ಭಾನುವಾರ, ಜೂನ್ 20, 2021
28 °C

ಸೈನಾಗೆ ಪ್ರಯಾಸದ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಸೈನಾ ನೆಹ್ವಾಲ್ ಬರ್ಮಿಂಗ್‌ಹ್ಯಾಂನಲ್ಲಿ ಆರಂಭವಾದ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಯಾಸದ ಗೆಲುವು ಪಡೆಯುವ ಮೂಲಕ ಎರಡನೇ ಸುತ್ತು ಪ್ರವೇಶಿಸಿದರು.ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಆಟಗಾರ್ತಿ 21-11, 13-21, 21-13 ರಲ್ಲಿ ಥಾಯ್ಲೆಂಡ್‌ನ ಸಪ್ಸಿರಿ ತರತ್ತಾನಾಚಾಯ್ ಅವರನ್ನು ಮಣಿಸಿದರು. ನಾಲ್ಕನೇ ಶ್ರೇಯಾಂಕ ಹೊಂದಿರುವ ಸೈನಾ 58 ನಿಮಿಷಗಳ ಹೋರಾಟದ ಬಳಿಕ ಗೆಲುವು ಒಲಿಸಿಕೊಂಡರು.ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಶುಭಾರಂಭ ಮಾಡಿದರು. ಮಹಿಳೆಯರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಅವರು 21-16, 21-16 ರಲ್ಲಿ ಇಂಡೊನೇಷ್ಯದ ಅನೆಕೆ ಫೆನ್ಯಾ ಆಗಸ್ಟಿನ್ ಹಾಗೂ ನಿತ್ಯಾ ಮಹೇಶ್ವರಿ ವಿರುದ್ಧ ಗೆಲುವು ಪಡೆದರು.ಭಾರತದ ಜೋಡಿಗೆ ಎರಡನೇ ಸುತ್ತಿನಲ್ಲಿ ಪ್ರಬಲ ಸವಾಲು ಕಾದು ಕುಳಿತಿದೆ. ಜ್ವಾಲಾ- ಅಶ್ವಿನಿ ಮುಂದಿನ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಜೋಡಿ ಚೀನಾದ ಕ್ವಿಂಗ್ ತಿಯಾನ್ ಮತ್ತು ಯುನ್‌ಲೀ ಜಾವೊ ವಿರುದ್ಧ ಆಡಲಿದೆ.ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದ ಮೊದಲ ಸೆಟ್‌ನಲ್ಲಿ ಸೈನಾ ಸುಲಭ ಗೆಲುವು ಪಡೆದರು. ಆರಂಭದಲ್ಲೇ 6-1 ರಲ್ಲಿ ಮುನ್ನಡೆ ಗಳಿಸಿದ ಅವರು ಹೆಚ್ಚಿನ ಒತ್ತಡ ಅನುಭವಿಸದೆ ಸೆಟ್ ತಮ್ಮದಾಗಿಸಿಕೊಂಡರು. ಆದರೆ ಎರಡನೇ ಸೆಟ್‌ನಲ್ಲಿ ಸಪ್ಸಿರಿ ತಿರುಗೇಟು ನೀಡಿ ಸಮಬಲ ಸಾಧಿಸಿದರು.ಥಾಯ್ಲೆಂಡ್‌ನ ಆಟಗಾರ್ತಿ 7-4ರ ಮೇಲುಗೈ ಪಡೆದರು. ಈ ಹಂತದಲ್ಲಿ ಸೈನಾ ಚೇತರಿಕೆಯ ಪ್ರದರ್ಶನ ನೀಡಿ 8-8 ಹಾಗೂ 10-10 ರಲ್ಲಿ ಸಮಬಲ ಸಾಧಿಸಿದರು. ವಿಶ್ವ ರ‌್ಯಾಂಕಿಂಗ್‌ನಲ್ಲಿ 33ನೇ ಸ್ಥಾನದಲ್ಲಿರುವ ಸಪ್ಸಿರಿ ಅನಂತರ ಒಂದೊಂದೇ ಪಾಯಿಂಟ್ ಕಲೆಹಾಕಿ ಸೆಟ್ ಗೆದ್ದುಕೊಂಡರು. ನಿರ್ಣಾಯಕ ಸೆಟ್‌ನಲ್ಲಿ ಹೈದರಾಬಾದ್‌ಗೆ ಆಟಗಾರ್ತಿ ಪೂರ್ಣ ಪಾರಮ್ಯ ಮೆರೆದರು.ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕಣದಲ್ಲಿರುವ ಭಾರತದ ಇನ್ನೊಬ್ಬಳು ಆಟಗಾರ್ತಿ ಪಿ.ವಿ. ಸಿಂಧು ಮೊದಲ ಸುತ್ತಿನ ಪಂದ್ಯದಲ್ಲಿ ಚೈನೀಸ್ ತೈಪೆಯ ಸು ಯಿಂಗ್ ತಾಯ್ ಅವರನ್ನು ಎದುರಿಸುವರು. ಸಿಂಧು ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಗೆಲುವು ಪಡೆದು ಪ್ರಧಾನ ಹಂತ ಪ್ರವೇಶಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.