ಸೈಕ್ಲಿಂಗ್ ಕಣಜದಲ್ಲಿ ಮಹಿಳಾ ಕ್ರಿಕೆಟ್

7

ಸೈಕ್ಲಿಂಗ್ ಕಣಜದಲ್ಲಿ ಮಹಿಳಾ ಕ್ರಿಕೆಟ್

Published:
Updated:
ಸೈಕ್ಲಿಂಗ್ ಕಣಜದಲ್ಲಿ ಮಹಿಳಾ ಕ್ರಿಕೆಟ್

`ಸೈಕ್ಲಿಂಗ್ ಕಣಜ' ಖ್ಯಾತಿಯ ವಿಜಾಪುರದಲ್ಲಿ ಈಗ ಮಹಿಳಾ ಕ್ರಿಕೆಟ್ ಕಲರವ. ಉನ್ನತ ಶಿಕ್ಷಣ ಪಡೆಯಲಿಕ್ಕೆ ಊರು ಬಿಡಲು ಇಲ್ಲಿಯ ಬಹುಪಾಲು ಯುವತಿಯರು ಹಿಂಜರಿಯುತ್ತಿದ್ದ ಕಾಲವೊಂದಿತ್ತು. ಈಗ ಅವರೆಲ್ಲ ಬದಲಾಗುತ್ತಿದ್ದಾರೆ. ಸೈಕ್ಲಿಂಗ್‌ನಂತೆ ಮಹಿಳಾ ಕ್ರಿಕೆಟ್‌ನಲ್ಲಿಯೂ ವಿಜಾಪುರ ಜಿಲ್ಲೆಯ ಛಾಪು ಮೂಡಿಸುತ್ತಿದ್ದಾರೆ.ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಹಿರಿಯ ಮತ್ತು ಕಿರಿಯರ ವಿಭಾಗದ ಮಹಿಳಾ ಕ್ರಿಕೆಟ್ ತಂಡದಲ್ಲಿ ವಿಜಾಪುರ ಜಿಲ್ಲೆಯ ಐವರು ಯುವತಿಯರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ಹಿರಿಯರ ಮಹಿಳಾ ತಂಡದಲ್ಲಿ ವಿಭಾರಾಣಿ ನಿವರಗಿ ಸ್ಥಾನ ಪಡೆದುಕೊಂಡಿದ್ದರು. ಈಗ ರಾಜೇಶ್ವರಿ ಶಿವಾನಂದ ಗಾಯಕವಾಡ, ರಾಮೇಶ್ವರಿ ಶಿವಾನಂದ ಗಾಯಕವಾಡ ಎಂಬ ಸಹೋದರಿಯರು, ಪೂಜಾ ನಾರಾಯಣ ಪಂಚಾಳ, ಕವಿತಾ ಬಡಿಗೇರ, ಪ್ರಿಯಾಂಕಾ ಗಾಯಕವಾಡ ರಾಜ್ಯ ತಂಡದಲ್ಲಿದ್ದಾರೆ.ವಿಜಯವಾಡದಲ್ಲಿ ಇತ್ತೀಚೆಗೆ ನಡೆದ ದಕ್ಷಿಣ ಭಾರತ ಮಹಿಳಾ ಕ್ರಿಕೆಟ್ ಟೂರ್ನಿಯಲ್ಲಿ ರಾಜೇಶ್ವರಿ ಗಾಯಕವಾಡ ಒಟ್ಟು 10 ವಿಕೆಟ್ ಪಡೆದಿದ್ದರು. ಹಿರಿಯ ಮತ್ತು ಕಿರಿಯ ಮಹಿಳಾ ಕ್ರಿಕೆಟ್ ಎರಡೂ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ರಾಮೇಶ್ವರಿ, ಹಿರಿಯರ ಟೂರ್ನಿಯಲ್ಲಿ ನಾಲ್ಕು, ಕಿರಿಯರ ಟೂರ್ನಿಯಲ್ಲಿ ಏಳು ಹಾಗೂ ಥಾಯ್ಲೆಂಡ್ ತಂಡದ ಜೊತೆ ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಐದು ವಿಕೆಟ್ ಬಾಚಿಕೊಂಡಿದ್ದರು. ಇವರು ಬ್ಯಾಟಿಂಗ್‌ನಲ್ಲಿಯೂ ಉತ್ತಮ ಸಾಧನೆ ಮಾಡಿದ್ದಾರೆ. ಇದೇ ಟೂರ್ನಿಯ ಹಿರಿಯ ಮತ್ತು ಕಿರಿಯರ ಎರಡೂ ವಿಭಾಗಗಳಲ್ಲಿ ಆಡಿದ ಪೂಜಾ ಪಂಚಾಳ ಏಳು ವಿಕೆಟ್ ಪಡೆದಿದ್ದರು.19 ವರ್ಷದೊಳಗಿನ ಕಿರಿಯರ ಮಹಿಳಾ ಕ್ರಿಕೆಟ್ ಟೂರ್ನಿಯಲ್ಲಿ ಪ್ರಿಯಾಂಕಾ ಎಸ್. ಗಾಯಕವಾಡ ಹೈದರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ 38ರನ್ ಗಳಿಸಿದ್ದರು.ಕಳೆದ ವರ್ಷ ಕೆಎಸ್‌ಸಿಎಯ 19 ವರ್ಷದೊಳಗಿನ ತಂಡದಲ್ಲಿ ನಾಗಮ್ಮ ಗುರುಮಠ, ತಸ್ಲಿಮ್, ಸತ್ಯವ್ವ, ವಾಣಿಶ್ರೀ, ಶ್ರೀನಿಧಿ ಕುಲಕರ್ಣಿ ಹಾಗೂ 16 ವರ್ಷದೊಳಗಿನ ತಂಡದಲ್ಲಿ ಸೌಂದರ್ಯ ಕುಲಕರ್ಣಿ, ಶ್ರುತಿ ಹಳ್ಳಿ, ನೇಹಾ ವಿಜಾಪುರ ಆಡಿದ್ದರು.ಪುದುಚೇರಿಯಲ್ಲಿ 2011ರ ಡಿಸೆಂಬರ್‌ನಲ್ಲಿ ನಡೆದಿದ್ದ ದಕ್ಷಿಣ ಭಾರತ ಮಟ್ಟದ ಅಂತರ ವಿಶ್ವವಿದ್ಯಾಲಯಗಳ ಮಹಿಳಾ ಕ್ರಿಕೆಟ್ ಟೂರ್ನಿಯಲ್ಲಿ ವಿಜಾಪುರದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಕ್ರಿಕೆಟ್ ತಂಡ ರನ್ನರ್ಸ್ ಅಪ್ ಪಡೆದಿತ್ತು. ತಂಡದ ನಾಯಕಿ ಪದ್ಮಿನಿ ರಜಪೂತ, ಸತ್ಯವ್ವ, ವಾಣಿಶ್ರೀ ಕಲಕೇರಿ, ನಿಖತ್ ಮಿರ್ಜಿ, ಆಯೇಷಾ ಅವರು ವಿಜಾಪುರ ಮಹಿಳಾ ಕ್ರಿಕೆಟ್ ಕ್ಲಬ್‌ನಲ್ಲಿಯೇ ತರಬೇತಿ ಪಡೆದಿದ್ದರು.ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಮಹಿಳಾ ಕ್ರಿಕೆಟ್ ಪಟುಗಳನ್ನು ಸಜ್ಜುಗೊಳಿಸುವಲ್ಲಿ ವಿಜಾಪುರ ಮಹಿಳಾ ಕ್ರಿಕೆಟ್ ಕ್ಲಬ್ ಸದ್ದಿಲ್ಲದೆ ಕೆಲಸ ಮಾಡುತ್ತಿದೆ. ಯಾವುದೇ ಶುಲ್ಕ ಪಡೆಯದೆ ಉಚಿತವಾಗಿ ತರಬೇತಿ ನೀಡುತ್ತಿರುವುದು ಕ್ಲಬ್‌ನ ಹೆಗ್ಗಳಿಕೆ.`ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ 2007ರಲ್ಲಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮಹಿಳಾ ಕ್ರಿಕೆಟ್ ಕ್ಲಬ್ ಆರಂಭಿಸಿತ್ತು. ಬೆಂಗಳೂರು ಹೊರತು ಪಡಿಸಿದರೆ ನಮ್ಮ ಕ್ಲಬ್ ಮಾತ್ರ ಉತ್ತಮ ಕಾರ್ಯ ನಿರ್ವಹಿಸುತ್ತಿದೆ' ಎನ್ನುತ್ತಾರೆ ವಿಜಾಪುರ ಮಹಿಳಾ ಕ್ರಿಕೆಟ್ ಕ್ಲಬ್‌ನ ಸಂಚಾಲಕ ಹಾಗೂ ತರಬೇತುದಾರ ಬಸವರಾಜ ಇಜೇರಿ.`ಆರಂಭದಲ್ಲಿ 274 ವಿದ್ಯಾರ್ಥಿನಿಯರು ತರಬೇತಿಗೆ ಹಾಜರಾಗಿದ್ದರು. ಈ ವರೆಗೆ 320 ಜನ ತರಬೇತಿ ಪಡೆದಿದ್ದಾರೆ. ಈಗ 28ಜನ ತರಬೇತಿ ಪಡೆಯುತ್ತಿದ್ದಾರೆ. ರಾಜ್ಯ ತಂಡದಲ್ಲಿ ಈ ವರೆಗೆ 13 ಜನ ಸ್ಥಾನ ಪಡೆದಿದ್ದು, ಸದ್ಯ ಐವರು ರಾಜ್ಯ ತಂಡದಲ್ಲಿದ್ದಾರೆ' ಎನ್ನುತ್ತಾರೆ.

`ಕ್ರಿಕೆಟ್ ತರಬೇತಿಗೆ ಪ್ರತ್ಯೇಕ ಕ್ರೀಡಾಂಗಣ ಇಲ್ಲ. ಕೆಎಸ್‌ಸಿಎಯಿಂದ ವಿಜಾಪುರದಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಿಸುವ ಪ್ರಸ್ತಾವ ನೆನೆಗುದಿಗೆ ಬಿದ್ದಿದೆ' ಎನ್ನುತ್ತಾರೆ ತರಬೇತುದಾರರಾದ ದಿಲೀಪ್ ಕಲಾಲ್, ಸಲೀಂ ತಾಜಿಂತರಕ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry