ಸೋಮವಾರ, ಮಾರ್ಚ್ 8, 2021
20 °C
106 ದಿನಗಳಲ್ಲಿ 14,800 ಕಿ.ಮೀ. ಪ್ರಯಾಣ

ಸೈಕಲ್‌ನಲ್ಲಿ ದೇಶ ಪರ್ಯಟನೆ ಯುವ ಎಂಜಿನಿಯರ್‌ ಸಾಹಸ

ವಿನಾಯಕ ಭಟ್‌ Updated:

ಅಕ್ಷರ ಗಾತ್ರ : | |

ಸೈಕಲ್‌ನಲ್ಲಿ ದೇಶ ಪರ್ಯಟನೆ ಯುವ ಎಂಜಿನಿಯರ್‌ ಸಾಹಸ

ಬೆಳಗಾವಿ: ಇದು ಸಾಮಾನ್ಯ ಸೈಕಲ್‌ ಮೇಲೆ ದೇಶ ಸುತ್ತಿ ದಾಖಲೆ ನಿರ್ಮಿಸಿದ ಮಹಾರಾಷ್ಟ್ರದ ಪುಣೆಯ ಯುವಕನ ಯಶೋಗಾಥೆ. ವೃತ್ತಿಯಲ್ಲಿ ಎಂಜಿನಿಯರ್‌ ಆಗಿದ್ದರೂ, ಸೈಕಲ್‌ನಲ್ಲಿ ದೇಶ ಸುತ್ತುವುದು ಇವರ ಪ್ರವೃತ್ತಿ. ಕೇವಲ 110 ದಿನಗಳಲ್ಲಿ 15,300 ಕಿ.ಮೀ. ದೂರ ಕ್ರಮಿಸುವ ಮೂಲಕ ‘ಗಿನ್ನಿಸ್‌ ಬುಕ್‌ ಆಫ್‌ ವರ್ಲ್ಡ್ ರೆಕಾರ್ಡ್ಸ್‌’ ತಮ್ಮ ಹೆಸರನ್ನು ದಾಖಲಿಸಲು ಹೊರಟಿರುವ ಸಾಹಸಿಯ ಕಥೆ.ಹೌದು! ಈ ಸಾಹಸಿಯ ಹೆಸರು ಪುಣೆಯ ಸಂತೋಷ ಆರ್‌. ಹೋಲಿ. 2015ರ ಅಕ್ಟೋಬರ್‌ 13ರಂದು ಪುಣೆಯಿಂದ ಹೊರಟ ಈ ಸೈಕ್ಲಿಸ್ಟ್‌ ದೇಶದ 18 ರಾಜ್ಯಗಳಲ್ಲಿ ಸುತ್ತಿ ಗುರುವಾರ ಮಧ್ಯಾಹ್ನ ಬೆಳಗಾವಿಗೆ ಬಂದು ತಲುಪಿದರು. ಕಳೆದ 106 ದಿನಗಳಲ್ಲಿ 14,800 ಕಿ.ಮೀ ದೂರ ಕ್ರಮಿಸಿದ್ದರೂ ಅವರ ಮೊಗದಲ್ಲಿ ಸ್ವಲ್ಪವೂ ದಣಿವಾಗಿರುವುದು ಕಂಡು ಬರಲಿಲ್ಲ. ಇನ್ನು ನಾಲ್ಕು ದಿನಗಳಲ್ಲಿ ಗುರಿಯನ್ನು ತಲುಪಬೇಕು ಎಂಬ ಉತ್ಸಾಹದ ಬುಗ್ಗೆ ಚಿಮ್ಮುತ್ತಿತ್ತು.

ಪುಣೆಯ ಅಲ್ಫಾ ಲವಲ್‌ ಇಂಡಿಯಾ ಕಂಪೆನಿಯಲ್ಲಿ ಮೆಕ್ಯಾನಿಕಲ್‌ ಎಂಜಿನಿಯರ್‌ ಆಗಿರುವ ಸಂತೋಷ ತಮ್ಮ ಖುಷಿಗಾಗಿ ಸೈಕಲ್‌ ಏರಿ ದೇಶ ಪರ್ಯಟನೆ ಮಾಡುತ್ತಾರೆ.‘ಪರಿಸರ ಸ್ನೇಹಿಯಾದ ಸೈಕಲ್‌ ಅನ್ನು ನಿತ್ಯದ ಜೀವನದಲ್ಲಿ ಬಳಸಬೇಕು ಎಂಬ ಬಗ್ಗೆ ಜಾಗೃತಿ ಮೂಡಿಸಲು ಸೈಕಲ್‌ನಲ್ಲಿ ದೇಶ ಸುತ್ತುವ ಸಾಹಸ ಕೈಗೆತ್ತಿಕೊಂಡಿದ್ದೇನೆ. ಸಾಮಾನ್ಯವಾಗಿ ಬಹು ದೂರದ ಪ್ರಯಾಣ ಕೈಗೊಳ್ಳಲು ದುಬಾರಿ ಬೆಲೆಯ ಗೇರ್‌ ಸೈಕಲ್‌ ಬೇಕು ಎಂಬ ನಂಬಿಕೆ ಜನರಲ್ಲಿದೆ. ಆದರೆ, ಕೇವಲ ₹ 3,500 ಬೆಲೆಯ ಸಾಮಾನ್ಯ ಸೈಕಲ್‌ನಲ್ಲೂ ದೇಶ ಸುತ್ತಿ ದಾಖಲೆ ನಿರ್ಮಿಸಲು ಸಾಧ್ಯವಿದೆ ಎಂಬುದನ್ನು ತೋರಿಸಿ ಗ್ರಾಮೀಣ ಯುವಕರಿಗೆ ಪ್ರೇರಣೆ ನೀಡಲು ದೇಶ ಸಂಚಾರ ಆರಂಭಿಸಿದ್ದೇನೆ’ ಎಂದು ಸಂತೋಷ ‘ಪ್ರಜಾವಾಣಿ’ಗೆ ತಿಳಿಸಿದರು.‘ಈ ಹಿಂದೆ 144 ದಿನಗಳಲ್ಲಿ 14,500 ಕಿ.ಮೀ. ದೂರವನ್ನು ಸೈಕಲ್‌ನಲ್ಲಿ ಕ್ರಮಿಸಿರುವುದು ದಾಖಲಾಗಿತ್ತು. ಇದನ್ನು ಮುರಿಯಬೇಕು ಎಂಬ ಆಸೆಯಿಂದ ಒಬ್ಬನೇ ಸೈಕಲ್‌ ಏರಿ ಹೊರಟಿದ್ದೇನೆ. ಆರು ತಿಂಗಳ ಮೊದಲೇ ಇದಕ್ಕೆ ಯೋಜನೆ ರೂಪಿಸಿದ್ದೆ. 100  ದಿನಗಳಲ್ಲಿ 14,000 ಕಿ.ಮೀ. ದೂರ ಕ್ರಮಿಸಬೇಕು ಎಂಬ ಸವಾಲನ್ನು ಸ್ವೀಕರಿಸಿದ್ದು, ಅದನ್ನು ಸಮರ್ಥವಾಗಿ ಎದುರಿಸಿದ ಸಮಾಧಾನವಿದೆ. ಒಂದು ದಿನಕ್ಕೆ ಸರಾಸರಿ 140 ಕಿ.ಮೀ ದೂರ ಕ್ರಮಿಸುತ್ತಿದ್ದೇನೆ. ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಯಾತ್ರೆ ಕೈಗೊಳ್ಳುತ್ತೇನೆ’ ಎಂದು ಅವರು ಹೇಳಿದರು.‘ಸೈಕಲ್‌ಗೆ ಜಿಪಿಎಸ್‌ ಯಂತ್ರ ಅಳವಡಿಸಿದ್ದೇನೆ. ಹೀಗಾಗಿ ಎಷ್ಟು ದೂರು ಕ್ರಮಿಸಿದ್ದೇನೆ ಎಂಬ ಬಗ್ಗೆ ದಾಖಲಾಗುತ್ತಿದೆ. ದಾಖಲೆ ನಿರ್ಮಿಸಲು ಒಮ್ಮೆ ಸಾಗಿದ ಮಾರ್ಗದಲ್ಲಿ ಮತ್ತೆ ಚಲಿಸುವಂತಿಲ್ಲ. ಹೀಗಾಗಿ ಸಾಮಾನ್ಯ ಸೈಕಲ್‌ ಹೊಡೆಯಲು ಯೋಗ್ಯ ಇರುವ 18 ರಾಜ್ಯಗಳನ್ನು ಆಯ್ಕೆ ಮಾಡಿ ಮಾರ್ಗ ಸಿದ್ಧಪಡಿಸಿಕೊಂಡಿದ್ದೇನೆ. ಜನವರಿ 31ರಂದು ಬೆಂಗಳೂರಿನಲ್ಲಿ ಸೈಕಲ್‌ ಯಾತ್ರೆಯನ್ನು ಕೊನೆಗೊಳಿಸುತ್ತಿದ್ದೇನೆ. ಬಳಿಕ ನಾನು 14,500 ಕಿ.ಮೀ. ದೂರ ಸಂಚಾರ ಕೈಗೊಂಡ ದಾಖಲೆಗಳನ್ನು ‘ಗಿನ್ನಿಸ್‌ ಬುಕ್‌ ಆಫ್‌ ವರ್ಲ್ಡ್ ರೆಕಾರ್ಡ್ಸ್‌’ಗೆ ಕಳುಹಿಸಿಕೊಡುತ್ತೇನೆ’ ಎಂದು ಮಾಹಿತಿ ನೀಡಿದರು.‘ಮೊದಲು ನಾನು ದೇಹದಾರ್ಢ್ಯಪಟುವಾಗಿದ್ದೆ. ಐದು ವರ್ಷಗಳ ಹಿಂದೆ ಸೈಕಲ್‌ ಹುಚ್ಚು ಹಿಡಿಯಿತು. 2013ರ ಜನವರಿಯಲ್ಲಿ ಸ್ವಾಮಿ ವಿವೇಕಾನಂದರ 150ನೇ ಜಯಂತಿ ಅಂಗವಾಗಿ ಪುಣೆಯಿಂದ ಕನ್ಯಾಕುಮಾರಿಗೆ 1,800 ಕಿ.ಮೀ ದೂರವನ್ನು ಕೇವಲ 13 ದಿನಗಳಲ್ಲಿ ಕ್ರಮಿಸಿದ್ದೆ. 2014ರ ನವೆಂಬರ್‌ನಲ್ಲಿ ಜಮ್ಮುವಿನಿಂದ ಕನ್ಯಾಕುಮಾರಿವರೆಗಿನ 3,500 ಕಿ.ಮೀ ದೂರವನ್ನು 22 ದಿನಗಳಲ್ಲಿ ಕ್ರಮಿಸಿದ್ದು ‘ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್‌’ನಲ್ಲಿ ದಾಖಲಾಗಿದೆ’ ಎಂದು ನಗೆ ಬೀರಿದರು.‘ಸಾಮಾನ್ಯ ಸೈಕಲ್‌ನಲ್ಲಿ ಇಷ್ಟು ದೂರ ಕ್ರಮಿಸಲು ಫಿಟ್ನೆಸ್‌ ಅತಿ ಮುಖ್ಯವಾಗಿದೆ. ನಾನು ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿರುವುದರಿಂದಲೇ ಒಬ್ಬನೇ ಇಷ್ಟು ದೂರ ಸಂಚಾರ ಕೈಗೊಳ್ಳಲು ಸಾಧ್ಯವಾಗಿದೆ. ದೇಶ ಪರ್ಯಟನೆ ವೇಳೆ ಜನರೊಂದಿಗೆ ಆತ್ಮೀಯವಾಗಿ ಮಾತನಾಡಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಮರಾಠಿ ಜೊತೆಗೆ ಕನ್ನಡ, ಹಿಂದಿ, ತಮಿಳು, ತೆಲುಗು, ಇಂಗ್ಲಿಷ್‌ ಭಾಷೆಗಳನ್ನೂ ಕಲಿತಿದ್ದೇನೆ. ಗ್ರಾಮೀಣ ಭಾಗದ ಯುವಕರು ಸೈಕಲ್‌ ಮೇಲೆ ದೇಶ ಪರ್ಯಟನೆ ಕೈಗೊಳ್ಳುವ ಸಾಹಸಗಳನ್ನು ಕೈಗೊಳ್ಳಬೇಕು’ ಎನ್ನುತ್ತಾರೆ ಸಂತೋಷ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.