ಸೊರಗಿದ ಜಿಲ್ಲಾಮಟ್ಟದ ಯುವಜನೋತ್ಸವ

7

ಸೊರಗಿದ ಜಿಲ್ಲಾಮಟ್ಟದ ಯುವಜನೋತ್ಸವ

Published:
Updated:

ಬಾಗಲಕೋಟೆ: ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯು ನಗರದ ಬಿವಿವಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಗಳು ಆಗಮಿಸದ ಕಾರಣ ಕಳೆಗುಂದಿತ್ತು.ಸಮಯಕ್ಕೆ ಸರಿಯಾಗಿ ಸ್ಪರ್ಧಿಗಳು ಮತ್ತು ಅತಿಥಿಗಳು ಆಗಮಿಸದ ಹಿನ್ನಲೆಯಲ್ಲಿ ಬೆಳಿಗ್ಗೆ 10.30ಕ್ಕೆ ಆರಂಭವಾಗಬೇಕಿದ್ದ ಯುವಜನೋತ್ಸವ ಒಂದೂವರೆ ಗಂಟೆ ವಿಳಂಭವಾಯಿತು. ಒಟ್ಟು 9 ವಿಭಾಗದಲ್ಲಿ ನಡೆದ 18 ವಿವಿಧ ಸಾಂಸ್ಕೃತಿಕ ಮತ್ತು ನೃತ್ಯ ಸ್ಪರ್ಧೆಗಳಲ್ಲಿ ಸುಮಾರು 150 ಸ್ಪರ್ಧಿಗಳು ಭಾಗವಹಿಸಿದ್ದರು.ಗಿಟಾರ್ ನುಡಿಸುವ ಸ್ಪರ್ಧೆಗೆ ಏಕೈಕ ಸ್ಪರ್ಧಿ ಅದೂ ನಗರದ ಬಸವೇಶ್ವರ ಆಯುರ್ವೇದ ಕಾಲೇಜಿನ ಗುಜರಾತ್ ಮೂಲದ ವಿದ್ಯಾರ್ಥಿ ಭಾಗವಹಿಸಿರುವುದು ವಿಶೇಷವಾಗಿತ್ತು. ಕೆಲವೊಂದು ವಿಭಾಗಕ್ಕೆ ಸ್ಪರ್ಧಿಗಳ ಕೊರತೆಯಿಂದ ಯುವಜನೋತ್ಸವ ನೀರಸವಾಗಿತ್ತು.

ಯುವಜನೋತ್ಸವದಲ್ಲಿ ಕೋಟೆಕಲ್‌ನ ಯುವಕರ ತಂಡವು ಪ್ರದರ್ಶಿಸಿದ ಜಾನಪದ ನೃತ್ಯ ನೋಡುಗರ ಮನಸೂರೆಗೊಂಡಿತು.ಈ ಕುರಿತು `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ದೊಡ್ಡಬಸವರಾಜು, ರೂ. 50 ಸಾವಿರ ವೆಚ್ಚದಲ್ಲಿ ಜಿಲ್ಲಾ ಯುವಜನೋತ್ಸವ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಸ್ಪರ್ಧೆಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ಪರ್ಧೆಯಲ್ಲಿ ಆಯ್ದ 53 ಕಲಾವಿದರನ್ನು ಜನವರಿ 14ರಂದು ದಾವರಣಗೆರೆಯಲ್ಲಿ ನಡೆಯುವ ರಾಜ್ಯಮಟ್ಟದ ಯುವ ಜನೋತ್ಸವಕ್ಕೆ ಕಳುಹಿಸಲಾಗುತ್ತದೆ ಎಂದರು.ಜಿಲ್ಲಾ ಯುವಜನೋತ್ಸವಕ್ಕೆ ಆಗಮಿಸುವ ಸ್ಪರ್ಧಿಗಳಿಗೆ ಬಂದು-ಹೋಗುವ ವೆಚ್ಚವನ್ನು ಇಲಾಖೆ ನೀಡುವುದಿಲ್ಲ. ಅಲ್ಲದೇ, ವಿಜೇತರಿಗೆ ಕೇವಲ ಪ್ರಶಸ್ತಿ ಪತ್ರ ನೀಡಲಾಗುತ್ತದೆ ಎಂಬ ಕಾರಣಕ್ಕೆ ಕಲಾವಿದರು ಸ್ಪರ್ಧೆಗೆ ಆಗಮಿಸಲು ಹಿಂದೇಟು ಹಾಕುತ್ತಾರೆ ಎಂದು ಹೇಳಿದರು.ಉದ್ಘಾಟನೆ: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಾಂತವ್ವ ಭೂಷಣ್ಣವರ ಯುವ ಜನೋತ್ಸವವನ್ನು ಉದ್ಘಾಟಿಸಿದರು. ಜಿ.ಪಂ.ಉಪಾಧ್ಯಕ್ಷ ಕೃಷ್ಣಾ ಓಗೆಣ್ಣವರ, ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎಸ್.ಜಿ.ಪಾಟೀಲ, ನೆಹರೂ ಯುವ ಕೇಂದ್ರದ ಸದಸ್ಯ ಮಹಾಂತೇಶ ಹಟ್ಟಿ, ಅನಿತಾ ನಿಂಬರಗಿ, ಆರ್.ಬಿ.ಚಿನಿವಾಲರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry