ಶುಕ್ರವಾರ, ಆಗಸ್ಟ್ 23, 2019
21 °C
ಇಂದಿನಿಂದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್

ಸೈನಾ ನೆಹ್ವಾಲ್, ಸಿಂಧು ಭಾರತದ ಭರವಸೆ

Published:
Updated:
ಸೈನಾ ನೆಹ್ವಾಲ್, ಸಿಂಧು ಭಾರತದ ಭರವಸೆ

ಗುವಾಂಗ್‌ಜೌ, ಚೀನಾ (ಪಿಟಿಐ): ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಸೋಮವಾರ ಚೀನಾದ ಗುವಾಂಗ್‌ಜೌನಲ್ಲಿ ಆರಂಭವಾಗಲಿದ್ದು, ಸೈನಾ ನೆಹ್ವಾಲ್ , ಪಿ.ವಿ. ಸಿಂಧು. ಪಿ. ಕಶ್ಯಪ್ ಒಳಗೊಂಡಂತೆ ಭಾರತದ ಸ್ಪರ್ಧಿಗಳು ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.ಭಾರತದ ಅಗ್ರ ರ‍್ಯಾಂಕ್‌ನ ಆಟಗಾರ್ತಿ ಸೈನಾ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ತಮ್ಮ ಚೊಚ್ಚಲ ಪದಕದ ನಿರೀಕ್ಷೆಯಲ್ಲಿದ್ದಾರೆ. ಹೈದರಾಬಾದ್‌ನ ಆಟಗಾರ್ತಿ 2009 ಮತ್ತು 2011ರಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು ಅನುಭವಿಸಿದ್ದರು.ಪ್ರಸಕ್ತ ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಸೈನಾ ಇತ್ತೀಚಿನ ಕೆಲ ತಿಂಗಳಲ್ಲಿ ತಮ್ಮ ನೈಜ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಹೋದ ಒಂಬತ್ತು ತಿಂಗಳುಗಳ ಅವಧಿಯಲ್ಲಿ ಅವರು ಯಾವುದೇ ಪ್ರಶಸ್ತಿ ಜಯಿಸಿಲ್ಲ. ಆದರೆ ಈ ಮಹತ್ವದ ಟೂರ್ನಿಗಾಗಿ ಆರು ವಾರಗಳ ಕಾಲ ಕಠಿಣ ಅಭ್ಯಾಸ ನಡೆಸಿದ್ದು, ಪೂರ್ಣ ಫಿಟ್‌ನೆಸ್ ಮರಳಿ ಪಡೆದುಕೊಂಡಿದ್ದಾರೆ.ಈ ಬಾರಿಯ ವಿಶ್ವಚಾಂಪಿಯನ್‌ಷಿಪ್‌ನಲ್ಲಿ `ಅದೃಷ್ಟ' ಕೂಡಾ ಸೈನಾ ಪರ ಇದ್ದಂತಿದೆ. ಮೊದಲ ಸುತ್ತಿನಲ್ಲಿ ಅವರಿಗೆ `ಬೈ' ಲಭಿಸಿದ್ದು, ಎರಡನೇ ಸುತ್ತಿನಲ್ಲಿ ರಷ್ಯಾದ ಓಲ್ಗಾ ಗೊಲೊನವೋನಾ ಅಥವಾ ಬಲ್ಗೇರಿಯದ ಅಲೀಸಿಯಾ ಜತ್ಸಾವಾ ವಿರುದ್ಧ ಪೈಪೋಟಿ ನಡೆಸುವರು. ಇವರಿಬ್ಬರು ವಿಶ್ವ ರ‍್ಯಾಂಕಿಂಗ್‌ನಲ್ಲಿ ಕ್ರಮವಾಗಿ 66 ಹಾಗೂ 104ನೇ ಸ್ಥಾನಗಳಲ್ಲಿದ್ದಾರೆ.ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿದ್ದ ಸೈನಾ ಆ ಬಳಿಕ ಥಾಯ್ಲೆಂಡ್‌ನ ಪೊರ್ನಟಿಪ್ ಬುರಾನಪ್ರಸೇತುಕ್ (18ನೇ ರ‍್ಯಾಂಕ್) ವಿರುದ್ಧ ಪೈಪೋಟಿ ನಡೆಸುವ ಸಾಧ್ಯತೆಯಿದೆ. ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ಮಿನತ್ಸು ಮಿತಾನಿ (10ನೇ ರ‍್ಯಾಂಕ್) ಅಥವಾ ಕೊರಿಯದ ಬಾಯೆ ಯಿಯೊನ್ ಜು (16ನೇ ರ‍್ಯಾಂಕ್) ಎದುರಾಗಬಹುದು.ಮಿತಾನಿ ವಿರುದ್ಧ 3-1 ಹಾಗೂ ಬಾಯೆ ವಿರುದ್ಧ 5-2ರ ಗೆಲುವಿನ ದಾಖಲೆ ಹೊಂದಿದ್ದರೂ, ಸೈನಾ ಇವರ ಎದುರು ಎಚ್ಚರಿಕೆಯ ಆಟವಾಡುವುದು ಅಗತ್ಯ. ಟೂರ್ನಿಯ ನಿಯಮದಂತೆ ಸೆಮಿಫೈನಲ್ ಪ್ರವೇಶಿಸಿದ ಸ್ಪರ್ಧಿಗಳು ಕಂಚಿನ ಪದಕ ಖಚಿತಪಡಿಸಿಕೊಳ್ಳುವರು.`ಜೂನ್ ತಿಂಗಳಲ್ಲಿ ನನ್ನ ಮನದಲ್ಲಿ ಸಣ್ಣ ಆತಂಕ ಕಾಡುತ್ತಿತ್ತು. ವಿಶ್ವ ಚಾಂಪಿಯನ್‌ಷಿಪ್‌ಗೆ ತಕ್ಕ ರೀತಿಯಲ್ಲಿ ಸಜ್ಜಾಗಲು ಸಾಧ್ಯವೇ ಎಂಬ ಅನುಮಾನ ಇತ್ತು. ಆದರೆ ಕೆಲ ವಾರಗಳಿಂದ ಪ್ರಯತ್ನ ನಡೆಸಿರುವ ಕಾರಣ ಶೇ 100 ರಷ್ಟು ದೈಹಿಕ ಸಾಮರ್ಥ್ಯ ಪಡೆದಿದ್ದೇನೆ' ಎಂದು ಸೈನಾ ಹೇಳಿದ್ದಾರೆ.

Post Comments (+)