ಸೋಮವಾರ, ಮಾರ್ಚ್ 8, 2021
31 °C

ಸೊರಗುತ್ತಿದ್ದಾಳೆ `ಚಂದ್ರವಳ್ಳಿ'

-ಮಲ್ಲೇಶ್ ನಾಯಕನಹಟ್ಟಿ . Updated:

ಅಕ್ಷರ ಗಾತ್ರ : | |

ಸೊರಗುತ್ತಿದ್ದಾಳೆ `ಚಂದ್ರವಳ್ಳಿ'

ಚಂದ್ರವಳ್ಳಿ... ಐತಿಹಾಸಿಕ ಸ್ಥಳವಷ್ಟೇ ಅಲ್ಲ, ಚಾರಣ ಪ್ರಿಯರ ನೆಚ್ಚಿನ ತಾಣವೂ ಹೌದು. ಗುಹಾಲಯ ಹೊಂದಿರುವ ಅರಳೀಮಠ, ಪಾಂಡವರು ಪ್ರತಿಷ್ಠಾಪಿಸಿರುವ ಪಂಚಲಿಂಗೇಶ್ವರ ದೇಗುಲ, ಧವಳಪ್ಪನ ಗುಡ್ಡ, ಚಂದ್ರವಳ್ಳಿ ಕೆರೆ, ಹುಲಿಗೊಂದಿ ಭೈರೇಶ್ವರ ದೇಗುಲ, ಬಯಲು ಆಂಜನೇಯ, ಬರಲಗೊಂದಿ, ಬಸವಗೊಂದಿ, ಆಡು ಮಲ್ಲೇಶ್ವರ, ಚಿರತೆ ಕಲ್ಲು... ಹೀಗೆ, ಪ್ರವಾಸಿಗರ ಮನಮುದಗೊಳಿಸುವ ತಾಣಗಳ ಸರಮಾಲೆಯೇ ಅಲ್ಲಿದೆ.ವಿದೇಶಿಗರನ್ನೂ ತನ್ನತ್ತ ಆಕರ್ಷಿಸಿದ್ದ ಈ ತಾಣ ಈಗ ಕಳಾಹೀನವಾಗಿದೆ. ಐತಿಹಾಸಿಕ ಸೊಬಗಿನ ತಾಣ ಜನರ ಸ್ವೇಚ್ಛಾಚಾರ ಮತ್ತು ಕಂದಾಚಾರಕ್ಕೆ ಸಿಲುಕಿದೆ. ಕಣ್ಣು ಹಾಯಿಸಿದ ಕಡೆಯಲ್ಲೆಲ್ಲಾ ಮದ್ಯದ ಬಾಟಲಿಗಳ ರಾಶಿ ಕಂಡುಬರುತ್ತಿವೆ. ಎಲ್ಲೆಂದರಲ್ಲಿ ಮದ್ಯ-ಮಾಂಸದ ಸಮಾರಾಧನೆ ನಡೆಯುತ್ತಿವೆ.

ಬೃಹತ್ ಬಂಡೆಗಳ ಆಶ್ರಯದಡಿ ಜೂಜು ಅಡ್ಡೆ ತಲೆ ಎತ್ತಿವೆ. ಅಲ್ಲಲ್ಲಿ ಇಸ್ಪೀಟ್ ಎಲೆಗಳು ಹಾರಾಡುತ್ತಿದ್ದರೆ, ತಿಂದು ಬಿಸಾಡಿದ ಮೂಳೆಗಳು ಪ್ರವಾಸಿಗರ ಕಾಲುಗಳಿಗೆ ಚುಚ್ಚುವ ರೀತಿಯಲ್ಲಿವೆ. ವಿಶ್ರಾಂತಿ ಸ್ಥಳಗಳು ತ್ಯಾಜ್ಯಗಳಿಂದ ತುಂಬಿ ತಿಪ್ಪೆಯಂತಾಗಿವೆ. ಕೆರೆಯಲ್ಲಿ ಪ್ಲಾಸ್ಟಿಕ್ ಹಾಗೂ ಮದ್ಯದ ಬಾಟಲಿಗಳೇ ತೇಲುತ್ತಿವೆ!ಹಿಂದೆ ಹೀಗಿತ್ತು

ಚಂದ್ರವಳ್ಳಿ ಮತ್ತು ಜೋಗಿಮಟ್ಟಿ ಇವು ಕರ್ನಾಟಕದ ಊಟಿ ಎಂದೇ ಹೆಸರು ಪಡೆದಿದ್ದವು. ಬ್ರಿಟಿಷ್ ಅಧಿಕಾರಿಗಳು ಇಲ್ಲಿನ ಹವಾಮಾನ ಬಯಸಿ ತಂಗುತ್ತಿದ್ದರು. ಹಸಿರುಹೊದ್ದ ಚಂದ್ರವಳ್ಳಿ ಕಣಿವೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿತ್ತು. ಲಂಡನ್‌ನ ಇ.ಜೆ. ರಾಪ್ಸನ್ ಅವರು ಚಂದ್ರವಳ್ಳಿ ಕಣಿವೆ ಪ್ರದೇಶದಲ್ಲಿ ಸಂಶೋಧನೆ ಕೈಗೊಳ್ಳುವಂತೆ ಆಗಿನ ಮೈಸೂರು ಸರ್ಕಾರಕ್ಕೆ ಸಲಹೆ ಇತ್ತಾಗ, 1928ರಲ್ಲಿ ಇತಿಹಾಸ ಸಂಶೋಧಕ ಡಾ.ಎಂ.ಎಚ್.ಕೃಷ್ಣ ಅವರು ಉತ್ಖನನ ನಡೆಸಿದರು.

ಆಗ ಪತ್ತೆಯಾದ ಮಯೂರ ಶಾಸನದಿಂದಾಗಿ ಚಂದ್ರವಳ್ಳಿ ಚರಿತ್ರೆ ತೆರೆದುಕೊಂಡಿತು. ಇದಕ್ಕೂ ಮೊದಲು 1908ರಲ್ಲಿ ಹಿರಿಯ ವಿದ್ವಾಂಸರಾದ ನರಸಿಂಹಾಚಾರ್ ಮತ್ತು ಆರ್. ಶಾಮಶಾಸ್ತ್ರಿ ಅವರು ಖ್ಯಾತ ಸಂಶೋಧಕ ಬಿ.ಎಲ್. ರೈಸ್ ಅವರೊಡನೆ ಈ ಪ್ರದೇಶದಲ್ಲಿ ಅಧ್ಯಯನ ನಡೆಸಿದ್ದರು ಎನ್ನಲಾಗಿದೆ.ಇಲ್ಲಿ ದೊರೆತಿರುವ ಕದಂಬರ ಕಾಲದ 3-4ನೇ ಶತಮಾನದ ಶಾಸನ ಹಾಗೂ ಮಯೂರ ಶಾಸನಗಳ ಪ್ರಕಾರ ಚಂದ್ರವಳ್ಳಿ ಹರಪ್ಪ-ಮೊಹೆಂಜೋದಾರ ನಾಗರಿಕತೆ ಸಂಸ್ಕೃತಿಯ ಸಮಾನವಾದುದು ಎಂಬುದಾಗಿ ಇತಿಹಾಸಜ್ಞರು ಅಭಿಪ್ರಾಯಪಡುತ್ತಾರೆ. ಹಾಗಾಗಿ, ಆಗಿನ ಮೈಸೂರು ಸರ್ಕಾರ ಚಂದ್ರವಳ್ಳಿಗೆ ಐತಿಹಾಸಿಕ ಪರಂಪರೆ ತಾಣಗಳ ಪಟ್ಟಿಯಲ್ಲಿ ಅಗ್ರಸ್ಥಾನ ನೀಡಿತ್ತು.ಜನರ ನೋವು

ಇಷ್ಟೆಲ್ಲಾ ಅನಾಚಾರ ನಡೆಯುತ್ತಿದ್ದರೂ, ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲ ಎಂಬುದು ಪ್ರವಾಸಿಗರ ದೂರು. `ಚಂದ್ರವಳ್ಳಿ ಸೌಂದರ್ಯದ ಬಗ್ಗೆ ಕೇಳಿ ಅದನ್ನು ನೋಡಲು ಇಲ್ಲಿಗೆ ಬಂದೆವು. ಇಲ್ಲಿನ ಹಸಿರು ಕಣಿವೆ ಮನಮೋಹಕವಾಗಿದೆ. ಆದರೆ, ಯಾವುದೇ ನಿರ್ಬಂಧ ಇಲ್ಲದಿರುವ ಕಾರಣ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆ.

ನಿರ್ವಹಣೆ ಮತ್ತು ಜೀರ್ಣೋದ್ಧಾರ ಇಲ್ಲದ ಚಂದ್ರವಳ್ಳಿ ನೋಡಿ ಮನಸ್ಸಿಗೆ ಖೇದ ಅನ್ನಿಸಿತು' ಎಂದು ವಿಜಾಪುರದ ಹಣಮಂತರಾಯ ಮತ್ತು ಶಿವು ಬೇವಿನಗಿಡದ ಬೇಸರ ವ್ಯಕ್ತಪಡಿಸುತ್ತಾರೆ. ಚಂದ್ರವಳ್ಳಿಯ ಚೆಲುವು ಮರುಕಳಿಸಲು ಧವಳಪ್ಪನ ಗುಡ್ಡವನ್ನು ಕೇಂದ್ರವನ್ನಾಗಿಸಿಕೊಂಡು ಸರ್ಕಾರ ಇಲ್ಲಿ ಅಭಿವೃದ್ಧಿ ಯೋಜನೆ ಕೈಗೊಳ್ಳಬಹುದು ಎನ್ನುತ್ತಾರೆ ಹಿರಿಯ ಇತಿಹಾಸ ಸಂಶೋಧಕ ಪ್ರೊ.ಲಕ್ಷ್ಮಣ ತೆಲಗಾವಿ.

ಚಂದ್ರವಳ್ಳಿ ಕೆರೆ -ಸಣ್ಣ ನೀರಾವರಿ ಇಲಾಖೆಗೆ, ಕಾಡು- ಅರಣ್ಯ ಇಲಾಖೆಗೆ, ಐತಿಹಾಸಿಕ ದೇಗುಲಗಳು- ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆಗೆ... ಹೀಗೆ ಕಣಿವೆಯ ನಿರ್ವಹಣೆ ಒಂದೊಂದು ಇಲಾಖೆಗಳಿಗೆ ವಿಕೇಂದ್ರೀಕರಣಗೊಂಡಿದ್ದು, ಸೂಕ್ತ ನಿರ್ವಹಣೆಯ ಕೊರತೆಯಿಂದಾಗಿ ಚಂದ್ರವಳ್ಳಿ ಸೊರಗುತ್ತಿದೆ.

-ಮಲ್ಲೇಶ್ ನಾಯಕನಹಟ್ಟಿ .

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.