ಸೈಕಲ್ ಬದಲು ಹಣ ಬೇಡ

7

ಸೈಕಲ್ ಬದಲು ಹಣ ಬೇಡ

Published:
Updated:

ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿ ಆಗಿದ್ದಾಗ ಜಾರಿಗೆ ತಂದಿದ್ದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರಿಗೆ ಉಚಿತ ಸೈಕಲ್ ಯೋಜನೆ ಹಳ್ಳಿಯ ಹೆಣ್ಣುಮಕ್ಕಳಲ್ಲಿ ಎಳವೆಯಲ್ಲಿಯೇ ಆತ್ಮವಿಶ್ವಾಸ ಮೂಡಿಸುವ ಪ್ರಾಯೋಗಿಕ ಕಾರ್ಯಕ್ರಮ. ಮೊದಲು ಹೆಣ್ಣುಮಕ್ಕಳಿಗೆ ಮಾತ್ರವಿದ್ದ ಈ ಯೋಜನೆ ನಂತರ ಗಂಡುಮಕ್ಕಳಿಗೂ ವಿಸ್ತರಣೆಯಾಗಿದೆ.ಹಾಜರಾತಿಯಲ್ಲಿ ಪ್ರಗತಿಯೂ ಸೇರಿದಂತೆ ಗ್ರಾಮೀಣ ಶಾಲೆಗಳ ಪರಿಸರದಲ್ಲಿ ಸ್ವಾವಲಂಬನೆಯ ವಾತಾವರಣ ಮೂಡಿಸಿದ್ದ ಯೋಜನೆ ಈಚಿನ ವರ್ಷಗಳಲ್ಲಿ ಬಂದ ಉತ್ತಮ ಜನೋಪಯೋಗಿ ಕಾರ್ಯಕ್ರಮವೇ ಆಗಿದೆ. ಈ ಕಾರ್ಯಕ್ರಮದ ಉಪಯುಕ್ತತೆಯನ್ನು ಗಮನಿಸಿ ಬಿಹಾರ ಕೂಡ ಶಾಲಾಮಕ್ಕಳಿಗೆ ಉಚಿತವಾಗಿ ಸೈಕಲ್ ನೀಡುವ ಚಿಂತನೆ ನಡೆಸಿದೆ. ಆದರೆ ಸರ್ಕಾರದ ಎಲ್ಲ ಖರೀದಿಗಳಲ್ಲಿ ಆಗುವಂತೆ ಸೈಕಲ್ ಕೊಳ್ಳುವುದರಲ್ಲಿಯೂ ಭ್ರಷ್ಟಾಚಾರ ಮತ್ತು ಕಳಪೆ ಗುಣಮಟ್ಟದ ಬಗ್ಗೆ ಆರೋಪಗಳು ಕೇಳಿಬಂದು  ಸದನ ಸಮಿತಿಯ ರಚನೆಗೆ ಕಾರಣವಾಯಿತು.

 

ನೂರಾರು ಕೋಟಿ ರೂಪಾಯಿ ವೆಚ್ಚದ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪಗಳ ಪರಿಶೀಲನೆ ನಡೆಸಿರುವ ಸದನ ಸಮಿತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಉಚಿತ ಸೈಕಲ್ ಯೋಜನೆಗೆ ಸಂಬಂಧಿಸಿ ಆರಂಭಶೂರತ್ವ ತೋರಿದ ಸರ್ಕಾರ, ನಂತರ ಉತ್ಸಾಹ ಕಳೆದುಕೊಂಡು ಈಗ ವಿದ್ಯಾರ್ಥಿಗಳಿಗೆ ಸೈಕಲ್ ಬದಲಿಗೆ ಹಣ ನೀಡುವುದಾಗಿ ತೀರ್ಮಾನ ತೆಗೆದುಕೊಂಡಿದೆ. ಇದು ಅಸಮರ್ಥನೀಯ ನಿರ್ಧಾರ. ಯೋಜನೆಯ ಸ್ವರೂಪವನ್ನು ಬದಲಿಸಹೊರಟಿರುವುದು ಇಂಥ ಹೊಣೆಯನ್ನು ನಿರ್ವಹಿಸಲು ತಾನು ಅಸಮರ್ಥ ಎಂದು ಸರ್ಕಾರ ತೋರಿಸಿಕೊಂಡಂತಾಗಿದೆ.ಸೈಕಲ್‌ಗೆ ಬದಲಾಗಿ ಹಣ ನೀಡುವ ಪ್ರಸ್ತಾಪದಿಂದ ಸರ್ಕಾರದ ಜವಾಬ್ದಾರಿಯೇನೂ ಕಡಿಮೆಯಾಗುವುದಿಲ್ಲ. ಸೈಕಲ್‌ಗೆ ನಿಗದಿಪಡಿಸಿದ ಹಣ ಎಲ್ಲಿಯೂ ಸೋರಿಕೆಯಾಗದೆ ಅರ್ಹ ವಿದ್ಯಾರ್ಥಿಗೇ ತಲುಪಿಸುವ ಮತ್ತು  ಈ ಹಣವನ್ನು ವಿದ್ಯಾರ್ಥಿಗಳು ಸೈಕಲ್‌ಅನ್ನೇ ಕೊಳ್ಳಲು ಬಳಸಿದ್ದಾರೆಂದು ನೋಡಿಕೊಳ್ಳುವ ಹೊಣೆ ಇಲಾಖೆಯದಾಗುತ್ತದೆ.

 

ಹಾಗೆ ಖಚಿತಪಡಿಸದಿದ್ದರೆ ಸೈಕಲ್‌ಗಾಗಿ ರೂಪಿಸಿದ ಯೋಜನೆಯ ಉದ್ದೇಶವೇ ವಿಫಲವಾಗುತ್ತದೆ. ಸರ್ಕಾರದ ಉನ್ನತ ಮಟ್ಟದಲ್ಲಿ ಸೈಕಲ್ ಕೊಳ್ಳುವಾಗ ನಡೆದ ವ್ಯವಹಾರದಲ್ಲಿ ಸದನ ಸಮಿತಿಯ ರಚನೆಯನ್ನು ಆಹ್ವಾನಿಸುವಷ್ಟು ಭ್ರಷ್ಟಾಚಾರ ನಡೆಸಿರುವ ಆರೋಪಗಳು ಬಂದಿರುವಾಗ  ಸುಮಾರು ಆರು ಲಕ್ಷ ವಿದ್ಯಾರ್ಥಿಗಳಿಗೆ ತಲಾ 2,250 ರೂಪಾಯಿನಂತೆ ನಗದು ಹಣ ನೀಡುವ ಪ್ರಕ್ರಿಯೆ ಭ್ರಷ್ಟಾಚಾರಮುಕ್ತವಾಗಿರುವುದೆಂದು ಹೇಳುವುದು ಕಷ್ಟ.

 

ಸೈಕಲ್ ಕೊಂಡು ಹಂಚುವ ಕೆಲಸವನ್ನು ತಪ್ಪಿಸಿಕೊಳ್ಳಲು ಹಲವು ಬಗೆಯ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳಲು ಸರ್ಕಾರ ಹೊರಟಿರುವುದು ವಿವೇಕದ ಕ್ರಮವಲ್ಲ. ಸೀರೆ, ಲಂಗಗಳನ್ನು ಹಂಚುವ ಅನುತ್ಪಾದಕ ಯೋಜನೆಗಳಿಗಿಂತ ಶಾಲಾಮಕ್ಕಳಿಗೆ ಸೈಕಲ್ ವಿತರಣೆ ಪ್ರಯೋಜನಕಾರಿ. ಶಾಲಾಮಕ್ಕಳಿಗೆ ಸೈಕಲ್ ಕೊಂಡು ವಿತರಿಸುವ ಕೆಲಸವನ್ನೂ ನಿರ್ವಹಿಸಲಾಗದಿದ್ದರೆ ಅದು ಸರ್ಕಾರದ ಸಾಮರ್ಥ್ಯವನ್ನೇ ಶಂಕಿಸುವಂತೆ ಆಗುತ್ತದೆ. ಈಚಿನ ವರ್ಷಗಳಲ್ಲಿ ಜಾರಿಯಾಗಿರುವ ಒಂದು ಒಳ್ಳೆಯ ಕಾರ್ಯಕ್ರಮ ಸರ್ಕಾರದ ಹೊಣೆಗೇಡಿತನದ ಕಾರಣ ಹಾದಿ ತಪ್ಪುವುದು ಬೇಡ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry