`ಸೈಕೊ' ತಲೆಗೆ 5 ಲಕ್ಷ ಇನಾಮು

7

`ಸೈಕೊ' ತಲೆಗೆ 5 ಲಕ್ಷ ಇನಾಮು

Published:
Updated:

ಬೆಂಗಳೂರು:  ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ತಪ್ಪಿಸಿಕೊಂಡಿರುವ ಕೈದಿ ಜೈಶಂಕರ್ ಅಲಿಯಾಸ್ ಶಂಕರ್‌ನ ಬಗ್ಗೆ ಸುಳಿವು ನೀಡಿದವರಿಗೆ ರೂ. 5 ಲಕ್ಷ ಬಹುಮಾನ ನೀಡಲಾಗುವುದು ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಪ್ರಕಟಿಸಿದರು.`ಈತನ ಪತ್ತೆಗೆ ಬೆಂಗಳೂರು ನಗರ ಪೂರ್ವ ವಿಭಾಗದ (ಕಾನೂನು ಮತ್ತು ಸುವ್ಯವಸ್ಥೆ) ಜಂಟಿ ಪೊಲೀಸ್ ಕಮಿಷನರ್ ಬಿ.ಕೆ.ಸಿಂಗ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಸಾರ್ವಜನಿಕರಿಗೆ ಯಾವುದೇ ಮಾಹಿತಿ ಸಿಕ್ಕಿದರೆ ಕೂಡಲೇ ಪೊಲೀಸರ ಗಮನಕ್ಕೆ ತರಬೇಕು. ಮಾಹಿತಿ ನೀಡುವವವರ ಗುರುತನ್ನು ಗೋಪ್ಯವಾಗಿ ಇಡಲಾಗುವುದು' ಎಂದು ಜಾರ್ಜ್ `ಪ್ರಜಾವಾಣಿ'ಗೆ ತಿಳಿಸಿದರು.ಪ್ರಕರಣದಲ್ಲಿ ಕಾರಾಗೃಹ ಅಧಿಕಾರಿಗಳು ಸಾಕಷ್ಟು ನಿರ್ಲಕ್ಷ್ಯ ತೋರಿರುವುದು ಗೊತ್ತಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ ಇಲಾಖೆ)  ಎಸ್.ಕೆ.ಪಟ್ನಾಯಕ್ ಅವರಿಗೆ ಸೂಚಿಸಲಾಗಿದೆ.ಅವರು ಮೂರ್ನಾಲ್ಕು ದಿನಗಳಲ್ಲಿ ವರದಿ ನೀಡಲಿದ್ದಾರೆ. ಅದನ್ನು ಆಧರಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.ಜೈಶಂಕರ್ ಬಗ್ಗೆ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಮತ್ತು  ತಮಿಳುನಾಡು, ಕೇರಳ, ಆಂಧ್ರಪ್ರದೇಶ ಸೇರಿದಂತೆ ನೆರೆ ರಾಜ್ಯಗಳ ಪೊಲೀಸ್ ಇಲಾಖೆಗಳಿಗೂ ಮಾಹಿತಿ ನೀಡಲಾಗಿದೆ.ಕಾರಾಗೃಹಕ್ಕೆ ಭೇಟಿ: ಘಟನೆ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನ ಕಾರಾಗೃಹಕ್ಕೆ ಭೇಟಿ ನೀಡಿದ ಜಾರ್ಜ್, ಎರಡು ತಾಸಿಗೂ ಹೆಚ್ಚು ಕಾಲ ಪರಿಶೀಲನೆ ನಡೆಸಿದರು. ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು. ನಗರ ಪೊಲೀಸರು ಹಾಗೂ ಕಾರಾಗೃಹ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, `ಕಾರಾಗೃಹದಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾಗಳು ಹಳೆಯ ಮಾದರಿಯವು. ಅವುಗಳಲ್ಲಿ ಹೆಚ್ಚಿನವು ಕಾರ್ಯ ನಿರ್ವಹಿಸುತ್ತಿಲ್ಲ. ಈ ಕಾರಣಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನದ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ನಿರ್ಧರಿಸಲಾಗಿದೆ' ಎಂದರು.ಅಮೆರಿಕ ಮತ್ತು ಕೊರಿಯಾ ಮೂಲದ ಕಂಪೆನಿಗಳೊಂದಿಗೆ ಸದ್ಯದಲ್ಲೇ ಮಾತುಕತೆ ನಡೆಸಿ, ಸುಧಾರಿತ ಕ್ಯಾಮೆರಾಗಳನ್ನು ಖರೀದಿಸಲಾಗುವುದು. ಬ್ಯಾರಕ್‌ಗಳು ಹಾಗೂ ಅತಿ ಭದ್ರತೆಯ ಬ್ಲಾಕ್‌ನ ಕೊಠಡಿಯ ಬಾಗಿಲುಗಳಿಗೆ ಬಯೊಮೆಟ್ರಿಕ್ (ಬೆರಳಚ್ಚು) ವ್ಯವಸ್ಥೆ ಅಳವಡಿಸಲಾಗುವುದು ಎಂದು ತಿಳಿಸಿದರು.ರಾಜ್ಯ ಪೊಲೀಸ್ ಮಹಾನಿರ್ದೇಶಕ ಲಾಲ್ ರೋಕುಮಾ ಪಚಾವೊ, ಕಾರಾಗೃಹಗಳ ಇಲಾಖೆ ಎಡಿಜಿಪಿ ಕೆ.ವಿ.ಗಗನ್‌ದೀಪ್, ಬೆಂಗಳೂರು ನಗರ ಪೊಲೀಸ್ ಕಮಿಷನರ್ ರಾಘವೇಂದ್ರ ಔರಾದಕರ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.ವೈದ್ಯರಿಗೆ ಮನವಿ

ಜೈಲಿನಿಂದ ಪರಾರಿಯಾಗುವ ಯತ್ನದಲ್ಲಿ ಜೈಶಂಕರ್‌ನ ಕಾಲಿಗೆ ಕಾರಾಗೃಹದ ಕಾಂಪೌಂಡ್ ಮೇಲಿನ ಗಾಜಿನ ಚೂರುಗಳು ಚುಚ್ಚಿ ಗಾಯವಾಗಿದೆ. ಈ ಹಿನ್ನೆಲೆಯಲ್ಲಿ ಆತ ಚಿಕಿತ್ಸೆಗಾಗಿ ಹೆಸರು ಬದಲಿಸಿಕೊಂಡು ಆಸ್ಪತ್ರೆಗೆ ಬರುವ ಸಾಧ್ಯತೆ ಇದೆ. ಈ ಬಗ್ಗೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯಕೀಯ ಸಿಬ್ಬಂದಿ ಎಚ್ಚರ ವಹಿಸಬೇಕು ಎಂದೂ ಪೊಲೀಸರು ಮನವಿ ಮಾಡಿದ್ದಾರೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry