಕಾಯಂ ಮಾಡಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎನ್ನುವುದು ಸೇರಿದಂತೆ ಪ್ರಮುಖ ನಾಲ್ಕು  ಬೇಡಿಕೆಗಳನ್ನು ಈಡೇರಿಸುವಂತೆ ನಗರದ ದಸರಾ ವಸ್ತು ಪ್ರದರ್ಶನ ಮೈದಾನದ ಬಿ.ವಿ. ಕಾರಂತ ರಂಗಮಂದಿರದಲ್ಲಿ  ಭಾನುವಾರ ನಡೆದ ನೆಮ್ಮದಿ ಕೇಂದ್ರಗಳ ನೌಕರರ ಸಂಘದ ಪ್ರಥಮ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಸರ್ಕಾರವನ್ನು ಒತ್ತಾಯಿಸಲಾಯಿತು.ಐದು ವರ್ಷಗಳಿಂದ ನೆಮ್ಮದಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಸರ್ಕಾರ ಕೇವಲ ರೂ. 2670 ಗೌರವಧನ ನೀಡುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜೀವನ ನಡೆಸುವುದು ಕಷ್ಟವಾಗಿದೆ. ಆದ್ದರಿಂದ `ಸಮಾನ ಕೆಲಸಕ್ಕೆ ಸಮಾನ ವೇತನ~ ನೀಡಬೇಕು. ಕನಿಷ್ಠ ರೂ. 7 ರಿಂದ 8 ಸಾವಿರ ಗೌರವಧನ ನೀಡಬೇಕು.ನೌಕರರ ನೆಮ್ಮದಿ ಕಾಪಾಡಲು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯನ್ನು ಕೈಬಿಡಬೇಕು. ನೆಮ್ಮದಿ ಕೇಂದ್ರಗಳ ಗುತ್ತಿಗೆದಾರರು ನೌಕರರಿಂದ ಸಂಗ್ರಹಿಸಿರುವ ರೂ. 15 ಕೋಟಿ ಪಿಎಫ್ ಹಣವನ್ನು ನೌಕರರ ಖಾತೆಗಳಿಗೆ ಜಮಾ ಮಾಡಿಸಬೇಕು. ನೆಮ್ಮದಿ ಕೇಂದ್ರಗಳ ಹೊರಗುತ್ತಿಗೆಯನ್ನು ಕೂಡಲೇ ಕೈಬಿಡಬೇಕು ಎಂದು ಸಮಾವೇಶದಲ್ಲಿ ಒತ್ತಾಯಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ದಿನಗೂಲಿ ನೌಕರರ ಹೋರಾಟಗಾರ ಡಾ.ಕೆ.ಎಸ್.ಶರ್ಮ, `ನೆಮ್ಮದಿ ಕೇಂದ್ರಗಳನ್ನು ರಾಷ್ಟ್ರೀಕರಣಗೊಳಿಸಬೇಕು. ಪಿಪಿಪಿ ಮಾದರಿಯನ್ನು ಕೈಬಿಡಬೇಕು. ಎಲ್ಲ ನೌಕರರ ಸೇವೆಯನ್ನು ಕಾಯಂ ಮಾಡಬೇಕು. ತನೌಕರರ ಪಿಎಫ್ ಹಣವನ್ನು ಗುತ್ತಿಗೆದಾರರಿಂದ ವಾಪಸು ಕೊಡಿಸಲು ಸರ್ಕಾರ ಮುಂದಾಗಬೇಕು~ ಎಂದು ಒತ್ತಾಯಿಸಿದರು.ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿಯಿಂದ ಮೆರವಣಿಗೆ ಹೊರಟ ನೌಕರರು ಜೆಎಲ್‌ಬಿ ರಸ್ತೆ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ  ರಸ್ತೆ, ಬಸವೇಶ್ವರ ವೃತ್ತದ ಮೂಲಕ ವಸ್ತು ಪ್ರದರ್ಶನ ಮೈದಾನ ತಲುಪಿದರು. ಸೇವೆ ಕಾಯಂಗೆ ಆಗ್ರಹಿಸಿ ಘೋಷಣೆ ಕೂಗಿದರು. ರಾಜ್ಯದ ವಿವಿಧೆಡೆಗಳಿಂದ ಒಟ್ಟು 1500ಕ್ಕೂ ಹೆಚ್ಚು ನೌಕರರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry