ಸೈನಾ ನೆಹ್ವಾಲ್ ಶುಭಾರಂಭ

7

ಸೈನಾ ನೆಹ್ವಾಲ್ ಶುಭಾರಂಭ

Published:
Updated:

ನವದೆಹಲಿ (ಪಿಟಿಐ): ಸೈನಾ ನೆಹ್ವಾಲ್ ಡೆನ್ಮಾರ್ಕ್ ಓಪನ್ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದರು. ಒಡೆನ್ಸ್‌ನಲ್ಲಿ ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಆಟಗಾರ್ತಿ 21-16, 21-8 ರಲ್ಲಿ ಥಾಯ್ಲೆಂಡ್‌ನ ಪರ್ನ್‌ಟಿಪ್ ಬುರಾನಪ್ರಸೇತ್ಸುಕ್ ವಿರುದ್ಧ ಜಯ ಸಾಧಿಸಿದರು.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಆನಂದ್ ಪವಾರ್ ಕೂಡಾ ಎರಡನೇ ಸುತ್ತು ಪ್ರವೇಶಿಸಿದರು. ಅವರು ಮೊದಲ ಸುತ್ತಿನ ಪಂದ್ಯದಲ್ಲಿ 21-11, 21-12 ರಲ್ಲಿ ಸ್ಪೇನ್‌ನ ಪಾಬ್ಲೊ ಅಬ್ಯನ್‌ಗೆ ಸೋಲುಣಿಸಿದರು. ಆದರೆ ಅಜಯ್ ಜಯರಾಮ್ ಹೋರಾಟಕ್ಕೆ ತೆರೆಬಿದ್ದಿದೆ. ಇಂಡೊನೇಷ್ಯದ ಟಾಮಿ ಸುಗಿಯಾರ್ತೊ 21-11, 21-16 ರಲ್ಲಿ ಭಾರತದ ಆಟಗಾರನ ವಿರುದ್ಧ ಜಯ ಸಾಧಿಸಿದರು.

ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಮಹಿಳೆಯರ ಡಬಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಅನಿರೀಕ್ಷಿತ ಆಘಾತ ಅನುಭವಿಸಿತು. ಸಿಂಗಪುರ ಶಿಂಟಾ ಮುಲಿಯಾ ಹಾಗೂ ಲೀ ಯಾವೊ 21-16, 21-17 ರಲ್ಲಿ ಭಾರತದ ಜೋಡಿಯನ್ನು ಮಣಿಸಿತು.

ಪ್ರಸೇತ್ಸುಕ್ ವಿರುದ್ಧದ ಪಂದ್ಯದಲ್ಲಿ ಸೈನಾ ಆರಂಭದಲ್ಲಿ ಅಲ್ಪ ಪರದಾಟ ನಡೆಸಿದರು. ಮೊದಲ ಸೆಟ್‌ನಲ್ಲಿ ಅವರು 2-7 ರಲ್ಲಿ ಹಿನ್ನಡೆ ಅನುಭವಿಸಿದ್ದರು. ಆದರೆ ನಿಧಾನವಾಗಿ ಪಂದ್ಯದ ಮೇಲೆ ಹಿಡಿದ ಸಾಧಿಸಿದ ಹೈದರಾಬಾದ್‌ನ ಆಟಗಾರ್ತಿ 15-15 ರಲ್ಲಿ ಸಮಬಲ ಸಾಧಿಸಿದರಲ್ಲದೆ, ಬಳಿಕ ಸೆಟ್ ಗೆದ್ದುಕೊಂಡರು. ಆದರೆ ಎರಡನೇ ಸೆಟ್‌ನಲ್ಲಿ ಭಾರತದ ಆಟಗಾರ್ತಿ ಹೆಚ್ಚಿನ ತಪ್ಪುಗಳನ್ನು ಮಾಡಲಿಲ್ಲ.

ಆರಂಭದಲ್ಲೇ 8-1 ರಲ್ಲಿ ಮೇಲುಗೈ ಸಾಧಿಸಿ ಸುಲಭವಾಗಿ ಸೆಟ್ ಹಾಗೂ ಪಂದ್ಯವನ್ನು ಗೆದ್ದುಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry