ಸೈಕಲ್‌ ಉಚಿತ...ರಿಪೇರಿ ಖಚಿತ !

7

ಸೈಕಲ್‌ ಉಚಿತ...ರಿಪೇರಿ ಖಚಿತ !

Published:
Updated:

ಮೊಳಕಾಲ್ಮುರು: ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ವರ್ಷವೂ ಸರ್ಕಾರದ ಉಚಿತ ಸೈಕಲ್‌ ಫಲಾನುಭವಿ ವಿದ್ಯಾರ್ಥಿಗಳು ಸೈಕಲ್‌ ಹತ್ತುವ ಮುನ್ನ ಕಡ್ಡಾಯ ವಾಗಿ ದುರಸ್ಥಿ ಮಾಡಿಸಬೇಕಾದ ಅನಿವಾರ್ಯತೆ ಎದುರಾಗಿದೆ.ಈ ಸಮಸ್ಯೆ ಆರಂಭದಿಂದ ಇದ್ದರೂ ಶಿಕ್ಷಣ ಇಲಾಖೆ ಅಧಿಕಾರಿಗಳು ತಾಲ್ಲೂಕು ಕೇಂದ್ರಗಳಲ್ಲಿ ಸೈಕಲ್‌ ಗಳನ್ನು ಜೋಡಣೆ ಮಾಡುವಾಗ ಯಾವುದೇ ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಕಳಪೆ ಜೋಡಣೆ ಮಾಡಲಾಗಿದೆ ಎನ್ನಲಾಗಿದೆ. ಈ ಮೂಲಕ ಸೈಕಲ್‌ ದುರಸ್ತಿಯಿಂದಾಗಿ ಪೋಷಕರ ಜೇಬಿಗೆ ಕತ್ತರಿ ಬಿದ್ದಿದೆ ಎಂಬ ಮಾತು ಕೇಳಿಬಂದಿದೆ.ಕ್ಷೇತ್ರ ಶಿಕ್ಷಣಾಧಿಕಾರಿ ಅಬ್ದುಲ್‌ ಬಷೀರ್‌ ಸುದ್ದಿಗಾರರೊಂದಿಗೆ ಮಾತನಾಡಿ, ಈ ವರ್ಷ ತಾಲ್ಲೂಕಿನ 40 ಶಾಲೆಗಳಿಗೆ 2,012 ಸೈಕಲ್‌ಗಳು ಸರಬರಾಜು ಆಗಿವೆ. ರಾಜ್ಯಮಟ್ಟದಲ್ಲಿ ಟೆಂಡರ್‌ ಆಗುವ ಹಿನ್ನೆಲೆಯಲ್ಲಿ ಫಿಟ್ಟಿಂಗ್‌ ಸಮಸ್ಯೆ ನಮಗೆ ಸಂಬಂಧಿಸಿಲ್ಲ. ತಮಿಳುನಾಡು ಮೂಲದ ಕಾರ್ಮಿಕರು ಜೋಡಣೆ ಮಾಡಿದ್ದಾರೆ. ಜೋಡಣೆ ಮಾಡುವ ಸಮಯದಲ್ಲಿ ವೀಕ್ಷಣೆಗೆ ಇಲಾಖೆ ಸಿಬ್ಬಂದಿ ನಿಯೋಜನೆ ಮಾಡಿಲ್ಲ ಎಂದು ತಿಳಿಸಿದರು.ಕೊಂಡ್ಲಹಳ್ಳಿಯ ಸೈಕಲ್‌ ದುರಸ್ತಿ ಅಂಗಡಿಯ ಬುಡೇನ್‌ ಮಾತನಾಡಿ, ವಿದ್ಯಾರ್ಥಿನಿಯರಿಗೆ ನೀಡಿರುವ ಸೈಕಲ್‌ಗಳಿಗೆ ಸೆಂಟರ್‌ ಸ್ಟ್ಯಾಂಡ್ ನೀಡಲಾಗಿದೆ. ಆದರೆ ಪೋರ್ಕ್‌ಬಾಲ್ಸ್, ಬಾಟಮ್‌ ಬಾಲ್ಸ್‌, ಸ್ಪ್ರಿಂಗ್ಸ್‌ಗಳನ್ನು ಹಾಕಿಲ್ಲ ಹಾಗೂ ಕಳಪೆ ಫಿಟ್ಟಿಂಗ್‌ ಮಾಡಲಾಗಿದೆ. ಆದ್ದರಿಂದ ಉಪಯೋಗಕ್ಕೂ ಮುನ್ನ ಕಡ್ಡಾಯ ದುರಸ್ತಿ ಮಾಡಬೇಕಿದೆ, ಇದಕ್ಕೆ ರೂ. 180–250 ಖರ್ಚು ಭರಿಸಬೇಕಿದೆ ಎಂದು ತಿಳಿಸಿದರು.ಜತೆಗೆ ಕೆಲ ಶಾಲೆಗಳಲ್ಲಿ ಸೈಕಲ್‌ಗಳ ಮೇಲೆ ಕ್ರಮಸಂಖ್ಯೆ ಹಾಗೂ ವಿದ್ಯಾರ್ಥಿಗಳ ಹೆಸರು ಬರೆಸಲು ರೂ. 30– 50ರವರೆಗೆ ಪಡೆಯಲಾಗುತ್ತಿದೆ ಎನ್ನಲಾಗಿದೆ. ಇದೆಲ್ಲಾ ಸೇರಿ ಪೋಷಕರು ಉಚಿತ ಸೈಕಲ್‌ಗೆ ರೂ. 250– 300 ಖರ್ಚು ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಮುಂದಿನ ದಿನಗಳಲ್ಲಾದರೂ ಸೈಕಲ್‌ ಜೋಡಣೆ ಸಮಯದಲ್ಲಿ ಸಿಬ್ಬಂದಿ ನೇಮಕ ಮಾಡುವ ಮೂಲಕ ಸಮಸ್ಯೆ ಮರುಕಳಿಸದಂತೆ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆಗೆ ಸೂಚಿಸಬೇಕು ಎಂದು ಪೋಷಕರು ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry