`ಸೈಬರ್ ದಾಳಿ: ದೇಶದ ಭದ್ರತೆಗೆ ಹೆಚ್ಚು ಆತಂಕ'

7

`ಸೈಬರ್ ದಾಳಿ: ದೇಶದ ಭದ್ರತೆಗೆ ಹೆಚ್ಚು ಆತಂಕ'

Published:
Updated:
`ಸೈಬರ್ ದಾಳಿ: ದೇಶದ ಭದ್ರತೆಗೆ ಹೆಚ್ಚು ಆತಂಕ'

ಬೆಂಗಳೂರು: `ಸೈಬರ್ ಭದ್ರತೆಯು ದೇಶದ ಒಟ್ಟು ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಮಾಹಿತಿ ಕದಿಯಲು ಸಾಧ್ಯವಾಗದೇ ಇರುವಂತೆ ಸಿಲಿಕಾನ್ ಚಿಪ್‌ಗಳ ತಯಾರಿಕಾ ಘಟಕ ಸ್ಥಾಪನೆಗೆ ಟೆಲಿಕಾಂ ಸಚಿವ ಕಪಿಲ್ ಸಿಬಲ್ ಶೀಘ್ರದಲ್ಲೇ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ' ಎಂದು ಪ್ರಧಾನಿಗಳ ರಾಷ್ಟ್ರೀಯ ಭಧ್ರತಾ ಸಲಹೆಗಾರ ಶಿವಶಂಕರ್ ಮೆನನ್ ತಿಳಿಸಿದರು.ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ `ಭಾರತೀಯ ಆಂತರಿಕ ಹಾಗೂ ಬಾಹ್ಯ ಭದ್ರತೆ' ಕುರಿತು ಅವರು ಮಾತನಾಡಿದರು.

`ಮೊದಲಿಗೆ ರಕ್ಷಣಾ ವಲಯದಲ್ಲಿ ಬಳಕೆಯಾಗುವ ಸೈಬರ್‌ಗೆ ಸಂಪೂರ್ಣ ಭದ್ರತೆ ನೀಡಬೇಕು.

ಆ ನಂತರ ಆಡಳಿತಾತ್ಮಕ ಚಟುವಟಿಕೆಗಳ ಮಾಹಿತಿ ಸೋರಿಕೆಯಾಗದಂತೆ ಬಹಳ ಎಚ್ಚರಿಕೆ ವಹಿಸುವ ಅಗತ್ಯವಿದೆ. ಈಚಿನ ದಿನಗಳಲ್ಲಿ ದೇಶದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ವ್ಯಾಪಕವಾಗುತ್ತಿದೆ. ದುಷ್ಕರ್ಮಿಗಳು ಈ ಜಾಲತಾಣಗಳು ಹಾಗೂ ಎಸ್‌ಎಂಎಸ್‌ಗಳನ್ನು ಬಳಸಿಕೊಂಡು ಸುಮಾರು ಮೂವತ್ತು ಸಾವಿರಕ್ಕೂ ಹೆಚ್ಚು ಈಶಾನ್ಯ ರಾಜ್ಯದ ಮಂದಿ ವಲಸೆ ಹೊರಡುವಂತೆ ಮಾಡಿರುವ ನಿದರ್ಶನ ಕಣ್ಮುಂದಿದೆ.

  ಹಾಗಾಗಿ ಸೈಬರ್ ಭದ್ರತೆಯನ್ನು ಹಂತಹಂತವಾಗಿ ಒದಗಿಸುವ ಅಗತ್ಯವಿದೆ' ಎಂದು ಅಭಿಪ್ರಾಯಪಟ್ಟರು.

`ಆಂತರಿಕ ಮತ್ತು ಬಾಹ್ಯ ಭದ್ರತಾ ಭೀತಿಗಳ ನಡುವೆಯೂ ಇಂಧನ, ಆಹಾರ, ತಂತ್ರಜ್ಞಾನ ಮತ್ತು ಸಾಮಾಜಿಕ ಭದ್ರತೆಗಳ ಕಡೆಗೂ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಅದಾಗ್ಯೂ ಆತಂರಿಕ ಭದ್ರತೆಯ ಬಗ್ಗೆ ಚಿಂತಿಸಿದರೆ ಭಯೋತ್ಪಾದನೆ, ನಕ್ಸಲ್ ವಾದ, ಕೋಮುಗಲಭೆ ಹಾಗೂ ಸೈಬರ್ ಬೆದರಿಕೆಗಳು ದೇಶದ ಭವಿಷ್ಯವನ್ನು ಹೆಚ್ಚು ಆತಂಕಕ್ಕೆ ಈಡುಮಾಡುತ್ತವೆ.

ಕಳೆದ 8 ವರ್ಷಗಳಲ್ಲಿ ಕೋಮುಗಲಭೆಯೂ ಆಂತರಿಕ ಭದ್ರತೆಗೆ ಹೆಚ್ಚು ಪೆಟ್ಟು ನೀಡಿದ್ದು, 2012ರಲ್ಲಿ ಅದರ ಕರಿನೆರಳು ಇನ್ನಷ್ಟು ನಿಚ್ಚಳವಾಗಿದೆ' ಎಂದು ಆತಂಕ ವ್ಯಕ್ತಪಡಿಸಿದರು.`ಶತಕೋಟಿ ಜನರಲ್ಲಿ ರಾಷ್ಟ್ರೀಯ ಭದ್ರತಾ ಹುದ್ದೆಗಳನ್ನು ನಿರ್ವಹಿಸುವ ಸಮರ್ಥರ ಸಂಖ್ಯೆ ಕಡಿಮೆಯಿದೆ. ಸಮಗ್ರ ತರಬೇತಿ ಪಡೆದ ಸುಮಾರು ಹದಿಮೂರು ಸಾವಿರಕ್ಕೂ ಹೆಚ್ಚು ಸೈನಿಕಾಧಿಕಾರಿಗಳ ಕೊರತೆಯಿದೆ. ಇದಲ್ಲದೇ ದೇಶದಾದ್ಯಂತ ಐದು ಲಕ್ಷಕ್ಕೂ ಹೆಚ್ಚು ಪೊಲೀಸ್ ಹುದ್ದೆಗಳು ಭರ್ತಿಯಾಗದೇ ಹಾಗೇ ಉಳಿದಿದೆ. ಯುವ ಪಡೆಯು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಮತ್ತು ಮಿಲಿಟರಿ ಪಡೆಗೆ ಸೇರ್ಪಡೆಗೊಳ್ಳಬೇಕು' ಎಂದು ಸಲಹೆ ನೀಡಿದರು.`ಅಣುಶಕ್ತಿ ಹಾಗೂ ಸಶಕ್ತ ತಂತ್ರಜ್ಞಾನದಿಂದ ಪೂರ್ಣ ಪ್ರಮಾಣದ ಭದ್ರತೆಯನ್ನು ಒದಗಿಸಲು ಸಾಧ್ಯವಿಲ್ಲವೆಂಬುದನ್ನು ದೃಢವಾಗಿ ನಂಬಿದ್ದೇನೆ. ಈಚೆಗೆ ನಡೆದ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಭದ್ರತಾ ವೈಫಲ್ಯವಲ್ಲ. ಆದರೆ, ಎಲ್ಲ ಅಪರಾಧಗಳಿಗೂ ಗಲ್ಲುಶಿಕ್ಷೆ ನೀಡಲು ಸಾಧ್ಯವಿಲ್ಲ. ಆದರ ಕಾನೂನು ಸಶಕ್ತಗೊಳಿಸುವ ಅಗತ್ಯವಿದೆ' ಎಂದು ಪ್ರತಿಕ್ರಿಯಿಸಿದರು.ಸಂಸ್ಥೆಯ ನಿರ್ದೇಶಕ ಪ್ರೊ.ವಿ.ಎಸ್.ರಾಮಮೂರ್ತಿ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry