ಬುಧವಾರ, ನವೆಂಬರ್ 13, 2019
25 °C

ಸೈಕಲ್ ಮೇಲೆ ಟೆಕ್ಕಿ ಸಾಖರೆ ಪ್ರಚಾರ...!

Published:
Updated:

ಬೆಳಗಾವಿ: ಹಣ ಬಲ ಇರುವ ಅಭ್ಯರ್ಥಿಗಳು ನಗರದಲ್ಲಿ ಅಬ್ಬರದ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದರೆ, ಇಲ್ಲೊಬ್ಬ ಟೆಕ್ಕಿ (ಸಾಫ್ಟ್‌ವೇರ್ ಎಂಜಿನಿಯರ್) ಸದ್ದಿಲ್ಲದೇ ಸೈಕಲ್ ಮೇಲೆ ಪ್ರಚಾರ ನಡೆಸುತ್ತಿದ್ದಾರೆ!ಮೂಲತಃ ಬೆಳಗಾವಿ ತಾಲ್ಲೂಕಿನ ಕುದ್ರೆಮನಿ ಗ್ರಾಮದವರಾದ ನಾಗೇಶ ವಿಲಾಸ ಸಾಖರೆ ಅವರು ಲೋಕಸತ್ತಾ ಪಕ್ಷದಿಂದ ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ಸಾಖರೆ ಅವರು ಮುಂಜಾನೆ 8ರಿಂದ ರಾತ್ರಿ 9ರವರೆಗೆ ಕ್ಷೇತ್ರದ ವಿವಿಧ ಬಡಾವಣೆಗಳಿಗೆ ಸೈಕಲ್ ಮೇಲೆ ಸಂಚರಿಸಿ, ಪಕ್ಷದ ಚಿಹ್ನೆಯಾದ `ಸೀಟಿ'ಯನ್ನು ಊದುತ್ತ ಮತಯಾಚಿಸುತ್ತಿದ್ದಾರೆ. ಮನೆ ಮನೆಗಳಿಗೆ ಹೋಗಿ ಕರಪತ್ರಗಳನ್ನು ಹಂಚುವ ಮೂಲಕ ಮತದಾನದ ಮಹತ್ವದ ಕುರಿತು ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ.ಜಯಪ್ರಕಾಶ ನಾರಾಯಣ ನೇತೃತ್ವದ ಲೋಕಸತ್ತಾ ಪಕ್ಷದಲ್ಲಿನ ಪಾರದರ್ಶಕತೆಯನ್ನು ಮೆಚ್ಚಿದ ಸಾಖರೆ, ಈ ಪಕ್ಷದಿಂದ ಕಣಕ್ಕೆ ಇಳಿದಿದ್ದಾರೆ. ಏಪ್ರಿಲ್ 8ರಿಂದ ಉತ್ತರ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದಾರೆ. ಕರಪತ್ರವನ್ನು ಹಂಚುತ್ತಿರುವ ಅವರು, ಮತದಾನವನ್ನು ಕಡ್ಡಾಯವಾಗಿ ಮಾಡುವಂತೆ ಪ್ರೇರೇಪಿಸುತ್ತಿದ್ದಾರೆ. ಯಾರು ಯೋಗ್ಯ ಅಭ್ಯರ್ಥಿ ಎಂಬುದನ್ನು ಆಲೋಚಿಸಿ ಮತ ನೀಡಿ ಎಂದು ಮನವಿ ಮಾಡುತ್ತಿದ್ದಾರೆ.ಕುದ್ರೆಮನಿ ಗ್ರಾಮದಲ್ಲಿ ಮರಾಠಿ ಮಾಧ್ಯಮದಲ್ಲಿ ಎಸ್ಸೆಸ್ಸೆಲ್ಸಿ ಓದಿದ್ದ ಸಾಖರೆ ಅವರು, ಬೆಳಗಾವಿಯ ಜಿಎಸ್‌ಎಸ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪೂರೈಸಿದ್ದರು. ಬಳಿಕ ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್ ವಿಷಯದಲ್ಲಿ ಎಂಜಿನಿಯರಿಂಗ್ ಪದವಿಯನ್ನು ಪಡೆದುಕೊಂಡಿದ್ದರು.`ಪ್ಯಾರೊಟ್ ಸಿಸ್ಟಮ್ಸ' ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ ಸಾಖರೆ ಎರಡು ವರ್ಷ ಬೆಂಗಳೂರಿನಲ್ಲಿ ಕೆಲಸ ಮಾಡಿದರು. ಬಳಿಕ ಲಂಡನ್‌ನಲ್ಲಿ 3 ವರ್ಷ ಕೆಲಸ ಮಾಡಿದರು. ಕಳೆದ 2 ವರ್ಷಗಳಿಂದ ಸಿಂಗಾಪುರದಲ್ಲಿ ಕೆಲಸ ಮಾಡುತ್ತಿದ್ದ ಸಾಖರೆ, ವರ್ಗಾವಣೆಗೊಂಡು ಪುನಃ ಬೆಂಗಳೂರಿಗೆ ಬಂದಿದ್ದರು.

ಚುನಾವಣೆಯಲ್ಲಿ ಸ್ಪರ್ಧಿಸಲೆಂದು ಎರಡು ತಿಂಗಳ ಕಾಲ ರಜೆ ಪಡೆದ ಅವರು, ಸುಶಿಕ್ಷಿತರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ.`ಕೇವಲ 40 ವರ್ಷಗಳಲ್ಲಿ ಸಿಂಗಾಪುರವು ಅಭಿವೃದ್ಧಿ ರಾಷ್ಟ್ರವಾಗಿದೆ. ಆದರೆ, ಭಾರತದಲ್ಲಿ ತಂತ್ರಜ್ಞಾನ, ಸಂಪತ್ತು ಇದ್ದರೂ ಇನ್ನೂ ಅಭಿವೃದ್ಧಿಯಾಗುತ್ತಿಲ್ಲ. ರಾಜಕೀಯ ಇಚ್ಛಾಶಕ್ತಿಯಲ್ಲಿ ಬದಲಾವಣೆ ಆಗಬೇಕಾಗಿದೆ.  ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಮೇಲಿನ ನಿರೀಕ್ಷೆಯೂ ಹುಸಿಯಾಯಿತು. ಹೀಗಾಗಿ ರಾಜಕೀಯ ಕ್ಷೇತ್ರದಲ್ಲಿ ಏನು ನಡೆಯುತ್ತದೆ ಎಂಬುದನ್ನು ನೋಡಲು ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ' ಎಂದು ನಾಗೇಶ ಸಾಖರೆ `ಪ್ರಜಾವಾಣಿ'ಗೆ ತಿಳಿಸಿದರು.`ಈ ಬಾರಿಯ ಚುನಾವಣೆಯಲ್ಲಿ ಗೆದ್ದೇ ಬಿಡುತ್ತೇನೆ ಎಂಬ ವಿಶ್ವಾಸ ನನಗೆ ಇಲ್ಲ. ಆದರೆ, ಬದಲಾವಣೆಯನ್ನು ಹುಡುಕು ತ್ತಿರುವ ಮತದಾರರಿಗೆ ನಾನೊಬ್ಬ ಯೋಗ್ಯ ಅಭ್ಯರ್ಥಿಯಾಗ ಬಲ್ಲೆ. ಶೇ. 60ರಷ್ಟು ಜನರು ಮಾತ್ರ ಮತದಾನ ಮಾಡುತ್ತಿದ್ದಾರೆ. ಉಳಿದ ಶೇ. 40 ಜನರಲ್ಲಿ ಶೇ. 20 ಜನ ಮತದಾನ ಮಾಡಿದರೂ ನಾನು ಪ್ರಬಲ ಸ್ಪರ್ಧೆಯನ್ನು ಒಡ್ಡುತ್ತೇನೆ ಎಂಬ ವಿಶ್ವಾಸ ಇದೆ' ಎಂದು ತಿಳಿಸಿದರು.`ಚುನಾವಣೆ ಪ್ರಚಾರಕ್ಕಾಗಿ 1 ಲಕ್ಷ ರೂಪಾಯಿ ಮೀಸಲು ಇಟ್ಟಿದ್ದೇನೆ. ರೂ. 3 ಸಾವಿರದಲ್ಲಿ ಸೈಕಲ್ ಖರೀದಿಸಿದ್ದೇನೆ. ರೂ. 14 ಸಾವಿರದಲ್ಲಿ 40 ಸಾವಿರ ಕರಪತ್ರಗಳನ್ನು ಮುದ್ರಿಸಿದ್ದೇನೆ. ನಾನೊಬ್ಬನೇ ಸೈಕಲ್ ಮೇಲೆ ತೆರಳಿ ಸುಮಾರು 10 ಸಾವಿರ ಕರಪತ್ರ ಹಂಚಿದ್ದೇನೆ. ಗುತ್ತಿಗೆ ಆಧಾರದಲ್ಲಿ 10 ಜನರನ್ನು ಕೆಲಸಕ್ಕೆ ತೆಗೆದುಕೊಂಡು ಉಳಿದ ಕರಪತ್ರವನ್ನು ಹಂಚುತ್ತೇನೆ. `ಶುದ್ಧ ಜನ- ಶುದ್ಧ ರಾಜಕೀಯ' ಧ್ಯೇಯದೊಂದಿಗೆ ಸ್ಪರ್ಧಿಸಿರುವ ನನಗೆ ಜನ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸ ಇದೆ' ಎಂದರು.`ಜನರು ಮರಾಠಿ- ಕನ್ನಡ ಭಾಷೆಯ ನಡುವಿನ ವಿವಾದ ನಿಲ್ಲಿಸಬೇಕು. ಬೆಳಗಾವಿಯ ಅಭಿವೃದ್ಧಿಯ ವಿಷಯಕ್ಕೆ ಒತ್ತು ನೀಡಬೇಕು' ಎನ್ನುವ ಅವರು, `ಚುನಾವಣೆಯ ಬಳಿಕ ಕೆಲಸಕ್ಕೆ ರಾಜೀನಾಮೆ ನೀಡಿ, ಸಮಾಜ ಸೇವೆಯಲ್ಲಿ ತೊಡಗಿಕೊಳ್ಳುವ ಉದ್ದೇಶ ಇದೆ' ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)