ಶನಿವಾರ, ಮೇ 8, 2021
26 °C

ಸೈಕ್ಲಿಂಗ್ ಕೋಚ್ ರುಮಾ ದುರಂತ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ/ಐಎಎನ್‌ಎಸ್): ಭಾರತ ರಾಷ್ಟ್ರೀಯ ಸೈಕ್ಲಿಂಗ್ ತಂಡದ ಕೋಚ್ ರುಮಾ ಚಟರ್ಜಿ ಮಂಗಳವಾರ ಬೆಳಿಗ್ಗೆ ನೊಯಿಡಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ದುರಂತ ಸಾವನ್ನಪ್ಪಿದ್ದಾರೆ.51ರ ಹರೆಯದ ರುಮಾ ಭಾರತ ಜೂನಿಯರ್ ತಂಡದ ಸೈಕ್ಲಿಸ್ಟ್‌ಗಳ ಜೊತೆ ಬೆಳಿಗ್ಗೆ ನೊಯಿಡಾ- ಗ್ರೇಟರ್ ನೊಯಿಡಾ ಎಕ್ಸ್‌ಪ್ರೆಸ್ ವೇನಲ್ಲಿ ಸೈಕಲ್ ತುಳಿಯುತ್ತಿದ್ದಾಗ ಅಪಘಾತ ಸಂಭವಿಸಿದೆ. ಹಿಂದಿನಿಂದ ವೇಗವಾಗಿ ಬಂದ ಕಾರೊಂದು ರುಮಾ ಸೈಕಲ್‌ಗೆ ಡಿಕ್ಕಿ ಹೊಡೆದಿದೆ.ಬೆಳಿಗ್ಗೆ ಆರು ಗಂಟೆಯ ಸುಮಾರಿಗೆ ನೊಯಿಡಾದ ಸೆಕ್ಟರ್ 45 ರಲ್ಲಿ ಈ ದುರ್ಘಟನೆ ನಡೆದಿದೆ. ಸಮೀಪದಲ್ಲೇ ಇರುವ ಕೈಲಾಶ್ ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಅವರು ಸಾವನ್ನಪ್ಪಿದ್ದಾರೆ. `ರುಮಾ ಹಾಗೂ ಇತರ ಸೈಕ್ಲಿಸ್ಟ್‌ಗಳು ಬೆಳಿಗ್ಗಿನ ಜಾವ ಇಲ್ಲಿನ ಇಂದಿರಾ ಗಾಂಧಿ ಕ್ರೀಡಾ ಸಂಕೀರ್ಣದಿಂದ ಅಭ್ಯಾಸ ಆರಂಭಿಸಿದ್ದರು. ನೊಯಿಡಾವರೆಗೆ ತೆರಳಿದ ತಂಡ ದೆಹಲಿಗೆ ಹಿಂದಿರುವ ವೇಳೆ ಅಪಘಾತ ನಡೆದಿದೆ.ಎಲ್ಲರಿಗಿಂತ ಹಿಂದೆಯಿದ್ದ ರುಮಾ ಅವರ ಸೈಕಲ್‌ಗೆ ವೇಗವಾಗಿ ಬಂದ ಕಾರೊಂದು ಅಪ್ಪಳಿಸಿದೆ. ಅವರು ಸ್ಥಳದಲ್ಲೇ ಮೃತಪಟ್ಟರು' ಎಂದು ಭಾರತ ಸೈಕ್ಲಿಂಗ್ ಫೆಡರೇಷನ್‌ನ (ಸಿಎಫ್‌ಐ) ಸಹ ಕಾರ್ಯದರ್ಶಿ ವಿ.ಎನ್. ಸಿಂಗ್ ಹೇಳಿದ್ದಾರೆ. ಕೋಲ್ಕತ್ತ ಮೂಲದ ರುಮಾ ಚಟರ್ಜಿಗೆ ತಾಯಿ (77 ವರ್ಷ) ಹಾಗೂ ಐದು ಮಂದಿ ಸಹೋದರಿಯರು ಇದ್ದಾರೆ. ಅವರು ಬಿಎಸ್‌ಎನ್‌ಎಲ್‌ನಲ್ಲಿ (ಕೋಲ್ಕತ್ತ ವೃತ್ತ) ಹಿರಿಯ ಅಕೌಂಟೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದರು.1970 ರಲ್ಲಿ ಸೈಕ್ಲಿಂಗ್‌ನಲ್ಲಿ ವೃತ್ತಿಜೀವನ ಆರಂಭಿಸಿದ್ದ ರುಮಾ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಮೂರು ಸಲ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಸ್ಪರ್ಧೆಯಿಂದ ನಿವೃತ್ತಿಯಾದ ನಂತರ ಕಿರಿಯರಿಗೆ ತರಬೇತು ನೀಡುತ್ತಿದ್ದರು. ನವದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟ, ಏಷ್ಯನ್ ಕ್ರೀಡಾಕೂಟ ಮತ್ತು ಏಷ್ಯನ್ ಸೈಕ್ಲಿಂಗ್ ಚಾಂಪಿಯನ್‌ಷಿಪ್ ಒಳಗೊಂಡಂತೆ ಒಟ್ಟು ಏಳು ಸಲ ರಾಷ್ಟ್ರೀಯ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.ರುಮಾ ಭಾರತದ ಟ್ರ್ಯಾಕ್ ಸೈಕ್ಲಿಸ್ಟ್‌ಗಳ ಜೊತೆ ಅಂತರರಾಷ್ಟ್ರೀಯ ಸೈಕ್ಲಿಂಗ್ ಒಕ್ಕೂಟದ ಅಕಾಡೆಮಿಯಲ್ಲಿ ತರಬೇತಿಗಾಗಿ ಜೂನ್ 1 ರಂದು ಸ್ವಿಟ್ಜರ್‌ಲೆಂಡ್‌ಗೆ ತೆರಳಬೇಕಿತ್ತು. ಆದರೆ ವೀಸಾ ಸಮಸ್ಯೆಯಿಂದಾಗಿ ತರಬೇತಿಗೆ ತೆರಳಲು ಸಾಧ್ಯವಾಗಿರಲಿಲ್ಲ.

ರಾಷ್ಟ್ರೀಯ ತಂಡಕ್ಕೆ ಹಿನ್ನಡೆ

ರುಮಾ ಚಟರ್ಜಿ ಅನಿರೀಕ್ಷಿತ ಸಾವು ವಿಶ್ವ ಚಾಂಪಿಯನ್‌ಷಿಪ್‌ಗೆ ಸಜ್ಜಾಗುತ್ತಿರುವ ಭಾರತ ತಂಡಕ್ಕೆ ಹಿನ್ನಡೆ ಉಂಟಾಗಿದೆ.

ಆಗಸ್ಟ್ ತಿಂಗಳಲ್ಲಿ ಸ್ಕಾಟ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವಚಾಂಪಿಯನ್‌ಷಿಪ್‌ಗೆ ಭಾರತ ತಂಡವನ್ನು ಸಜ್ಜುಗೊಳಿಸುವತ್ತ ರುಮಾ ತಮ್ಮ ಸಂಪೂರ್ಣ ಗಮನ ಕೇಂದ್ರೀಕರಿ ಸಿದ್ದರು. ಇದೀಗ ಅವರ ನಿಧನದಿಂದಾಗಿ ತಂಡದ ಸಿದ್ಧತೆಗೆ ಭಾರಿ ಹೊಡೆತ ಬಿದ್ದಿದೆ.

ಶಿಸ್ತಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದ ರುಮಾ ಎಲ್ಲ ಸ್ಪರ್ಧಿಗಳ ಅಚ್ಚುಮೆಚ್ಚಿನ ಕೋಚ್ ಎನಿಸಿಕೊಂಡಿದ್ದರು. ಇವರ ಮಾರ್ಗದರ್ಶನದಲ್ಲಿ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡ ತನ್ನ ಅತ್ಯುತ್ತಮ ಪ್ರದರ್ಶನ ನೀಡಿತ್ತು. ಮಾರ್ಚ್‌ನಲ್ಲಿ ನಡೆದ ಈ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕು ಪದಕ ಜಯಿಸಿತ್ತು. 

`ಇದು ದುಃಖದ ದಿನ'

ಭಾರತ ಸೈಕ್ಲಿಂಗ್ ಫೆಡರೇಷನ್ (ಸಿಎಫ್‌ಐ) ಕಾರ್ಯದರ್ಶಿ ಓಂಕಾರ್ ಸಿಂಗ್ ಅವರು ರುಮಾ ನಿಧನಕ್ಕೆ ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ.

`ಇದು ಅತ್ಯಂತ ದುಃಖದ ದಿನ. ರುಮಾ ಬದ್ಧತೆಯಿಂದಲೇ ಎಲ್ಲ ಕೆಲಸಗಳನ್ನು ಮಾಡುತ್ತಿದ್ದಳು. ಈ ಮೊದಲು ಸೀನಿಯರ್ ಸ್ಪರ್ಧಿಗಳಿಗೆ ಕೋಚಿಂಗ್ ನೀಡುತ್ತಿದ್ದಳು. ಆದರೆ ಏಷ್ಯನ್ ಚಾಂಪಿಯನ್‌ಷಿಪ್‌ನ ಬಳಿಕ ಜೂನಿಯರ್ ಸ್ಪರ್ಧಿಗಳಿಗೆ ಮಾರ್ಗದರ್ಶನ ನೀಡುವ ಜವಾಬ್ದಾರಿಯೂ ಆಕೆಗೆ ಲಭಿಸಿತ್ತು. ಆಕೆಯ ಸ್ಥಾನವನ್ನು ತುಂಬುವುದು ಕಷ್ಟ' ಎಂದು ಓಂಕಾರ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.