ಸೈಕಲ್ ಮೇಲೆ ಸಾಹಸ ಯಾತ್ರೆ- ದಿ ಗ್ರೇಟ್ ಮಲ್ನಾಡ್ ಚಾಲೆಂಜ್

7

ಸೈಕಲ್ ಮೇಲೆ ಸಾಹಸ ಯಾತ್ರೆ- ದಿ ಗ್ರೇಟ್ ಮಲ್ನಾಡ್ ಚಾಲೆಂಜ್

Published:
Updated:
ಸೈಕಲ್ ಮೇಲೆ ಸಾಹಸ ಯಾತ್ರೆ- ದಿ ಗ್ರೇಟ್ ಮಲ್ನಾಡ್ ಚಾಲೆಂಜ್

ಬೈಂದೂರು: ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಲು ಸೈಕಲ್ ಬಳಸಿ ಸುದ್ದಿ ಮಾಡುತ್ತಿದ್ದರೆ, ಬೆಂಗಳೂರಿನ `ಟ್ಯಾಂಡಮ್ ಟ್ರೆಯ್‌ಲ್ಸ್~ ಎರಡು ವರ್ಷಗಳಿಂದ ಸೈಕಲ್ ಸಂಸ್ಕೃತಿ ಜನಪ್ರಿಯಗೊಳಿಸಲು ವಿವಿಧ ಚಟುವಟಿಕೆ ಆಯೋಜಿಸುತ್ತಿದೆ.ದ್ವಿತೀಯ ವಾರ್ಷಿಕ ಸಾಹಸ ಸೈಕಲ್‌ಯಾತ್ರೆ `ದಿ ಗ್ರೇಟ್ ಮಲ್ನಾಡ್ ಚಾಲೆಂಜ್~ಗೆ ಅಕ್ಟೋಬರ್ 29ರಂದು ಮಡಿಕೇರಿಯಲ್ಲಿ ಚಾಲನೆಗೊಂಡು ಕುಕ್ಕೆ ಸುಬ್ರಹ್ಮಣ್ಯ, ಬಿಸ್ಲೆ, ಬೇಲೂರು, ಕೆಮ್ಮಣ್‌ಗುಂಡಿ, ಮುಳ್ಳಯ್ಯನಗಿರಿ, ಬಾಬಾ ಬುಡನ್‌ಗಿರಿ, ಮುತ್ತೋಡಿ, ಕುದುರೆಮುಖ, ಕುಂದಾದ್ರಿ, ತೀರ್ಥಹಳ್ಳಿ, ಕುಂದಾಪುರ ಬಳಸಿ 854 ಕಿ.ಮೀ. ದೂರ ಕ್ರಮಿಸಿ, ಗಮ್ಯಸ್ಥಾನವಾದ ಜೋಗ್‌ಫಾಲ್ಸ್‌ನಲ್ಲಿ ಇದೇ ಭಾನುವಾರ ಅಂತ್ಯ ಕಂಡಿತು. ಹಾಗೆ ಸಾಗುವ ಮಾರ್ಗದಲ್ಲಿ ನ. 4ರ ಸಂಜೆ ತ್ರಾಸಿ ಕಡಲತೀರದ ಟರ್ಟಲ್ ಬೇ ಪ್ರವಾಸಿಧಾಮದಲ್ಲಿ ತಂಡ ಬೀಡುಬಿಟ್ಟಿದ್ದಾಗ ನಾಯಕ ಮಹೇಶ್ `ಪ್ರಜಾವಾಣಿ~ಜತೆ ಯಾತ್ರೆಯ ವಿಚಾರ ಮತ್ತು ಅನುಭವ ಹಂಚಿಕೊಂಡರು.ಪ್ರಕೃತಿ ಪ್ರವಾಸೋದ್ಯಮ, ಪರಿಸರ ಪ್ರವಾಸೋದ್ಯಮ, ಸಾಹಸ ಪ್ರವಾಸೋದ್ಯಮಗಳ ಸಾಲಿಗೆ ಭಾರತದಲ್ಲಿ ಇತ್ತೀಚಿನ ಸೇರ್ಪಡೆ ಸೈಕಲ್ ಪ್ರವಾಸೋದ್ಯಮ. ಅದು ಆರೋಗ್ಯ ವರ್ಧಕ, ಪರಿಸರ ಸ್ನೇಹಿ. ಅಧ್ಯಯನ, ಆಸ್ವಾದ, ಅಹ್ಲಾದ, ಉಲ್ಲಾಸಗಳಿಗೆ ಪೂರಕ. ಸಾಹಸದ ಅಂಶವೂ ಅದರಲ್ಲಡಗಿದೆ ಎಂದು ಮಾತು ಆರಂಭಿಸಿದರು ಮಹೇಶ್.`ಟ್ಯಾಂಡಮ್ ಟ್ರೆಯ್‌ಲ್ಸ್~ ಉತ್ಸಾಹಿ ಸೈಕಲ್ ಯಾತ್ರಿಗಳ ಸ್ವಯಂಸೇವಾ ಸಂಸ್ಥೆ. ಅದರ ಪ್ರಧಾನ ಗುರಿ ಸೈಕಲ್ ಸಂಚಾರವನ್ನು ಜನಪ್ರಿಯಗೊಳಿಸಿ, ಪೆಟ್ರೊಲಿಯಂ ಅವಲಂಬನೆ ಕಡಿಮೆ ಮಾಡಿ, ಪರಿಸರ ಸಂರಕ್ಷಣೆಗೆ ಪ್ರೇರಣೆ ನೀಡುವುದು.ಪ್ರಕೃತಿರಮ್ಯ ಸ್ಥಳಗಳಿಗೆ ನಡೆಸುವ ಸೈಕಲ್ ಯಾತ್ರೆಗೆ ಜನರನ್ನು ಆಕರ್ಷಿಸಿ, ಪರೋಕ್ಷವಾಗಿ ಸೈಕಲ್ ಬಳಕೆಗೆ ಅವರನ್ನು ಬದ್ಧಗೊಳಿಸುವ ಮೂಲಕ ಅದು ತನ್ನ ಗುರಿ ಸಾಧಿಸುತ್ತದೆ. ಕಳೆದ ವರ್ಷದ ಯಾತ್ರೆಯಲ್ಲಿ 25 ಜನರು ಪಾಲ್ಗೊಂಡಿದ್ದರೆ, ಈ ಬಾರಿ ಸದಸ್ಯರ ಸಂಖ್ಯೆ ದ್ವಿಗುಣಗೊಂಡಿದೆ. ವಾರ್ಷಿಕ ಯಾತ್ರೆಯಲ್ಲದೆ ವಾರಾಂತ್ಯದ ಏಕದಿನ ಸಂಚಾರ ಸಂಘಟಿಸಲಾಗುತ್ತದೆ. ಇವುಗಳಲ್ಲಿ  ಭಾಗವಹಿಸುವವರು ತಮ್ಮ ದೈನಂದಿನ ಸಂಚಾರಕ್ಕೆ ಸೈಕಲ್ ಬಳಸುವ ಸಂಕಲ್ಪ ತೊಟ್ಟಿದ್ದಾರೆ. ಈ ವರ್ಷದ ಯಾತ್ರೆಯಲ್ಲಿ ಸೇರಿಕೊಂಡ 50 ಜನರಲ್ಲಿ ಭಾರತೀಯರಲ್ಲದೆ ಡೆನ್ಮಾರ್ಕ್, ದುಬೈ ಮತ್ತು ಚೀನಾಪ್ರಜೆಗಳಿದ್ದರು. ಮೂವರು ಮಹಿಳೆಯರೂ ತಂಡದಲ್ಲಿದ್ದರು. ಇವರಲ್ಲಿ ಹಲವರು ಬೆಂಗಳೂರಿನ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ದುಡಿಯುತ್ತಿರುವವರು.  ಜತೆಗೆ ಸಂಘಟಕ, ಅಡುಗೆಯಾಳು, ಸೈಕಲ್ ಮೆಕ್ಯಾನಿಕ್, ಛಾಯಾಗ್ರಾಹಕ, ಪ್ರಥಮ ಚಿಕಿತ್ಸಾ ಪರಿಣತರಿಂದ ಕೂಡಿದ ಹತ್ತು ಜನರ ತಂಡ ಯಾತ್ರೆಗೆ ಅಗತ್ಯವಿರುವ ಬೆಂಬಲ ಒದಗಿಸುತ್ತದೆ. ಸಾಮಗ್ರಿ ಹೊತ್ತ ವಾಹನವೂ ಅವರನ್ನು ಹಿಂಬಾಲಿಸುತ್ತದೆ.ವಾಹನ ದಟ್ಟಣೆಯಿಲ್ಲದ ಮಾರ್ಗ ಅನುಸರಿಸುವುದರಿಂದ ಪ್ರತಿ ದಿನ 100 ಕಿ.ಮೀ. ಕ್ರಮಿಸಲಾಗುತ್ತದೆ. ದಾರಿಯಲ್ಲಿ, ಬೀಡು ಬಿಟ್ಟ್ಲ್ಲಲಿ ತ್ಯಾಜ್ಯ ಎಸೆಯುವುದಿಲ್ಲ. ಕರ್ನಾಟಕ ವಿಜ್ಞಾನ ಪರಿಷತ್ ಸಹಯೋಗದಿಂದ ಮಾರ್ಗದಲ್ಲಿ ಸಿಗುವ ಆಯ್ದ 10 ಪ್ರೌಢಶಾಲೆಗಳಲ್ಲಿ ಪವಾಡ ರಹಸ್ಯ ಬಯಲು ಕಾರ್ಯಕ್ರಮ ಏರ್ಪಡಿಸಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬಿತ್ತಲಾಗುತ್ತದೆ. ಮಕ್ಕಳಿಗೆ ಸ್ಪರ್ಧೆ ಏರ್ಪಡಿಸಿ ಶಿಕ್ಷಣ ಪರಿಕರಗಳನ್ನು ಬಹುಮಾನವಾಗಿ  ವಿತರಿಸಲಾಗುತ್ತದೆ. ಆ ಮೂಲಕ ಯಾತ್ರೆಗೆ ಸಾಮಾಜಿಕ ಕಳಕಳಿಯ ಆಯಾಮ ನೀಡಲಾಗಿದೆ.ಪ್ರಸಿದ್ಧ ಟಿ.ಐ.ಸೈಕಲ್ಸ್ ಕಂಪೆನಿ ಸೈಕಲ್‌ಗಳನ್ನು, ದಿರಿಸುಗಳನ್ನು ಒದಗಿಸಿ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬೆಂಗಳೂರಿನಿಂದ ಮಡಿಕೇರಿಗೆ, ಜೋಗ್‌ಫಾಲ್ಸ್‌ನಿಂದ ಬೆಂಗಳೂರಿಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸಿ ಯಾತ್ರೆಯ ಸದುದ್ದೇಶವನ್ನು ಸಮರ್ಥಿಸಿವೆ ಎಂದು ಮಹೇಶ್ ವಿವರಿಸಿದರು. ತಂಡದ ಹಿರಿಯ ಸದಸ್ಯ ಡೆನ್ಮಾರ್ಕ್‌ನ 54ರ ಹರೆಯದ ಮೈಕಲ್ ತನ್ನ ದೇಶದಲ್ಲಿ ಸೈಕಲ್ ಜನಪ್ರಿಯ ಸಂಚಾರ ಮಾಧ್ಯಮ. ಅಲ್ಲಿ ಸೈಕಲ್ ಸವಾರಿ ಸುಲಭ; ಆದರೆ ಭಾರತದ ಭೂಸ್ಥಿತಿಯಲ್ಲಿ ಅದು ಒಂದು ಸವಾಲು ಎಂದರು. ಬೆಂಗಳೂರಿನ ಉದ್ಯೋಗಿ ಅನಿತಾ `ಯಾತ್ರೆ ಮುದ ನೀಡಿತು; ದೈಹಿಕ ಸಾಮರ್ಥ್ಯ ವೃದ್ಧಿಸಿತು. ಇನ್ನು ಕಚೇರಿಗೆ ಸೈಕಲ್‌ನಲ್ಲೇ ಹೋಗುವೆ~ ಎಂದರು.ತಂಡವನ್ನು ಭೇಟಿಯಾಗಲು ಬಂದಿದ್ದ ರಾಜ್ಯ ಸಾರಿಗೆ ಸಂಸ್ಥೆಯ ಮಂಗಳೂರು ವಿಭಾಗೀಯ ನಿಯಂತ್ರಕ ಎಂ. ರಮೇಶ್ ತಮ್ಮ ಆಡಳಿತ ನಿರ್ದೆಶಕ ಗೌರವ್ ಗುಪ್ತಾ ಅವರ ಲಿಖಿತ ಶುಭ ಸಂದೇಶವನ್ನು ತಂಡಕ್ಕೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry