ಸೈಕಲ್‍ನಲ್ಲಿ 40 ಸಾವಿರ ಕಿ.ಮೀ ಕ್ರಮಿಸಿದ ನಾಗಪಟ್ಟಣದ ಅನ್ಬುಚಾರ್ಲ್ಸ್

7

ಸೈಕಲ್‍ನಲ್ಲಿ 40 ಸಾವಿರ ಕಿ.ಮೀ ಕ್ರಮಿಸಿದ ನಾಗಪಟ್ಟಣದ ಅನ್ಬುಚಾರ್ಲ್ಸ್

Published:
Updated:
ಸೈಕಲ್‍ನಲ್ಲಿ 40 ಸಾವಿರ ಕಿ.ಮೀ ಕ್ರಮಿಸಿದ ನಾಗಪಟ್ಟಣದ ಅನ್ಬುಚಾರ್ಲ್ಸ್

ಆನೇಕಲ್: ಆರು ವರ್ಷಗಳಿಗೂ ಹೆಚ್ಚುಕಾಲ ಭಾರತದಾದ್ಯಂತ 20 ರಾಜ್ಯಗಳಲ್ಲಿ ಸುಮಾರು 40 ಸಾವಿರ ಕಿ.ಮೀ. ದೂರವನ್ನು ಸೈಕಲ್‌ನಲ್ಲಿ ಸಂಚರಿಸಿ ಸಾವಿರಾರು ಗ್ರಾಮಗಳಲ್ಲಿ ಪರಿಸರ ಜಾಗೃತಿಯ ಸಂದೇಶ ಸಾರಿರುವ ತಮಿಳುನಾಡಿನ ನಾಗಪಟ್ನಂ ಮೂಲದ ಅನ್ಬುಚಾರ್ಲ್ಸ್ ಅವರ ಸೈಕಲ್ ಯಾತ್ರೆ ಭಾನುವಾರ ಆನೇಕಲ್‌ಗೆ ಆಗಮಿಸಿತು.

ಸಮಾಜ ಶಾಸ್ತ್ರ ಪದವೀದರರಾದ ಅನ್ಬುಚಾರ್ಲ್ಸ್ ಅವರು ಅವಿವಾಹಿತರು. ಪರಿಸರ-ಪ್ರಕೃತಿಯೇ ತನ್ನ ಕುಟುಂಬ ಎಂದು ಭಾವಿಸಿದ್ದಾರೆ. ತಮಿಳುನಾಡಿನಲ್ಲಿ 2004ರಲ್ಲಿ ಸುನಾಮಿ ಅಪ್ಪಳಿಸಿ, ಜನರು ಅನುಭವಿಸಿದ ಕಷ್ಟವನ್ನು ಕಣ್ಣಾರೆ ಕಂಡ ಚಾರ್ಲ್ಸ್ ಅವರು ಪರಿಸರ ಸಂರಕ್ಷಣೆಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ತೀರ್ಮಾನ ಕೈಗೊಂಡು ಸೈಕಲ್ ಯಾತ್ರೆ ಆರಂಭಿಸಿದ್ದಾಗಿ ಹೇಳುತ್ತಾರೆ.

2005 ಏಪ್ರಿಲ್ 22ರಂದು ನಾಗಪಟ್ನಂನಿಂದ ಸೈಕಲ್ ಯಾತ್ರೆ ಆರಂಭಿಸಿ, ಯಶಸ್ವಿ ಪಯಣ ಮುಂದುವರಿಸಿದ್ದಾರೆ. ಕಾಶ್ಮೀರ, ಉತ್ತರ ಪ್ರದೇಶ, ಬಿಹಾರ, ಒರಿಸ್ಸಾ, ಆಂಧ್ರ, ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ 20 ರಾಜ್ಯಗಳಲ್ಲಿ ಯಾತ್ರೆ ಪೂರ್ಣಗೊಳಿಸಿರುವ ಇವರು ಈಶಾನ್ಯ ರಾಜ್ಯಗಳವರೆಗೆ ಸಾಗಿ ಅಸ್ಸಾಂನಲ್ಲಿ ಯಾತ್ರೆ ಪೂರ್ಣಗೊಳಿಸುವುದಾಗಿ ನುಡಿದರು. ಪ್ರತಿದಿನ 20ರಿಂದ 30 ಕಿ.ಮೀ. ದೂರ ಕ್ರಮಿಸುತ್ತಿರುವ ಇವರಿಗೆ ಭವಿಷ್ಯದಲ್ಲಿ ಸೈಕಲ್ ಮೇಲೆ ವಿಶ್ವ ಪರ್ಯಟನೆ ಮಾಡುವ ಯೋಜನೆಯಿದೆ.

ಸೈಕಲ್‌ನಲ್ಲಿಯೇ ಎರಡು ಪೆಟ್ಟಿಗೆಗಳನ್ನು ಜೋಡಿಸಿಕೊಂಡು, ಅಗತ್ಯ ಸಾಮಗ್ರಿಗಳನ್ನು ಇಟ್ಟುಕೊಂಡು ಯಾತ್ರೆ ಮುಂದುವರಿಸಿದ್ದಾರೆ. ಗ್ರಾಮಗಳಲ್ಲಿ ಶಾಲೆಗಳಿಗೆ ಭೇಟಿ ನೀಡಿ ಪರಿಸರ ಸಂರಕ್ಷಣೆ, ವಾಯುಮಾಲಿನ್ಯ, ಜಾಗತಿಕ ತಾಪಮಾನ, ನೀರಿನ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ನೀಡುತ್ತಾರೆ. ಶಾಲೆಗಳಲ್ಲಿಯೇ ಊಟ ಮಾಡಿ ಮುಂದೆ ಸಾಗುತ್ತಾರೆ. ಜನಸಂದಣಿ ಇರುವ ಸ್ಥಳಗಳಲ್ಲಿ  ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಉಪನ್ಯಾಸ ಚಿತ್ರಗಳನ್ನು ಪ್ರದರ್ಶಿಸುತ್ತಾರೆ. 

ಹಲವು ರಾಜ್ಯಗಳಲ್ಲಿ ಅಲ್ಲಿಯ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಪರಿಸರ ಸಂರಕ್ಷಣೆಯ ಬಗ್ಗೆ ಮನವಿಗಳನ್ನು ಸಲ್ಲಿಸಿದ್ದಾರೆ.

ನಮ್ಮ ರಾಜ್ಯದ ಮುಖ್ಯಮಂತ್ರಿಯನ್ನೂ ಸಹ ಎರಡು-ಮೂರು ದಿನಗಳಲ್ಲಿ ಭೇಟಿಯಾಗುವುದಾಗಿ ತಿಳಿಸಿದರು. ಸಂಘ ಸಂಸ್ಥೆಗಳು ನೀಡುವ ಹಣದಿಂದ ಸೈಕಲ್ ಬಿಡಿಭಾಗಗಳ ಖರೀದಿ ಹಾಗೂ ರಿಪೇರಿ ಮಾಡಿಸಿಕೊಳ್ಳುವ ಇವರು ಅತ್ಯಂತ ಕಡಿಮೆ ವೆಚ್ಚದಲ್ಲಿ ತಮ್ಮ ಯಾತ್ರೆಯನ್ನು ಮುಂದುವರಿಸಿದ್ದಾರೆ.

`ಎರಡು ಮಹಾಯುದ್ಧಗಳು ಪ್ರಪಂಚದಲ್ಲಿ ನಡೆದಿವೆ. ಮುಂದಿನ ಮಹಾಯುದ್ಧ ನೀರಿಗಾಗಿ ನಡೆಯಲಿದೆ ಎಂದು ಹೇಳುವ ಚಾರ್ಲ್ಸ್ ನೀರಿನ ಸಂರಕ್ಷಣೆ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕು~ ಎಂದರು. ಜನರು ಶ್ರಮಜೀವನಕ್ಕೆ ತಿಲಾಂಜಲಿ ನೀಡುತ್ತಿದ್ದಾರೆ, ಇದರಿಂದ ಪರಿಸರಕ್ಕೆ ಹಾನಿಯಾಗುತ್ತಿದೆ ಎಂಬ ಆತಂಕವನ್ನು ವ್ಯಕ್ತಪಡಿಸಿದರು.

ಕನಕಪುರ-ಹಾರೋಹಳ್ಳಿ ಮುಖಾಂತರ ಆನೇಕಲ್‌ಗೆ ಭಾನುವಾರ ಬೆಳಗ್ಗೆ ಆಗಮಿಸುವ ವೇಳೆಗೆ ಇವರ ಸೈಕಲ್ ಬ್ರೇಕ್ ಕಿತ್ತುಹೋಗಿತ್ತು. ರಿಪೇರಿಗಾಗಿ ಸೈಕಲ್ ಶಾಪ್ ಹುಡುಕಾಡುತ್ತಿದ್ದಾಗ ಕುತೂಹಲಗೊಂಡ ಪಟ್ಟಣದ ಜಿಎಂಆರ್ ಎಲೈಟ್ ಅಕಾಡೆಮಿಯ ಸದಸ್ಯರು ಹಾಗೂ ಜಿಗಣಿಯ ಹೊಸಬೆಳಕು ಟ್ರಸ್ಟ್‌ನವರು ಚಾರ್ಲ್ಸ್ ಅವರನ್ನು ಭೇಟಿ ಮಾಡಿ ಪಟ್ಟಣದ ಬಸ್‌ಸ್ಟ್ಯಾಂಡ್ ಸಮೀಪ ಜಾಗೃತಿ ಕಾರ್ಯಕ್ರಮ ನಡೆಸಿದ ನಂತರ ಅವರಿಗೆ ಶುಭ ಹಾರೈಸಿ ಬೀಳ್ಕೊಡಲಾಯಿತು.

ಜಿಎಂಆರ್ ಎಲೈಟ್ ಅಕಾಡೆಮಿಯ ಜಿ.ಮುನಿರಾಜು, ಹೊಸಬೆಳಕು ಟ್ರಸ್ಟ್‌ನ ರಾಮಕೃಷ್ಣ, ಕುಮಾರ್ ಮತ್ತಿತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry