ಸೈಕಲ್ ಮಂತ್ರವ ಜಪಿಸೋ ಮನುಜ...

7

ಸೈಕಲ್ ಮಂತ್ರವ ಜಪಿಸೋ ಮನುಜ...

Published:
Updated:
ಸೈಕಲ್ ಮಂತ್ರವ ಜಪಿಸೋ ಮನುಜ...

ಜುಮ್ಮನೆ ತಿರುಗಬಹುದಾದ ಕಾರು, ಬಹುರಾಷ್ಟ್ರೀಯ ಕಂಪೆನಿಯೊಂದರ ಬಹುಮಹಡಿ ಕಟ್ಟಡ, ಒಳಗಿನ ತಣ್ಣನೆ ಹವೆ, ಕೈ ತುಂಬ ಸಂಬಳ, ಬೇಕೆಂದಾಗ ವಿದೇಶ ಪ್ರವಾಸ, ಒಂದು ಹುದ್ದೆಯಿಂದ ಮತ್ತೊಂದು ಹುದ್ದೆಗೆ ಏರುವ ಅವಕಾಶ... ಈ ಎಲ್ಲ ಎಲ್ಲವನ್ನೂ ಬಿಟ್ಟು ನಡೆದಿದ್ದರು ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್ ಎಚ್.ಆರ್.ಮುರಳಿ.

ನಂಬಲಸಾಧ್ಯವಾದರೂ ಇದು ಸತ್ಯ. ಮೈಸೂರಿನ ಎಸ್‌ಜೆಸಿಇ ಕಾಲೇಜಿನಲ್ಲಿ ಬಿಇ ಓದುತ್ತಿದ್ದ ಸಮಯ. ಬೈಕೊಂದು ಡಿಕ್ಕಿ ಹೊಡೆದು ಅವರ ಕಾಲು ಮುರಿದು ಹೋಯಿತು. ದಿಕ್ಕು ತೋಚದ ಸ್ಥಿತಿ. ವರ್ಷ ಉರುಳಿದರೂ ಕಾಲು ಮೊದಲಿನಂತಾಗುತ್ತಿಲ್ಲ. ಆಗ ವೈದ್ಯರು ಹೇಳಿಕೊಟ್ಟದ್ದು ಸೈಕಲ್ ತುಳಿಯುವ ಮಂತ್ರವನ್ನು. ಇಷ್ಟರಲ್ಲಾಗಲೇ ಪೆಟ್ರೋಲ್ ಕುಡಿದು ಉನ್ಮತ್ತವಾಗಿ ತೂರಾಡುವ ವಾಹನಗಳ ಬಗ್ಗೆ ವೈರಾಗ್ಯ ಮೂಡಿತ್ತು. ಮನುಷ್ಯ ಮನುಷ್ಯರ ನಡುವಿನ ಸಂಘರ್ಷದಂತೆಯೇ ಯಂತ್ರ ಮನುಷ್ಯರ ನಡುವೆಯೂ ಸಂಘರ್ಷ ನಡೆಯುತ್ತಿದೆಯಲ್ಲಾ ಅನ್ನಿಸಿತ್ತು.

ಪ್ಯಾರಿಸ್‌ನಲ್ಲಿ...

ಎಂಜಿನಿಯರಿಂಗ್ ಪದವಿ ಪಡೆದ ಮೇಲೆ ಎಲ್ಲರಂತೆ ಅವರೂ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿಂದ ಅವರ ಪ್ಯಾರಿಸ್ ಪಯಣ ಆರಂಭವಾಯಿತು. ಕೆಲಸದ ಮೇಲೆ ಹೋದ ಅವರಿಗೆ ಪ್ಯಾರಿಸ್ ಸುತ್ತುವಾಸೆ. ಒಂದು ದಿನ ಅಲ್ಲಿನ ಮೆಟ್ರೊ ರೈಲಿನಲ್ಲಿ ಸಂಚರಿಸುತ್ತಿದ್ದಾಗ ಯಹೂದಿ ಯುವಕನೊಬ್ಬನ ಕೈಯಲ್ಲಿ ಭಾರತಕ್ಕೆ ಸಂಬಂಧಿಸಿದ ಪುಸ್ತಕ ಇರುವುದನ್ನು ಕಂಡರು. ತಮ್ಮನ್ನು ಪರಿಚಯಿಸಿಕೊಂಡರು. ಆ ಗೆಳೆಯನಲ್ಲಿ ಪ್ಯಾರಿಸ್ ನೋಡುವ ಇಂಗಿತ ತೋಡಿಕೊಂಡರು. ಆತನೂ ಇವರಂತೆಯೇ ಉತ್ಸಾಹಿ. ಮಹಾತ್ಮಗಾಂಧಿ, ರವೀಂದ್ರನಾಥ ಟ್ಯಾಗೋರ್,  ಮುಂತಾದವರನ್ನೆಲ್ಲಾ ಓದಿಕೊಂಡಿದ್ದ ಭಾರತೀಯನೊಬ್ಬ ಸಿಕ್ಕಿದ್ದು ಆತನಿಗೆ ಭಾರತವೇ ಸಿಕ್ಕಷ್ಟು ಖುಷಿಯಾಯಿತು. ಮರು ಮಾತಿಲ್ಲದೆ ಪ್ಯಾರಿಸ್ ತೋರಿಸಲು ಮುಂದಾದ. ಆದರೆ ಇಬ್ಬರ ನಡುವೆ ಒಂದು ಒಪ್ಪಂದ ಏರ್ಪಟ್ಟಿತ್ತು. ಅದು ಸೈಕಲ್ ಪ್ರವಾಸದ ಮೂಲಕ ಪ್ಯಾರಿಸ್ ಅವಲೋಕನ. ಬಾಡಿಗೆಗೆ ಸೈಕಲ್ ದೊರೆಯಿತು. ಹೋಗುತ್ತಾ ಹೋಗುತ್ತಾ ಆ ಯುವಕ ತಮ್ಮ ತಾತಂದಿರು ಪಟ್ಟ ಕಷ್ಟಗಳನ್ನು, ಯಹೂದಿಯರನ್ನು ಹಿಂಸಿಸಿದ ಸ್ಥಳಗಳನ್ನು ತೋರಿಸಿದ. ಆತ ಅದನ್ನೆಲ್ಲಾ ಹೇಳುತ್ತಿದ್ದರೆ ಇವರಿಗೆ ರೋಮಾಂಚನ. ಸೈಕಲ್ ಸವಾರಿ ನಡುವೆ ಇತಿಹಾಸವನ್ನೇ ಹೊಕ್ಕ ಅನುಭವ. 

ಅಲ್ಲಿಂದ ದೇಶಕ್ಕೆ ಮರಳಿದ ಮುರಳಿಗೆ ಮತ್ತೆಂದೂ ಕೆಲಸಕ್ಕೆ ಹೋಗಬೇಕು ಅನ್ನಿಸಲಿಲ್ಲ. ಮನದ ತುಂಬಾ ಪ್ಯಾರಿಸ್‌ನ ಅಚ್ಚುಕಟ್ಟಾದ ರಸ್ತೆಗಳು, ಸೈಕಲ್ ಪಥಗಳು ಹಾಗೂ ಬಗೆ ಬಗೆಯ ಸೈಕಲ್ ಕುಣಿಯುತ್ತಿದ್ದವು. ಅಪ್ಪ ರಾಮನಾಥ್ ಸರ್ಕಾರದ ಉನ್ನತ ಹುದ್ದೆಯಲ್ಲಿದ್ದವರು. ಮಗ ಕೆಲಸ ಬಿಟ್ಟದ್ದು ಅವರಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ನೀನು ಯಾಕೆ ಎಲ್ಲರಂತಲ್ಲ? ಎಂದು ಪ್ರಶ್ನಿಸುತ್ತಿದ್ದರು. ಆಗ ಮುರಳಿ ನೀಡುತ್ತಿದ್ದ ಉತ್ತರ: ಎಲ್ಲರೂ ಕೆಲಸಕ್ಕೆ ಹೋದರೆ ಸೈಕಲ್ ಬಗ್ಗೆ ಧ್ಯಾನಿಸುವವರು ಯಾರು?

ಕೃಷಿ, ನಗರ ಯೋಜನೆ, ನೀರಿನ ಬಳಕೆ, ಕನ್ನಡ ಸಾಫ್ಟ್‌ವೇರ್ ಹೀಗೆ ಅನೇಕ ಸಾಧ್ಯತೆಗಳ ಹುಡುಕಾಟದಲ್ಲಿದ್ದ ಅವರನ್ನು ಕಾಡಿದ್ದು ಅಡ್ಡಾದಿಡ್ಡಿ ಬೆಳೆಯುತ್ತಿರುವ ನಗರಗಳು. ಲಂಡನ್, ಪ್ಯಾರಿಸ್‌ಗೆ ಹೋಲಿಸಿದರೆ ಬೆಂಗಳೂರು ಬದಲಾಗಬೇಕಾದುದು ಬಹಳಷ್ಟಿತ್ತು. ಮಕ್ಕಳ ಹಿತವನ್ನು ಮನಸ್ಸಿನಲ್ಲಿಟ್ಟು ನಗರವನ್ನು ರೂಪಿಸಿಲ್ಲವೇಕೆ ಎಂಬ ಪ್ರಶ್ನೆ ಕಾಡತೊಡಗಿತು. ಮಕ್ಕಳಿಗೆ ಒಳ್ಳೆಯ ಗಾಳಿ, ಆಹಾರ ಹಾಗೂ ಓಡಾಟಕ್ಕೆ ಅನುಕೂಲವಾಗುವಂಥ ಅಂಶಗಳ ಅಭಾವ ಅವರನ್ನು ಕಾಡಿತು.

ಬೈಸಿಕಲ್ ಬೀದಿ

ಗುಬ್ಬಿ ಲ್ಯಾಬ್ಸ್‌ನ ಡಾ. ಎಚ್.ಎಸ್.ಸುಧೀರ ಅದಾಗಲೇ ಬೆಂಗಳೂರಿನ ಬೆಳವಣಿಗೆ ಕುರಿತು ಸಂಶೋಧನೆಯಲ್ಲಿ ತೊಡಗಿದ್ದರು. ಆಗ ಪರಿಚಯವಾದ ಮುರಳಿ ಸೈಕಲ್ ಬಳಕೆ ಪ್ರಚಾರ ಮಾಡುವ ಕುರಿತು ಯೋಜನೆ ರೂಪಿಸಲು ಮುಂದಾದರು. ಅದೇ ಹೊತ್ತಿಗೆ ಕೇಂದ್ರದ ನಗರ ಭೂಸಾರಿಗೆ ನಿರ್ದೇಶನಾಲಯ ಕೂಡ ಸಾರಿಗೆ ಕುರಿತು ಹೊಸ ಚಿಂತನೆಗಳ ಹುಡಕಾಟದಲ್ಲಿತ್ತು. ಅನೇಕ ಗೆಳೆಯರು ಸೇರಿ ಬೆಂಗಳೂರಿನಲ್ಲಿ ಪ್ರತ್ಯೇಕ ಸೈಕಲ್ ಪಥ ನಿರ್ಮಿಸಲು ಯೋಜನೆ ರೂಪಿಸಿದ್ದಾರೆ. ಜಯನಗರದ ಸುತ್ತಮುತ್ತಲಿನ ಸುಮಾರು 45 ಕಿ.ಮೀ ಉದ್ದದ ರಸ್ತೆಯನ್ನು ಸೈಕಲ್ ಪಥಕ್ಕೆ ಸೂಚಿಸಲಾಗಿದೆ. ಯೋಜನೆ ಈಗ ನಿರ್ದೇಶನಾಲಯದ ಅಂಗಳದಲ್ಲಿದ್ದು ಕಾರ್ಯರೂಪಕ್ಕೆ ಬರುವುದಷ್ಟೇ ಬಾಕಿ. ಮಡಿವಾಳ ಕೆರೆಯ ಸುತ್ತ ಸೈಕಲ್ ಪಥ ನಿರ್ಮಾಣಕ್ಕೆ ಕೂಡ ಸಿದ್ಧತೆ ನಡೆದಿದೆ. ಇದಕ್ಕೆ ನಿರ್ದೇಶನಾಲಯದ ಸಮ್ಮತಿ ಕೂಡ ದೊರೆತಿದೆ. ಸುಮಾರು ನಾಲ್ಕುಕೋಟಿ ರೂಪಾಯಿ ವೆಚ್ಚದ ಯೋಜನೆಯಿದು.

ಮುರಳಿ ಅವರೊಂದಿಗೆ ಪ್ರೊ. ಅಶ್ವಿನ್ ಮಹೇಶ್, ಪ್ರದೀಪ್ ಬಾಣಾವರ, ಸುಧೀರ, ಲಾವಣ್ಯ ಕೇಶವಮೂರ್ತಿ ಸೇರಿ ರೂಪಿಸಿರುವ ಯೋಜನೆ `ನಮ್ಮ ಸೈಕಲ್~. ಅದು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸೈಕಲ್ ವಿನಿಮಯ ಮಾಡುವ ಕಾರ್ಯಕ್ರಮ. ಸಾರ್ವಜನಿಕ ಸಾರಿಗೆಯಂತೆಯೇ ಸಾರ್ವಜನಿಕ ಸೈಕಲ್‌ಗಳನ್ನು ಒದಗಿಸುವುದು ಕಾರ್ಯಕ್ರಮದ ಉದ್ದೇಶ. ಜ್ಞಾನಭಾರತಿ ಸುತ್ತಮುತ್ತಲಿನ ಹತ್ತು ನಿಲ್ದಾಣಗಳಲ್ಲಿ 200 ಸೈಕಲ್‌ಗಳನ್ನು ಬಾಡಿಗೆ ನೀಡಲು ಯೋಜನೆ ರೂಪಿಸಲಾಗಿದೆ. ದೇಶದ ಪ್ರಮುಖ ಸೈಕಲ್ ತಯಾರಿಕಾ ಕಂಪೆನಿಯೊಂದು ಯೋಜನೆಗೆ ಸುಮಾರು 150 ಸೈಕಲ್‌ಗಳನ್ನು ಒದಗಿಸಿದೆ.

ಮುರಳಿ ರೈಡ್ ಎ ಸೈಕಲ್ ಪ್ರತಿಷ್ಠಾನದೊಂದಿಗೂ ಗುರುತಿಸಿಕೊಂಡಿದ್ದಾರೆ. ಸೈಕಲ್ ವಿನಿಮಯ ಮಾಡುವುದು, ಸೈಕ್ಲಿಂಗ್‌ನ ಮಹತ್ವ ತಿಳಿಸುವುದು, ಸೈಕಲ್‌ನ ಜನಪ್ರಿಯತೆ ಹೆಚ್ಚಿಸುವುದು, ಸೈಕಲ್ ಸವಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಸರ್ಕಾರದ ಅಂಗಸಂಸ್ಥೆಗಳಿಗೆ ಸೈಕ್ಲಿಂಗ್ ಕುರಿತು ಸಲಹೆ ನೀಡುವುದು, ವಿದ್ಯಾರ್ಥಿಗಳಿಗೆ ಉಚಿತವಾಗಿ ಸೈಕಲ್ ವಿತರಿಸುವುದು ಪ್ರತಿಷ್ಠಾನದ ಕೆಲ ಪ್ರಮುಖ ಉದ್ದೇಶಗಳು.

ನದಿಯ ಜತೆ...

ಬೆಂಗಳೂರಿನಿಂದ 900 ಕಿ.ಮೀ ದೂರದ ಊಟಿಯವರೆಗೆ ಪ್ರತಿಷ್ಠಾನ ಸೈಕಲ್ ಸವಾರಿ ಹಮ್ಮಿಕೊಂಡಿತ್ತು. ಇದು ನೀಲಗಿರಿಯ ಜೀವ ವೈವಿಧ್ಯತೆ ಕುರಿತು ಜನಜಾಗೃತಿ ಹಾಗೂ ಸೈಕಲ್ ಮಹತ್ವ ಸಾರುವ ಎರಡು ಆಶಯಗಳನ್ನು ಗುರಿಯಾಗಿಟ್ಟುಕೊಂಡು ನಡೆದ ಯಾನ. 2008ರ ಡಿಸೆಂಬರ್‌ನಲ್ಲಿ ಮುರಳಿ ಸೇರಿದಂತೆ ಕೆಲವು ಗೆಳೆಯರು ಯಾನದ ಕುರಿತು ಯೋಚಿಸತೊಡಗಿದ್ದರು. ಅದು ಗೊತ್ತಾದದ್ದೇ ಇರುವೆ ಸಾಲಿನಂತೆ ಅನೇಕ ಸೈಕ್ಲಿಸ್ಟ್‌ಗಳು ಯಾನಕ್ಕೆ ಜೊತೆಯಾದರು. ಸುಮಾರು 60 ಮಂದಿ ಸೈಕ್ಲಿಸ್ಟ್‌ಗಳು ತಮ್ಮ ಸೈಕಲ್‌ಗಳೊಂದಿಗೆ ಮುಂದಡಿಯಿಟ್ಟರು. ಈ ಸಣ್ಣ ಯಾನ ಈಗ ಟಿಎಫ್‌ಎನ್ ಎಂಬ ಜನಪ್ರಿಯ ಯಾತ್ರೆಯಾಗಿ ಪ್ರತಿವರ್ಷವೂ ನಡೆಯುತ್ತಿದೆ. ದೇಶ ವಿದೇಶಗಳ ಸೈಕ್ಲಿಸ್ಟ್‌ಗಳ ಪಾಲಿಗೆ ಇದೊಂದು ಪ್ರತಿಷ್ಠಿತ ಯಾತ್ರೆಯಾಗಿ ಪರಿಣಮಿಸಿದೆ.

ಕಾವೇರಿ ನದಿಯುದ್ದಕ್ಕೂ ಮುರಳಿ ಒಬ್ಬರೇ ಸೈಕಲ್ ಯಾತ್ರೆ ನಡೆಸಿದರು. ಕಾವೇರಿಯ ಜನ್ಮಸ್ಥಳ ತಲಕಾವೇರಿಯಿಂದ ಆಕೆ ಸಾಗರ ಸೇರುವ ಪೂಂಪುಹಾರ್‌ವರೆಗೆ ನಡೆದ ಯಾನವದು. ಸುಮಾರು 800 ಕಿ.ಮೀ ಉದ್ದದ ಯಾತ್ರೆಯನ್ನು ಎಂಟು ದಿನಗಳಲ್ಲಿ ಪೂರೈಸಿದರು. ಕುಶಾಲನಗರ, ರಾಮನಾಥಪುರ, ಚುಂಚನಕಟ್ಟೆ, ಶಿವನಸಮುದ್ರ, ಮೆಟ್ಟೂರು, ಕರೂರು, ತಿರುಚ್ಚಿ, ಕುಂಬಕಕೋಣಂ ಮೂಲಕ ಪೂಂಪುಹಾರ್ ಸೇರಿದರು. ಮಧ್ಯೆ ಮಧ್ಯೆ ಕಾವೇರಿಯನ್ನು ಸೇರುತ್ತಿದ್ದ ಇವರ ಯಾತ್ರೆಯ ದಿಕ್ಕನ್ನೂ ಜತೆಗೆ ಆಲೋಚನೆಯ ದಿಕ್ಕನ್ನೂ ಬದಲಿಸಿದ್ದು ಕೌತುಕ. ಅವರೀಗ ಉಪನದಿಗಳುದ್ದಕ್ಕೂ ಸೈಕಲ್ ಸವಾರಿ ಮಾಡುವ ಕನಸು ಕಾಣುತ್ತಿದ್ದಾರೆ. `ನೀರು ರಿ-ಸೈಕಲ್ (ಮರುಬಳಕೆ) ಆಗಬೇಕು ಎಂಬುದು ನನ್ನಾಸೆ. ಹಾಗಾಗಿ ನನ್ನ ಸೈಕಲ್ ನದಿಗುಂಟ ಓಡಿತು ಎಂಬುದು ಅವರ ಧ್ವನಿಪೂರ್ಣ ಮಾತು.

ಮೈಸೂರು ದಸರೆಗೆ ಸೈಕ್ಲಿಂಗ್ ಪರಿಚಯಿಸಿದ್ದು ಪ್ರತಿಷ್ಠಾನ. 2009-10ರಲ್ಲಿ ಎರಡು ಬಾರಿ ಪಾರಂಪರಿಕ ರ‌್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ. ಮಕ್ಕಳು ಸೇರಿದಂತೆ ಸುಮಾರು 5000 ಸೈಕಲ್ ಸವಾರರು ಸಾಂಸ್ಕೃತಿಕ ನಗರಿಯ ಸುತ್ತಮುತ್ತಲಿನ ಪಾರಂಪರಿಕ ತಾಣಗಳನ್ನು ಸಂದರ್ಶಿಸಿದರು. ಮೈಸೂರಿನಿಂದ ಬೆಂಗಳೂರಿಗೆ ಕೂಡ ಸೈಕಲ್ ರ‌್ಯಾಲಿ ನಡೆಸಲಾಗಿದೆ. ಸುಮಾರು 300 ಸೈಕ್ಲಿಸ್ಟ್‌ಗಳು ರ‌್ಯಾಲಿಯಲ್ಲಿ ಪಾಲ್ಗೊಂಡದ್ದು ಅವಿಸ್ಮರಣೀಯ ಅನುಭವ ಎಂದು ಮುರಳಿ ನೆನಪಿಸಿಕೊಳ್ಳುತ್ತಾರೆ.

ಸೈಕಲ್ ಗಣೇಶ

ಸೈಕಲ್ ಮಕ್ಕಳಿಗೆ ಆಪ್ತವಾಗಬೇಕು ಎಂಬ ಕಾರಣಕ್ಕೆ ಮುರಳಿ ಒಂದು ಉಪಾಯ ಹುಡುಕಿದರು. ಹಬ್ಬದ ದಿನಗಳನ್ನು ನೆಪವಾಗಿಟ್ಟುಕೊಂಡು ಸೈಕಲ್ ಜನಪ್ರಿಯತೆಗೆ ಮುಂದಾದರು. ಸೈಕಲ್ ಮೇಲೆ ಗಣಪತಿ ಮೂರ್ತಿ ಮೆರವಣಿಗೆ ಹಾಗೂ ವಿಸರ್ಜನೆ ಮಾಡಲು ಮುಂದಾದರು. ಅದಕ್ಕೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಯಿತು. ಅನೇಕ ಕೋಮುಗಳ ಜನರು ಭಾಗವಹಿಸಿ `ಸೈಕಲ್ ಗಣೇಶ~ನಿಗೆ ಜೈಕಾರ ಹಾಕಿದರು. ಶಿವರಾತ್ರಿಯಂದು ನಗರದ ದೇವಸ್ಥಾನಗಳಿಗೆ ಸೈಕಲ್ ಪಿಕ್‌ನಿಕ್ ಮಾಡಿದ್ದಾರೆ.  ಸೈಕಲ್ ಜಂಗಮ ಹೆಸರಿನ ಈ ಯಾತ್ರೆಯಲ್ಲಿ ಸುಮಾರು ಮಕ್ಕಳು ಭಾಗವಹಿಸಿದ್ದಾರೆ. ಕಾಳ್ಗಿಚ್ಚಿನ ಬಾಧಕಗಳ ಕುರಿತು ಅರಿವು ಮೂಡಿಸಲು ಭಾರತದ ಸೈಕಲ್ ಸವಾರರನ್ನೆಲ್ಲಾ ಒಗ್ಗೂಡಿಸಿ ದೇಶದ ವಿವಿಧ ವನ್ಯಜೀವಿ ತಾಣಗಳಿಗೆ ಅವರು ಕರೆದೊಯ್ದಿದ್ದಾರೆ.

ಮುರಳಿ ಜನಪ್ರಿಯತೆ ಪಕ್ಕದ ಪಾಕಿಸ್ತಾನಕ್ಕೂ ಹಬ್ಬಿದೆ. ಅಲ್ಲಿನ ಕೆಲವು ಸೈಕ್ಲಿಸ್ಟ್‌ಗಳು ಇವರ ಕೆಲಸಗಳನ್ನು ಕುತೂಹಲದಿಂದ ಗಮನಿಸುತ್ತಿದ್ದಾರೆ. ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಮುರಳಿ ವಿನ್ಯಾಸಗೊಳಿಸಿರುವ `ನಮ್ಮ ಸೈಕಲ್~ ಉಚಿತ ಸಾಫ್ಟ್‌ವೇರ್ ಪಾಕ್ ಸೈಕಲ್ ಪ್ರೇಮಿಗಳಲ್ಲಿ ಹೊಸ ಹೊಸ ಸೈಕ್ಲಿಂಗ್ ಸಾಧ್ಯತೆಗಳನ್ನು ತೆರೆದಿಟ್ಟಿದೆ. ನೊಬೆಲ್ ಪ್ರಶಸ್ತಿ ವಿಜೇತ ರಸಯಾನ ಶಾಸ್ತ್ರಜ್ಞ ವೆಂಕಟರಾಮನ್ ರಾಮಕೃಷ್ಣನ್ (ವೆಂಕಿ) ಕೂಡ ಸೈಕಲ್ ಪಟು. ಮುರಳಿ ಅವರ ಕೆಲಸಗಳನ್ನು ಕಂಡು ವೆಂಕಿ ಬೆನ್ನು ತಟ್ಟಿದ್ದು ಇದೆ.

ಅವಳ ಹೆಸರು ಸೌಮ್ಯ!

ಇದುವರೆಗೆ ಮೂರು ಸೈಕಲ್‌ಗಳನ್ನು ಬದಲಿಸಿದ್ದಾರೆ ಮುರಳಿ. ಈಗಿರುವುದು ಮೆರಿಡಾ ಕಂಪೆನಿಯ ಸುಮಾರು 20 ಸಾವಿರ ರೂಪಾಯಿ ಮೌಲ್ಯದ ಸೈಕಲ್. ಅದರ ಮುಖಬೆಲೆ 20 ಸಾವಿರ ರೂಪಾಯಿ ಆದರೂ ಅವರು ಅದಕ್ಕೆ ಹೇಳುವ ಮೌಲ್ಯ 60 ಸಾವಿರಕ್ಕೂ ಹೆಚ್ಚು. ಕಾರಣ ಅದು ಸುಮಾರು 40 ಸಾವಿರ ರೂಪಾಯಿಯಷ್ಟು ಪೆಟ್ರೋಲ್ ಉಳಿಸಿದೆಯಂತೆ. ಮುರಳಿ ತಮ್ಮ ಸೈಕಲ್‌ಗೆ ಇಟ್ಟ ಹೆಸರು ಸೌಮ್ಯ! ಯಾರಿಗೂ ನೋವುಂಟು ಮಾಡಲು ಬಯಸದ, ಒಂದಷ್ಟೂ ಗದ್ದಲ ಎಬ್ಬಿಸದ, ಒಂಚೂರೂ ಬೇಸರ ಮಾಡಿಕೊಳ್ಳದೆ ಎಲ್ಲೆಂದರಲ್ಲಿಗೆ ಯಾವಾಗ ಅಂದರೆ ಆಗ ಬರುವ `ಈಕೆ~ ಸೌಮ್ಯ ಅಲ್ಲದೆ  ಮತ್ತಿನ್ನೇನು ಎಂದು ಹಾಸ್ಯದ ಹೊನಲು ಹರಿಸುತ್ತಾರೆ ಮುರಳಿ. ಅವಸರವಿಲ್ಲದೆ ಸುತ್ತಲಿನ ಇಂಚಿಂಚನ್ನೂ ಗಮನಿಸುತ್ತ ಸಾಗಲು ಸೈಕಲ್‌ನಿಂದ ಮಾತ್ರ ಸಾಧ್ಯವಾಗಿರುವುದರಿಂದ ಅದು ಅವರಿಗೆ ಅರಿವಿನ ಗುರು.

ಸೈಕಲ್ ಪ್ರವಾಸೋದ್ಯಮವನ್ನು ಬಲಪಡಿಸಬೇಕು ಎಂಬುದು ಮುರಳಿ ಅವರ ಹೊಸ ಕನಸು. ಬಿಎಂಟಿಸಿ ಜತೆ ಕೈ ಜೋಡಿಸಿ ಎಲ್ಲಾ ಟಿಟಿಎಂಸಿಗಳಲ್ಲಿ ಸೈಕಲ್ ಬಸ್‌ಗಳನ್ನು ರೂಪಿಸುವ ಕುರಿತು ಮಾತುಕತೆ ನಡೆದಿದೆ. ಆ ಬಸ್‌ಗಳು ನಗರದ ಸುತ್ತಮುತ್ತಲಿನ ಪ್ರೇಕ್ಷಣಿಯ ಸ್ಥಳಗಳಿಗೆ ಸೈಕಲ್‌ಗಳನ್ನು, ಸೈಕಲ್ ಪ್ರಿಯರನ್ನು ಸಾಗಿಸಲಿವೆ. ಸೈಕಲ್ ಸವಾರಿ ಮೂಲಕವೇ ನೆಚ್ಚಿನ ಸ್ಥಳಗಳನ್ನು ಪ್ರಯಾಣಿಕರು ವೀಕ್ಷಿಸಲಿದ್ದಾರೆ.

ಇದಲ್ಲದೆ ಸೈಕಲ್ ಆರ್ಥಿಕತೆ ಕುರಿತು ಗುಬ್ಬಿ ಲ್ಯಾಬ್ಸ್ ಜತೆಗೂಡಿ ಸಂಶೋಧನೆಯಲ್ಲಿ ತೊಡಗಿದ್ದಾರೆ ಮುರಳಿ. ಹಣಕಾಸು ವ್ಯವಸ್ಥೆಗೆ ಸೈಕಲ್‌ಗಳು ಹೇಗೆ ನೆರವಾಗಿವೆ ಎಂಬುದನ್ನು ತಿಳಿಸುವುದು ಸಂಶೋಧನೆಯ ಉದ್ದೇಶ. ದಿನಪತ್ರಿಕೆ ಮಾರುವವರು, ಕೊರಿಯರ್ ಸಂಸ್ಥೆಗಳು, ಹಾಲು ಮಾರಾಟಗಾರರು ಇತ್ಯಾದಿ ಸಮುದಾಯಗಳ ಸೈಕಲ್ ಬಳಕೆ ಹಾಗೂ ಅದರ ಆರ್ಥಿಕ ಲಾಭಗಳನ್ನು ಸಂಶೋಧನೆಯಲ್ಲಿ ಅವಲೋಕಿಸಲಾಗುತ್ತಿದೆ.

ಹೀಗೆ ಮಾತನಾಡುತ್ತಿರುವಾಗಲೇ ಮುರಳಿ ಮೊಬೈಲ್‌ಗೆ ಕರೆಯೊಂದು ಬಂತು. ಅತ್ತಲಿಂದ ಪುಟಾಣಿಯೊಬ್ಬಳ ದನಿ. `ನಾಳೆ ರಜೆ. ನನ್ನ ಸೈಕಲ್ ರೆಡಿ ಇದೆ. ಎಲ್ಲಿಗೆ ಕರೆದುಕೊಂಡು ಹೋಗ್ತೀಯಾ?~ ಎಂಬ ಪ್ರಶ್ನೆ. ಇಂಥ ಹತ್ತಾರು ಮಕ್ಕಳು ಮುರಳಿ ಒಡನಾಡಿಗಳು. ಅವರ ಕನಸುಗಳಿಗೆ ಜೀವ ತುಂಬುವವರು.

ಹೆಚ್ಚಿನ ಮಾಹಿತಿಗೆ: ದೂರವಾಣಿ: 9945066612,

ಇಮೇಲ್: muralihr77@gmail.com

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry