ಶನಿವಾರ, ಮೇ 15, 2021
22 °C
ಬ್ಯಾಡ್ಮಿಂಟನ್: ಸೆಮಿಫೈನಲ್‌ನಲ್ಲಿ ಶೆಂಕ್ ಎದುರು ಆಘಾತ

ಸೈನಾ ನೆಹ್ವಾಲ್ ಸವಾಲು ಅಂತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೈನಾ ನೆಹ್ವಾಲ್ ಸವಾಲು ಅಂತ್ಯ

ಜಕಾರ್ತ (ಪಿಟಿಐ/ ಐಎಎನ್‌ಎಸ್): ಇಂಡೊನೇಷ್ಯಾ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿಯನ್ನು ತಮ್ಮಲ್ಲೇ ಉಳಿಸಿಕೊಳ್ಳಬೇಕೆಂಬ ಸೈನಾ ನೆಹ್ವಾಲ್ ಕನಸು ಭಗ್ನಗೊಂಡಿದೆ. ಭಾರತದ ಆಟಗಾರ್ತಿ ಸೆಮಿಫೈನಲ್‌ನಲ್ಲಿ ಸೋತುಹೊರಬಿದ್ದರು.ಇಸ್ಟೋರಾ ಗೆಲೋರಾ ಬಂಗ್ ಕರ್ನೊ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಸೈನಾ ಅವರನ್ನು 12-21, 21-13, 21-14 ರಲ್ಲಿ ಮಣಿಸಿದ ಜರ್ಮನಿಯ ಜೂಲಿಯಾನ್ ಶೆಂಕ್ ಫೈನಲ್‌ಗೆ ಮುನ್ನಡೆದರು.ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಸೈನಾ ಇಲ್ಲಿ 2009, 2010 ಹಾಗೂ 2012 ರಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದರು. ಈ ಬಾರಿಯೂ ಅವರು  ಪ್ರಶಸ್ತಿ ಗೆಲ್ಲುವರು ಎಂದು ನಿರೀಕ್ಷಿಸಲಾಗಿತ್ತು. ಆದರೆ ವಿಶ್ವದ ಮೂರನೇ ರ‌್ಯಾಂಕ್‌ನ ಆಟಗಾರ್ತಿ ಶೆಂಕ್ ಅದಕ್ಕೆ ಅವಕಾಶ ನೀಡಲಿಲ್ಲ.52 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಹೈದರಾಬಾದ್‌ನ ಆಟಗಾರ್ತಿ ಸಾಕಷ್ಟು ಅನಗತ್ಯ ತಪ್ಪುಗಳನ್ನೆಸಗಿದರು. ಇದರಿಂದ ಶೆಂಕ್ ಗೆಲುವಿನ ಹಾದಿ ಮತ್ತಷ್ಟು ಸುಲಭವಾಯಿತು. ಈ ಪಂದ್ಯಕ್ಕೆ ಮುನ್ನ ಇವರಿಬ್ಬರು 11 ಸಲ ಪರಸ್ಪರ ಎದುರಾಗಿದ್ದರು. ಸೈನಾ ಎಂಟು ಪಂದ್ಯಗಳಲ್ಲಿ ಜರ್ಮನಿಯ ಆಟಗಾರ್ತಿಯನ್ನು ಮಣಿಸಿದ್ದರು.ಇಲ್ಲಿ ಎರಡನೇ ಶ್ರೇಯಾಂಕ ಪಡೆದಿದ್ದ ಸೈನಾ ಮೊದಲ ಸೆಟ್ ಗೆದ್ದು ಉತ್ತಮ ಆರಂಭ ಪಡೆದರು. ಜಿದ್ದಾಜಿದ್ದಿನ ಸೆಣಸಾಟದ ಬಳಿಕ ಸೈನಾ 6-5ರ ಮುನ್ನಡೆ ಸಾಧಿಸಿದರು. ಆದರೆ ಶೆಂಕ್ ಸತತ ಏಳು ಪಾಯಿಂಟ್ ಕಲೆಹಾಕಿ 12-6ರ ಮೇಲುಗೈ ಸಾಧಿಸಿದರು.ಈ ಹಂತದಲ್ಲಿ ಅದ್ಭುತ ರೀತಿಯಲ್ಲಿ ಮರುಹೋರಾಟ ನಡೆಸಿದ ಸೈನಾ ಸತತ 15 ಪಾಯಿಂಟ್ ಪಡೆದು ಸೆಟ್‌ಅನ್ನು 21-12 ರಲ್ಲಿ ತಮ್ಮದಾಗಿಸಿಕೊಂಡರು.ಎರಡನೇ ಸೆಟ್‌ನ ಆರಂಭದಲ್ಲೇ ಶೆಂಕ್ 6-0 ರಲ್ಲಿ ಮುನ್ನಡೆ ಸಾಧಿಸಿದರು. ಈ ಹಂತದಲ್ಲಿ ಸೈನಾ ನಾಲ್ಕು ಪಾಯಿಂಟ್ ಗಿಟ್ಟಿಸಿಕೊಂಡು ಹಿನ್ನಡೆಯನ್ನು 4-6ಕ್ಕೆ ತಗ್ಗಿಸಿಕೊಂಡರು. ಆದರೆ ಜೂಲಿಯಾನ್ ಮುನ್ನಡೆಯನ್ನು 11-4 ಹಾಗೂ ಆ ಬಳಿಕ 14-6ಕ್ಕೆ ಹೆಚ್ಚಿಸಿಕೊಂಡು ಎದುರಾಳಿ ಮೇಲೆ ಒತ್ತಡ ಹೇರಿದರು. ಕೊನೆಯಲ್ಲಿ ಸೆಟ್ ಗೆದ್ದರಲ್ಲದೆ, ಪಂದ್ಯದಲ್ಲಿ ಸಮಬಲ ಸಾಧಿಸಿದರು.ನಿರ್ಣಾಯಕ ಸೆಟ್‌ನಲ್ಲಿ ಸೈನಾ ದೀರ್ಘ ರ‍್ಯಾಲಿಗಳನ್ನು ಆಡುವತ್ತ ಹೆಚ್ಚಿನ ಗಮನ ಹರಿಸಿದರು. ಆರಂಭದಲ್ಲಿ ಶೆಂಕ್ ಕೂಡಾ ಆಕ್ರಮಣಕಾರಿ ಆಟಕ್ಕೆ ಮುಂದಾಗಲಿಲ್ಲ. ಸೈನಾ ತಪ್ಪು ಮಾಡುವುದಕ್ಕಾಗಿ ಕಾದು ಕುಳಿತರು. ಭಾರತದ ಆಟಗಾರ್ತಿ ಮೇಲಿಂದ ಮೇಲೆ ತಪ್ಪು ಮಾಡಿದ ಕಾರಣ ಎದುರಾಳಿ ಸುಲಭವಾಗಿ 11-5ರ ಮುನ್ನಡೆ ಪಡೆದರು.ಸೈನಾ ಒತ್ತಡವನ್ನು ಮೆಟ್ಟಿನಿಂತು ಹಿನ್ನಡೆಯನ್ನು 14-16ರಕ್ಕೆ ತಗ್ಗಿಸಲು ಯಶಸ್ವಿಯಾದರು. ಆದರೆ ಕ್ರಾಸ್ ಕೋರ್ಟ್ ಸ್ಮ್ಯಾಷ್‌ಗಳ ಜೊತೆಗೆ ನೆಟ್ ಬಳಿ ಚುರುಕಿನ ಆಟವಾಡಿದ ಜೂಲಿಯಾನ್ ಸತತ ಐದು ಪಾಯಿಂಟ್ ಕಲೆಹಾಕಿ ಸೆಟ್ ಹಾಗೂ ಪಂದ್ಯವನ್ನು ತಮ್ಮದಾಗಿಸಿಕೊಂಡರು.ಸೈನಾ ಸೋಲು ಅನುಭವಿಸಿದ ಕಾರಣ ಟೂರ್ನಿಯಲ್ಲಿ ಭಾರತದ ಸವಾಲಿಗೆ ತೆರೆಬಿತ್ತು. ಇತರ ಎಲ್ಲ ಸ್ಪರ್ಧಿಗಳು ಕ್ವಾರ್ಟರ್ ಫೈನಲ್ ಹಂತವನ್ನು ದಾಟಲು ವಿಫಲರಾಗಿದ್ದರು.ಜರ್ಮನಿಯ ಆಟಗಾರ್ತಿ ಭಾನುವಾರ ನಡೆಯುವ ಫೈನಲ್‌ನಲ್ಲಿ ವಿಶ್ವದ ಅಗ್ರ ರ‌್ಯಾಂಕ್‌ನ ಆಟಗಾರ್ತಿ ಚೀನಾದ ಕ್ಸುಯೆರುಯ್ ಲಿ ಅವರ ಸವಾಲನ್ನು ಎದುರಿಸಲಿದ್ದಾರೆ. ದಿನದ ಮತ್ತೊಂದು ನಾಲ್ಕರಘಟ್ಟದ ಪಂದ್ಯದಲ್ಲಿ ಲಿ 17-21, 21-11, 21-11 ರಲ್ಲಿ ಹಾಂಕಾಂಗ್‌ನ ಪ್ಯು ಯಿನ್ ಯಿಪ್ ಅವರನ್ನು ಮಣಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.