ಬುಧವಾರ, ನವೆಂಬರ್ 13, 2019
25 °C

ಸೈಕಲ್ ಸವಾರಿ ಆರೋಗ್ಯದ ದಾರಿ

Published:
Updated:

ಪುಟಾಣಿ ಚಕ್ರ, ಬಣ್ಣಬಣ್ಣದ ಚಿತ್ರ ಬಿಡಿಸಿದ ಸಣ್ಣ ಆಸನ, ಮುಂದೊಂದು ಕ್ಯಾರಿಯರ್, ಪೆಡಲ್ ತುಳಿದರೆ ಗಾಳಿಗೆ ಮುತ್ತಿಕ್ಕುತ್ತಾ ಸಾಗುವ ಸೈಕಲ್...ಮೊದಲ ಬಾರಿಗೆ ಅಪ್ಪ ಸೈಕಲ್ ತಂದು ಮನೆ ಮುಂದೆ ನಿಲ್ಲಿಸಿದಾಗ `ಚಾಕಲ್ಲೂ' ಎಂದು ಸಂತೋಷದಿಂದ ಕುಣಿದು ಕುಪ್ಪಳಿಸಿದ ಮಕ್ಕಳಿಗೆ ಲೆಕ್ಕವಿಲ್ಲ. ಬಿದ್ದು ಮೈ ಕೈ ಹುಣ್ಣಾದರೂ ಊರೂರು ತಿರುಗೋಕೆ ಸೈಕಲ್ಲೇ ಸಾಥಿ. ಪುಕ್ಕಟೆಯಾಗಿ ಸಿಗುವ ಗಾಳಿ ಇದಕ್ಕೆ ಊಟ. ಕಲ್ಲು ಮುಳ್ಳುಗಳ ಕಡಿದಾದ ದಾರಿಯಾದರೂ ಬೇಸರವಿಲ್ಲದೆ ಚಲಿಸುವ ಇದರಲ್ಲೇ ನಿತ್ಯ ಸವಾರಿ.ಹೀಗೆ ಎಲ್ಲ ಸಂದರ್ಭದಲ್ಲೂ ತುಳಿದಂತೆ ಚಲಿಸುತ್ತಿದ್ದ ಪ್ರೀತಿಯ `ಚಾಕಲ್ಲು' ಹಿತ್ತಿಲಿನ ಹಳೆ ಕಂಬಕ್ಕೆ ಒರಗಿ ನಿಂತು ವರ್ಷಗಳಾಗಿವೆ. ದಣಿವು ನೀಡದೆ ಕುಂತಲ್ಲೇ ದೇಶ ತಿರುಗಿಸುವ ಬೈಕ್, ಕಾರುಗಳ ಮಂಪರಲ್ಲಿ ದೂಳು ತಿನ್ನುತ್ತಾ ತುಕ್ಕು ಹಿಡಿದ ಹಳೆ ಸಾಥಿದಾರನ ನೆನಪಾದರೂ ನಮಗೆಲ್ಲಿ ಆಗಬೇಕು ಹೇಳಿ.ಕಡಿಮೆ ಕಿಮ್ಮತ್ತಿನ ಸೈಕಲ್ ಮೋಹ ಇಂದಿಗೆ ನಶಿಸಿದೆ. ಅಪ್ಪ ಕೂಡಿಟ್ಟ ಹಣವೆಲ್ಲಾ ಖರ್ಚಾದರೂ ಸರಿ ಲಕ್ಷ, ಕೋಟಿ ಮೌಲ್ಯದ ಬೈಕ್, ಕಾರುಗಳ ಮೇಲೆಯೇ ಇಂದಿನ ಮಕ್ಕಳಿಗೆ ಪ್ರೀತಿ. ಹದಗೆಡುವ ಆರೋಗ್ಯ, ಮಾಲಿನ್ಯಗಳನ್ನೇ ಹಾಸಿ ಹೊದ್ದ ವಾತಾವರಣ. ಇಂಥ ಸಂದರ್ಭದಲ್ಲಿ ವ್ಯಾಮೋಹ ಮರೆತು `ಜಾಲಿ ರೈಡಿಂಗ್' ಅನುಭವ ನೀಡುವ ಸೈಕಲ್ ನೆಚ್ಚಿಕೊಂಡ ಕೆಲವರು `ಮೆಟ್ರೊ'ದೊಂದಿಗೆ ಅನುಭವ ಹಂಚಿಕೊಂಡಿದ್ದಾರೆ.ಉತ್ತಮ ಸಾರಥಿ

`ಎಂಟು ವರ್ಷದಿಂದೀಚೆಗೆ ಬೆಂಗಳೂರು ನನ್ನ ವಾಸಸ್ಥಾನ. ಒಂದು ದಿನ ಗೆಳೆಯರೊಂದಿಗೆ ಸೈಕಲ್ ಅಂಗಡಿ ಒಳಕ್ಕೆ ಸಾಗಿದೆ. ಚಿಕ್ಕಂದಿನಲ್ಲಿ ಸೈಕಲ್ ಏರಿ ಸುತ್ತುತ್ತಿದ್ದ ನೆನಪಾಗಿ ಮೂಕನಾದೆ. ಮರುದಿನದಿಂದಲೇ ಮತ್ತೆ ಸೈಕಲ್ ನನ್ನ ಸಾಥಿಯಾಯಿತು. ಕಚೇರಿಗೂ ಸೈಕಲ್ ಏರಿಯೇ ಹೋಗುತ್ತೇನೆ. ನಾನು ಮಾತ್ರವಲ್ಲ, ನನ್ನ ಇಬ್ಬರು ಗೆಳೆಯರು ಈಗ ಸೈಕಲ್ ಸವಾರಿಯನ್ನೇ ನೆಚ್ಚಿಕೊಂಡಿದ್ದಾರೆ' ಎಂದು ತಮ್ಮ ಸೈಕಲ್ ಪ್ರಯಾಣದ ಗುಟ್ಟು ತೆರೆದಿಟ್ಟರು ಬಂಗಾಳ ಮೂಲದ ಸೌಮ್ಯದೀಪ್ ಪಾಲ್.`ಮೊದಲಿಗೆ ಗೇರ್ ರಹಿತ ಸೈಕಲ್ ಬಳಸುತ್ತಿದ್ದೆ. ಆದರೆ ಮಹಾನಗರದಲ್ಲಿ ಇದು ತುಸು ಕಷ್ಟ ಎಂದು ಅರಿತು ಗೇರ್ ಸೈಕಲ್ ಮೊರೆಹೋದೆ. ಸೈಕಲ್ ತುಳಿಯುತ್ತಾ ಸಾಗುವುದು ಖುಷಿಕರವೇ ಆದರೂ ಆಟೊರಿಕ್ಷಾಗಳ ತೂರಾಟದಲ್ಲಿ ಕಷ್ಟ ಎನಿಸಿದ್ದಿದೆ. ಬಸ್ ನಂಬಿದ್ದ ದಿನಕ್ಕಿಂತ ಈಗ ನಾನು ಬೇಗ ಕಚೇರಿ ತಲುಪುತ್ತೇನೆ. ನನ್ನಿಂದ ಪ್ರೇರೇಪಿತರಾಗಿ ಹಲವರು ಸೈಕಲ್ ತುಳಿಯುವುದನ್ನು ರೂಢಿಸಿಕೊಂಡಿದ್ದಾರೆ. ಕೆಲವರಿಗೆ ಶಾಲಾ ದಿನಗಳಲ್ಲಿ ಓಡಿಸುತ್ತಿದ್ದ ಸೈಕಲ್ ಮಾತ್ರ ಗೊತ್ತಿದೆ. ಉತ್ತಮ ಗುಣಮಟ್ಟದ ಹಲವಾರು ಸೈಕಲ್ ದೊರೆಯುತ್ತದೆ ಎಂಬ ಬಗ್ಗೆ ಹಲವರಿಗೆ ತಿಳಿದಿಲ್ಲ. ಅಪಘಾತ ಆಗುವ ಸಂದರ್ಭ ಹೆಚ್ಚು ಎಂದುಕೊಂಡಿದ್ದಾರೆ. ಆದರೆ ಹೆಚ್ಚೆಚ್ಚು ಜನ ಸೈಕಲ್ಲನ್ನೇ ನೆಚ್ಚಿಕೊಂಡರೆ ಟ್ರಾಫಿಕ್ ಸಮಸ್ಯೆ ಉಂಟಾಗುವುದಿಲ್ಲ ಹಾಗೂ ಅಪಘಾತಗಳಿಗೆ ಎಡೆಯಿಲ್ಲ ಎಂಬುದನ್ನು ಮರೆಯುತ್ತಿದ್ದಾರೆ. ಸೈಕಲ್ ಸಾರಿಗೆಯ ಉತ್ತಮ ಸಾಧನ. ಅದು ಒತ್ತಡವನ್ನು ಕಡಿಮೆ ಮಾಡುತ್ತದೆ' ಎಂದು ಮಾಹಿತಿ ನೀಡುತ್ತಾರೆ ಉದ್ಯಮಿ ಹಾಗೂ ಎಂಬಿಎ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರೂ ಆಗಿರುವ ಪಾಲ್.ಸುರಕ್ಷಿತ

`ರೈಡ್ ಎ ಸೈಕಲ್' ಫೌಂಡೇಶನ್‌ನಲ್ಲಿ ಸ್ವಯಂ ಸೇವಕರಾಗಿರುವ ಮಯಂಕ್ ರುಂಗ್ಟಾ, ಸುಮಾರು 50ಕ್ಕೂ ಹೆಚ್ಚು ಕಾರ್ಯಾಗಾರವನ್ನು ನಡೆಸಿದ್ದಾರೆ. ರಾಜಸ್ತಾನದ ಕಿಶ್ನಘರ್ ಎಂಬಲ್ಲಿ ಜನಿಸಿದ ಇವರು ಬೆಳೆದಿದ್ದು ಕರ್ನಾಟಕದಲ್ಲಿ. ಉದ್ಯೋಗ ಸಾಫ್ಟವೇರ್ ಎಂಜಿನಿಯರಿಂಗ್.

ಶಾಲಾ ಬದುಕಿನಿಂದಲೇ ಸೈಕಲ್ ನೆಚ್ಚಿಕೊಂಡಿದ್ದ ಇವರಿಗೆ ಕಾಲೇಜಿನಲ್ಲಿ ಬಯಸಿದ ಬೈಕ್ ಸಿಕ್ಕಿತು. ಕೆಲವೇ ವರ್ಷಗಳಲ್ಲಿ ಅದು ಕಳುವಾಯಿತು. ಕೆಲಸ ಸಿಕ್ಕಿದ ಮೂರೇ ತಿಂಗಳಲ್ಲಿ ಮೆರಿಡಾ (ಸೈಕಲ್) ಖರೀದಿಸಿದರು. ಇದೀಗ ಮೆರಿಡಾ ಹಾಗೂ ರುಂಗ್ಟಾ ಪಯಣಕ್ಕೆ ಏಳನೇ ವರ್ಷ.80 ವರ್ಷದ ವಯಸ್ಕರೊಬ್ಬರು ಎಲ್ಲಾ ಯುವಕರೊಂದಿಗೆ 25 ಕಿ.ಮೀ ಸೈಕಲ್ ಓಡಿಸಿದ್ದು ಇವರ ಸ್ಫೂರ್ತಿಗೆ ಕಾರಣ. `ಆ ವಯಸ್ಸಿನಲ್ಲಿ ಗಟ್ಟಿಯಾಗಿದ್ದರು. ನಾನು ಆ ವಯಸ್ಸು ತಲುಪಿದಾಗ ಇಷ್ಟೇ ಸಧೃಢವಾಗಿರಬೇಕು ಎಂದು ನಿರ್ಧರಿಸಿದ್ದೆ. ವರ್ಷಕ್ಕೆ ಸುಮಾರು 7000 ಕಿ.ಮೀ.ಗಿಂತಲೂ ಹೆಚ್ಚು ದೂರವನ್ನು ನಾನು ಸೈಕ್ಲಿಂಗ್ ಮಾಡಿಯೇ ಕ್ರಮಿಸಿದ್ದೇನೆ. ದುಡ್ಡು ಉಳಿಸುವುದರೊಂದಿಗೆ ಇಂಧನವನ್ನು ಉಳಿಸಿದ ಸಮಾಧಾನ. ಮೊದಲೆಲ್ಲಾ ರಸ್ತೆಯ ಇಕ್ಕೆಲಗಳಲ್ಲಿ ಮರ ಗಿಡಗಳಿರುತ್ತಿದ್ದವು. ತಣ್ಣನೆಯ ವಾತಾವರಣವಿತ್ತು. ಈಗ ಉರಿ ಬಿಸಿಲಿನ ಬೋಳು ರಸ್ತೆಯಲ್ಲಿ ಸೈಕ್ಲಿಂಗ್ ಮಾಡುವಾಗ ಬೇಸರವಾಗುತ್ತದೆ. ಆದರೆ ಬೇರೆಲ್ಲಾ ಸಂಪರ್ಕ ಸಾರಿಗೆ ವ್ಯವಸ್ಥೆಗಳಿಗಿಂತ ನಾನು ಬೇಗ ತಲುಪುತ್ತೇನೆ ಹಾಗೂ ಸೈಕಲ್ ಪರಿಸರ ಸ್ನೇಹಿ ಕೂಡಾ.ಹೆಚ್ಚಿನ ಜನ ಸೈಕಲ್ ಮೊರೆಹೋಗದಿರುವುದಕ್ಕೆ ಕಾರಣ ಹೆದರಿಕೆ. ಭಾರಿ ಗಾತ್ರದ ವಾಹನಗಳು ಹಾಗೂ ಟ್ರಾಫಿಕ್ ಮಧ್ಯೆ ಅಪಘಾತ ಆಗಬಹುದು ಎಂಬುದು ಹೆಚ್ಚಿನವರ ಭಯ. ಆದರೆ ಒಮ್ಮೆ ಸೈಕಲ್ ಪ್ರಯಾಣದ ರುಚಿ ಹತ್ತಿದರೆ ಎಂದೂ ಅದನ್ನು ನೀವು ಬಿಟ್ಟಿರಲಾರಿರಿ. ಹೆಚ್ಚು ಸುರಕ್ಷಿತ ಕೂಡ' ಎನ್ನುತ್ತಾರೆ ರುಂಗ್ಟಾ.

ಕಾರ್ಯಾಗಾ

ಅಂದಹಾಗೆ, ಸೈಕಲ್ ಪ್ರೀತಿ ಹೊಂದಿದ ಮನಸ್ಸುಗಳಿಗಾಗಿ ಇನ್‌ಆರ್ಬಿಟ್ ಮಾಲ್ ಶನಿವಾರ ಸೈಕ್ಲಿಂಗ್ ಕುರಿತ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ಪ್ರವೇಶ ಉಚಿತ. ಸೈಕಲ್ ಕೊಳ್ಳುವ ಯೋಜನೆ ನಿಮಗಿದ್ದರೆ ನಿಮ್ಮ ಪ್ರಶ್ನೆಗಳಿಗೆ ಸೈಕ್ಲಿಂಗ್ ತಜ್ಞರು ಉತ್ತರ ನೀಡಲಿದ್ದಾರೆ. ಸೂಕ್ತ ಮಾರ್ಗದರ್ಶನವೂ ಸಿಗಲಿದೆ. ಕಾರ್ಯಾಗಾರ ಮಧ್ಯಾಹ್ನ 3.30ಕ್ಕೆ ನಡೆಯಲಿದೆ. ನಂತರ 5.30ಕ್ಕೆ 6-8 ಕಿ.ಮೀ.ಗಳ ಸೈಕಲ್ ರೈಡಿಂಗ್ ಇರುತ್ತದೆ.ಸ್ಥಳ: ಇನ್‌ಆರ್ಬಿಟ್ ಮಾಲ್, ನಂ.75, ಇಪಿಐಪಿ ಏರಿಯಾ, ವೈಟ್‌ಫೀಲ್ಡ್.

ಸೈಕಲ್ ಸವಾರಿ ಒಳಿತು

ಕೊಡಗಿನ ಕಾರ್ತಿಕ್ ಪೊನ್ನಪ್ಪ ಪ್ರಕಾರ ಸೈಕ್ಲಿಂಗ್ ಮಾಡುವುದು ಆರೋಗ್ಯಕರ. ಬೇಗನೆ ತಲುಪಬಹುದು ಹಾಗೂ ಸುರಕ್ಷಿತ ಸಂಪರ್ಕ ಸಾಧನ. `ಪ್ರತಿದಿನ ಬೆಳಗಾದರೆ ಸಾವಿರಾರು ವಾಹನಗಳು ರಸ್ತೆಯಲ್ಲಿ ಹಾರ್ನ್ ಮಾಡುತ್ತಾ ನಿಂತಿರುತ್ತವೆ. ಒಬ್ಬರಿಗೆ ಒಂದು ಕಾರು.ಹೀಗಾದಲ್ಲಿ ವಾಹನ ದಟ್ಟಣೆ ಉಂಟಾಗದೇ ಇರುತ್ತದೆಯೇ. ನಾನು ಸೈಕಲ್ ಖರೀದಿಸಿದ ಒಂದೇ ತಿಂಗಳಲ್ಲಿ ಮನಾಲಿಯಿಂದ ಲಡಾಖ್‌ಗೆ ಸೈಕ್ಲಿಂಗ್ ಮಾಡಿಕೊಂಡು ಬಂದೆ. ಹಿಮಾಲಯದ ತಪ್ಪಲುಗಳಲ್ಲಿ ಚಲಿಸುವ ಮಜಾವೇ ಬೇರೆ. ಆದರೆ ಸೈಕಲಿಂಗ್ ಮಾಡುವುದು ಅವರವರ ಇಷ್ಟಕ್ಕೆ ಬಿಟ್ಟದ್ದು. ನಾನು ಏಳು ವರ್ಷದಿಂದ ಮಾರ್ಕೆಟಿಂಗ್ ಕ್ಷೇತ್ರದಲ್ಲಿದ್ದೇನೆ. ಟೂರ್ ಆಫ್ ನೀಲಗಿರೀಸ್ ಸಂಸ್ಥೆಯೊಂದಿಗೂ ಕೆಲಸ ಮಾಡುತ್ತೇನೆ. ನೀಲಗೀರಿಸ್ ಕರ್ನಾಟಕ, ತಮಿಳುನಾಡು, ಕೇರಳಗಳಲ್ಲಿ ಆಯೋಜಿಸಿದ್ದ 850+ ಕಿ.ಮೀ. ಸೈಕ್ಲಿಂಗ್‌ನಲ್ಲಿ ಭಾಗವಹಿಸಿದ್ದೆ. ಆ ಅನುಭವವನ್ನು ಮರೆಯಲೇ ಸಾಧ್ಯವಿಲ್ಲ. ಒಟ್ಟಿನಲ್ಲಿ ಸೈಕ್ಲಿಂಗನ್ನು ನಾನು ತುಂಬಾ ಎಂಜಾಯ್ ಮಾಡುತ್ತೇನೆ' ಎನ್ನುತ್ತಾರೆ ಕಾರ್ತಿಕ್ ಪೊನ್ನಪ್ಪ.

 

 

ಪ್ರತಿಕ್ರಿಯಿಸಿ (+)