ಸೈನಿಕರ ಹಕ್ಕಿಗೆ ಮಾನ್ಯತೆ

7

ಸೈನಿಕರ ಹಕ್ಕಿಗೆ ಮಾನ್ಯತೆ

Published:
Updated:

ತಾವು ಸೇವೆ ಸಲ್ಲಿಸುತ್ತಿರುವ ಊರುಗಳಲ್ಲಿಯೇ ಮತ ಚಲಾಯಿಸಲು ಸೇನೆ ಮತ್ತು ಅರೆಸೇನಾ ಸಿಬ್ಬಂದಿ ಹಾಗೂ ಅವರ ಕುಟುಂಬ ವರ್ಗಕ್ಕಿದ್ದ ಅಡೆತಡೆಗಳನ್ನು ಸುಪ್ರೀಂ ಕೋರ್ಟ್‌ ಈಗ ನಿವಾರಿಸಿದೆ. ಈ ವಿಚಾರದಲ್ಲಿ ಆರಂಭದಿಂದಲೂ ಚುನಾವಣಾ ಆಯೋಗ ಮೊಂಡುಹಟ ಪ್ರದರ್ಶಿಸುತ್ತಲೇ ಬಂದಿತ್ತು.‘ಮತ ಚಲಾಯಿಸುವುದು ದೇಶದ ಪ್ರತಿಯೊಬ್ಬ ನಾಗರಿಕನ ಪ್ರಜಾಸತ್ತಾತ್ಮಕ ಹಕ್ಕು. ಅದನ್ನು ಚಲಾಯಿಸಲು ಸಹಕರಿಸಬೇಕೇ ಹೊರತು ಇಲ್ಲಸಲ್ಲದ ಅಡ್ಡಿ ಒಡ್ಡುವುದಲ್ಲ’ ಎಂದು ನ್ಯಾಯಮೂರ್ತಿಗಳಾದ ಆರ್‌.ಎಂ. ಲೋಧಾ ಹಾಗೂ ಕುರಿಯನ್‌ ಜೋಸೆಫ್‌ ಅವರಿದ್ದ ಪೀಠ ಸೋಮ­ವಾರ ನೀಡಿದ ಚಾರಿತ್ರಿಕ ತೀರ್ಪಿನಲ್ಲಿ ತಾಕೀತು ಮಾಡಿದೆ.ಇದರ   ಪರಿಣಾಮವಾಗಿ ಸೇನೆಯ ಮೂರೂ ವಿಭಾಗಗಳ 14 ಲಕ್ಷ ಸಿಬ್ಬಂದಿ, ಅರೆಸೇನಾ­ಪಡೆಗಳ 9 ಲಕ್ಷ ಸಿಬ್ಬಂದಿ ಮತ್ತು ಅವರ ಕುಟುಂಬ ವರ್ಗದವರು ತಾವಿರುವ ಕಡೆಯೇ ಮತದಾರರ ಪಟ್ಟಿಯಲ್ಲಿ ಹೊಸದಾಗಿ ಹೆಸರು ನೋಂದಾಯಿಸಿಕೊಂಡು ಮತ ಚಲಾಯಿಸುವ ಹಕ್ಕು ಪಡೆಯಲಿದ್ದಾರೆ. ಹೆಸರು ಸೇರ್ಪಡೆಗಾಗಿ ಒಂದು ಸ್ಥಳದಲ್ಲಿ ಕನಿಷ್ಠ ಮೂರು ವರ್ಷ ವಾಸ­ವಾಗಿರಲೇಬೇಕು ಎಂಬ ನಿಯಮವನ್ನು ಸೈನಿಕರು ಮತ್ತು ಅವರ ಕುಟುಂಬ ವರ್ಗದವರಿಗೆ ಸಡಿಲಿಸಲು ಆಯೋಗ ಒಪ್ಪಿಕೊಂಡಿದೆ.ಲೋಕ­ಸಭಾ ಚುನಾವಣೆಗಾಗಿ ಈಗಾಗಲೇ ಅಧಿಸೂಚನೆ ಹೊರಡಿಸಿರುವ 225 ಕ್ಷೇತ್ರ­ಗಳನ್ನು ಬಿಟ್ಟು ಉಳಿದ ಕ್ಷೇತ್ರಗಳಲ್ಲಿ ಈ ಸಲದಿಂದಲೇ ಅವರಿಗೆ ಈ ಅಧಿಕಾರ ಪ್ರಾಪ್ತ­ವಾಗಲಿದೆ. ಆದರೆ ಅವರು ಅಂಚೆ ಅಥವಾ ಪರೋಕ್ಷ (ಅವರ ಪರ­ವಾಗಿ ಅವರ ಕುಟುಂಬದ ಅಧಿಕೃತ ವ್ಯಕ್ತಿ) ಮತ ಚಲಾವಣೆ ಸೌಕರ್ಯವನ್ನು ಆಯ್ಕೆ ಮಾಡಿಕೊಂಡಿರಬಾರದು ಮತ್ತು ಮುಂಚೂಣಿ ಸೇನಾ ನೆಲೆಗಳಲ್ಲಿ ನಿಯೋಜಿತರಾಗಿರಬಾರದು.   

  

ವಿಶ್ವದ ಅನೇಕ ದೇಶಗಳಲ್ಲಿ ಸೈನಿಕರು ಸಮವಸ್ತ್ರದಲ್ಲಿಯೇ ಬಂದು ಮತ ಹಾಕುವ ಅವಕಾಶವಿದೆ. ಹೀಗಿರುವಾಗ ನಮ್ಮ ದೇಶದಲ್ಲಿ ಯಾವುದೋ ಕಾಲದ ನಿಯಮಗಳನ್ನು ಮುಂದಿಟ್ಟುಕೊಂಡು ರಕ್ಷಣಾ ಸಿಬ್ಬಂದಿಯ ಮತ ಹಕ್ಕನ್ನು  ಮೊಟಕುಗೊಳಿಸುವುದು ಜನತಂತ್ರಕ್ಕೆ ಮಾಡುವ ಅಪಚಾರ. ದುರ್ಗಮ ಪ್ರದೇಶದಲ್ಲಿನ ಬೆರಳೆಣಿಕೆಯಷ್ಟು ಮತದಾರರಿಗೂ ಮತಗಟ್ಟೆ ಸ್ಥಾಪಿಸಿ ಅವರ ಹಕ್ಕು ಚಲಾವಣೆಗೆ ಆಸ್ಪದ ಕಲ್ಪಿಸಿದ್ದೇವೆ ಎಂದು ಬೆನ್ನು ಚಪ್ಪರಿಸಿಕೊಳ್ಳುವ ಆಯೋಗಕ್ಕೆ ಯೋಧರ ಮತದ ಹಕ್ಕನ್ನು  ಗೌರವಿಸು­ವುದು ಕೂಡ ತನ್ನ ಹೊಣೆ ಎಂದು ಅನಿಸಬೇಕಾಗಿತ್ತು.ಸೈನಿಕರು  ಅಂಚೆ ಮತದಾನ ಮಾಡಲು ಈಗ ಅವಕಾಶವಿದೆ. ಆದರೆ ಅದನ್ನು ಬಳಸಿಕೊಳ್ಳಲು ವಾಸ್ತವದಲ್ಲಿ ಅನೇಕ ತೊಂದರೆಗಳಿವೆ. ಹೀಗಾಗಿಯೇ ಅದು ಅಷ್ಟೊಂದು ಜನಪ್ರಿಯವಾಗಿಲ್ಲ. ಈ ಕಾರಣದಿಂದಲೇ, ದೇಶದ ಗಡಿಗಳನ್ನು ಕಾಯುವ ಸೈನಿಕರು ಮತ್ತು ಆಂತರಿಕ ಭದ್ರತೆಗೆ ನಿಯೋಜಿತರಾದ ಅರೆಸೇನಾ ಸಿಬ್ಬಂದಿಗೆ ಅವರು ಕರ್ತವ್ಯ ನಿರ್ವಹಿಸುತ್ತಿರುವ ಕಡೆಯೇ  ಮತದಾರರ ಪಟ್ಟಿಗೆ ಹೆಸರು ಸೇರಿಸಲು ಇದ್ದ ಅಡಚಣೆಗಳನ್ನು ನಿವಾರಿಸುವಂತೆ ರಾಜ್ಯಸಭೆ ಸದಸ್ಯ ರಾಜೀವ್‌ ಚಂದ್ರಶೇಖರ್‌ ಮತ್ತು ವಕೀಲರಾದ ನೀಲಾ ಗೋಖಲೆ ನಿರಂತರ­ವಾಗಿ ಹೋರಾಟ ನಡೆಸುತ್ತಲೇ ಬಂದಿದ್ದರು.ಕೊನೆಗೆ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಪ್ರಜಾಸತ್ತೆಯ ಪ್ರಕ್ರಿಯೆಯಿಂದ ಸೇನಾ ಸಿಬ್ಬಂದಿಯನ್ನು ಇಷ್ಟು ದಿನ ಹೊರಗಿಟ್ಟಿದ್ದು ತಪ್ಪು. ಅದನ್ನು ಕೋರ್ಟ್‌ ತೀರ್ಪು ಈಗ ಸರಿಪಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry