ಬುಧವಾರ, ಮೇ 12, 2021
26 °C

ಸೊಪ್ಪಿನ ಮಡಿಗೆ ಸೀರೆ ರಕ್ಷಣೆ!

ಗಾಣಧಾಳು ಶ್ರೀಕಂಠ Updated:

ಅಕ್ಷರ ಗಾತ್ರ : | |

ಸೊಪ್ಪಿನ ಮಡಿಗೆ ಸೀರೆ ರಕ್ಷಣೆ!

ಉತ್ತರ ಕನ್ನಡದಲ್ಲಿ ಮಂಗಗಳ ಹಾವಳಿ ತಡೆಯಲು ಬಾಳೆ ಗೊನೆಗಳಿಗೆ ಬಣ್ಣ ಬಣ್ಣದ ಸೀರೆ ಸುತ್ತುತ್ತಾರೆ. ಬಯಲು ಸೀಮೆಯಲ್ಲಿ ಗದ್ದೆಗಳಿಗೆ ನುಗ್ಗುವ ಪ್ರಾಣಿಗಳನ್ನು ಬೆದರಿಸಲು ಬೆದರುಬೊಂಬೆ ನಿಲ್ಲಿಸುತ್ತಾರೆ. ಹಂದಿಗಳ ನಿಯಂತ್ರಣಕ್ಕೆ ಜಮೀನಿನ ಸುತ್ತ ಮನುಷ್ಯರ ಕೂದಲನ್ನು ಅಲ್ಲಲ್ಲಿ ಉದುರಿಸುತ್ತಾರೆ.ಇಂಥದ್ದೇ ಒಂದು ತಂತ್ರವನ್ನು ಕೋಳಿಗಳಿಂದ ಸೊಪ್ಪಿನ ಮಡಿ ರಕ್ಷಣೆಗಾಗಿ ಬಳಸಲಾಗುತ್ತಿದೆ. ಇದು ರಾಮನಗರ, ಮಾಗಡಿ, ಕನಕಪುರ ಭಾಗದಲ್ಲಿ ಚಾಲ್ತಿಯಲ್ಲಿದೆ.ರಾಮನಗರ- ಮಾಗಡಿ ನಡುವಿರುವ ವಿಜಯನ ದೊಡ್ಡಿ, ಜಾಲಮಂಗಲ, ಕೊಟ್ಟಗಾರನಹಳ್ಳಿ, ಗೆಜ್ಜಾರಗುಪ್ಪೆ ಮತ್ತಿತರ  ಹಲವು ಹಳ್ಳಿಗಳಲ್ಲಿ ಈ ಪದ್ಧತಿ ಬಳಕೆಯಲ್ಲಿದೆ.ಇಲ್ಲಿ ಬಹುತೇಕ ಮನೆಗಳ ಮುಂದಿನ ಸೊಪ್ಪಿನ ಮಡಿಗಳ ಸುತ್ತ ಚೌಕಾಕಾರದಲ್ಲಿ ಸೀರೆಗಳನ್ನು ಕಟ್ಟುತ್ತಾರೆ. ಬಹುತೇಕ ಬಣ್ಣ ಬಣ್ಣದ ಚಿತ್ತಾರಗಳ ಸೀರೆಗಳನ್ನೇ ಕಟ್ಟುತ್ತಾರೆ.`ಇದೆಂಥ ತಂತ್ರ~ ಅಂತ ಅನ್ನಿಸಬಹುದು. ಆದರೆ ತಂತ್ರದ ಹಿಂದಿನ ಕಾರಣ ಕೇಳಿದರೆ ಜನರ ಜಾಣ್ಮೆ ಬಗ್ಗೆ ಮೆಚ್ಚುಗೆಯಾಗುತ್ತದೆ.ಈ ಹಳ್ಳಿಗಳಲ್ಲಿ ಸೊಪ್ಪು ಬೆಳೆಯುವ ಬಹುತೇಕ ರೈತರ ಮನೆಗಳಲ್ಲಿ ಕೋಳಿ ಸಾಕುತ್ತಾರೆ. ವಿಶೇಷವೆಂದರೆ ಅವುಗಳನ್ನು ಕಟ್ಟಿ ಮೇಯಿಸುವುದಿಲ್ಲ. ಅವು ಮನೆಗಳ ಸುತ್ತ ಮುತ್ತ ಓಡಾಡಿಕೊಂಡು ಹುಳ-ಹುಪ್ಪಟೆ, ಕಾಳು-ಕಡಿಗಳನ್ನು ಆಯ್ದು ತಿನ್ನುತ್ತವೆ.

 

ಅವು ಸೊಪ್ಪಿನ ಮಡಿಗೂ ದಾಳಿ ಮಾಡಿ ಬಿತ್ತಿದ ಬೀಜ ಅಥವಾ ಮೊಳಕೆ ಬಂದ ಸಸಿಗಳನ್ನು ತಿನ್ನುವ ಸಾಧ್ಯತೆ ಇರುತ್ತದೆ. ಅಲ್ಲದೆ ಬಿಸಿಲು ಹೆಚ್ಚಾಗಿದ್ದಾಗ ಸೊಪ್ಪಿನ ಮಡಿಯ ನಡುವೆ ಗುಂಡಿ ಮಾಡಿಕೊಂಡು ಅಲ್ಲಿ ಕುಳಿತು ವಿಶ್ರಮಿಸಿಕೊಳ್ಳುತ್ತವೆ.ಅದರಿಂದ ಇಡೀ ಸೊಪ್ಪಿನ ಮಡಿ ನಾಶವಾಗುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ಸೀರೆಗಳನ್ನು ಪರದೆಯಂತೆ ಕಟ್ಟಿ ಕೋಳಿಗಳಿಂದ ಸೊಪ್ಪನ್ನು ರಕ್ಷಿಸುತ್ತೇವೆ~ ಎನ್ನುತ್ತಾರೆ ಕೊಟ್ಟಗಾರನಹಳ್ಳಿಯ ರೈತ ಸದಾಶಿವ.ಸೊಪ್ಪಿನ ಮಡಿಗೆ ಸೀರೆ ಕಟ್ಟುವುದರಲ್ಲೂ ಕೆಲವು ವಿಧಗಳಿವೆ. ಎತ್ತರವಾಗಿ ಬೆಳೆಯುವ ಸೊಪ್ಪಿನ ಮಡಿಗೆ ಅಗಲವಾಗಿರುವ ಸೀರೆ ಕಟ್ಟುತ್ತಾರೆ. ಅರಿವೆ, ಮೆಂತ್ಯೆಯಂತಹ ಸೊಪ್ಪಿನ ಮಡಿಗೆ ಚಿಕ್ಕದಾಗಿರುವ ಸೀರೆ ಕಟ್ಟುತ್ತಾರೆ.ಕೋಳಿ ಹಾರಿ ಒಳ ಹೋಗದಂತೆ ರಕ್ಷಿಸಲು ಈ ವಿಧಾನ ಅನುಸರಿಸುತ್ತಾರೆ.`ತೆಳ್ಳಗಿರುವ ಸೀರೆಗಳನ್ನು ಕೋಳಿಗಳು ಕುಕ್ಕಿ ಹರಿದು ಹಾಕಿ ಮಡಿಯೊಳಗೆ ಹೋಗುವುದಿಲ್ಲ ಎನ್ನುವುದಕ್ಕೆ ಏನು ಖಾತರಿ~ ಅಂತ ಕೇಳಿದರೆ, ಅದಕ್ಕೆ ಬಣ್ಣ ಬಣ್ಣದ ಚಿತ್ರಗಳೇ ಇರುವ ಸೀರೆ ಕಟ್ಟುತ್ತೇವೆ. ಬಣ್ಣ ಹಾಗೂ ಚಿತ್ತಾರಗಳನ್ನು ಕಂಡರೆ ಪ್ರಾಣಿ, ಪಕ್ಷಿಗಳು ಬೆದರುತ್ತವೆ. ಅವು ಸೊಪ್ಪಿನ ಮಡಿಗಳ ಹತ್ತಿರ ಸುಳಿಯೋದಿಲ್ಲ~ ಎನ್ನುತ್ತಾರೆ ಮತ್ತೊಬ್ಬ ರೈತ ಶಿವಣ್ಣ.ಈ ಹಳ್ಳಿಗಳಲ್ಲಿ ಮಳೆಗಾಲ ಹೊರತುಪಡಿಸಿ ಉಳಿದ ದಿನಗಳಲ್ಲಿ ನಿರಂತರವಾಗಿ ಸೊಪ್ಪು ಬೆಳೆಯುತ್ತಾರೆ. ಹೊಸ ಸೊಪ್ಪಿನ ಮಡಿ ಮಾಡುವಾಗಲ್ಲ್ಲೆಲ ಸೀರೆಯನ್ನು ಬದಲಾಯಿಸುತ್ತಾರೆ. ಉಟ್ಟು ಬಿಟ್ಟ ಹಳೆಯ ಸೀರೆಗಳನ್ನೇ ಬಳಸುವುದರಿಂದ ರೈತರಿಗೆ ಹೆಚ್ಚಿನ ಖರ್ಚಿಲ್ಲ. ಇದೊಂದು ಸರಳ ಉಪಾಯ. ನಯಾ ಪೈಸೆ ಖರ್ಚಿಲ್ಲದ `ದೇಸಿ ತಂತ್ರ~ ಎಷ್ಟು ಪರಿಣಾಮಕಾರಿ ಅಲ್ಲವೇ ?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.