ಸೋಮವಾರ, ಸೆಪ್ಟೆಂಬರ್ 28, 2020
21 °C

ಸೈಬರ್ ಕೇಂದ್ರಗಳ ಮೇಲೆ ನಿಗಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೈಬರ್ ಕೇಂದ್ರಗಳ ಮೇಲೆ ನಿಗಾ

ರಾಮನಗರ: ಜಿಲ್ಲೆಯ ಕೆಲವೆಡೆ ಸೈಬರ್ ಕೇಂದ್ರಗಳಲ್ಲಿ ಅಶ್ಲೀಲ ಸಿಡಿ ಹಾಗೂ ಕ್ಲಿಪಿಂಗ್ಸ್‌ಗಳ ಹಾವಳಿ ಹೆಚ್ಚಾಗಿದ್ದು ಇದಕ್ಕೆ ಯಾರ ಕಡಿವಾಣ ಇಲ್ಲದಂತಾಗಿದೆ. ಈ ನಿಟ್ಟಿನಲ್ಲಿ ಸೈಬರ್ ಕೇಂದ್ರಗಳ ಮೇಲೆ ತೀವ್ರ ನಿಗಾ ವಹಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ತಿಳಿಸಿದರು.ನಗರದ ಪೊಲೀಸ್ ಭವನದ ಆವರಣದಲ್ಲಿ ಸೋಮವಾರ ತ್ರೈಮಾಸಿಕ ಅಪರಾಧ ವರದಿಯ ಅಂಕಿ ಅಂಶಗಳನ್ನು ಸುದ್ದಿಗಾರರಿಗೆ ಬಿಡುಗಡೆ ಮಾಡಿ ಅವರು ಮಾತನಾಡಿದರು.ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸೈಬರ್ ಕೇಂದ್ರಗಳು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಇಲ್ಲಿ ಅಕ್ರಮಗಳು ನಡೆಯುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ಏನಾದರೂ ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು. ಸೈಬರ್ ಕೇಂದ್ರಗಳ ಮೇಲೆ ತೀವ್ರ ನಿಗಾ ವಹಿಸಲು ಪೊಲೀಸರಿಗೆ ಸೂಚಿಸಲಾಗುವುದು ಎಂದು ತಿಳಿಸಿದರು.ಜಿಲ್ಲೆಯಲ್ಲಿ ಮೂರು ತಿಂಗಳಿನಲ್ಲಿ ಒಟ್ಟು 18 ಕೊಲೆಗಳ ಪೈಕಿ 15 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. 29 ಆರೋಪಿಗಳನ್ನು ಬಂಧಿಸಲಾಗಿದೆ. 3 ಡಕಾಯಿತಿ ಪ್ರಕರಣಗಳಲ್ಲಿ 2 ಪ್ರಕರಣಗಳನ್ನು ಪತ್ತೆ ಹಚ್ಚಿ ಐವರು ಆರೋಪಿಗಳನ್ನು ಬಂಧಿಸಿ ಅವರಿಂದ 6,48,750 ರೂಪಾಯಿ ಮೌಲ್ಯದ ಕಳವು ಮಾಲನ್ನು ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ 4.90 ಲಕ್ಷ ರೂ ಮೌಲ್ಯದ ಟ್ರಾಕ್ಟರ್‌ನ್ನು ಮಾಲೀಕರಿಗೆ ಹಿಂದಿರುಗಿಸಲಾಗಿದೆ ಎಂದರು.31 ದರೋಡೆ ಪ್ರಕರಣಗಳ ಪೈಕಿ 7 ಪ್ರಕರಣಗಳನ್ನು ಭೇದಿಸಲಾಗಿದ್ದು, 16 ಆರೋಪಿಗಳನ್ನು ಬಂಧಿಸಲಾಗಿದೆ. ಒಟ್ಟು ಕಳವು ಮಾಲು 26,81,300 ಪೈಕಿ 5,52,000 ರೂಗಳ ಮಾಲನ್ನು ವಶಪಡಿಸಿಕೊಳ್ಳಲಾಗಿದೆ. 3.52 ಲಕ್ಷ ರೂಪಾಯಿಗಳ  ಮೌಲ್ಯದ ವಸ್ತುಗಳನ್ನು ಕಳೆದುಕೊಂಡವರಿಗೆ ಹಿಂದಿರುಗಿಸಲಾಗಿದೆ ಎಂದರು.54 ಕಳ್ಳತನಗಳ ಪೈಕಿ ಕೇವಲ 1 ಪ್ರಕರಣವನ್ನು ಭೇದಿಸಿರುವ ಜಿಲ್ಲಾ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. 44.29 ಲಕ್ಷ ರೂಪಾಯಿಗಳ ಕಳವು ಮಾಲಿನ ಪೈಕಿ ಕೇವಲ 1.50 ಲಕ್ಷ ರೂಗಳ ಮಾಲು ವಶಪಡಿಸಿಕೊಳ್ಳಲಾಗಿದೆ. ಇತರೆ 122 ಕಳ್ಳತನಗಳ ಪೈಕಿ 18 ಪ್ರಕರಣಗಳನ್ನು ಯಶಸ್ವಿಯಾಗಿ ಪತ್ತೆ ಹಚ್ಚಲಾಗಿದೆ. 28 ಆರೋಪಿಗಳನ್ನು ಬಂಧಿಸಲಾಗಿದ್ದು, 72.70 ಲಕ್ಷ ರೂಪಾಯಿಗಳ ಕಳವು ಮಾಲಿನ ಪೈಕಿ 29.81 ಲಕ್ಷ ರೂಪಾಯಿಗಳ ಕಳವು ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದರು.ಏಪ್ರಿಲ್, ಮೇ ಮತ್ತು ಜೂನ್ ತಿಂಗಳನಲ್ಲಿ ಜಿಲ್ಲೆಯಾದ್ಯಂತ 139 ಮಂದಿ ಕಾಣೆಯಾಗಿದ್ದು ಈ ಪೈಕಿ ಕೇವಲ 31 ಮಂದಿಯನ್ನು ಮಾತ್ರ ಪತ್ತೆಹಚ್ಚುವಲ್ಲಿ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದರು.3 ತಿಂಗಳಿನಲ್ಲಿ ಒಟ್ಟು 45 ಜೂಜು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.  6.85 ಲಕ್ಷ ರೂಪಾಯಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅಗತ್ಯ ವಸ್ತುಗಳ ಕಾಯ್ದೆ ಅನ್ವಯ ನಡೆದ 4 ದಾಳಿಗಳಲ್ಲಿ ಪೊಲೀಸರು ಭಾಗಿಯಾಗಿದ್ದು 169 ಅಡುಗೆ ಅನಿಲದ ಸಿಲಿಂಡರ್‌ಗಳನ್ನು 1 ಗೂಡ್ಸ್ ಆಟೊ ರಿಕ್ಷಾ ಮತ್ತು 1 ಟೆಂಪೊ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದರು.ಬ್ಲ್ಯಾಕ್ ಬೆರಿ: ಮೋಟಾರ್ ವಾಹನ ನಿಯಮಗಳನ್ನು ಪಾಲಿಸದ ಚಾಲಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ಸಂಚಾರ ಪೊಲೀಸರಿಗೆ ಬ್ಲ್ಯಾಕ್ ಬೆರಿ ಉಪಕರಣ ನೀಡಲಾಗಿದೆ. ನಗರ ವ್ಯಾಪ್ತಿಯ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪಘಾತಗಳನ್ನು ತಪ್ಪಿಸಲು ಆಯಕಟ್ಟಿನ ಸ್ಥಳಗಳಲ್ಲಿ ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗಿದೆ ಎಂದು ವಿವರಿಸಿದರು.ರಾಮನಗರ - ಬೆಂಗಳೂರು ಜಿಲ್ಲೆಯ ಗಡಿಭಾಗಗಳಲ್ಲಿ ಗಸ್ತು ಚಟುವಟಿಕೆ ಹೆಚ್ಚಿಸಲಾಗಿದೆ. ಎಲ್ಲೋ ಕೊಲೆ ಮಾಡಿದ ಶವಗಳನ್ನು ಜಿಲ್ಲಾ ವ್ಯಾಪ್ತಿಯಲ್ಲಿ ತಂದು ಬಿಸಾಡುವ ಪ್ರಕರಣಗಳಿಗೆ ಇದರಿಂದ ಕಡಿವಾಣ ಬಿದ್ದಂತಾಗಿದೆ. ಮಂಡ್ಯ, ಕುಣಿಗಲ್ ಗಡಿ ಭಾಗಗಳಲ್ಲಿ ಇನ್ನು ಮುಂದೆ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಿ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.ಜಾನಪದ ಲೋಕದ ಬಳಿಯಿರುವ ತಿರುವನ್ನು ಈಗ ತಾತ್ಕಾಲಿಕವಾಗಿ ಬಂದ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಶಾಶ್ವತವಾಗಿ ಮುಚ್ಚಲು ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮಕ್ಕೆ ಪತ್ರ ಬರೆಯಲಾಗುವುದು ಎಂದು ಅವರು ತಿಳಿಸಿದರು. ಡಿವೈಎಸ್‌ಪಿಗಳಾದ ಎಂ.ಜಿ.ರಾಮಕೃಷ್ಣ, ಶಂತನು ಸಿನ್ಹಾ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.