ಸೈನಿಕ ಶಾಲೆ ಲೋಕಾರ್ಪಣೆ ಇಂದು

7
31 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ

ಸೈನಿಕ ಶಾಲೆ ಲೋಕಾರ್ಪಣೆ ಇಂದು

Published:
Updated:

ಕುಶಾಲನಗರ: ರಾಜ್ಯದ ಎರಡನೇ ಸೈನಿಕ ಶಾಲೆ ಎಂಬ ಹೆಗ್ಗಳಿಕೆ ಪಡೆದಿರುವ ಕೂಡಿಗೆ ಸೈನಿಕ ಶಾಲೆಯನ್ನು ಡಿ.18 ರಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನಾಡಿಗೆ ಸಮರ್ಪಿಸಲಿದ್ದಾರೆ.ರಾಷ್ಟ್ರದ 24 ಸೈನಿಕ ಶಾಲೆಗಳ ಪೈಕಿ ಬಿಜಾಪುರ ಸೈನಿಕ ಶಾಲೆ ಹೊರತುಪಡಿಸಿದರೆ ಕೂಡಿಗೆ ಸೈನಿಕ ಶಾಲೆಯು ರಾಜ್ಯದ ಎರಡನೇ ಸೈನಿಕ ಶಾಲೆ. ಕೊಡಗಿನಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರ ವಿಶಿಷ್ಟ ಸೇವೆಗೆ ಪ್ರತೀಕವಾಗಿ ಜಿಲ್ಲೆಯಲ್ಲಿ ಸೈನಿಕ ಶಾಲೆ ಪ್ರಾರಂಭಿಸಬೇಕೆಂಬ ಹಲವು ವರ್ಷಗಳ ಬೇಡಿಕೆಯಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ 2007ರಲ್ಲಿ ಕೂಡಿಗೆಯಲ್ಲಿ ಸೈನಿಕ ಶಾಲೆ ಆರಂಭಿಸಲಾಯಿತು.ಇದೀಗ ಸುಂದರ ಪರಿಸರದ ನಡುವೆ ಮೊದಲ ಹಂತವಾಗಿ 62 ಎಕರೆಯಲ್ಲಿ ರೂ.31.8 ಕೋಟಿ ವೆಚ್ಚದಲ್ಲಿ ನೂತನ ಸುಸಜ್ಜಿತ ಕಟ್ಟಡ ಎಲೆ ಎತ್ತಿದೆ. ಇಲ್ಲಿ ಕೆಡೆಟ್‌ಗಳಿಗೆ ಪಠ್ಯದೊಂದಿಗೆ ಶಿಸ್ತು, ಸಂಯಮ, ರಾಷ್ಟ್ರಪ್ರೇಮ, ಭಾವೈಕ್ಯತೆ, ನಾಯಕತ್ವ ಗುಣ ಹಾಗೂ ಜೀವನ ಕೌಶಲ್ಯ ಹೇಳಿಕೊಡಲಾಗುತ್ತದೆ. ಕೇಂದ್ರ ಪಠ್ಯದಂತೆ 6 ರಿಂದ 12 ನೇ ತರಗತಿವರೆಗೆ ಶಿಕ್ಷಣ ನೀಡಲಾಗುತ್ತಿದ್ದು, ಪ್ರಸ್ತುತ 456 ಕೆಡೆಟ್‌ಗಳಿದ್ದಾರೆ.ಎರಡನೇ ಹಂತದ ಕಾಮಗಾರಿಗೆ ಸರ್ಕಾರ ಈಗಾಗಲೇ ರೂ. 8 ಕೋಟಿ ಬಿಡುಗಡೆ ಮಾಡಿದೆ. ಡಿ. 18 ರಂದು 8 ಕೋಟಿ ವೆಚ್ಚದ ಎರಡನೇ ಹಂತದ ಆರಂಭಿಕ ಕಾಮಗಾರಿಗೂ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ.ಪಠ್ಯದ ಜೊತೆ ಸೂಕ್ತ ಮಾಹಿತಿಯೊಂದಿಗೆ ಸೇನಾ ತರಬೇತಿ ನೀಡಲಾಗುತ್ತಿದೆ. ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್‌ಡಿಎ) ಮತ್ತು ಸರ್ವಿಸ್ ಸೆಲೆಕ್ಷನ್ ಬೋರ್ಡ್( ಎಸ್‌ಎಸ್‌ಬಿ) ನಿಯಮಾನುಸಾರ ಕಲಿಕಾಭ್ಯಾಸ ಮಾಡಿಸಲಾಗುತ್ತಿದೆ. ಸ್ವಚ್ಛತೆ-ಹಸಿರು -ಆರೋಗ್ಯ( ಕ್ಲೀನ್, ಗ್ರೀನ್ ಮತ್ತು ಹೆಲ್ತ್)ದಂತಹ ಪರಿಸರ ಪೂರಕ ಚಟುವಟಿಕೆಗಳಿಗೆ ಒತ್ತು ನೀಡಲಾಗಿದೆ ಎಂದು ಪ್ರಾಂಶುಪಾಲ ಕ್ಯಾಪ್ಟನ್ ರಮೇಶ್ ಹೇಳಿದ್ದಾರೆ.ಎರಡನೇ ಹಂತದಲ್ಲಿ ಕೆಡೆಟ್‌ಗಳಿಗೆ ಕ್ರೀಡಾ ಸೌಲಭ್ಯ, ಪಠ್ಯೇತರ ಚಟುವಟಿಕೆಗಳಿಗೆ ಪೂರಕವಾದ ವಿವಿಧೋದ್ದೇಶ ಸಭಾಂಗಣ ಮತ್ತಿತರ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಮೂರನೇ ಹಂತದಲ್ಲಿ ಶಾಲೆಯ ಸಿಬ್ಬಂದಿಗೆ ವಸತಿ ಗೃಹ ನಿರ್ಮಾಣ ಸೇರಿದಂತೆ ಮತ್ತಿತರ ಸೌಲಭ್ಯ ಒದಗಿಸಲಾಗುವುದು ಎಂದು ಅವರು `ಪ್ರಜಾವಾಣಿ' ಗೆ ತಿಳಿಸಿದರು.ಮುಖ್ಯಮಂತ್ರಿ ಸೇರಿದಂತೆ ರಕ್ಷಣಾ ಇಲಾಖೆಯ ಪ್ರಮುಖರನ್ನು ಸ್ವಾಗತಿಸಲು ಶಾಲೆ ಸಿಂಗಾರಗೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್, ಜಿಲ್ಲಾಧಿಕಾರಿ ಡಾ. ಎನ್.ವಿ. ಪ್ರಸಾದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಅಣ್ಣಿಗೇರಿ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry