ಸೈಕಲ್ ಸವಾರಿ; ಸಾಹಸಕ್ಕೆ ರಹದಾರಿ

7

ಸೈಕಲ್ ಸವಾರಿ; ಸಾಹಸಕ್ಕೆ ರಹದಾರಿ

Published:
Updated:

ಉತ್ತರಾಖಂಡ ರಾಜ್ಯದ ಹಿಮಾಲಯ ತಪ್ಪಲಿನ ಆ ಯುವಕರದ್ದು ಒಂದೊಂದು ರೀತಿಯ ಕಥೆ. ಆದರೆ ಇಬ್ಬರ ದಾರಿಯೂ ಒಂದೇ. ಸಾತೋಲಿಯ 23 ವರ್ಷದ ರಾಕೇಶ್ ತಮ್ಮ ಹಳ್ಳಿಯ ರಸ್ತೆಬದಿಯ ಚಹಾದಂಗಡಿಯಲ್ಲಿ ತನ್ನ ತಂದೆಯ ಜೊತೆಗೆ ಕೆಲಸ ಮಾಡುತ್ತಾನೆ. ಅದರೆ, ಕಪ್ಪು, ಬಸಿ ತೊಳೆಯುತ್ತಲೇ ದೊಡ್ಡ ಕ್ರೀಡಾಪಟುವಾಗುವ ಕನಸು ಕಾಣುತ್ತಾನೆ. ಅದಕ್ಕಾಗಿ ಆತ ಆಯ್ದುಕೊಂಡಿದ್ದು ಬೈಸಿಕಲ್!

ಇನ್ನೊಬ್ಬ ಯುವಕ 21 ವರ್ಷದ ಪ್ರಮೋದ್ ಬಿಎ ಪದವಿ ವಿದ್ಯಾರ್ಥಿ, ಸೈನ್ಯ ಸೇರಿ ದೇಶ ಕಾಯುವ ಗುರಿ ಇಟ್ಟುಕೊಂಡಿರುವ ಅವರಿಗೂ ದೊಡ್ಡ ಸೈಕ್ಲಿಸ್ಟ್ ಆಗಿ ಬೆಳೆಯುವ ತವಕ. ಇವರಿಬ್ಬರ ನಡುವೆ ಸ್ನೇಹದ ಬೆಸುಗೆಯಾಗಿದ್ದು ‘ಸೈಕಲ್ ಸಹವಾಸ’.ಇತ್ತೀಚೆಗೆ ಸುಮಾರು 15 ದಿನಗಳ ಕಾಲ ದಕ್ಷಿಣ ಭಾರತದ ಸುಂದರವಾದ ನೀಲಗಿರಿ ಬೆಟ್ಟಗಳಲ್ಲಿ ವಿಹರಿಸಿದರು. ಅವಿಸ್ಮರಣೀಯ ಅನುಭವದೊಂದಿಗೆ ತಮ್ಮ ಊರಿಗೆ ಮರಳಿದರು. ಬೆಂಗಳೂರಿನ ರೈಡ್ ಎ ಸೈಕಲ್ ಪ್ರತಿಷ್ಠಾನವು ಆಯೋಜಿಸಿದ್ದ ಟೂರ್ ಆಫ್‌ ನೀಲಗಿರಿಸ್‌ನಲ್ಲಿ ಗಮನ ಸೆಳೆದು ವಿಶೇಷ ಪ್ರಶಸ್ತಿ ಪಡೆದ ಇವರಿಬ್ಬರೂ ಭಾರತದ ಸೈಕ್ಲಿಂಗ್‌ ಕ್ರೀಡೆಯಲ್ಲಿ ಮಿಂಚುವ ಭರವಸೆ ಮೂಡಿಸಿದ್ದಾರೆ.ಇವರೊಂದಿಗೆ ಈ ಟೂರ್‌ನಲ್ಲಿ ಭಾಗವಹಿಸಿದ್ದ ಅಮೆರಿಕ, ಇಂಗ್ಲೆಂಡ್‌, ಐರ್ಲೆಂಡ್, ಬೆಂಗಳೂರು, ಮೈಸೂರು, ಮುಂಬೈ, ದೆಹಲಿ ಮತ್ತಿತರೆಡೆಗಳಿಂದ ಬಂದಿದ್ದ 103 ಸೈಕ್ಲಿಸ್ಟ್‌ಗಳೆಲ್ಲ ಒಂದೆಡೆ ಸೇರಲು ಕಾರಣವಾಗಿದ್ದೂ ಅತ್ಯಂತ ಹಳೆಯ ಸಾರಿಗೆಯಲ್ಲಿ ಒಂದಾದ ಬೈಸಿಕಲ್.ಸೈಕ್ಲಿಂಗ್‌ ಕ್ರೀಡೆ ಮತ್ತು ಸ್ಪರ್ಧೆಯ ಜೊತೆಗೆ ಈ ಪಯಣದಲ್ಲಿ ಸಾಂಸ್ಕೃತಿಕ ವಿನಿಮಯವೂ ನಡೆದಿದ್ದು ವಿಶೇಷ. ಏಕೆಂದರೆ ಇದರಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರ ದೇಶ, ಭಾಷೆ, ಆಚಾರ, ವಿಚಾರಗಳು ಮತ್ತು ವೃತ್ತಿಗಳು ವಿಭಿನ್ನ. ಆದರೆ ಎಂಟು ದಿನಗಳ ಕಾಲ ಒಂದು ಕುಟುಂಬದಂತೆ ಇದ್ದು, ಪರಸ್ಪರ ಜ್ಞಾನ, ಸಂಸ್ಕೃತಿಯ ಅರಿವು ಪಡೆದರು.ಹವ್ಯಾಸದಿಂದ ಸಾಹಸ ಕ್ರೀಡೆಗೆ..

ಕೈತುಂಬಾ ಸಂಬಳ, ಐಷಾರಾಮಿ ಜೀವನ ನಡೆಸುವ ಅನುಕೂಲ, ಅತ್ಯಾಧುನಿಕ ಕಾರುಗಳಲ್ಲಿ ಓಡಾಡುವ ಅವಕಾಶ ಇವರಿಗೆ ಇದೆ. ಆದರೆ ಎಲ್ಲಕ್ಕಿಂತ ಅಮೂಲ್ಯವಾದ ಆರೋಗ್ಯ ನಿರ್ವಹಣೆಗೆ ಇವರೆಲ್ಲ ಆಯ್ದುಕೊಂಡಿದ್ದು ಸೈಕ್ಲಿಂಗ್‌. ಸುಮ್ಮನೇ ಆರಂಭವಾದ ಹವ್ಯಾಸವು ಇವರನ್ನು ಸಾಹಸಿಗಳನ್ನಾಗಿ ಪರಿವರ್ತಿಸಿತು. ಹೀಗೆ ಬೆಳೆದಿದ್ದು ‘ರೈಡ್‌ ಎ ಸೈಕಲ್’ ಎಂಬ ಸಂಸ್ಥೆ.ಬೆಂಗಳೂರಿನ ಶ್ರೀಧರ್ ಪಬ್ಬಿಶೆಟ್ಟಿ ಮತ್ತು ಸಂಗಡಿಗರು ಆರಂಭಿಸಿದ ಈ ಸಂಸ್ಥೆಯು ಇತ್ತೀಚೆಗೆ (ಡಿಸೆಂಬರ್ 16 ರಿಂದ 23) ಆರನೇ ಬಾರಿ ಟೂರ್ ಆಫ್‌ ನೀಲಗಿರಿಸ್ ಆಯೋಜಿಸಿತ್ತು. ಸದ್ಯ ಈ ಕಾರ್ಯಕ್ರಮದ ಮೂಲಕ ಸೈಕ್ಲಿಂಗ್‌ ಕ್ರೀಡೆಯ ಎಲ್ಲ ಮಜಲುಗಳನ್ನು ಭಾರತಕ್ಕೆ ತರುವ ತಂದು, ಅಂತರರಾಷ್ಟ್ರೀಯ ಸೈಕ್ಲಿಸ್ಟ್‌ಗಳನ್ನು ಸಿದ್ಧಗೊಳಿಸುವತ್ತ ಸಂಸ್ಥೆಯು ಚಿತ್ತ ಹರಿಸಿದೆ.‘ವಿವಿಧ ಕಂಪೆನಿಗಳ ಪ್ರಾಯೋಜಕತ್ವ, ಪ್ರವೇಶ ಶುಲ್ಕಗಳ ಮೂಲಕವೇ ನಮ್ಮ ಚಟುವಟಿಕೆಗಳನ್ನು ನಡೆಸುತ್ತಿದ್ದೇವೆ. ಪ್ರತಿವರ್ಷವೂ ಕೆಲವು ಹೊಸ ಪ್ರಯೋಗಗಳನ್ನು ಮಾಡುತ್ತಿದ್ದೇವೆ. ನೀಲಗಿರಿ ಮಾತ್ರವಲ್ಲ, ಹೊರರಾಜ್ಯಗಳ ಟೂರ್ ಮತ್ತು ಸ್ಪರ್ಧೆಗಳಿಗೆ ನಾವು ಹೋಗಿರುತ್ತೇವೆ. ಆಗ ಅಲ್ಲಿಯ ಕೆಲವು ಸಾಮಾಜಿಕ ಸೇವಾ ಸಂಸ್ಥೆಗಳೊಂದಿಗೆ ಕೈಜೋಡಿಸಿದ್ದೇವೆ. ಆ ಮೂಲಕ ನಮ್ಮಿಂದ ಆಗುವ ಸಹಾಯವನ್ನೂ ಮಾಡುತ್ತಿದ್ದೇವೆ. ಅದೇ ದಿಸೆಯಲ್ಲಿ ಹೋದ ವರ್ಷ ಉತ್ತರಾಖಂಡದ ಆರೋಹಿ ಸಂಸ್ಥೆಯೊಂದಿಗೆ ಕಾರ್ಯನಿರ್ವಹಿಸಿದ್ದೆವು. ಆ ಸಂಸ್ಥೆಯ ಶೋಧವೇ ಪ್ರಮೋದ್ ಮತ್ತು ರಾಕೇಶ್. ಗುಡ್ಡಗಾಡು, ಕಣಿವೆಗಳಲ್ಲಿ ಸೈಕಲ್ ಒಂದೇ ಅವರಿಗೆ ಕೈಗೆಟಕುವ ಸುಲಭ ಸಾರಿಗೆ. ಖರ್ಚೂ ಕಡಿಮೆ. ಇದರಿಂದ ಅವರಲ್ಲಿ ನೈಜವಾಗಿಯೇ ದೈಹಿಕ, ಮಾನಸಿಕ ದೃಢತೆ ಬೆಳೆದಿರುತ್ತದೆ. ಇಂತಹ ಪ್ರತಿಭೆಗಳನ್ನು ಹುಡುಕಿ ಪ್ರೋತ್ಸಾಹಿಸುವುದು ನಮ್ಮ ಗುರಿ’ ಎಂದು ಪ್ರತಿಷ್ಠಾನದ ಸಂಚಾಲಕ ಶ್ರೀಧರ್ ಪಬ್ಬಿಶೆಟ್ಟಿ ಹೇಳುತ್ತಾರೆ.ಸೈಕ್ಲಿಂಗ್‌ ಕೇವಲ ರಸ್ತೆ ಮತ್ತು ಟ್ರ್ಯಾಕ್‌ ಸ್ಪರ್ಧೆಗಳಿಗೆ ಸೀಮಿತವಾಗಿಲ್ಲ. ಟೂರ್, ಮೌಂಟೇನ್ ಬೈಕಿಂಗ್, ಟ್ರಯಥ್ಲಾನ್  ಮತ್ತಿತರ ಸಾಹಸ ಕ್ರೀಡೆಗಳೂ ಆರಂಭವಾಗಿವೆ. ವಿವಿಧ ಕ್ಷೇತ್ರಗಳ ವೃತ್ತಿಪರರೂ ಇವುಗಳಲ್ಲಿ ಭಾಗವಹಿಸು ತ್ತಿದ್ದಾರೆ. ಇದರಿಂದಾಗಿ ಬೆಂಗಳೂರು ಮಹಾನಗರ ದಲ್ಲಿ ಇಂತಹ ಹಲವು ಹವ್ಯಾಸಿ ಮತ್ತು ವೃತ್ತಿಪರ ಸೈಕ್ಲಿಂಗ್‌ ಸಂಸ್ಥೆಗಳು ತಲೆ ಎತ್ತುತ್ತಿವೆ.‘ಭಾರತದ ಭೌಗೋಳಿಕ ಸ್ಥಿತಿಯಲ್ಲಿ ಸರಿಯಾಗಿ ಶೋಧ ಮಾಡಿದರೆ ಅದ್ಭುತವಾದ ಪ್ರತಿಭಾವಂತರು ಸಿಗುತ್ತಾರೆ. ಆದರೆ ಬಡತನ ಮತ್ತು ಮಾರ್ಗದರ್ಶನದ ಕೊರತೆಯಿಂದಾಗಿ ಅವರು ಬೆಳಕಿಗೆ ಬರುವುದೇ ಇಲ್ಲ. ಆ ನಿಟ್ಟಿನಲ್ಲಿ ಸಂಸ್ಥೆಗಳು ಕಾರ್ಯನಿರ್ವಹಿಸಬೆಕು. ಈ ನೀಲಗಿರಿ ಟೂರ್ ನಮಗೆ ಅತ್ಯಂತ ಆನಂದದಾಯಕವಾದ ಮತ್ತು ಅಪರೂಪದ ಅನುಭವ ನೀಡಿದೆ. ಮುಂದಿನ ಬಾರಿಯೂ ಬರುತ್ತೇವೆ. ಮೈಸೂರು, ಮಡಿಕೇರಿ, ಊಟಿ, ಕಲ್ಲಟ್ಟಿಯ ಪ್ರಯಾಣ ಎಂದಿಗೂ ಮರೆಯುವುದಿಲ್ಲ’ ಎಂದು ಈ ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿ ಪಡೆದ ನೀಲ್ಸ್‌ ಈಗಿಲ್ ಬ್ರಾಡ್‌ಬರ್ಗ್ ಹೇಳುತ್ತಾರೆ.‘ಪ್ರತಿದಿನ ಸುಮಾರು 3ರಿಂದ 4 ತಾಸು ಅಭ್ಯಾಸ ಮಾಡುತ್ತೇವೆ. ಇದರಿಂದ ನಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ. ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಿದಾಗ ನಮ್ಮ ವೃತ್ತಿಯ ಒತ್ತಡವೂ ನಿವಾರಣೆಯಾಗುತ್ತದೆ. ನನಗಂತೂ ಸೈಕ್ಲಿಂಗ್‌ ಎಂದರೆ ಜೀವನದ ಅವಿಭಾಜ್ಯ ಅಂಗವಾಗಿದೆ’ ಎಂದು ಐರ್ಲೆಂಡ್‌ ಮೂಲದ, ಬೆಂಗಳೂರಿನ ಐಟಿ ಸಂಸ್ಥೆಯ ಸಲಹಾಗಾರ್ತಿಯಾಗಿರುವ 48 ವರ್ಷದ ವಿಕಿ ನಿಕೋಲ್ಸನ್ ಹೇಳುತ್ತಾರೆ.ಬಾಗಲಕೋಟೆ ಮತ್ತು ವಿಜಾಪುರ ಜಿಲ್ಲೆಗಳ ಸೈಕ್ಲಿಸ್‌್ಟಗಳು ಇದುವರೆಗೂ ಕರ್ನಾಟಕದ ಕೀರ್ತಿಪತಾಕೆಯನ್ನು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ್ದಾರೆ. ಇದೀಗ ಈ ಆರೋಗ್ಯಕರ ಹವ್ಯಾಸವು ಮೆಟ್ರೋ ನಗರಿಗಳಿಗೆ ಹಬ್ಬುತ್ತಿರುವುದು ಆಶಾದಾಯಕ ಬೆಳವಣಿಗೆ. ಇನ್ನೊಂದು ವಿಶೇಷವೆಂದರೆ ವರ್ಷದಿಂದ ವರ್ಷಕ್ಕೆ ಈ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry