ಸೈಕಲ್ ಸವಾರಿಯ ಹೊಸ ಯುಗ

7

ಸೈಕಲ್ ಸವಾರಿಯ ಹೊಸ ಯುಗ

Published:
Updated:

ಜೋ ಅಂತೋಣಿ ಎಂಬ ನನ್ನ ಸ್ನೇಹಿತ ಮಾರುತಿ 800 ಓಡಿಸುತ್ತಿದ್ದ. ಈಗ ನಾಲ್ಕು ತಿಂಗಳಿಂದ ಅದನ್ನು ಬಿಟ್ಟು ಸೈಕಲ್ ತುಳಿದುಕೊಂಡು ಆಫೀಸಿಗೆ ಹೋಗುತ್ತಾನೆ. ಅವನಿರುವುದು ಲಿಂಗರಾಜಪುರದಲ್ಲಿ.ಆಫೀಸ್ ಇರುವುದು ದೊಮ್ಮಲೂರು ಸೇತುವೆ ಹತ್ತಿರದ ಎಂಬಸಿ ಗಾಲ್ಫ್ ಲಿಂಕ್ಸ್ ಸಂಕೀರ್ಣದಲ್ಲಿ. ಪ್ರತಿ ದಿನ 9 ಕಿ.ಮೀ. ಸೈಕಲ್ ತುಳಿಯುತ್ತಾ ಹೋಗಿ ಅಷ್ಟೇ ದೂರ ಹಿಂತಿರುಗಿ ಬರುತ್ತಿದ್ದಾನೆ. ಸ್ನೇಹಿತರನ್ನು ಕಾಣಲು ಹೋಗಲೂ ಸೈಕಲನ್ನೇ ಬಳಸುತ್ತಿದ್ದಾನೆ. ಟೆಕ್ ರೈಟರ್ ಆದ ಜೊ ಬಹಳ ವರ್ಷದಿಂದ ಸೈಕಲ್ ತುಳಿಯುವ ಆಸೆ ಹೊಂದಿದ್ದ.ಕಳೆದ ಕೆಲವು ತಿಂಗಳಿನಿಂದ ಬೆಂಗಳೂರು ಸೈಕಲ್ ಸವಾರರಿಗೆ ಸ್ಪಂದಿಸುತ್ತಿದೆ. ಕಾರ್ ಬಿಟ್ಟು ಸೈಕಲ್ ಓಡಿಸಬಹುದು ಎಂಬ ವಿಶ್ವಾಸ ಹೆಚ್ಚಾಗುತ್ತಿದೆ. `ಬಿ ಟ್ವಿನ್~ ಎಂಬ ಫ್ರೆಂಚ್ ಸೈಕಲ್ ಖರೀದಿಸಿದ ಜೋ ಈಗ  ಸೈಕಲ್ ಸವಾರಿಯಿಂದ ಲಾಭ ಆಗುತ್ತಿದೆ ಅನ್ನುತ್ತಾನೆ. ಸುಮಾರು ರೂ. 12,000ಕ್ಕೆ ಕೊಂಡ ಸೈಕಲ್‌ನಿಂದ ತಿಂಗಳಿಗೆ ೂ 4,000 ಪೆಟ್ರೋಲ್ ವೆಚ್ಚ ಉಳಿಸುತ್ತಿದ್ದಾನೆ.ದುಡ್ಡಿನ ಉಳಿತಾಯ ಒಂದು ಕಡೆ ಆದರೆ ಆರೋಗ್ಯದ ಲಾಭ ಮತ್ತೊಂದು ಕಡೆ. ಸೈಕಲ್ ಓಡಿಸುವ ಹಲವರಿಗೆ ಇಂದು ಸ್ಕೂಟರ್, ಕಾರ್ ಕೊಳ್ಳುವ, ಓಡಿಸುವ ಆರ್ಥಿಕ ಶಕ್ತಿ ಇದೆ. ಆದರೆ ಅವರಿಗೆ ಸೈಕಲ್ ಬಳಸುವುದರಿಂದ ಅರೋಗ್ಯ ಸುಧಾರಿಸುತ್ತದೆ, ಪರಿಸರಕ್ಕೆ ಹಾನಿ ಕಡಿಮೆಯಾಗುತ್ತದೆ ಅನ್ನುವ ಉತ್ಸಾಹ ದುಡ್ಡು ಉಳಿಸುವುದಕ್ಕಿಂತ ಹೆಚ್ಚಾಗಿದೆ.ಒಂದು ಕಾಲಕ್ಕೆ `ಅಟ್ಲಾಸ್~, `ಹರ್ಕ್ಯುಲೆಸ್~, `ಹೀರೋ~ ತರಹದ ಭಾರತೀಯ ಸೈಕಲ್‌ಗಳ ನಡುವೆ ಆಯ್ಕೆ ಮಾಡಿಕೊಳ್ಳಬೇಕಾಗಿತ್ತು. ಇಂದು ಪ್ರಪಂಚದೆಲ್ಲೆಡೆಯಿಂದ ಬೆಂಗಳೂರಿಗೆ ಸೈಕಲ್‌ಗಳು ಬರುತ್ತಿವೆ. `ಡಿಕೇಥ್ಲಾನ್~, `ಬಮ್ಸ ಆನ್ ದಿ ಸ್ಯಾಡಲ್~ನಂಥ ಅಂಗಡಿಗಳು ಹಲವು ಹೊಸ ಬಗೆಯ ಸೈಕಲ್‌ಗಳನ್ನೂ ಮಾರುತ್ತಿವೆ. ಸೈಕಲ್ ಬೆಲೆ ರೂ. 5 ಲಕ್ಷದವರೆಗೂ ಹೋಗುತ್ತದೆ.ಆದರೆ, ಹೆಚ್ಚಾಗಿ ಮಾರಾಟವಾಗುವುದು ರೂ.10,000ದಿಂದ ರೂ. 20,000ದ ಒಳಗಿರುತ್ತದೆ. ಇಂಥ ಸೈಕಲ್ ಕೊಳ್ಳುವವರು ಅದಕ್ಕೆ ಬೇಕಾದ `ಆಕ್ಸೆಸರೀಸ್~ನ ಮೇಲೆ ಸುಮಾರು ದುಡ್ಡು ಖರ್ಚು ಮಾಡುತ್ತಾರೆ. ಸಾಮಾನು ಕೊಂಡೊಯ್ಯಲು ಕ್ಯಾರಿಯರ್, ವಾಲಿಸಿ ನಿಲ್ಲಿಸಲು ಸ್ಟ್ಯಾಂಡ್, ದಾರಿ ಕೇಳಲು ಗಂಟೆ, ಇವೆಲ್ಲವನ್ನೂ ಹೆಚ್ಚುವರಿ ಹಣ ಕೊಟ್ಟು ಕೊಳ್ಳಬೇಕು. ರೇನ್ ಕೋಟ್, ಹೆಲ್ಮೆಟ್, ಗ್ಲೌವ್ಸ್ ತರಹೇವಾರಿಯಾಗಿ ಸಿಗುತ್ತವೆ.ಹೆಲ್ಮೆಟ್ ಒಳಗೆ ದೀಪ ಅಳವಡಿಸಿರುವ ಮಾದರಿಯವು ತುಂಬಾ ಬಿಕರಿಯಾಗುತ್ತವಂತೆ. ಸೈಕಲ್ ಓಡಿಸುವುದು ಇಂದು ಫ್ಯಾಶನಬಲ್ ಕೂಡ ಆಗಿದೆ. ಟೌನ್‌ಹಾಲ್‌ನ ಹತ್ತಿರ ಎಷ್ಟೋ ದಶಕಗಳಿಂದ ಸೈಕಲ್ ಅಂಗಡಿಗಳು ಇವೆ. ಅಲ್ಲಿ ಹಳೆ ಮಾದರಿಯ ಸೈಕಲ್‌ಗಳ ಜೊತೆ ಹೊಸತಾದ ಕೆಲವು ಮಾಡೆಲ್‌ಗಳನ್ನೂ ಮಾರುತ್ತಿದ್ದಾರೆ.ಸೈಕಲ್ ಬಗ್ಗೆ `ಅರಿವು ಮೂಡಿಸುವ~ ಕಾರ್ಯಕ್ರಮಗಳನ್ನು ನಗರದ ಹಲವೆಡೆ ಕಾಣಬಹುದು. `ಮೆಟ್ರೊ~ ನಡೆಸುವ ಸಂಸ್ಥೆ ಬಾಡಿಗೆ ಸೈಕಲ್‌ಗಳನ್ನು ಕೊಡುವುದಕ್ಕೆ ಏರ್ಪಾಡು ಮಾಡಿದೆ. ಈಗಾಗಲೇ ಮೂರು ಕಡೆ `ಸೈಕಲ್ ಡಾಕಿಂಗ್ ಸ್ಟೇಶನ್~ಗಳು ಕೆಲಸ ಮಾಡುತ್ತಿವೆ. `ಡಾಕಿಂಗ್ ಸ್ಟೇಶನ್~ ಅಂದರೆ ಒಂದು ಪುಟ್ಟ ಸೈಕಲ್ ಶಾಪ್ ಥರ.ಒಂದೊಂದರಲ್ಲೂ ಒಂಬತ್ತು ಸೈಕಲ್‌ಗಳು ಇರುತ್ತವೆ. ಇಂಥ ನೂರು `ಡಾಕಿಂಗ್ ಸ್ಟೇಶನ್~ ಮಾಡಲು `ಮೆಟ್ರೊ~ ಸಜ್ಜಾಗುತ್ತಿದೆ. ಗಂಟೆಗೆ ಸುಮಾರು ರೂ. 10 ಬಾಡಿಗೆ ಕೊಟ್ಟರೆ ಈ ಸೈಕಲನ್ನು ನಿಮ್ಮ ಕೈಗೆ ಕೊಡುತ್ತಾರೆ. ಮರಿಯ ಲವೀನ ಎಂಬ ವರದಿಗಾರ್ತಿ ಸುಮಾರು ಒಂದು ತಿಂಗಳು ಬೆಂಗಳೂರಿನ ಸೈಕಲ್ ಪ್ರಪಂಚವನ್ನು ಸುತ್ತಾಡಿ ಇಂಥ ಹಲವು ವಿವರಗಳನ್ನು ಹೆಕ್ಕಿ ತಂದಿದ್ದಾರೆ.ಬೆಂಗಳೂರು ಸೈಕಲ್ ಸವಾರರಿಗೆ, ಪಾದಚಾರಿಗಳಿಗೆ ಅಂಥ ಒಳ್ಳೆಯ ನಗರವಾಗಿ ಉಳಿದಿಲ್ಲ. ಆದರೂ ಈಗ ಈ ಪರಿಸ್ಥಿತಿಯನ್ನು ಸರಿಪಡಿಸುವ ಬಗ್ಗೆ ಮಾತು ಕೇಳಿಬರುತ್ತಿದೆ. ಜಯನಗರದಲ್ಲಿ 21 ಕಿ.ಮೀ. ಸೈಕಲ್ ಓಣಿಗಳನ್ನು ಮಾಡಿದ್ದಾರೆ. ಈ ಯೋಜನೆಯಲ್ಲಿ ಪಾಲಿಕೆ ಆಸಕ್ತಿ ಹೊಂದಿದೆ. ಈಗಾಗಲೇ ರೂ. 3.26 ಕೋಟಿ ಖರ್ಚು ಮಾಡಿ ರಸ್ತೆಯ ಒಂದು ಅಂಚನ್ನು ಸೈಕಲ್ ಸಾಗಲು ಮೀಸಲಿಟ್ಟಿದೆ. ಇದೆಲ್ಲ ಒಳ್ಳೆಯದೇ.ಶುಭಾರಂಭವಂತೂ ಆಗಿದೆ. ಆದರೆ ನಿಜವಾಗಿಯೂ ಏನಾಗುತ್ತಿದೆ? ಜಯನಗರದ ಸೈಕಲ್ ಓಣಿಗಳಲ್ಲಿ ಕಾರ್‌ಗಳು ನಿಂತಿರುತ್ತವೆ. ಕಾರ್‌ಗಳನ್ನು ತೆರವು ಮಾಡಿಸಿ ಸೈಕಲ್‌ಗಳಿಗೆ ದಾರಿ ಮಾಡಿಕೊಡುವ ಕೆಲಸ ಆಗಬೇಕಾಗಿದೆ. ಹೆಚ್ಚು ಜನ ಈ ಮಾರ್ಗ ಸುರಕ್ಷಿತ ಎಂದು ಭಾವಿಸಿದಷ್ಟೂ ಸೈಕಲ್ ಸವಾರಿ ಹೆಚ್ಚಾಗುತ್ತದೆ.ಪುಸ್ತಕದಂಗಡಿ ವಿಸ್ಮಯ

ಇದೊಂದು ತೀರ ಹೊಸ ಬೆಳವಣಿಗೆ. ಎಂ.ಜಿ.ರಸ್ತೆಯ ಸುತ್ತಮುತ್ತ ಕನ್ನಡ ಪುಸ್ತಕಗಳು ಸಿಗುತ್ತಿವೆ. ಮೊದಲಿದ್ದ ಗೆಲಾಕ್ಸಿ ಚಿತ್ರಮಂದಿರದ ಪಕ್ಕದ ಕ್ರಾಸ್‌ವರ್ಡ್ ಪುಸ್ತಕದಂಗಡಿಯಲ್ಲಿ ಬಂಗಾಳಿ ಪುಸ್ತಕದ ವಿಭಾಗವಿತ್ತು, ಆದರೆ ಕನ್ನಡ ವಿಭಾಗವಿರಲಿಲ್ಲ. ಈಗ ಆ ಅಂಗಡಿ ಮುಚ್ಚಿ ಅದೇ ಜಾಗದಲ್ಲಿ ಸಪ್ನಾ ಬುಕ್ ಸ್ಟೋರ್ ಬಂದಿದೆ. ಇದು ಗುಜರಾತಿಗಳು ನಡೆಸುವ, ಕನ್ನಡ ಪುಸ್ತಕಗಳನ್ನು ದೊಡ್ಡ ಪ್ರಮಾಣದಲ್ಲಿ ಮಾರುವ ಅಂಗಡಿ.

 

ಕನ್ನಡ ಪುಸ್ತಕ ಪ್ರೇಮಿಗಳಿಗೆ ಬೇಸರ ತರುತ್ತಿದ್ದ ವಿಷಯ: ದಂಡು ಪ್ರದೇಶದಲ್ಲಿ ಕನ್ನಡ ಪುಸ್ತಕ ಸಿಗುವುದು ವಿರಳವಾಗಿತ್ತು. `ಪ್ರಜಾವಾಣಿ~ ಕಚೇರಿಯ ಪಕ್ಕದಲ್ಲೇ ಇರುವ ಹಿಗಿನ್ ಬಾಥಮ್ಸನಲ್ಲಿ ಹೆಸರಿಗೆ ಕೆಲವು ಕನ್ನಡ ಪುಸ್ತಕಗಳಿದ್ದರೂ ಅವು ಸಾಹಿತ್ಯಾಸಕ್ತರಿಗಿಂತ ದೈವಭಕ್ತರನ್ನು ಆಕರ್ಷಿಸುವ ಪ್ರಕಟಣೆಗಳು.ಇಂದು ಪರಿಸ್ಥಿತಿ ಬದಲಾಗಿದೆ. ನಾನು ಮೊನ್ನೆ ಸಪ್ನಾಗೆ ಹೋದಾಗ ಅನಂತಮೂರ್ತಿಯವರ ಗದ್ಯದ ಪುಸ್ತಕಗಳನ್ನಲ್ಲದೆ ಕೈಲಾಸಂ ಅವರ ಹಾಸ್ಯದ ಪುಸ್ತಕಗಳನ್ನೂ, ರಾಜರತ್ನಂ ಅವರ ಮಕ್ಕಳ ಪುಸ್ತಕಗಳನ್ನೂ ಕೊಂಡೆ.ಪುಸ್ತಕದ ಅಂಗಡಿಗಳ ವಿಷಯದಲ್ಲಿ ಕೆಲವರಿಗೆ ಇದು ವಿಚಿತ್ರ ಎನಿಸಬಹುದು. ಎಂ.ಜಿ. ರಸ್ತೆ ಪ್ರದೇಶದಲ್ಲಿ ಆರಂಭವಾದ ದೊಡ್ಡ ಕಾರ್ಪೋರೆಟ್ ರೀತಿಯ ಪುಸ್ತಕದ ಅಂಗಡಿಗಳು ಈಚೆಗೆ ಮುಚ್ಚಿ ಹೋಗುತ್ತಿವೆ ಅಥವಾ ವ್ಯಾಪಾರದ ಪ್ರಮಾಣವನ್ನು ಚಿಕ್ಕದಾಗಿಸಿಕೊಳ್ಳುತ್ತಿವೆ. ಕ್ರಾಸ್‌ವರ್ಡ್ ಅಂಗಡಿಯನ್ನೇ ತೆಗೆದುಕೊಳ್ಳಿ.ಅದಕ್ಕಿಂತ ಒಳ್ಳೆಯ ಸ್ಥಳ, ವಿಸ್ತಾರ ಪ್ರದರ್ಶನ ಇದ್ದ ಪುಸ್ತಕದಂಗಡಿ ಬೆಂಗಳೂರಿನಲ್ಲಂತೂ ಇರಲಿಲ್ಲ. ಇಂದಿಗೂ ಸಾಹಿತ್ಯ ಭಂಡಾರ ಮತ್ತು ಗೀತಾ ಬುಕ್‌ಹೌಸ್ ಹುಡುಕಬೇಕಾದರೆ ಹಳೆ ಬೆಂಗಳೂರಿನ, ಅಂದರೆ ಚಿಕ್ಕಪೇಟೆಯ, ಸಂದಿಗಳು ಓಣಿಗಳು ಗೊತ್ತಿರಬೇಕು. `ಲ್ಯಾಂಡ್ ಮಾರ್ಕ್~, `ಕ್ರಾಸ್ ವರ್ಡ್~, `ಆಕ್ಸ್‌ಫರ್ಡ್~ನಂಥ ಪುಸ್ತದ ಅಂಗಡಿಗಳು ಹಿಂದೆ ಸರಿಯುತ್ತಿದ್ದಂತೆ ಹಳೆಯ ಪುಸ್ತಕದ ಅಂಗಡಿಗಳಾದ `ಬ್ಲಾಸಮ್ಸ~, `ಬುಕ್ ವರ್ಮ್~, `ಗೂಬೇಸ್~ ಮತ್ತು `ಸೆಲೆಕ್ಟ್~ ಚೆನ್ನಾಗಿಯೇ ವ್ಯಾಪಾರ ಮಾಡುತ್ತಿವೆ.ವಾರ ಪತ್ರಿಕೆಯೊಂದರ ವರದಿಗಾರ್ತಿ ಪ್ರಾಚಿ ಸಿಬಾಲ್ ದಂಡು ಪ್ರದೇಶವನ್ನು ಸುತ್ತಿ ಬಂದಾಗ ಇದು ಹೇಗಾಗಿರಬಹುದು ಎಂದು ಅಂಗಡಿಯವರನ್ನೇ ಕೇಳಿದರು. `ಬ್ಲಾಸಮ್ಸ~ ಮತ್ತು `ಸೆಲೆಕ್ಟ್~ನಂಥ ಅಂಗಡಿಗಳಲ್ಲಿ ಅಪರೂಪದ ಹಳೆಯ ಪುಸ್ತಕಗಳು ಕಣ್ಣಿಗೆ ಬೀಳಬಹುದು ಎಂಬ ಆಸೆಯಿಂದ ಓದುಗರು ಹೋಗುತ್ತಾರೆ. ಇನ್ನು ಇಲ್ಲೇ ಹೊಸ ಪುಸ್ತಕಗಳೂ ಕಡಿಮೆ ಬೆಲೆಗೆ ಸಿಕ್ಕರೆ ಅವರ ಖುಷಿ ಇಮ್ಮಡಿಯಾಗುತ್ತದೆ.

 

ಪುಸ್ತಕದ ವ್ಯಾಪಾರ ಬೇರೆ ವ್ಯಾಪಾರಕ್ಕಿಂತ ಭಿನ್ನ ಎಂದು ಕೇಳಿರುತ್ತೇವೆ. ಅಂಗಡಿಗೆ ಬರುವವರ ಅಭಿರುಚಿ ಅರಿತು, ಅವರನ್ನು ಸಂತೋಷ ಪಡಿಸುವ, ಸ್ವಲ್ಪ ಲಾಭ ಮಾಡುವ ವ್ಯಾಪಾರ ಅದು. ಆದರೆ ದೊಡ್ಡ ಪ್ರಮಾಣದ ಬಂಡವಾಳ ಹೂಡಿ, ಎಂ.ಬಿ.ಎ ಪದವೀಧರರನ್ನು ತಂತ್ರಗಾರಿಕೆ ರೂಪಿಸಲು ಇಟ್ಟು, ಝಗಮಗಿಸುವ ಅಂಗಡಿ ಮಾಡುವವರನ್ನು ಮೀರಿಸುತ್ತಿರುವ ಹಳೆಯ ಪುಸ್ತಕದ ಅಂಗಡಿಗಳ ಛಲ, ಸೂಕ್ಷ್ಮತೆ ಮತ್ತು ವ್ಯವಹಾರ ಜ್ಞಾನವನ್ನು ಮೆಚ್ಚಬೇಕು, ಅಲ್ಲವೇ?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry